ಮಂಗಳವಾರ, ಫೆಬ್ರವರಿ 18, 2020
31 °C

ಸಾಹಿತ್ಯ ಸಮ್ಮೇಳನ| ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಅದ್ಧೂರಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಕಲಬುರ್ಗಿ: 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಬುಧವಾರ ಅದ್ಧೂರಿ ಚಾಲನೆ ದೊರೆಯಿತು.  

ಪುಷ್ಪಾಲಂಕಾರದಿ ಕಂಗೊಳಿಸುವ ರಥದಲ್ಲಿ ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶಮೂರ್ತಿ ಅವರನ್ನು ಕೂರಿಸಿ ಪುಷ್ಪವೃಷ್ಟಿ ಮಾಡುವ ಮೂಲಕ ಕನ್ನಡ ತಾಯಿಯ ವಡ್ಡೋಲಗ ಆರಂಭವಾಯಿತು. ಅಲ್ಲಿ ಸೇರಿದ್ದ ಕನ್ನಡಾಭಿಮಾನಿಗಳಲ್ಲಿ ನಾಡು ನುಡಿಯ ಝೇಂಕಾರ ಅನುರಣಿಸಿತು. 

ಸಮ್ಮೇಳನಾಧ್ಯಕ್ಷರ ರಥದ ಮುಂದೆ ಮುಂದೆ ಹಲವಾರು ಕಲಾತಂಡಗಳ ವೈಭೋಗ. ಬಣ್ಣಬಣ್ಣದ ಧಿರಿಸಿನಲ್ಲಿ ಬಂದ ಯುವ ಮನಸಾಸುಗಳು ಕುಣಿದು ಕುಪ್ಪಳಿಸಿದವು. ಎಲ್ಲಿ ನೋಡಿದರೂ ಅರಿಸಿನ ಕುಂಕುಮ ಬಣ್ಣದ ಕನ್ನಡ ಧ್ವಜಗಳ ಹಾರಾಟ. ಪೌರಾಣಿಕ ಐತಿಹಾಸಿಕ ಪುರುಷೋತ್ತಮರ ವೇಶಭೂಷಣ ಕನ್ನಡಿಗರ ಸಾರ್ವಭೌಮದ ಪ್ರತಿರೂಪ ಭುವನೇಶ್ವರಿಯ ವೈಭೋಗ ಅಲ್ಲಿ ಮನೆ ಮಾಡಿತ್ತು.

ಡಾ.ಎಸ್.ಎಂ. ಪಂಡಿತ ರಂಗಮಂದಿರದಿಂದ ಆರಂಭಗೊಂಡ ಈ ಸಮ್ಮೇಳನಾಧ್ಯಕ್ಷರ ಮೆರವಣಿಗೆಯು ಸೇಡಂ ರಸ್ತೆಯ ಖರ್ಗೆ ಪೆಟ್ರೋಲ್ ಪಂಪ್ ಬಲಕ್ಕೆ ತಿರುಗಿ ರಿಂಗ್ ರಸ್ತೆ ಮೂಲಕ ಕುಸನೂರ ರಸ್ತೆಯ ಮಾರ್ಗದಿಂದ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದ ಪ್ರಧಾನ ವೇದಿಕೆಗೆ ತಲುಪಲಿದೆ.

60ಕ್ಕೂ ಹೆಚ್ಚು ಕಲಾ ತಂಡಗಳು ಭಾಗಿ

ಮೆರವಣಿಗೆಯಲ್ಲಿ ಜಿಲ್ಲೆಯ 23 ಕಲಾ ತಂಡಗಳು ಹಾಗೂ ಕೊಪ್ಪಳ, ಗದಗ, ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ತುಮಕೂರ, ಆಂಧ್ರ ಗಡಿನಾಡು ಘಟಕ, ಹಾಸನ, ಉಡುಪಿ ಸೇರಿದಂತೆ ವಿವಿಧ ಜಿಲ್ಲೆಗಳ ಒಟ್ಟು 60 ಕಲಾ ತಂಡಗಳು ಈ ಮೆರವಣಿಗೆಯಲ್ಲಿ ಭಾಗವಹಿಸಿವೆ.

ಡೊಳ್ಳು ಕುಣಿತ, ಹಲಿಗೆ ವಾದನ, ದೊಡ್ಡಾಟ ಕುಣಿತ, ಕರಡಿ ಮಜಲು ಮತ್ತು ಚಮವಾದ್ಯ, ಲಂಬಾಣಿ ಕುಣಿತ, ಪುರವಂತಿಕೆ, ರಣಕಹಳೆ, ಗೊಂಬೆ ಕುಣಿತ, ಪೋತರಾಜ ಕುಣಿತ, ಭಜನಾ ಮಂಡಳಿ, ಮಹಿಳಾ ವೀರ ಗಾಸೆ, ಸಂಬಳ ವಾದ್ಯ, ಮೋಜಿನ ಕುಣಿತ, ವೀರಭದ್ರ ಕುಣಿತ ಹೀಗೆ ವಿವಿಧ ಕಲಾ ಪ್ರಕಾರದ ತಂಡಗಳು ಈ ಭಾಗವಹಿಸಿವೆ.

ನಗರ ಪೊಲೀಸ್ ಆಯುಕ್ತ ಡಾ.ಎಂ.ಎನ್.ನಾಗರಾಜ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಪಿ.ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಡಿಸಿಪಿ ಡಿ.ಕಿಶೋರ ಬಾಬು, ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎನ್. ಷಡಕ್ಷರಿ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಾಜು ಲೇಂಗಟಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು