ಮಂಗಳವಾರ, ಏಪ್ರಿಲ್ 7, 2020
19 °C
ಸಂಗೀತ, ನೃತ್ಯ, ಪುರಾಣ ಸಂಸ್ಕೃತಿಯ ನೆಲೆ ಚಿತ್ತಾಪುರ ತಾಲ್ಲೂಕಿನ ನಾಗಾವಿ

ವೇಶ್ಯಾವೃತ್ತಿಗೂ ಇತ್ತು ರಾಜಾಶ್ರಯ

ಮಲ್ಲಿಕಾರ್ಜುನ ಎಚ್‌.ಎಂ. Updated:

ಅಕ್ಷರ ಗಾತ್ರ : | |

Prajavani

ಚಿತ್ತಾಪುರ: ಕ್ರಿ.ಶ 11ನೇ ಶತಮಾನದಲ್ಲಿ ವಿಶ್ವವಿದ್ಯಾಲಯ ಮಟ್ಟದ ಉಚಿತ ಶಿಕ್ಷಣ ವ್ಯವಸ್ಥೆಯ ಪುರಾತನ ಘಟಿಕಾಸ್ಥಾನ ಹೊಂದಿದ್ದ ನಾಗಾವಿ ಮಹಾ ಅಗ್ರಹಾರವು ಶಿಕ್ಷಣ, ಕಲೆ, ಸಾಹಿತ್ಯ, ಸಂಗೀತ ಹಾಗೂ ಅನೇಕ ವೈವಿಧ್ಯಮಯ ಜನಸಂಸ್ಕೃತಿಯನ್ನು ತನ್ನ ಕಾಲಗರ್ಭದಲ್ಲಿ ಅಡಗಿಸಿಕೊಂಡಿದೆ.

ನಾಗಾವಿ ಮಹಾ ಅಗ್ರಹಾರದಲ್ಲಿ ನೃತ್ಯಶಾಲೆ, ಸಂಗೀತ, ಪುರಾಣ ಸಂಸ್ಕೃತಿಗೆ, ಹಾಡುವ ಸಮುದಾಯಕ್ಕೆ, ಪಾತರದವರಿಗೆ ಮತ್ತು ಸೂಳೆಗಾರಿಕೆಗೆ (ವೇಶ್ಯಾವೃತ್ತಿ) ರಾಜಾಶ್ರಯ ನೀಡಿ ಪೋಷಿಸಲಾಗಿತ್ತು ಎಂಬುದಕ್ಕೆ ಕ್ರಿ.ಶ 1085 ರ (60 ಕಂಬದ ದೇಗುಲದ ಮುಂದೆ ಇರುವ ಶಾಸನ) ಶಾಸನವು ನಿದರ್ಶನವಾಗಿ ನಿಂತಿದೆ.

ಅಗ್ರಹಾರದಲ್ಲಿ  ಸಂಜೆ ಹೊತ್ತು ಆಧ್ಯಾತ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವ ‘ಸಂಜೆ ಮಠ’ ಇತ್ತು. ಇಲ್ಲಿ ಪುರಾಣ ಕಾರ್ಯಕ್ರಮವು ನಡೆಯುತ್ತಿತ್ತು. ಮಠದಲ್ಲಿ ಪುರಾಣ ಹೇಳುತ್ತಿದ್ದ ಪುರಾಣ ಭಟ್ಟರಿಗೆ ಜೀವನಾಧಾರಕ್ಕೆ 40 ಮತ್ತರು ಭೂಮಿ ಉಂಬಳಿಯಾಗಿ ನೀಡಲಾಗಿತ್ತು ಎಂದು ಕಲ್ಯಾಣ ಚಾಲುಕ್ಯರ ಆರನೇ ವಿಕ್ರಮಾಧಿತ್ಯನ ಕಾಲಘಟ್ಟದಲ್ಲಿ ಮಹಾಮಂಡಳೇಶ್ವರ (ದಂಡನಾಯಕ) ಲೋಕರಸನ ಆಳ್ವಿಕೆಯ ಕ್ರಿ.ಶ 1085ರ ಶಿಲಾ ಶಾಸನ ಹೇಳುತ್ತಿದೆ.

ದೇವಸ್ಥಾನದಲ್ಲಿ ವಾದ್ಯ ನುಡಿಸುವ ಪಾಳವಿಗರು ಇಬ್ಬರು ಹಾಗೂ ಮದ್ದಳೆಕಾರರು ನಾಲ್ವರಿಗೆ 80 ಮತ್ತರು ಭೂಮಿ ದತ್ತಿ ನೀಡಲಾಗಿತ್ತು. ಹಾಡುವ ಸಮುದಾಯ ಎರಡು ಇದ್ದವು. ಅವರ ಜೀವನೋಪಾಯಕ್ಕೆ 60 ಮತ್ತರು ಭೂಮಿ ಉಂಬಳಿಯಾಗಿ ನೀಡಲಾಗಿತ್ತು. ನಾಗಾವಿಯಲ್ಲಿ ಪಾತರದವರ ಎರಡು ವರ್ಗಗಳಿದ್ದು ಅವರಿಗೆ 40 ಮತ್ತರು ಭೂಮಿ ನೀಡಲಾಗಿತ್ತು. ಕಂಬದ ಸೂಳೆಯರು ನಾಲ್ವರು ಇದ್ದರು. ಅವರಿಗೆ 36 ಮತ್ತರು ಭೂಮಿ ಉಂಬಳಿಯಾಗಿ ನೀಡಲಾಗಿತ್ತು ಎಂದು ಶಾಸನವು ಅರುಹುತ್ತದೆ.

ಈ ಹಿಂದೆ ದೇವಸ್ಥಾನದಲ್ಲಿ 'ಹಾಡುವವರು' ಮತ್ತು 'ಪಾತರದವರು' ಇಲ್ಲದ ದೇವರ ಪೂಜೆ, ಆರಾಧನೆ ಊಹೆಗೂ ನಿಲುಕದು. ಈ ರೀತಿಯ ಸಂಸ್ಕೃತಿಗೆ ತಂದೆ ತಾಯಿ ಹರಕೆಯಂತೆ ಅಪ್ರಾಪ್ತ ಹೆಣ್ಣು ಮಗಳನ್ನು ಒಂಭತ್ತನೇ ಪ್ರಾಯದಲ್ಲೇ ದೇವಸ್ಥಾನಕ್ಕೆ ಬಿಡುತ್ತಿದ್ದರು. ಅಥವಾ ರಾಜರು, ದಂಡನಾಯಕರು, ಊರಿನ ಪ್ರಮುಖರು ದತ್ತಿಯಾಗಿ ಅವರನ್ನು ದೇವಸ್ಥಾನಗಳಿಗೆ ಕೊಡುತ್ತಿದ್ದರು ಎಂದು ಇತಿಹಾಸದ ಪುಟಗಳು ಸಾರುತ್ತಿವೆ.

ದೇವಸ್ಥಾನದಲ್ಲಿ ಅರ್ಚಕರು ಸಂಗೀತ ಪರಿಕರಗಳೊಂದಿಗೆ ಪಾತರದವರ ಸಂಸ್ಕೃತಿಗೆ ಪದಾರ್ಪಣೆ ಮಾಡುವ ಹೆಣ್ಣು ಮಗುವಿಗೆ ಮದುವೆ (ಗಂಡಾಕಟ್ಟುವ) ಸಂಪ್ರದಾಯ ನೆರವೇರಿಸುತ್ತಿದ್ದರು. ರಾಜಮುದ್ರೆಯುಳ್ಳ ಬೆಳ್ಳಿ ನಾಣ್ಯವನ್ನು ತಾಳಿಯ ಸಂಕೇತವಾಗಿ ಕೊರಳಲ್ಲಿ ಕಟ್ಟುತ್ತಿದ್ದರು. ಅಂತಹ ಸಂಸ್ಕೃತಿ ನಾಗಾವಿಯಲ್ಲಿತ್ತು ಎಂಬುದು ಶಾಸನದಿಂದ ತಿಳಿದುಬರುತ್ತದೆ.

ಎಳೆ ವಯಸ್ಸಿನಲ್ಲಿಯೇ ಪ್ರಾಣಿಗಳನ್ನು ಪಳಗಿಸುವಂತೆ ಹೆಣ್ಣು ಮಕ್ಕಳನ್ನು ನೃತ್ಯ, ಹಾಡಿನಲ್ಲಿ ನಿಪುಣತೆ ಸಾಧಿಸಲೆಂದು ಕಠಿಣವಾಗಿ ತರಬೇತಿ ನೀಡಿ ಪಳಗಿಸುತ್ತಿದ್ದರು. ನೃತ್ಯ, ಸಂಗೀತ ತರಬೇತಿಯಿಂದ ಸಿದ್ಧರಾಗಿ ದೇವಸ್ಥಾನಗಳಲ್ಲಿ ತಮ್ಮನ್ನು ತಾವು ದೇವರ ಸೇವೆಗೆ ಅರ್ಪಿಸಿಕೊಂಡು ವಿವಾಹೇತರ ಸಂಬಂಧದ ಮೂಲಕ ಜೀವನ ಸಾಗಿಸುತ್ತಿದ್ದರು. ಈ ಪದ್ಧತಿಯು ನಾಗಾವಿಯಲ್ಲಿತ್ತು ಎಂದು ಶಾಸನದ ಉಲ್ಲೇಖವು ಗಮನ ಸೆಳೆಯುತ್ತದೆ.

ನಾಗಾವಿ ಅಗ್ರಹಾರದಲ್ಲಿ ಸೂಳೆಗಾರಿಕೆಯು (ವೇಶ್ಯಾವೃತ್ತಿ) ಪ್ರತಿಷ್ಠೆಯ ಸಂಕೇತವಾಗಿ ಪುರೋಹಿತಶಾಹಿ ಮತ್ತು ರಾಜಾಶ್ರಯದಲ್ಲಿ ಇತ್ತೆಂದು ಶಾಸನದಿಂದ ತಿಳಿದು ಬರುತ್ತದೆ. ದೇವಸ್ಥಾನಗಳಲ್ಲಿ ಅಂಗಭೋಗದ ಮತ್ತು ರಂಗಭೋಗದ ಸೂಳೆಯರು ಇರುತ್ತಿದ್ದರು ಎಂದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ನಾಗಾವಿ ಅಗ್ರಹಾರದಲ್ಲಿ ನಾಲ್ವರು ಕಂಬದ (ಅಂಗಭೋಗದ) ಸೂಳೆಯರಿದ್ದರು ಎಂದು ಶಾಸನದಲ್ಲಿ ಉಲ್ಲೇಖವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು