ಭಾನುವಾರ, ಸೆಪ್ಟೆಂಬರ್ 26, 2021
21 °C
ಕ್ಯಾನ್ ನೀರು ಖರೀದಿಸುತ್ತಿರುವ ಜನರು; ದುರಸ್ತಿಯಾಗದ ಹಳೆಯ ಪೈಪ್‌ಗಳು

ಕಲಬುರ್ಗಿ: ನಗರದಲ್ಲಿ ಕಲುಷಿತ ನೀರು ಪೂರೈಕೆ

ಸತೀಶ ಬಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ನಗರದ ಕೆಲವು ಪ್ರದೇಶಗಳಲ್ಲಿ ಒಂದು ವಾರದಿಂದ ಕಲುಷಿತ, ಮಣ್ಣು ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. ಇದರಿಂದ ಜನರು ಅಶುದ್ಧ ನೀರನ್ನೇ ಬಳಸುವಂತಾಗಿದೆ.

ಕೆಲವೆಡೆ ನಿರಂತರ ನೀರು ಪೂರೈಕೆ ಯೋಜನೆ ಜಾರಿಯಲ್ಲಿದ್ದರೆ ಇನ್ನೂ ಕೆಲವಡೆ ದಿನ ಬಿಟ್ಟು ದಿನ ಮತ್ತು ಮೂರು ದಿನಕ್ಕೆ ಒಮ್ಮೆ ನೀರು ಪೂರೈಕೆಯಾಗುತ್ತಿದೆ.

ನಗರದಲ್ಲಿ ಬಹುತೇಕ ಕಡೆ 10–15 ವರ್ಷಗಳ ಹಿಂದೆ ಪೈಪ್‌ಗಳನ್ನು ಅಳವಡಿಸಲಾಗಿದೆ. ಅಲ್ಲದೆ, ಹಲವು ಕಡೆಗಳಲ್ಲಿ ನೀರಿನ ಪೈಪ್‌ಗಳು ಒಡೆದು ಹೋಗಿವೆ. ಹೀಗಾಗಿ ಕಲುಷಿತ ನೀರು ಪೂರೈಕೆಯಾಗುತ್ತಿದೆ.

ರಾಜಾಪುರ ರಸ್ತೆ, ತಿಲಕ್‌ನಗರ, ಝಂಝಂ ಕಾಲೊನಿ, ಹಾಗರಗಾ ರಸ್ತೆ, ಜನತಾ ಲೇಔಟ್, ರೇವಣಸಿದ್ದೇಶ್ವರ ನಗರ, ಬಿದ್ದಾಪುರ ಕಾಲೊನಿ, ಜೇವರ್ಗಿ ಕಾಲೊನಿ, ಸಿಐಬಿ ಕಾಲೊನಿ ಸೇರಿ ಹಲವು ಪ್ರದೇಶಗಳಲ್ಲಿ ಈ ಸಮಸ್ಯೆ ಇದೆ.

ಎಂಟು ದಿನಗಳಿಂದ ಹೊಲಸು ನೀರು ಬರುತ್ತಿದೆ. ನೀರು ಬಳಸಲು ಸಾಧ್ಯವಾಗುತ್ತಿಲ್ಲ. ನಲ್ಲಿಯಲ್ಲಿ ನೀರು ಬಂದರೆ ಕೆಟ್ಟ ವಾಸನೆ ಬರುತ್ತದೆ ಎಂದು ಜನತಾ ಲೇಔಟ್‌ನ ಕೌಶಿಕ್ ಪಾಟೀಲ ದೂರಿದರು.

‘ನೀರಂತರ ನೀರು ಪೂರೈಕೆ ಯೋಜನೆಯ ಸಂಪರ್ಕ ಪಡೆದಿದ್ದೇವೆ. ಅದಕ್ಕೆ ಹಣವನ್ನೂ ಪಾವತಿಸುತ್ತಿದ್ದೇವೆ. ಆದರೂ ಕ್ಯಾನ್‌ ನೀರು ಖರೀದಿ ಮಾಡಿ ನೀರು ಬಳಸಬೇಕಾಗಿದೆ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

‘ಮಳೆಗಾಲ ಆರಂಭವಾಗಿದ್ದರೂ ಅಷ್ಟಾಗಿ ಮಳೆ ಆಗುತ್ತಿಲ್ಲ. ಆದರೂ ಬಳಸಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಇದನ್ನು ಹಲವು ಬಾರಿ ಪಾಲಿಕೆ ಅಧಿಕಾರಿಗಳಿಗೆ ಗಮನಕ್ಕೆ ತಂದಿದ್ದೇವೆ. ಆದರೂ ಸಮಸ್ಯೆ ಬಗೆಹರಿದಿಲ್ಲ’ ಎಂದು ಜೇವರ್ಗಿ ಕಾಲೊನಿ ನಿವಾಸಿ ಸೋಮಶೇಖರ ಹೇಳಿದರು.

ಬೇರೆ ದಾರಿ ಇಲ್ಲದೆ ಅನಿವಾರ್ಯವಾಗಿ ಹೊಲಸು ನೀರನ್ನೇ ಬಳಕೆ ಮಾಡುತ್ತಿದ್ದೇವೆ. ಈ ನೀರಿನಿಂದ ಸ್ನಾನ ಮಾಡಿದ ನಂತರ ಮೈ ಕಡಿಯುತ್ತದೆ ಎಂದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ಬಸವರಾಜ ಆಲೆಗಾಂವ್, ನಗರಕ್ಕೆ ಬೆಣ್ಣೆತೊರಾದಿಂದ 20 ದಶಲಕ್ಷ ಲೀಟರ್, ಭೀಮಾದಿಂದ 55 ದಶಲಕ್ಷ ಲೀಟರ್ ನೀರು ಪೂರೈಕೆ ಆಗುತ್ತದೆ. ಅದನ್ನು ಕೋಟನೂರು (ಡಿ), ಚೋರ್ ಗುಂಬಜ್ ಮತ್ತು ತಾಜಸುಲ್ತಾನಪುರ ಘಟಕಗಳಲ್ಲಿ ಶುದ್ಧೀಕರಿಸಲಾಗುತ್ತದೆ ಎಂದು ಹೇಳಿದರು.

ಜೂನ್ 28ರಂದು ಬೆಣ್ಣೆತೊರಾ ನದಿ ಪಾತ್ರದಲ್ಲಿ ಸುರಿದ ಭಾರಿ ಮಳೆಯಿಂದಾಗಿ ನದಿಗೆ ಹೊಸ ನೀರು ಸೇರಿತು. ಅಲ್ಲದೆ, ಶುದ್ಧೀಕರಿಸಿದ ನೀರಿನಲ್ಲಿ ಮಣ್ಣು ಮಿಶ್ರಿತ ನೀರು ಸೇರಿತು. ಇದರಿಂದ ಪೈಪ್‌ಲೈನ್‌ಗಳಲ್ಲಿ ಮಣ್ಣು ಸೇರಿಕೊಂಡಿದೆ ಎನ್ನುತ್ತಾರೆ ಅವರು.

ಬೆಣ್ಣೆತೊರಾ ದಿಂದ ಪೂರೈಸಲಾಗುವ ನೀರಿನ ಪೈಪ್‌ಗಳನ್ನು ಸ್ವಚ್ಛಗೊಳಿಸಲಾಗಿದೆ. ಇದರಿಂದ ಶೇ 80 ಪ್ರದೇಶಗಳಲ್ಲಿ ಶುದ್ಧ ನೀರು ಪೂರೈಸಲಾಗುತ್ತಿದೆ. ಇನ್ನೂ ಶೇ 20ರಷ್ಟು ಪ್ರದೇಶದ ಪೈಪ್‌ಗಳನ್ನು ಸ್ವಚ್ಛಗೊಳಿಸುವ ಕಾರ್ಯ ನಡೆಯುತ್ತಿದೆ ಎಂದರು.

ಹಳೆಯ ಪ್ರದೇಶಗಳಲ್ಲಿ ನೆಲಮಟ್ಟದಿಂದ ಎರಡು, ಮೂರು ಅಡಿ ಕೆಳಭಾಗದಲ್ಲಿ ನಲ್ಲಿಗಳಿವೆ. ಕೆಲವು ಸಂದರ್ಭದಲ್ಲಿ ಜನರು ನಲ್ಲಿಗಳನ್ನು ಬಂದ್ ಮಾಡದ ಕಾರಣ ಕಲುಷಿತ ನೀರು ಪೈಪ್‌ಗೆ ಸೇರಿ ಅದೇ ನೀರು ಪೂರೈಕೆಯಾಗುತ್ತಿದೆ ಎಂದು ವಿವರಿಸಿದರು.

ನೀರು ಪೂರೈಕೆಗೆ ಕಬ್ಬಿಣದ ಪೈಪ್‌ಗಳು, ಪಿವಿಸಿ ಪೈಪ್‌ಗಳನ್ನು ಅಳವಡಿಸಲಾಗಿದೆ. ಕಬ್ಬಿಣದ ಪೈಪ್‌ಗಳು ತುಕ್ಕು ಹಿಡಿದು ಹಾಳಾಗಿವೆ. ಅಲ್ಲದೆ, ಪಿವಿಸಿ ಪೈಪ್‌ಗಳು ಒತ್ತಡ ತಾಳದೆ ಕೆಲವೆಡೆ ಒಡೆದಿರುವುದರಿಂದ ಕಲುಷಿತ ನೀರು ಪೈಪ್‌ಗೆ ಸೇರುತ್ತಿದೆ ಎಂದರು.

ಪಕ್ಕದ ಮನೆಗಳ ಕೊಳವೆಬಾವಿಗಳಿಂದ ಕಾಡಿ ಬೇಡಿ ನೀರು ತರಬೇಕಾಗಿದೆ. ನೀರಿನ ಕರ ಪಾವತಿಸಿದರೂ ಶುದ್ಧ ನೀರು ಪೂರೈಸುತ್ತಿಲ್ಲ. ಸಂಬಂಧಪಟ್ಟವರು ಸಮಸ್ಯೆ ಪರಿಹರಿಸಬೇಕು
ಕೌಶಿಕ್ ಪಾಟೀಲ, ಜನತಾ ಲೇಔಟ್

 ಸಮಸ್ಯೆ ಇರುವ ಪ್ರದೇಶಗಳನ್ನು ಗುರುತಿಸಿ,ಎಸ್‌ಎಫ್‌ಸಿ ಮತ್ತು ಸ್ಥಳೀಯ ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದೆ
  ಬಸವರಾಜ ಆಲೆಗಾಂವ್, ಕಾರ್ಯನಿರ್ವಾಹಕ ಎಂಜಿನಿಯರ್, ನಗರ ನೀರು ಸರಬರಾಜು, ಒಳಚರಂಡಿ ಮಂಡಳಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು