ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ಮರುಕಳಿಸದ ಮಹಾದೇವಪ್ಪ ರಾಂಪುರೆ ಹ್ಯಾಟ್ರಿಕ್‌ ಗೆಲುವಿನ ದಾಖಲೆ

ಎಂ.ಪಿ.ಚಪೆಟ್ಲಾ
Published 27 ಏಪ್ರಿಲ್ 2024, 6:12 IST
Last Updated 27 ಏಪ್ರಿಲ್ 2024, 6:12 IST
ಅಕ್ಷರ ಗಾತ್ರ

ಗುರುಮಠಕಲ್‌: ಕಲಬುರಗಿ ಲೋಕಸಭಾ ಕ್ಷೇತ್ರದ ರಚನೆಯ ನಂತರ ಈವರೆಗಿನ ಎಲ್ಲಾ ಚುನಾವಣೆಗಳ ಫಲಿತಾಂಶದಲ್ಲಿ ಕೇವಲ ಮೂರು ಬಾರಿ ಮಾತ್ರ ಕಾಂಗ್ರೆಸ್ ಸೋತಿದ್ದು, ಸೋಲಿಸಿದ ಮೂವರಲ್ಲಿ ಇಬ್ಬರು ಕಾಂಗ್ರೆಸ್‌ ಹಿನ್ನೆಲೆಯಿಂದ ಬಂದವರೆಂಬುದು ವಿಶೇಷ.

1996ರಲ್ಲಿ ಜನತಾದಳದ ಖಮರುಲ್ ಇಸ್ಲಾಂ, 1998ರಲ್ಲಿ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಮತ್ತು ಕಳೆದ ಬಾರಿಯ (2019) ಚುನಾವಣೆಯಲ್ಲಿ ಬಿಜೆಪಿಯ ಡಾ.ಉಮೇಶ ಜಾಧವ್‌ ಈ ಮೂವರು ಕಾಂಗ್ರೆಸೇತರರಾಗಿ ಗೆಲುವಿನ ನಗೆ ಬೀರಿದ್ದಾರೆ. ಆದರೆ, ಕಾಂಗ್ರೆಸ್‌ಯೇತರರಾಗಿ ಗೆದ್ದ ಮೂವರಲ್ಲಿ ಇಬ್ಬರದು ಕಾಂಗ್ರೆಸ್‌ ಹಿನ್ನೆಲೆಯಾಗಿದ್ದು, ಬಸವರಾಜ ಪಾಟೀಲ ಸೇಡಂ ಮಾತ್ರ ಜನ ಸಂಘದ ಹಿನ್ನೆಲೆಯುಳ್ಳವರು.

1978ರಲ್ಲಿ ಮೊದಲಬಾರಿ ಸ್ವತಂತ್ರ ಅಭ್ಯರ್ಥಿಯಾಗಿ ಅಂದಿನ ಗುಲಬರ್ಗಾ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದ ಖಮರುಲ್ ಇಸ್ಲಾಂ, 1989ರಲ್ಲಿ ಮುಸ್ಲೀಂ ಲೀಗ್‌ ಪಕ್ಷದಿಂದ ಶಾಸಕರಾದರು. 1994ರಲ್ಲಿ ಕಾಂಗ್ರೆಸ್‌ನಿಂದ ಶಾಸಕನಾಗಿ ಮರು ಆಯ್ಕೆಯಾದರು. ಆದರೆ, 1996ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ತೊರೆದು ಜನತಾದಳದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದರು.

2013ರಲ್ಲಿ ಕಲಬುರಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಡಾ.ಉಮೇಶ ಜಾಧವ್‌ ಶಾಸಕರಾಗಿ ವಿಧಾನಸಭೆ ಪ್ರವೇಶಿಸಿದ್ದರು. 2018ರ ಚುನಾವಣೆಯಲ್ಲಿಯೂ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಶಾಸಕನಾಗಿ ಮರುಆಯ್ಕೆಯಾಗಿದ್ದರು. ಆದರೆ, 2019ರ ಲೋಕಸಭಾ ಚುನಾವಣೆ ವೇಳೆ ನಡೆದ ಹಲವು ರಾಜಕೀಯ ಪಲ್ಲಟಗಳ ಕಾರಣ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಅಭ್ಯರ್ಥಿಯಾಗಿ ಲೋಕಸಭಾ ಚುನಾವಣಾ ಕಣಕ್ಕಿಳಿದು, ಸಂಸದರಾಗಿ ಆಯ್ಕೆಯಾಗಿದ್ದರು.

16 ಬಾರಿ ಕಾಂಗ್ರೆಸ್ ಆಯ್ಕೆ: ಈವರೆಗೆ ಕಲಬುರಗಿ ಲೋಕಸಭಾ ಕ್ಷೇತ್ರಕ್ಕೆ ನಡೆದ 17 ಸಾರ್ವತ್ರಿಕ ಮತ್ತು 2 ಉಪ ಚುನಾವಣೆ ಸೇರಿ 19 ಚುನಾವಣೆಗಳಲ್ಲಿ 16 ಬಾರಿ ಕಾಂಗ್ರೆಸ್‌, 1 ಬಾರಿ ಜನತಾ ದಳ (1996), 2 ಬಾರಿ ಬಿಜೆಪಿ (1998,2019) ಜಯ ಸಾಧಿಸಿದೆ.

1952 ರಿಂದ ಕಾಂಗ್ರೆಸ್ ಹಿಡಿತ: 1952ರ ಮೊದಲ ಚುನಾವಣೆಯಲ್ಲಿ ಸ್ವಾಮಿ ರಮಾನಂದ ತೀರ್ಥರು ಸಂಸದರಾಗಿ ಆಯ್ಕೆಯೊಂದಿಗೆ ಕಾಂಗ್ರೆಸ್‌ ಗೆಲುವು ಆರಂಭಗೊಂಡು ನಂತರ 1957, 1962 ಮತ್ತು 1967 ರ ಸತತ ಮೂರು ಚುನಾವಣೆಗಳಲ್ಲಿ ಮಹಾದೇವಪ್ಪ ರಾಂಪುರೆ ಆಯ್ಕೆ, 1971ರಲ್ಲಿ ಧರ್ಮರಾವ್‌ ಅಫಜಲಪೂರಕರ್, 1974ರಲ್ಲಿ ಮತ್ತು 1977ರಲ್ಲಿ ಸಿದ್ರಾಮರೆಡ್ಡಿ, 1980ರಲ್ಲಿ ಧರಂಸಿಂಗ್‌ ಮತ್ತು ಸಿ.ಎಂ.ಸ್ಟೀಫನ್‌, 1984ರಲ್ಲಿ ವೀರೇಂದ್ರ ಪಾಟೀಲ, 1989 ಮತ್ತು 1991 ಬಿ.ಜಿ.ಜವಳಿ ವರೆಗೆ ಸತತವಾಗಿ ಕಲಬುರಗಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳ ಹಿಡಿತದಲ್ಲಿತ್ತು.

1996ರಲ್ಲಿ ಜನತದಳದಿಂದ ಖಮರುಲ್ ಇಸ್ಲಾಂ ಮೊದಲ ಬಾರಿ ಆಯ್ಕೆಯಾದ ಕಾಂಗ್ರೆಸ್‌ಯೇತರ ಸಂಸದರಾದರೆ, 1998ರಲ್ಲಿ ಬಿಜೆಪಿಯ ಬಸವರಾಜ ಪಾಟೀಲ ಸೇಡಂ ಸಂಸದರಾಗಿ ಆಯ್ಕೆಯಾದರು. 1999 ಮತ್ತು 2004ರಲ್ಲಿ ಕಾಂಗ್ರೆಸ್‌ನ ಇಕ್ಬಾಲ್‌ ಅಹ್ಮದ್‌ ಸರಡಗಿ ಆಯ್ಕೆಯಾದರು.

ಮೀಸಲು ಕ್ಷೇತ್ರವಾಗಿ ಮರುವಿಂಗಡಣೆ: 2009ರಲ್ಲಿ ಪರಿಶಿಷ್ಟ ಜಾತಿಗೆ ಮೀಸಲು ಕ್ಷೇತ್ರವಾಗಿ ಮರುವಿಂಗಡಣೆ ನಂತರ 2009,ಮತ್ತು 2014 ರಲ್ಲಿ ಈಗಿನ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸಂಸದರಾಗಿ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. 2019ರ ಚುನಾವಣೆಯಲ್ಲಿ ಕಾಂಗ್ರೆಸ್‌ ತೊರೆದು ಬಂದ ಡಾ. ಉಮೇಶ ಜಾಧವ್‌ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಮಲ್ಲಿಕಾರ್ಜುನ ಖರ್ಗೆಯವರ ವಿರುದ್ಧ ಗೆಲುವು ಸಾಧಿಸುವುದರೊಂದಿಗೆ ಕ್ಷೇತ್ರವನ್ನು ಪ್ರತಿನಿಧಿಸಿದ ಮೂರನೇ ಕಾಂಗ್ರೆಸೇತರ ಸಂಸದರಾದರು.

ಮರುಕಳಿಸದ ರಾಂಪುರೆ ದಾಖಲೆ: ಕಲಬುರಗಿ ಲೋಕಸಭೆಗೆ 1957, 1962 ಹಾಗೂ 1967ರಲ್ಲಿ ನಡೆದ ಚುನಾವಣೆಗಳಲ್ಲಿ ಸತತ ಮೂರು ಬಾರಿ ಮಹಾದೇವಪ್ಪ ರಾಂಪುರೆ ಜಯ ಸಾಧಿಸಿದ್ದರು. ಅವರ ನಂತರ ಈ ದಾಖಲೆ ಈವರೆಗೂ ಮರುಕಳಿಸಿಲ್ಲ. ರಾಂಪುರೆ ಹೊರತು ಈವರೆಗೂ ಯಾರಿಗೂ ಸತತ ಮೂರು ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರವನ್ನು ಜಯಿಸಲು ಸಾಧ್ಯವಾಗಿಲ್ಲ.

ಕಾಂಗ್ರೆಸ್‌ ಗಿದು ಪ್ರತಿಷ್ಠೆಯ ಕಣ: ಕಳೆದ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪರಾಭವಗೊಂಡಿದ್ದ ಮಲ್ಲಿಕಾರ್ಜುನ ಖರ್ಗೆಯವರೀಗ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ದೇಶಾದ್ಯಂತ ಪ್ರಚಾರದಲ್ಲಿ ತೊಡಗಿರುವ ಅವರು ತಮ್ಮ ಅಳಿಯ ರಾಧಾಕೃಷ್ಣ ದೊಡ್ಡಮನಿಯನ್ನು ಕಲಬುರಗಿಯಿಂದ ಕಣಕ್ಕಿಳಿಸಿದ್ದು, ಕಾಂಗ್ರೆಸ್ ಪಾಳಯಕ್ಕಿದು ಪ್ರತಿಷ್ಠೆಯ ಕಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT