ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಮಾರುಕಟ್ಟೆಗೂ ಬೆಳೆ ಹಾನಿ ಹೊಡೆತ

ಕಲಬುರ್ಗಿ ಎಪಿಎಂಸಿಗೆ ಆವಕ ಪ್ರಮಾಣದಲ್ಲಿ ತೀವ್ರ ಕುಸಿತ
Last Updated 2 ಅಕ್ಟೋಬರ್ 2021, 1:54 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೂ (ಎಪಿಎಂಸಿ) ಇದರ ಬಿಸಿ ತಟ್ಟಿದೆ. ನಿರೀಕ್ಷಿತ ಪ್ರಮಾಣದಲ್ಲಿ ಕೃಷಿ ಉತ್ಪನ್ನ ಆವಕ ಆಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿನ ವ್ಯಾಪಾರಿಗಳು ಹಾಗೂ ಕೂಲಿ ಕಾರ್ಮಿಕರೂ ಸಂಕಷ್ಟದಲ್ಲಿದ್ದಾರೆ.

‘ಅತಿವೃಷ್ಟಿಯಿಂದಾಗಿ ಜಿಲ್ಲೆಯ ಬಹುತೇಕ ಕಡೆ ಫಸಲು ಹಾಳಾಗಿದೆ. ಕೈಗೆ ಬಂದ ಅಲ್ಪಸ್ವಲ್ಪ ಬೆಳೆಗೂ ಉತ್ತಮ ದರ ಸಿಗುತ್ತಿಲ್ಲ. ಹೀಗಾಗಿ ಮಾರುಕಟ್ಟೆಗೆ ತಂದ ಬೆಳೆಯನ್ನು ಮಾರಲೂ ಆಗದೇ, ಉಳಿಸಿಕೊಳ್ಳಲೂ ಆಗದಂತಹ ದುಸ್ಥಿತಿ ಎದುರಾಗಿದೆ’ ಎಂದು ಎಪಿಎಂಸಿ ಆವರಣದಲ್ಲಿದ್ದ ರೈತರು ‘ಪ್ರಜಾವಾಣಿ’ ಬಳಿ ನೋವು ತೋಡಿಕೊಂಡರು.

ಸಾಮಾನ್ಯವಾಗಿ ಈ ದಿನಗಳಲ್ಲಿ ನಗರದ ಎಪಿಎಂಸಿಗೆ ಹೆಸರು, ಉದ್ದು, ಎಳ್ಳು, ಸೂರ್ಯಕಾಂತಿ ಆವಕ ಹೆಚ್ಚಾಗಿರುತ್ತಿತ್ತು. ಆದರೆ, ಈ ಬಾರಿ ಎಲ್ಲ ಬೆಳೆಗಳ ಆವಕವೂ ತಗ್ಗಿದೆ. ಬಂದ ಅಲ್ಪ ಸ್ವಲ್ಪ ಬೆಳೆಯೂ ಗುಣಮಟ್ಟ ಕಳೆದುಕೊಂಡಿದ್ದು, ಬೇಡಿಕೆಯೇ ಇಲ್ಲವಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಈ ಹಿಂದೆ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ತಿಂಗಳಲ್ಲಿ ಒಟ್ಟಾರೆ ಎಪಿಎಂಸಿಯಲ್ಲಿ ದಿನವೊಂದಕ್ಕೆ 10ರಿಂದ 15 ಸಾವಿರ ಕ್ವಿಂಟಲ್ ಆವಕ (ವಿವಿಧ ಉತ್ಪನ್ನ) ಇರುತ್ತಿತ್ತು. ಆದರೀಗ ಬೆಳೆಹಾನಿಯಿಂದಾಗಿ ನಿತ್ಯ 4ರಿಂದ 5 ಸಾವಿರ ಮಾತ್ರ ಆವಕ ಇದೆ. ಇದು ಇಲ್ಲಿನ ವ್ಯಾಪಾರಿಗಳು, ಹಮಾಲಿಗಳು, ಟಂಟಂ ಚಾಲಕರು, ಎತ್ತಿನ ಬಂಡಿ ಓಡಿಸುವವರಿಗೆ ದೊಡ್ಡ ಹೊಡೆತ ನೀಡಿದೆ. ಅದರಲ್ಲೂ ಅಂದು ದುಡಿದು ಅಂದೇ ಉಣ್ಣುವ ಕಾರ್ಮಿಕರಂತೂ ನಿತ್ಯದ ಕೂಲಿಗಾಗಿ ಪರದಾಡುವ ಸ್ಥಿತಿ ಎದುರಾಗಿದೆ ಎನ್ನುತ್ತಾರೆ ಎಸ್‌.ಬಿ.ಟ್ರೇಡರ್ಸ್ ಅಂಗಡಿ ಮಾಲೀಕ ಬಸವರಾಜ.

‘ಶೇ 50 ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಆವಕ ತಗ್ಗಿದೆ. ಸಾಮಾನ್ಯವಾಗಿ ಆವಕ ಕಡಿಮೆಯಾದಾಗ ದರ ಏರಿಕೆಯಾಗಬೇಕು. ಆದರೆ, ಬಹುತೇಕ ಮಳೆ ನೀರಿನಲ್ಲಿ ತೊಯ್ದಿರುವ ಉತ್ಪನ್ನ (ಹಾಳಾದ ಬೆಳೆ) ಹೆಚ್ಚಿನ ಪ್ರಮಾಣದಲ್ಲಿ ಬಂದಿರುವುದರಿಂದ ಉತ್ತಮ ದರ ಸಿಗುತ್ತಿಲ್ಲ’ ಎಂದು ಕಿರಣ ಪಾಟೀಲ ಟ್ರೇಡರ್ಸ್‌ನರಾಚಣ್ಣ ವಿವರಿಸಿದರು.

‘ಉದ್ದು ₹3,500ರಿಂದ 6,800, ಹೆಸರು4,500ರಿಂದ 6,500,ತೊಗರಿ 6,500ರಿಂದ 6,700 ಸೂರ್ಯಕಾಂತಿ 4,500 ರಿಂದ 5,000,ಸೋಯಾ 4,500 ರಿಂದ 6,000 ದವರೆಗೆ ಖರೀದಿಸಲಾಗುತ್ತಿದೆ’ ಎಂದು ಅವರು ತಿಳಿಸಿದರು.

ಎ‍ಪಿಎಂಸಿ ಪ್ರಾಂಗಣದಲ್ಲಿ ಹಮಾಲಿ ಕಾರ್ಮಿಕರ ಕೂಗು, ಟಂಟಂಗಳ ಸದ್ದು ಅಷ್ಟಾಗಿ ಕೇಳಿಬರಲಿಲ್ಲ. ಎಲ್ಲೆಡೆ ಮೌನವೇ ಆವರಿಸಿತ್ತು. ಕಾರ್ಮಿಕರ ಮುಖದಲ್ಲಿ ಆತಂಕ ತುಂಬಿದ ಬೇಸರವಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT