ಕಲಬುರಗಿ: ಕಿತ್ತು ಹೋದ ಡಾಂಬರು ಮತ್ತು ಗುಂಡಿಗಳಿಂದ ಆವೃತವಾಗಿ ಹದಗೆಟ್ಟ ರಸ್ತೆಗಳು, ಒಳಚರಂಡಿ ಸಮಸ್ಯೆ, ಮಳೆ ನೀರು ಹರಿದು ಹೋಗದೆ ಹೂಳು ತುಂಬಿರುವ ಚರಂಡಿಗಳು, ಮನೆಗಳ ನಿರ್ಮಾಣಕ್ಕೂ ಮುನ್ನವೇ ರಸ್ತೆ ತುಂಬೆಲ್ಲ ಹಬ್ಬಿದ ಗಿಡಗಂಟಿಗಳು, ಕುಡಿಯುವ ನೀರಿನ ಸಂಪರ್ಕ ಇಲ್ಲದ ವಸತಿ ಸಮುಚ್ಚಯಗಳು, ಶಿಥಿಲಗೊಂಡು ಪಾಳು ಬಿದ್ದ ಮನೆಗಳು, ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ಒಳಪಡದೆ ಅತಂತ್ರವಾದ ಮನೆಗಳು...
ಹೀಗೆಯೇ ಹತ್ತು ಹಲವು ಸಮಸ್ಯೆಗಳ ಸರಮಾಲೆಯನ್ನೇ ಸುತ್ತಿಕೊಂಡು ಕರ್ನಾಟಕ ಗೃಹ ಮಂಡಳಿ (ಕೆಎಚ್‌ಬಿ) ಅಭಿವೃದ್ಧಿಪಡಿಸಿದ ಬಡಾವಣೆಗಳು ನರಳುತ್ತಿವೆ. ಕೆಎಚ್‌ಬಿ ನಗರವೂ ಸೇರಿದಂತೆ ಜಿಲ್ಲೆಯಲ್ಲಿ 11 ಕಡೆ 8,358 ಸ್ವತ್ತುಗಳ ಬಡಾವಣೆಗಳನ್ನು ಅಭಿವೃದ್ಧಿಪಡಿಸಿದೆ. ಆದರೆ, ಬಹುತೇಕ ಬಡಾವಣೆಗಳು ಸಮಸ್ಯೆಗಳ ಆಗರವಾಗಿವೆ.
ಕರ್ನಾಟಕ ಗೃಹ ಮಂಡಳಿ ಬಡ, ಮಧ್ಯಮ, ಮೇಲ್ಮಧ್ಯಮ ವರ್ಗದವರಿಗಾಗಿ ಕಲಬುರಗಿ ನಗರ ಹಾಗೂ ಸುತ್ತಲಿನ ಗ್ರಾಮಗಳಲ್ಲಿ, ಶಹಾಬಾದ್, ಚಿಂಚೋಳಿ, ಚಿತ್ತಾಪುರ, ಜೇವರ್ಗಿ ಹಾಗೂ ಆಳಂದ ಪಟ್ಟಣಗಳಲ್ಲಿ ಸಾವಿರಾರು ನಿವೇಶನ ಹಾಗೂ ನೂರಾರು ವಾಣಿಜ್ಯ ಉದ್ದೇಶದ ನಿವೇಶನಗಳನ್ನು ನಿರ್ಮಾಣ ಮಾಡಿಕೊಟ್ಟಿದೆ. ನಿರ್ಮಾಣದ ವೇಳೆ ಕೊಟ್ಟ ಮಾತಿನಂತೆ ನಡೆದುಕೊಂಡಿಲ್ಲ. ಅಧೀನಕ್ಕೆ ಪಡೆದುಕೊಂಡ ಸಂಸ್ಥೆಗಳೂ ಮೂಲಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿವೆ ಎಂಬ ಬೇಸರ ಸ್ಥಳೀಯರದ್ದು.
ಜನ ಸಾಮಾನ್ಯರಿಗೆ ಸುಸಜ್ಜಿತವಾದ ಬಡಾವಣೆ ನಿರ್ಮಿಸಿ, ಸೌಕರ್ಯಗಳನ್ನು ಒದಗಿಸಿ ವಾಸಕ್ಕೆ ಯೋಗ್ಯವಾದ ಪರಿಸರ ಕಲ್ಪಿಸಿಕೊಡದ ಕೆಎಚ್‌ಬಿಯ ಸ್ವತ್ತುಗಳನ್ನು ಅಧೀನಕ್ಕೆ ಪಡೆದು, ತೆರಿಗೆ ವಸೂಲಿ ಮಾಡುತ್ತಿರುವ ಸ್ಥಳೀಯ ಸಂಸ್ಥೆಗಳ ವಿರುದ್ಧ ಅಲ್ಲಿನ ನಿವಾಸಿಗಳು ಹಾಗೂ ನಿವೇಶನ ಖರೀದಿದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಹೈಕೋರ್ಟ್ ಮುಂಭಾಗದ ಕೆಎಚ್‌ಬಿ ಕಾಲೊನಿಯ ರಸ್ತೆಗಳಲ್ಲಿನ ಡಾಂಬರು ಕಿತ್ತು ಹೋಗಿದೆ. ನೀರಿನ ಓವರ್ ಹೆಡ್ ಟ್ಯಾಂಕ್ ಹಾಗೂ ಮಳೆ ನೀರು ಸರಾಗವಾಗಿ ಚರಂಡಿಯಲ್ಲಿ ಹರಿದು ಹೋಗುತ್ತಿಲ್ಲ. ಕುಸನೂರ ಗ್ರಾಮ ಪಂಚಾಯಿತಿಯ ಕಾಳಗನೂರಿನಲ್ಲಿ ಮನೆಗಳು ನಿರ್ಮಾಣವಾಗದೆ ರಸ್ತೆಗಳು, ಚರಂಡಿಯಲ್ಲಿ ಮುಳ್ಳುಕಂಟಿ ಬೆಳೆದಿದೆ. ಬಿದ್ದಾಪುರ ಏರ್‌ಪೋರ್ಟ್ ಲ್ಯಾಂಡ್ ಸೇರಿ ಹಲವೆಡೆ ಒಂದಲ್ಲಾ ಒಂದು ಸಮಸ್ಯೆಗಳಿಂದ ಆವೃತವಾಗಿವೆ.
‘ಕೆಎಚ್‌ಬಿ ಗ್ರೀನ್ ಪಾರ್ಕ್ ನಿವಾಸಿಗಳು ನಾಲ್ಕೈದು ವರ್ಷಗಳಿಂದ ಬಾಕಿ ಉಳಿಸಿಕೊಂಡಿದ್ದ ಸುಮಾರು ₹40 ಲಕ್ಷ ನೀರಿನ ಬಿಲ್ ಕಟ್ಟಿದ್ದಾರೆ. ವಿದ್ಯುತ್ ಬಿಲ್, ಇತರೆ ಕರ ಕಟ್ಟುತ್ತಿದ್ದರೂ ಮಹಾನಗರ ಪಾಲಿಕೆಯವರು ವಸತಿ ಸಮುಚ್ಚಯಗಳನ್ನು ತಮ್ಮ ಅಧೀನಕ್ಕೆ ತೆಗೆದುಕೊಳ್ಳುತ್ತಿಲ್ಲ’ ಎಂದು ಕೆಎಚ್‌ಬಿ ಗ್ರೀನ್ ಪಾರ್ಕ್ ಕಾಲೊನಿಯ ವಿವಿಧೋದ್ದೇಶ ಸಂಘದ ಅಧ್ಯಕ್ಷ ಸಂಜುಕುಮಾರ ಶೆಟ್ಟಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಗ್ರೀನ್ ಪಾರ್ಕ್‌ನಲ್ಲಿ 700 ಕುಟುಂಬಗಳು ವಾಸಿಸುತ್ತಿವೆ. ಸಮರ್ಪಕ ನೀರಿನ ಮೂಲ ಇಲ್ಲ. ರಸ್ತೆಗಳಲ್ಲಿ ಗುಂಡಿಗಳು ಬಿದ್ದಿವೆ. ಕಿರು ಸೇತುವೆಗಳಿಗೆ ಹಾನಿಯಾಗಿದೆ. ವಿದ್ಯುತ್ ಕಂಬಗಳು ದುರಸ್ತಿಗೆ ಬಂದಿವೆ. ಕೆಎಚ್‌ಬಿ ಮಂಡಳಿ, ಪಾಲಿಕೆಗೆ, ಶಾಸಕರು, ಪಾಲಿಕೆಯ ಸದಸ್ಯರಿಗೂ ಮನವಿ ಮಾಡಿದರು ಸ್ಪಂದನೆ ಸಿಕ್ಕಿಲ್ಲ. ನಮ್ಮದೇ ದುಡ್ಡಿನಲ್ಲಿ ಕಾಲೊನಿಯ ನಿರ್ವಹಣೆ ಮಾಡಿಕೊಳ್ಳುತ್ತಿದ್ದೇವೆ’ ಎಂದರು.
ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಪಾಲಿಕೆ ಮೇಯರ್ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ ಸಂಪರ್ಕಕ್ಕೆ ಸಿಗಲಿಲ್ಲ.
ಚಂದಾಪುರದ ಕೆಎಚ್‌ಬಿ ಬಡಾವಣೆಯಲ್ಲಿ ಸಿಸಿ ರಸ್ತೆ ಚರಂಡಿ ನಿರ್ಮಾಣಕ್ಕೆ ₹15 ಲಕ್ಷ ಖರ್ಚು ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅನುದಾನ ಒದಗಿಸಲು ಕ್ರಮ ವಹಿಸಿ ಬೀದಿ ದೀಪಗಳ ವ್ಯವಸ್ಥೆ ಮಾಡಲಾಗುವುದುಶಿನಾಥ ಧನ್ನಿ ಮುಖ್ಯಾಧಿಕಾರಿ ಪುರಸಭೆ ಚಿಂಚೋಳಿ
‘ಗೃಹ ಮಂಡಳಿಯು ನಿವೇಶನಗಳನ್ನು ಅಭಿವೃದ್ಧಿಪಡಿಸಿ ಸ್ಥಳೀಯ ಸಂಸ್ಥೆಗಳ ಅಧೀನಕ್ಕೆ ನೀಡುತ್ತದೆ. ತೆರಿಗೆ ಪಡೆಯುವ ಸ್ಥಂಸ್ಥೆಗಳೇ ಬಡಾವಣೆಗಳ ನಿರ್ವಹಣೆ ಮಾಡಬೇಕು’ ಎಂದು ಕೆಚ್‌ಬಿ ಎಇಇ (ಪ್ರಭಾರ) ಶಶಿಕಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ಕಾಳಗನೂರಿನ ಬಡಾವಣೆಯನ್ನು ಕುಸನೂರ ಗ್ರಾಮ ಪಂಚಾಯಿತಿ ಅಧೀನಕ್ಕೆ ಒಪ್ಪಿಸಲಾಗಿದೆ. ಗ್ರಾ.ಪಂ. ತೆರಿಗೆ ಸಂಗ್ರಹಿಸುವುದರಿಂದ ಅವರೇ ಬಡಾವಣೆಯ ನಿರ್ವಹಣೆ ಮಾಡುಬೇಕು. ಕೆಲವು ಸಮಸ್ಯೆಗಳು ಇರುವುದರಿಂದ ನಿವೇಶನಗಳ ಮಾರಾಟ ನಿಲ್ಲಿಸಲಾಗಿದೆ. ಶೀಘ್ರವೇ ಆರಂಭಿಸುತ್ತೇವೆ’ ಎಂದರು. ‘ಮಹಾನಗರ ಪಾಲಿಕೆಯು ಗ್ರೀನ್ ಪಾರ್ಕ್ ಸಮುಚ್ಚಯಗಳನ್ನು ಮ್ಯುಟೇಷನ್ ಮಾಡಿಕೊಳ್ಳಲು ಆರಂಭಿಸಿದೆ. ಮೊದಲ ಹಂತದಲ್ಲಿ 300ರಿಂದ 400 ಮ್ಯುಟೇಷನ್ ಆಗಲಿವೆ. ಕೆಲ ತಾಂತ್ರಿಕ ಕಾರಣಗಳಿಂದ ವಿಳಂಬ ಆಗಿದೆ. ರಸ್ತೆ ಚರಂಡಿ ಲಿಫ್ಟ್‌ಗಳ ದುರಸ್ತಿಗೆ ಅನುದಾನ ಬರಲಿದೆ. ಶಹಾಬಾದ್‌ನಲ್ಲಿನ ನಿವೇಶನಗಳು ಸಹ ನಗರಸಭೆ ವ್ಯಾಪ್ತಿಗೆ ಸೇರಿದ್ದು ಮ್ಯುಟೇಷನ್ ಪ್ರಕ್ರಿಯೆ ಶುರುವಾಗಿದೆ’ ಎಂದು ಮಾಹಿತಿ ನೀಡಿದರು.
ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಿಂಚೋಳಿ ಮತ್ತು ಚಂದಾಪುರದಲ್ಲಿ ತಲಾ ಒಂದೊಂದು ಬಡಾವಣೆಯನ್ನು ಅಭಿವೃದ್ಧಿಪಡಿಸಿ ನಿವೇಶನಗಳನ್ನು ಮಾರಾಟ ಮಾಡಲಾಗಿದೆ. ಚಂದಾಪುರದಲ್ಲಿ ದಶಕದ ಹಿಂದೆ ನಿವೇಶನ ಮಾರಲಾಗಿದ್ದು ಶೇ 70ರಷ್ಟು ನಿವೇಶನಗಳಲ್ಲಿ ಮನೆ ನಿರ್ಮಿಸಿಕೊಳ್ಳಲಾಗಿದೆ. ಆದರೆ ನಿವಾಸಿಗಳು ಮೂಲಸೌಲಭ್ಯಗಳಿಂದ ವಂಚಿತರಾಗಿದ್ದಾರೆ.
ಒಂದೂವರೆ ದಶಕದ ಹಿಂದೆ ನಿರ್ಮಿಸಿದ ಡಾಂಬರು ರಸ್ತೆ ಚರಂಡಿ ಹಾಳಾಗಿದೆ. ಸ್ವಲ್ಪವೇ ಮಳೆ ಬಿದ್ದರೂ ರಸ್ತೆಗಳು ಕೆಸರು ಗದ್ದೆಯಂತೆ ಆಗುತ್ತವೆ. ಬಡಾವಣೆಯ ತುಂಬ ವಿದ್ಯುತ್ ಕಂಬಗಳಿದ್ದರೂ ಬೀದಿ ದೀಪಗಳಿಲ್ಲ. ಬಡಾವಣೆಯ ಮಧ್ಯದಲ್ಲೇ ಹಾದು ಹೋಗಿರುವ ಚಂದ್ರಂಪಳ್ಳಿ ನೀರಾವರಿ ಯೋಜನೆಯ ವಿತರಣಾ ನಾಲೆ ರಾಜಕಾಲುವೆಯಂತಾಗಿದೆ. ಅಸಮರ್ಪಕ ನಿರ್ಹಣೆಯಿಂದ ಗಬ್ಬು ನಾರುತ್ತಿದೆ. ಗಿಡಗಂಟಿಗಳು ಬೆಳೆದು ವಿಷಜಂತುಗಳ ತಾಣವಾಗಿದೆ ಎನ್ನುತ್ತಾರೆ ಸ್ಥಳೀಯರು. ಕುಡಿಯುವ ನೀರಿನ ಸೌಲಭ್ಯವೂ ಕಲ್ಪಿಸಿಲ್ಲ. ನಿವಾಸಿಗಳೇ ಸ್ವಂತ ಕೊಳವೆ ಬಾವಿ ಹಾಕಿಸಿಕೊಂಡಿದ್ದಾರೆ. ನಾಗರಿಕ ಸೌಲಭ್ಯ ಗಗನಕುಸುಮವಾಗಿವೆ. ಪುರಸಭೆ ಕಚೇರಿಯ ಪಕ್ಕದಲ್ಲಿ ತಲೆ ಎತ್ತಿದ ಕೆಎಚ್‌ಬಿ ಬಡಾವಣೆಯಲ್ಲಿ ಒಂದೂ ಮನೆ ನಿರ್ಮಾಣವಾಗಿಲ್ಲ.
ಚಿತ್ತಾಪುರ: ಹಳೆ ನ್ಯಾಯಾಲಯದ ಕಟ್ಟಡದ ಹಿಂಬದಿಯಲ್ಲಿ ವೀರೇಂದ್ರ ಪಾಟೀಲ ಅವರು ಸಿಎಂ ಆಗಿದ್ದಾಗ ಉದ್ಘಾಟನೆಗೊಂಡಿದ್ದ ವಸತಿ ಮಂಡಳಿ ಬಡಾವಣೆಯ 15 ಮನೆಗಳು ಶಿಥಿಲಗೊಂಡಿವೆ. ಪೊಲೀಸರ ವಾಸಕ್ಕಾಗಿ ಮನೆಗಳನ್ನು ನೀಡಲಾಗಿದ್ದು ನಾಲ್ಕು ಮನೆಗಳಲ್ಲಿ ಪೊಲೀಸರು ವಾಸ ಮಾಡುತ್ತಿದ್ದು ಬಹುತೇಕ ಮನೆಗಳ ಪಾಳು ಬಿದ್ದಿವೆ. ಪಟ್ಟಣದ ಹೊರವಲಯದ ಯರಗಲ್ ರಸ್ತೆ ಬದಿಯ ಕೆಎಚ್‌ಬಿ ಬಡಾವಣೆಯಲ್ಲಿ ಸುಮಾರು 40 ಮನೆಗಳು ನಿರ್ಮಾಣವಾಗಿವೆ. ಹಲವು ನಿವೇಶನಗಳು ಖಾಲಿಯಿವೆ. 30ಕ್ಕೂ ಅಧಿಕ ಮನೆಗಳನ್ನು ಓರಿಯೆಂಟ್ ಸಿಮೆಂಟ್ ಕಂಪನಿಗೆ ಲೀಸ್ ನೀಡಲಾಗಿದೆ. ಬಡಾವಣೆಗೆ ಕುಡಿಯುವ ನೀರು ಉತ್ತಮ ರಸ್ತೆಯ ವ್ಯವಸ್ಥೆಯಿಲ್ಲ. ಸಮರ್ಪಕ ವಿದ್ಯುತ್ ಪೂರೈಕೆಯಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.