ಶನಿವಾರ, ಜೂನ್ 25, 2022
25 °C

ರಾಜಕಾಲುವೆ ಒತ್ತುವರಿ, ಹೂಳು: ಸುಧಾರಿಸದ ವ್ಯವಸ್ಥೆ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಮಳೆ ನೀರಿನಿಂದ ಭರ್ತಿಯಾಗಿ ಹೆಚ್ಚುವರಿ ನೀರು ಹೊರ ಹರಿಯಲು ಬಳಕೆಯಾಗಬೇಕಾದ ರಾಜಕಾಲುವೆಗಳು ಕೆಲ ಕಡೆ ಒತ್ತುವರಿಯಿಂದ ಕಿರಿದಾಗಿವೆ. ಅಲ್ಲಲ್ಲಿ ಪ್ಲಾಸ್ಟಿಕ್, ಮಣ್ಣಿನ ಹೂಳು ತುಂಬಿದೆ, ಮಳೆ ನೀರು ಸರಾಗವಾಗಿ ಜಾಗವೇ ಇಲ್ಲ. ಧಾರಾಕಾರವಾಗಿ ಮಳೆ ಸುರಿದರಂತೂ ನಗರದ ಪರಿಸ್ಥಿತಿ ಇನ್ನೂ ಗಂಭೀರವಾಗಲಿದೆ.

ನಗರದಲ್ಲಿ ಈಚೆಗೆ ಸುರಿದ ಎರಡು ತಾಸು ಮಳೆಯಿಂದ ಜಯನಗರ, ಸುಂದರ ನಗರ, ಪ್ರಶಾಂತ ನಗರ, ವೀರೇಂದ್ರ ಪಾಟೀಲ ಬಡಾವಣೆಯ ಮನೆಗಳಿಗೆ ನೀರು ನುಗಿದ್ದು ಅಲ್ಲದೇ ಚರಂಡಿಗಳು ತುಂಬಿ ಹರಿದಿದ್ದವು. ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು. ಈ ಸಲವೂ ಭಾರಿ ಮಳೆಯಾದಲ್ಲಿ, ಪರಿಸ್ಥಿತಿ ನಿಭಾಯಿಸುವುದು ಹೇಗೆ ಎಂಬ ಆತಂಕ ಜನರಲ್ಲಿ ಕಾಡುತ್ತಿದೆ.

ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಾಜಕಾಲುವೆ, ಪ್ರಾಥಮಿಕ ಮತ್ತು ದ್ವಿತೀಯ ಹಂತದ ಕಾಲುವೆ ಜಾಲಗಳು ಸೇರಿ 23.7 ಕಿ.ಮೀ ಇದೆ. ಇದರಲ್ಲಿ ಕೆಲವೆಡೆ ಒತ್ತುವರಿಗೆಯಾಗಿ ಕಟ್ಟಡ ನಿರ್ಮಾಣಗೊಂಡಿದ್ದರೆ, ಹಲವೆಡೆ ಮಣ್ಣು, ಪ್ಲಾಸ್ಟಿಕ್, ಗಿಡ ಗಂಟಿಗಳಿಂದ ಆವೃತ್ತವಾಗಿವೆ. ಹಿಂದೆ ಮಳೆ ನೀರನ್ನು ಪ್ರತ್ಯೇಕವಾಗಿ ಹೊತ್ತು ಸಾಗುತ್ತಿದ್ದ ನಾಲೆಗಳು ಈಗ ಕೊಳಚೆ ನೀರು ತುಂಬಿಕೊಂಡು ಹರಿಯುತ್ತಿವೆ.

ನಗರದ ಮಧ್ಯ ಭಾಗದಲ್ಲಿರುವ ಶರಣಬಸವೇಶ್ವರ (ಅಪ್ಪನ) ಕೆರೆ, ಖ್ವಾಜಾ ಬಂದೇ ನವಾಜ್ ಕೆರೆ, ಪುರತಂ ತಾಲಾಬ್‌ಗಳೆಲ್ಲವೂ ಒತ್ತುವರಿ ಆಗಿವೆ. ಇದರಿಂದ ಭಾರಿ ಮಳೆ ಸುರಿದಾಗ ನೀರು ಮನೆಗಳಿಗೆ ನುಗ್ಗುವ ಭೀತಿ ಇದೆ. ಸುಮಾರು 8 ಲಕ್ಷ ಜನಸಂಖ್ಯೆ ಇದ್ದರೂ ವೈಜ್ಞಾನಿಕ ಮತ್ತು ವಿಸ್ತಾರವಾಗಿ ರಾಜಕಾಲುವೆ ಹಾಗೂ ಉಪ ಚರಂಡಿಗಳು ನಿರ್ಮಿಸಲಾಗಿಲ್ಲ ಎಂಬ ಬೇಸರ ಜನರಲ್ಲಿದೆ.

ಖ್ವಾಜಾ ಬಂದೇ ನವಾಜ್ ದರ್ಗಾ ಪ್ರದೇಶದಿಂದ ಸಾಯಿ ನಗರದತ್ತ ಹರಿಯುವ ರಾಜಕಾಲುವೆಯ ಬಹುತೇಕ ಕಡೆ ಕಟ್ಟಡ ತ್ಯಾಜ್ಯ, ಮಣ್ಣು, ಪ್ಲಾಸ್ಟಿಕ್, ಗಿಡ ಗಂಟಿ ತುಂಬಿಕೊಂಡಿದೆ. ‌ಕೆಲ ಕಡೆ ಉಪ ಚರಂಡಿಗಳ ನೀರು ರಾಜಕಾಲುವೆ ಸೇರದೆ ಅದರ ಬದಿಯಲ್ಲಿ ನಿಂತಿದೆ. ಪಾಯನ್ ರಸ್ತೆ ಮಾರ್ಗದ ಚರಂಡಿಯಲ್ಲಿ ಸಾಕಷ್ಟು ಪ್ಲಾಸ್ಟಿಕ್‌ ಬಾಟಲ್, ಮಣ್ಣು, ಕಲ್ಲು ಬಿದ್ದಿದೆ. ಜತೆಗೆ ಕಾಲುವೆಯ ಎರಡೂ ಬದಿಯಲ್ಲಿ ಮುಳ್ಳುಕಂಟಿ, ಕುರುಚಲು ಗಿಡಗಳು ಬೆಳೆದಿವೆ. ಇದರಿಂದ ನೀರು ಸಾರಾಗವಾಗಿ ಹರಿಯುತ್ತಿಲ್ಲ. ಭಾರಿ ಮಳೆ ಸುರಿದರೆ ಅಕ್ಕಪಕ್ಕದ ಬಯಲು, ರಸ್ತೆ ಮೇಲೆ ಹರಿಯುತ್ತವೆ.

ವೀರೇಶ ನಗರ ವ್ಯಾಪ್ತಿಯಲ್ಲಿ ರಾಜಕಾಲುವೆಯ ಕೊಳಚೆ ನೀರು ಜಮೀನುಗಳಲ್ಲಿ ನಿಂತು ಸಹಿಸಲು ಸಾಧ್ಯವಾಗದಷ್ಟು ವಾಸನೆ ಹರಡುತ್ತಿದೆ. ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿಕರು ಹಾಗೂ ಸ್ಥಳೀಯ ನಿವಾಸಿಗಳು ದುರ್ವಾಸನೆ ಅನಿವಾರ್ಯವಾಗಿ ಸಹಿಸಿಕೊಳ್ಳಬೇಕು. ಶೆಟ್ಟಿ ಕಾಂಫ್ಲೆಕ್ಸ್‌– ಅಗ್ನಿಶಾಮಕ ಠಾಣೆ – ಕೋಟೆ ಗೋಡೆ– ಚಿಲ್ಡ್ರನ್‌ ಪಾರ್ಕ್‌ – ದೋಭಿಘಾಟ್ ಮೂಲಕ ರಾಜಕಾಲುವೆ ಸೇರುವ ಚರಂಡಿ ವ್ಯವಸ್ಥೆಯು ಸಮಸ್ಯೆಯಿಂದ ಹೊರತಾಗಿಲ್ಲ.

ಸೇಡಂ ಮುಖ್ಯರಸ್ತೆ ಪಕ್ಕದ ಜ್ಯೋತಿ ಕಾಲೊನಿಯಿಂದ ಜಿಡಿಎ ಬಡಾವಣೆವರೆಗೆ, 3 ಕಿ.ಮೀ ಅಂತರದಲ್ಲಿ ಹಲವಾರು ಕಾಲೊನಿ, ಬಡಾವಣೆಗಳು ಬರುತ್ತವೆ. ಈ ಎಲ್ಲ ಕಾಲೊನಿಗಳ ಜನರ ದಿನಬಳಕೆಯ ಹಾಗೂ ಶೌಚಾಲಯದ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆಯೇ ಇಲ್ಲ. ಸೂರ್ಯನಗರ, ಜ್ಯೋತಿನಗರ, ಪೂಜಾ ಕಾಲೊನಿ, ಯಮುನಾ ಕಾಲೊನಿ, ಜೆಡಿಎ ಬಡಾವಣೆ ಸೇರಿ ಹಲವೆಡೆ ಮುಖ್ಯ ಚರಂಡಿ, ಒಳಚರಂಡಿ, ಅಡ್ಡರಸ್ತೆ ಸೌಲಭ್ಯವಿಲ್ಲದೆ ಜನ ಹಿಡಿಶಾಪ ಹಾಕುತ್ತಿದ್ದಾರೆ. ಈ ಎಲ್ಲ ಸಮಸ್ಯೆಗಳ ಮೂಲವಾದ ರಾಜಕಾಲುವೆಯೇ ಇವುಗಳ ಪರಿಹಾರ ಕೇಂದ್ರವೂ ಆಗಿದೆ. ಈ ಕಾಲುವೆಯನ್ನು ವಿಸ್ತರಿಸಿ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವತ್ತ ಪಾಲಿಕೆಯ ಅಧಿಕಾರಿಗಳು ಮುಂದಾಗಬೇಕು ಎನ್ನುತ್ತಾರೆ ನಿವಾಸಿಗಳು.

ಪ್ರತಿ ಸ್ಥಳಕ್ಕೆ 10 ಕಾರ್ಮಿಕರ ನಿಯೋಜನೆ

ದೊಡ್ಡ ಚರಂಡಿಗಳನ್ನು ಯಂತ್ರಗಳ ನೆರವಿನಿಂದ ಸ್ವಚ್ಛ ಮಾಡಲಾಗುತ್ತಿದೆ. ಪ್ರವಾಹ ಬಾಧಿತ ಪ್ರದೇಶಗಳನ್ನು ಗುರುತಿಸಿ ಟೆಂಡರ್ ಕರೆದು ವರ್ಕ್ ಆರ್ಡರ್‌ಗೆ ಆದೇಶಿಸಲಾಗಿದೆ. ಮಳೆಯಿಂದ ಆವಾಂತರ ಸೃಷ್ಟಿಯಾದರೇ ಪ್ರತಿ ಸ್ಥಳಕ್ಕೆ 10 ಕಾರ್ಮಿಕರನ್ನು ನಿಯೋಜನೆ ಮಾಡುತ್ತೇವೆ ಎಂದು ಮಹಾನಗರ ಪಾಲಿಕೆ ಉಪ ಆಯುಕ್ತ (ಅಭಿವೃದ್ಧಿ) ಆರ್‌.ಪಿ. ಜಾಧವ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಮಸ್ಯೆ ಆಗಲಿರುವ ಬಡಾವಣೆಗಳ ಪಟ್ಟಿ ಸಿದ್ಧಪಡಿಸುತ್ತಿದ್ದೇವೆ. ರಾಜಕಾಲುವೆ ಒತ್ತುವರೆ ಸರ್ವೆ ಆಗಿಲ್ಲ. ಒತ್ತುವರಿ ಕೂಡ ಇಲ್ಲ. ರಾಜಪೂರ ಹತ್ತಿರ ಹೊಸ ಕಾಲುವೆ ನಿರ್ಮಾಣ ಮಾಡುತ್ತಿದ್ದೇವ. ಸಿದ್ದಿಬಾಷಾ ದರ್ಗಾ ಎದುರು (ಕೆಬಿಎನ್ ಆಸ್ಪತ್ರೆ) ಪ್ರತಿ ವರ್ಷ ಚರಂಡಿ ನೀರು ಹೊರ ನುಗ್ಗುತ್ತಿತ್ತು. ಈಗ 4 ಮೀಟರ್ ಅಗಲ, 4 ಮೀಟರ್ ಎತ್ತರದ 400 ಮೀಟರ್ ರಾಜಕಾಲುವೆ ನಿರ್ಮಾಣ ಆಗಿದೆ. ಜೋಡಣೆ ಮಾತ್ರ ಬಾಕಿ ಇದೆ ಎಂದು ಹೇಳುತ್ತಾರೆ.

ಸಾಮಾನ್ಯ ಅನುದಾನದಲ್ಲಿ ಈ ವರ್ಷ ₹25 ಲಕ್ಷ ವೆಚ್ಚದಲ್ಲಿ ಚರಂಡಿ ನಿರ್ಮಾಣ ಮಾಡಿದ್ದೇವೆ. ಹೊಸ ಯೋಜನೆ ಹಾಕಿಕೊಳ್ಳಲು ನಮ್ಮಲ್ಲಿ ಹಣವೇ ಇಲ್ಲ. ವಿಶೇಷ ಅನುದಾನ ಬಂದರೆ ದೊಡ್ಡ ಯೋಜನೆ ಹಾಕಿಕೊಳ್ಳಬಹುದು. ಸೇಡಂನಿಂದ ಕುಸನೂರುವರೆಗೆ ಒಂದು ಚರಂಡಿ ಯೋಜನೆ ಬಾಕಿ ಇದೆ. ಆಳಂದ ರಸ್ತೆಯಲ್ಲಿ ಸ್ಟೋನ್ ಮಷಿನರಿ ಇದ್ದು, ಅಲ್ಲಲ್ಲಿ ಬಿದ್ದು ಹೋಗಿದೆ. ಯಾವುದಾದರು ಯೋಜನೆ ಬಂದರೆ ಈ ಎರಡನ್ನು ಮುಖ್ಯವಾಗಿ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಾರೆ.

70 ಅಕ್ರಮ ಒತ್ತುವರಿ ತೆರವು

ಆರೋಗ್ಯ ಇನ್‌ಸ್ಪೆಕ್ಟರ್ ನೇತೃತ್ವದಲ್ಲಿ ಸಮಸ್ಯೆ ಉದ್ಬವಿಸುವ ಪ್ರಮುಖ ಚರಂಡಿಗಳ ಪಟ್ಟಿ ಮಾಡಿದ್ದೇವೆ. ರಾಮಮಂದಿರ, ಮಾರುಕಟ್ಟೆ ಸೇರಿ ನಾಲ್ಕು ಕಡೆ ಒತ್ತುವರಿ ಪ್ರದೇಶಗಳನ್ನು ಗುರುತ್ತಿಸಿದ್ದೇವೆ. ಈಚೆಗೆ ರಾಮಮಂದಿರ ಬಳಿಯ 70 ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಿದ್ದೇವೆ. ಚರಂಡಿ ಮೇಲಿನ ಮಳಿಗೆಗಳನ್ನು ತೆಗೆದು, ಸಾಮಗ್ರಿಗಳನ್ನು ವಶಕ್ಕೆ ಪಡೆದು, ₹1 ಲಕ್ಷಕ್ಕೂ ಅಧಿಕ ದಂಡ ವಸೂಲಿ ಮಾಡಿದ್ದೇವೆ ಎಂದು ಪಾಲಿಕೆಯ ಎಂಜಿನಿಯರ್ (ಪರಿಸರ) ಮೇಲ್ಕೇರಿ ಬಾಬು ತಿಳಿಸಿದರು.

ಪ್ಲಾಸ್ಟಿಕ್ ಸಂಗ್ರಹಕ್ಕೆ 18 ಸ್ಕ್ರೀನಿಂಗ್ ಅಳವಡಿಕೆ

ನಗರದಲ್ಲಿ ಚರಂಡಿ ಜೋಡಣೆ ನೈಸರ್ಗಿಕವಾಗಿ ಉತ್ತಮವಾಗಿದೆ. ನಿತ್ಯ ನಿರ್ವಹಣೆ ಮಾಡಿಕೊಂಡು ಹೋದರೆ ಸಮಸ್ಯೆ ಉದ್ಬವಿಸುವುದಿಲ್ಲ. ತಗ್ಗು ಪ್ರದೇಶದ ಮನೆಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುವುದು ಸಹಜ. ನಗರ ಬೆಳೆದಂತೆ ಅನುದಾನ ಹೆಚ್ಚಾಗಿ ಚರಂಡಿ ವಿಸ್ತರಣೆ ಆಗಬೇಕು. ಕೊಳಚೆ ನೀರಿನ ಹರಿವಿಗೆ ತಕ್ಕಂತೆ ಚರಂಡಿ ವಿಸ್ತರಣೆ ಇರಬೇಕಿದೆ. ಆದರೆ, ಕೆಲ ಕಡೆ ಜಾಗದ ಸಮಸ್ಯೆಯಿಂದ ಚರಂಡಿ ವಿಸ್ತರಣೆ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಪಾಲಿಕೆಯ ಇಇ ಕೆ.ಎಸ್. ಪಾಟೀಲ.

ನ್ಯಾಷನಲ್ ವೃತ್ತ– ಪಾಯನ್ ರಸ್ತೆ ಮಾರ್ಗದ ಚರಂಡಿಯ 4 ವೆಂಟ್‍ಹೋಲ್‌ಗಳ ಪೈಕಿ ಎರಡರಲ್ಲಿ ತುಂಬಿಕೊಂಡಿದ್ದ ಕಲ್ಲು, ಮಣ್ಣನ್ನು ತೆಗೆದಿದ್ದೇವೆ. ಇನ್ನೊಂದರಲ್ಲಿನ ತ್ಯಾಜ್ಯ ತೆಗೆಯಲ್ಲಿ ಇಡೀ ಸೇತುವೆಯೇ ಕೆಡವಬೇಕಿದೆ. ಕಳೆದ ವರ್ಷ ಮುಂಗಾರಿಗೂ ಮುನ್ನ ಚರಂಡಿಗಳ ಸ್ವಚ್ಛತೆ ಮಾಡಿದ್ದರಿಂದ ಮಳೆಗಾಲದಲ್ಲಿ ಹೆಚ್ಚಾಗಿ ಸಮಸ್ಯೆ ಕಂಡು ಬರಲಿಲ್ಲ. ಈ ವಾರದಲ್ಲಿ ಸ್ವಚ್ಛತೆ ಕಾರ್ಯ ಕೈಗೆತ್ತಿಕೊಳ್ಳುತ್ತೇವೆ. ಪ್ಲಾಸ್ಟಿಕ್ ಸೇರ್ಪಡೆ ತಡೆದು, ಅದನ್ನು ಸಂಗ್ರಹಿಸಲು ಸುಮಾರು 18 ಸ್ಕ್ರೀನಿಂಗ್ ಅಳವಡಿಸಿದ್ದೇವೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಹಾದು ಹೋದ ಪ್ರಮುಖ ಕಾಲುವೆ

1.ಮಹಾದೇವ ನಗರ–ರಂಗ ಮಂದಿರ (ವಾಯ ಲಾಲಗಿರಿ)
2.ಕೇಂದ್ರ ಬಸ್ ನಿಲ್ದಾಣ– ಶಕ್ತಿ ನಗರ ರೈಲ್ವೆ ಹಳಿ ಮಾರ್ಗ
3.ದತ್ತ ನಗರ– ರಿಂಗ್ ರೋಡ್ (ವಾಯ ಜಯತೀರ್ಥ ಕಲ್ಯಾಣ ಮಂಟಪ)
4.ರಿಂಗ್‌ ರೋಡ್ ಪೀರ್‌ ಬಂಗ್ಲಿ ದರ್ಗಾ– ಕೆಬಿಎನ್‌ ಮುಖ್ಯ ರಸ್ತೆ
5.ದರ್ಗಾ ಪಾಯನ್ ರಸ್ತೆ– ಎಂಬಿ ನಗರ
6.ಎಂಬಿ ನಗರ– ರೈಲು ಮಾರ್ಗ (ವಾಯ ರಾಜಪುರ)
7.ರಂಗ ಮಂದಿರ– ರಾಜಪುರ(ವಾಯ ಏಷ್ಯಾನ್ ಮಾಲ್)
8.ರಿಂಗ್ ರೋಡ್– ತಿಮ್ಮಾಪೂರಿ ಲೆಔಟ್‌
9.ಕುಸನೂರು– ಶಹಾಬಾದ್ ರಸ್ತೆ
10.ಗೀತಾ ಸಾಮಿಲ್‌– ರಂಗ ಮಂದಿರ(ಜಗತ್ ವೃತ್ತ)
11.ಇಕ್ಬಲ್‌ ಕಾಲೊನಿ– ಹಿರಾಪುರ( ಹುಸೈನ್‌ ಗಾರ್ಡನ್‌)
12.ಪಿಡಿಎ ಎಂಜಿನಿಯರ್ ಕಾಲೇಜ್ ಅಂಡರ್ ಬ್ರೀಡ್ಜ್‌– ರಿಂಗ ರೋಡ್(ವಾಯ ದರಿಯಾಪುರ ಲೆಔಟ್)

ಚರಂಡಿ ಇದ್ದರೂ ನಿರುಪಯುಕ್ತ

ಚಿಂಚೋಳಿ: ಪುರಸಭೆ ವ್ಯಾಪ್ತಿಯ ಅವಳಿ‌ ಪಟ್ಟಣಗಳಲ್ಲಿ ಅವೈಜ್ಞಾನಿಕ ಚರಂಡಿಗಳಿಂದ ಜನರು ರೋಸಿ ಹೋಗಿದ್ದಾರೆ. ಸ್ವಲ್ಪ ಮಳೆಯಾದರೂ ಚಂದಾಪುರದ ಬಸವ ನಗರದ ನಾಗಯ್ಯ ಕೊಟ್ರಕಿ‌ ಮನೆ ಬಳಿಯ ರಸ್ತೆ ಮೇಲೆ ನೀರು ನಿಲ್ಲುತ್ತದೆ.

ಇದರಿಂದ ಸ್ಥಳೀಯರಿಗೆ ಮಳೆಗಾಲದಲ್ಲಿ ನಿತ್ಯ ಕಿರಿ ಅನುಭವಿಸುವುದು ಸಾಮಾನ್ಯವಾಗಿದೆ. ಪಕ್ಕದಲ್ಲಿ ಕರ್ನಾಟಕ ಪಬ್ಲಿಕ್ ಶಾಲೆ, ಉರ್ದು ಹಿರಿಯ ಪ್ರಾಥಮಿಕ ಶಾಲೆಗಳಿದ್ದು, ವಿದ್ಯಾರ್ಥಿಗಳು ಕಸೆರು ನೀರಿನಲ್ಲಿ‌ ಓಡಾಡಬೇಕು.

ಇಲ್ಲಿನ ಬಸವ ನಗರದಲ್ಲಿ ಹಾರಕೂಡ ಶಾಲೆ ಹತ್ತಿರ ರಸ್ತೆ, ಚರಂಡಿ‌ ನಿರ್ಮಿಸಲಾಗಿದ್ದು 5 ವರ್ಷ ಕಳೆದರೂ ಮಳೆ ನೀರು ಚರಂಡಿಯಲ್ಲಿ ಹರಿದಿಲ್ಲ. ರಸ್ತೆ ಮೇಲೆ ನೀರು‌ ನಿಲ್ಲುವುದು ಸಾಮಾನ್ಯವಾಗಿದೆ. ಪಟ್ಟಣದಲ್ಲಿ ಎಲ್ಲೆಡೆ ಚಿಕ್ಕ ಚರಂಡಿಗಳಿವೆ. ಅವುಗಳ ವಿಸ್ತರಣೆ ಹೆಚ್ಚಿಸಬೇಕು ಎಂಬುದು ಸ್ಥಳೀಯರ ಮನವಿ.

ದುರ್ವಾಸನೆ ಬೀರುತ್ತಿರುವ ಚರಂಡಿಗಳು

ಜೇವರ್ಗಿ: ಪಟ್ಟಣ ಸುಮಾರು 40 ಸಾವಿರ ಜನಸಂಖ್ಯೆ ಹೊಂದಿದ್ದು, ಪುರಸಭೆಯ 23 ವಾರ್ಡ್‌ಗಳ ಸ್ವಚ್ಛತೆಗೆ ಅಧಿಕಾರಿಗಳು ಹರಿಸುತ್ತಿಲ್ಲ ಎಂಬ ದೂರುಗಳು ಸ್ಥಳೀಯರಿಂದ ಕೇಳಿ ಬರುತ್ತಿವೆ.

ಮೂರು ದಿನಗಳಿಗೆ ಒಮ್ಮೆ ಕುಡಿಯುವ ನೀರು ಸರಬುರಾಜು ಮಾಡಲಾಗುತ್ತಿದೆ. ಚಿಕ್ಕ ಜೇವರ್ಗಿ ಹಳ್ಳದಲ್ಲಿ ಕಸದ ರಾಶಿ ಸಂಗ್ರಹವಾಗಿದ್ದು, ಹಳ್ಳದ ನೀರು ಸರಾಗವಾಗಿ ಭೀಮಾ ನದಿಗೆ ಸೇರುತ್ತಿಲ್ಲ. ಶಿಕ್ಷಕರ ಕಾಲೊನಿ, ಶಾಸ್ತ್ರಿ ವೃತ್ತ ಬಡಾವಣೆ, ದತ್ತ ನಗರ, ಜೋಪಡಪಟ್ಟಿ ಬಡಾವಣೆ ಸೇರಿದಂತೆ ಇತರೆಡೆ ಚರಂಡಿಗಳು ಕಸದ ರಾಶಿ, ಮಳೆ ನೀರು ಹಾಗೂ ಮಣ್ಣಿನಿಂದ ತುಂಬಿಕೊಂಡಿವೆ.

ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ. ರಸ್ತೆಯ ಮೇಲೆ ನಿಂತು ಸೊಳ್ಳೆಗಳ ಉತ್ಪತ್ತಿ ತಾಣವಾಗಿವೆ. ಜತೆಗೆ ಸೊಳ್ಳೆಗಳ ಕಾಟ ಮಿತಿ ಮೀರಿದೆ. ಕೂಡಲೇ ಪುರಸಭೆ ಅಧಿಕಾರಿಗಳು ಚರಂಡಿಗಳನ್ನು ಸ್ವಚ್ಛಗೊಳಿಸುವ ಮೂಲಕ ಜನರ ಪರದಾಟ ತಪ್ಪಿಸಬೇಕು ಎಂಬುದು ಶಾಸ್ತ್ರಿ ವೃತ್ತ ಬಡಾವಣೆ ನಿವಾಸಿಗಳು ಆಗ್ರಹ.

‘ಜನರು ಹೆಚ್ಚಾಗಿ ಪ್ಲಾಸ್ಟಿಕ್ ಬಳಸುತ್ತಿದ್ದಾರೆ. ಮಳೆ, ನಲ್ಲಿ ನೀರಿನೊಂದಿಗೆ ಮಣ್ಣು ಸೇರ್ಪಡೆ ಆಗಿ ಅಲ್ಲಲ್ಲಿ ಸಂಗ್ರಹವಾಗಿದೆ. ಇದರಿಂದ ಚರಂಡಿ ನೀರು ಸರಾಗವಾಗಿ ಹರಿಯುತ್ತಿಲ್ಲ. ಕೂಡಲೇ ಪಟ್ಟಣದಲ್ಲಿನ ಚರಂಡಿಗಳ ಸ್ವಚ್ಛತೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಶರಣಯ್ಯ ಹಿರೇಮಠ ಹೇಳಿದರು.

ಕಲಬುರಗಿ ನಗರದ ಚರಂಡಿ ಸಾಮರ್ಥ್ಯದ ಅಂಕಿಅಂಶ

27.3 ಕಿ.ಮೀ ಒಟ್ಟಾರೆ ಚರಂಡಿ ಜಾಲ

ಹೊಸ ರಾಜಕಾಲುವೆ ನಿರ್ಮಾಣ

900 ಮೀ. ಉದ್ದ; ಕುಸನೂರು- ರಾಜಪೂರ

400 ಮೀ. ಉದ್ದ; ಸಿದ್ದಿ ಬಾಷಾ ದರ್ಗಾ ಬಳಿ

800 ಮೀ. ಉದ್ದ; ಚಿಮ್ಮಲಗಿ ಲೆಔಟ್‌

ಶೇ 70ರಷ್ಟು ಕಾಮಗಾರಿ ರಾಜಪುರ ಬಳಿ ಪೂರ್ಣ

ಲಭ್ಯ ಯಂತ್ರಗಳು

1– ಮಿನಿ ಇಟಾಚಿ

3– ದೊಡ್ಡ ಇಟಾಚಿ

5– ಜೆಸಿಬಿ

30– ಕಾರ್ಮಿಕರ ತಾತ್ಕಾಲಿಕ ನೇಮಕ

ಪೂರಕ ಮಾಹಿತಿ; ವೆಂಕಟೇಶ ಆರ್.ಹರವಾಳ, ಜಗನ್ನಾಥ ಡಿ ಶೇರಿಕಾರ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು