ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಥಿಲಾವಸ್ಥೆಯಲ್ಲಿ ಶಾಲಾ ಕಟ್ಟಡ

ಆತಂಕದಲ್ಲಿ ವಿದ್ಯಾರ್ಥಿಗಳು
ಶಿವಾನಂದ ಹಸರಗುಂಡಗಿ
Published 28 ಜನವರಿ 2024, 6:53 IST
Last Updated 28 ಜನವರಿ 2024, 6:53 IST
ಅಕ್ಷರ ಗಾತ್ರ

ಅಫಜಲಪುರ: ತಾಲ್ಲೂಕಿನ ಅಳ್ಳಗಿ(ಕೆ) ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಹಾಳಾಗಿದ್ದು, ಮೇಲ್ಚಾವಣಿ ಕಿತ್ತಿ ಬೀಳುತ್ತಿದೆ. ಅದರಲ್ಲಿಯೇ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಅದೇ ಕಟ್ಟಡದಲ್ಲಿಯೇ ಮಕ್ಕಳಿಗೆ ನಿತ್ಯ ಬಿಸಿಯೂಟ ನೀಡಲಾಗುತ್ತಿದೆ. ಹೀಗಾಗಿ ಯಾವ ಸಮಯದಲ್ಲಿ ಕಟ್ಟಡ ಬಿದ್ದು ಹೋಗುತ್ತದೆ ಎಂಬ ಆತಂಕದಲ್ಲಿ ಶಿಕ್ಷಕರು, ಮಕ್ಕಳಿದ್ದಾರೆ. ತಾಲ್ಲೂಕು ಆಡಳಿತ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಈ ಬಗ್ಗೆ ಗಮನಹರಿಸಬೇಕು ಎಂದು ಆಗ್ರಹಿಸಿದ್ದಾರೆ.

1 ರಿಂದ 5ನೇ ತರಗತಿವರೆಗೆ ಈ ಶಾಲೆಯಲ್ಲಿ ಸುಮಾರು 100 ಮಕ್ಕಳು ವ್ಯಾಸಂಗ ಮಾಡುತ್ತಾರೆ. 3 ಜನ ಶಿಕ್ಷಕರಿದ್ದಾರೆ. ಶಾಲೆಯಲ್ಲಿ ಒಟ್ಟು 5ಕೋಣೆಗಳಿದ್ದು 3 ಕೋಣೆಗಳು ಸಂಪೂರ್ಣ ಹಾಳಾಗಿ ಹೋಗಿವೆ. 2 ಕೋಣೆಗಳಲ್ಲಿ ಮಾತ್ರ ಮಕ್ಕಳಿಗೆ ಶಿಕ್ಷಣ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಎಲ್ಲ ಕೋಣೆಗಳು ಸೋರುತ್ತವೆ. ಹೀಗಾಗಿ ‘ಕಳೆದ ಮಳೆಗಾಲದಲ್ಲಿ ಶಾಲೆಗೆ ನಾಲ್ಕೈದು ದಿನ ರಜೆ ನೀಡಲಾಗಿತ್ತು’ ಎಂದು ಗ್ರಾಮಸ್ಥರು ತಿಳಿಸಿದರು.

ಎಸ್‌ಡಿಎಂಸಿ ಅಧ್ಯಕ್ಷ ಮಾಯಪ್ಪ ಪೂಜಾರಿ ಶಾಲೆ ಬಗ್ಗೆ ಮಾಹಿತಿ ನೀಡಿ, ‘ನಮ್ಮ ಗ್ರಾಮದ ಶಾಲೆಯ ಕಟ್ಟಡ  ಸಂಪೂರ್ಣ ಹಾಳಾಗಿ ಹೋಗಿದ್ದು, ಅದು ದುರಸ್ತಿ ಮಾಡಲಾರದಷ್ಟು ಹಾಳಾಗಿದೆ. ಅದಕ್ಕಾಗಿ ಈಗಿರುವ ಕಟ್ಟಡವನ್ನು ನೆಲಸಮ ಮಾಡಿ ಹೊಸ ಕಟ್ಟಡ ನಿರ್ಮಾಣ ಮಾಡಬೇಕು, ಮತ್ತು ಶಾಲೆಗೆ ಮೂಲ ಸೌಲಭ್ಯ ಕಲ್ಪಿಸಬೇಕು’ ಎಂದು ಅವರು ಆಗ್ರಹಿಸಿದರು.

‘ಶಾಲಾ ಕಟ್ಟಡ ಪುನಃ ನಿರ್ಮಾಣ ಮಾಡುವ ಬಗ್ಗೆ ಈ ಹಿಂದೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮತ್ತು ಶಾಸಕರಿಗೂ ತಿಳಿಸಲಾಗಿದೆ. ಯಾವುದೇ ಕ್ರಮ ಜರುಗಿಸಿಲ್ಲ. ಮತ್ತೆ ಮಳೆಗಾಲ ಬರುತ್ತೆ, ಶಾಲೆ ಸೋರುತ್ತದೆ. ಅದಕ್ಕಾಗಿ ಮಳೆಗಾಲದೊಳಗಾಗಿ ಸರ್ಕಾರ 6 ಕೊಠಡಿಗಳನ್ನು ನಿರ್ಮಾಣ ಮಾಡಬೇಕು’ ಎಂದು ಅವರು ತಿಳಿಸಿದರು.

ಎಸ್‌ಡಿಎಂಸಿ ಉಪಾಧ್ಯಕ್ಷ ದಶರಥ ಶಿಂಧೆ ಹಾಗೂ ಸದಸ್ಯರಾದ ಲಾಲ್ ಸಾಬ್ ಶೇಕ್ ಅವರು ಶಾಲೆಯ ಅವ್ಯವಸ್ಥೆ ಬಗ್ಗೆ ಮಾಹಿತಿ ನೀಡಿ, ‘ಮಳೆಗೆ ಶಾಲಾ ಕಟ್ಟಡ ಇನ್ನಷ್ಟು ಹಾಳಾಗುವ ಸಂಭವವಿದೆ. ಹೀಗಾಗಿ ಜನಪ್ರತಿನಿಧಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.

ಗ್ರಾಮ ಪಂಚಾಯಿತಿ ಸದಸ್ಯರಾದ ಹಣಮಂತ ಪೂಜಾರಿ ಮಾಹಿತಿ ನೀಡಿ, ‘ನರೇಗಾ ಯೋಜನೆಯಲ್ಲಿ ಶಾಲಾ ಕಾಂಪೌಂಡ್ ನಿರ್ಮಾಣಕ್ಕಾಗಿ ಕ್ರಿಯಾಯೋಜನೆಯಲ್ಲಿ ಸೇರ್ಪಡೆ ಮಾಡಿದ್ದೇವೆ. ಅನುಮೋದನೆ ಆದಮೇಲೆ ನಿರ್ಮಾಣ ಮಾಡುತ್ತೇವೆ. ಕೊಠಡಿಗಳನ್ನು ಸರ್ಕಾರ ನಿರ್ಮಾಣ ಮಾಡಬೇಕು’ ಎಂದು ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಜಿ ಮಲಂಗ್ ಇಂಡಿಕರ್ ಅವರನ್ನು ಈ ಬಗ್ಗೆ ವಿಚಾರಿಸದಾಗ, ‘ನನಗೂ ಅದರ ಬಗ್ಗೆ ಮಾಹಿತಿ ಇಲ್ಲ. ಸೋಮವಾರ ಶಾಲೆಗೆ ಭೇಟಿ ನೀಡಿ, ಮುಖ್ಯ ಶಿಕ್ಷಕರಿಂದ ಮಾಹಿತಿ ಪಡೆದು ಸರ್ಕಾರಕ್ಕೆ ಮುಂದಿನ ಕ್ರಮಕ್ಕಾಗಿ ಶಿಫಾರಸ್ಸು ಮಾಡುತ್ತೇನೆ ಎಂದು ತಿಳಿಸಿದರು.

ಈ ಕುರಿತು ಪ್ರತಿಕ್ರಿಯಿಸಿರುವ ಶಾಸಕರು, ‘ತಾಲ್ಲೂಕಿನ ಶಾಲಾ ಕೊಠಡಿಗಳಿಗಾಗಿ ಈಗಾಗಲೇ ಸುಮಾರು ₹20 ಕೋಟಿ ಅನುದಾನದಲ್ಲಿ ಹೊಸ ಶಾಲಾ ಕೋಣೆ ನಿರ್ಮಾಣ ಮತ್ತು ದುರಸ್ತಿ ಮಾಡಲು ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆಯಲಾಗಿದೆ ಎಂದು ತಿಳಿಸಿದರು.

ಎಂ.ವೈ.ಪಾಟೀಲ  ಶಾಸಕರು 
ಎಂ.ವೈ.ಪಾಟೀಲ  ಶಾಸಕರು 
ಶಬಾನಾ ಬೇಗಂ 
ಶಬಾನಾ ಬೇಗಂ 

ತಾಲ್ಲೂಕಿನಲ್ಲಿ ವ್ಯಾಸಂಗ ಮಾಡಲು ಯೋಗ್ಯವಲ್ಲದ ಶಾಲೆಗಳನ್ನ ಗುರುತಿಸಿ ಅವುಗಳನ್ನ ದುರಸ್ತಿ ಮಾಡಲಾಗುವುದು- ಎಂ.ವೈ.ಪಾಟೀಲ ಶಾಸಕ

ಅಳ್ಳಗಿ(ಕೆ) ಗ್ರಾಮದಲ್ಲಿ ಕೆಕೆಆರ್‌ಡಿಬಿ ಅನುದಾನದಡಿ ಗುಣಮಟ್ಟದ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಬೇಕು- ಶಬಾನಾಬೇಗಂ ಗೌರ(ಬಿ) ಗ್ರಾ.ಪಂ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT