ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ನಾಳೆಯಿಂದ ದೇವರ ದರ್ಶನಕ್ಕೆ ಅವಕಾಶ

ಅಂತರ ಕಾಯ್ದುಕೊಳ್ಳುವ ಜವಾಬ್ದಾರಿ ಆಡಳಿತ ಮಂಡಳಿಗೆ, ಸ್ಕ್ರೀನಿಂಗ್‌, ಸ್ಯಾನಿಟೈಸರ್‌ ಕಡ್ಡಾಯ
Last Updated 7 ಜೂನ್ 2020, 9:44 IST
ಅಕ್ಷರ ಗಾತ್ರ

ಕಲಬುರ್ಗಿ: ಜಿಲ್ಲೆಯ ಎಲ್ಲ ದೇವಸ್ಥಾನ, ಚರ್ಚ್‌, ಮಸೀದಿಗಳಿಗೆ ಸೋಮವಾರ (ಜೂನ್‌ 8) ಪ್ರವೇಶ ಅವಕಾಶ ಸಿಗಲಿದೆ. ಸುಮಾರು ಎರಡೂವರೆ ತಿಂಗಳಿಂದ ದೇವರ ದರ್ಶನಕ್ಕೆ ಹಾತೊರೆಯುತ್ತಿದ್ದ ಜನರ ಬಯಕೆ ಇನ್ನೆರಡು ದಿನದಲ್ಲಿ ಈಡೇರಲಿದೆ.‌

ಹೆಚ್ಚು ಜನ ಸೇರುವ ನಗರದ ಶರಣಬಸವೇಶ್ವರ ದೇವಸ್ಥಾನ, ಕೋರಂಟಿ ಹನುಮಾನ್‌ ಮಂದಿರ, ಯಲ್ಲಮ್ಮ ದೇವಸ್ಥಾನ, ಖಾಜಾ ಬಂದಾ ನವಾಜ್‌ ದರ್ಗಾ, ಸೇಂಟ್ ಮೇರಿಸ್‌ ಚರ್ಚ್‌ ಹಾಗೂ ದೇವಲ ಗಾಣಗಾಪುರದ ದತ್ತಾತ್ರೇಯ ಪೀಠ ಮುಂತಾದ ಮಠ ಹಾಗೂ ತೀರ್ಥಕ್ಷೇತ್ರಗಳಲ್ಲಿ ಶನಿವಾರದಿಂದಲೇ ಸಿದ್ಧತೆ ಆರಂಭವಗಿದೆ.

‌ಆರಂಭದಲ್ಲಿ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಪ‍್ರಸಾದ, ಅನ್ನಸಂತರ್ಪಣೆ ಇಲ್ಲ. ಅಭಿಷೇಕಾದಿ ಪೂಜಾ ಕಾರ್ಯಕ್ರಮಗಳಿಗೆ ಹೆಚ್ಚು ಜನ ಸೇರುವಂತಿಲ್ಲ. ದೇವಸ್ಥಾನಗಳ ಮುಂಬಾಗಿಲಲ್ಲೇ ಎಲ್ಲರಿಗೂ ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ. ಮಾಸ್ಕ್‌ ಧರಿಸಿದವರಿಗೆ ಮಾತ್ರ ಒಳಗೆ ಪ್ರವೇಶ. ಅಂತರ ಕಾಯ್ದುಕೊಳ್ಳುವುದು ಆಯಾ ದೇವಸ್ಥಾನದ ಆಡಳಿತ ಮಂಡಳಿಗಳ ಜವಾಬ್ದಾರಿ ಎಂದು ಜಿಲ್ಲಾಡಳಿತ ಮಾರ್ಗದರ್ಶಿ ನೀಡಿದೆ.

ಶರಣಬಸವೇಶ್ವರ ದೇವಸ್ಥಾನ: ಸರ್ಕಾರದ ಮಾರ್ಗಸೂಚಿಗಳನ್ನು ಅನುಸರಿಸಿ ದೇವಸ್ಥಾನಕ್ಕೆ ಪ್ರವೇಶ ನೀಡಲಾಗುವುದು ಎಂದು ಶರಣಬಸವೇಶ್ವರ ಸಂಸ್ಥಾನದ ಅಧ್ಯಕ್ಷ ಡಾ.ಶರಣಬಸವಪ್ಪ ಅಪ್ಪ ತಿಳಿಸಿದ್ದಾರೆ.

ದೇವಸ್ಥಾನವನ್ನು ಸ್ಯಾನಿಟೈಸರ್‌ನಿಂದ ಶುದ್ಧಗೊಳಿಸಲಾಗಿದೆ. ಭಕ್ತರು ವೈರಾಣು ನಾಶಕ ದ್ರಾವಣ ಸಿಂಪಡಣೆ ಸುರಂಗದ ಮೂಲಕ ಹಾಯಬೇಕು. ಥರ್ಮಲ್‌ ಸ್ಕ್ರೀನಿಂಗ್‌ ಕಡ್ಡಾಯ ಮಾಡಲಾಗಿದೆ. ಅಂತರ ಕಾಯ್ದುಕೊಳ್ಳಲು ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲು ಅವರು ನಿರ್ಧರಿಸಿದ್ದಾರೆ. ಅಪ್ಪನ ಕೆರೆಯ ಪಕ್ಕದಲ್ಲೇ ಇರುವ ಯಲ್ಲಮ್ಮದೇವಿ ದೇವಸ್ಥಾನದಲ್ಲೂ ಮಹಿಳೆಯರು ಹೆಚ್ಚು ಸೇರುತ್ತಾರೆ. ದೇವಸ್ಥಾನದ ಆವರಣ ಚಿಕ್ಕದಾದ ಕಾರಣ, ಜನಸಂದಣಿ ಹೆಚ್ಚದಂತೆ ನೋಡಿಕೊಳ್ಳಲು ಮಾರ್ಕಿಂಗ್‌ ಮಾಡಲಾಗುತ್ತಿದೆ.

ರಾಮ ಮಂದಿರದಲ್ಲೂ ಸಿದ್ಧತೆ: ನಗರದಲ್ಲಿ ಅತ್ಯಂತ ಹೆಚ್ಚು ಭಕ್ತರು ಸೇರುವ ರಾಮ ಮಂದಿರದಲ್ಲಿ ಕೂಡ ಶನಿವಾರ ಭರದ ಸಿದ್ಧತೆಗಳು ನಡೆದವು. ಭಾನುವಾರ ಪೂರ್ಣ ದೇವಸ್ಥಾನವನ್ನು ಸ್ಯಾನಿಟೈಸ್‌ ಮಾಡಲಾಗುವುದು. ಜತೆಗೆ, ಪ್ರತಿ ದಿನವೂ ರಾತ್ರಿ ವೈರಾಣು ದ್ರಾವಣ ಸಿಂಪಡಣೆ ಮಾಡಲು ಮನವಿ ಮಾಡಲಾಗುವುದು. ದೇವಸ್ಥಾನ ಆವರಣದಲ್ಲಿ ಸಾಕಷ್ಟು ಜಾಗವಿದ್ದು, ಭಕ್ತರು ಅಂತರ ಕಾಯ್ದುಕೊಳ್ಳಲು ತೊಂದರೆ ಇಲ್ಲ ಎಂದು ಅರ್ಚಕರು ಮಾಹಿತಿ ನೀಡಿದ್ದಾರೆ.‌

ಜತೆಗೆ, ಈ ದೇವಸ್ಥಾನ ಆವರಣದಲ್ಲಿ ವಾಯು ವಿಹಾರಕ್ಕೆ ಬರುವವರು, ವಿಶ್ರಾಂತಿಗಾಗಿ ತಾಸುಗಟ್ಟಲೇ ಕುಳಿತುಕೊಳ್ಳುವವರೂ ಇದ್ದಾರೆ. ಸದ್ಯಕ್ಕೆ ಅದನ್ನು ನಿಷೇಧಿಸಿ, ದರ್ಶನಕ್ಕೆ ಮಾತ್ರ ಅವಕಾಶ ಕಲ್ಪಿಸಲು ನಿರ್ಧರಿಸಿದ್ದಾರೆ.

ಗಾಣಗಾಪುರ: ದತ್ತ ಪಾದುಕೆ ದರ್ಶನ

ದೇವಲ ಗಾಣಗಾಪುರದ ದತ್ತಾತ್ರೇಯ ಪಾದುಕೆಗಳ ದರ್ಶನಕ್ಕೂ ಅವಕಾಶ ಕಲ್ಪಿಸಲಾಗುತ್ತಿದೆ. ಪಾದುಕೆಗಳನ್ನು ದೇವಸ್ಥಾನದ ಕಿಟಕಿಯಲ್ಲಿ ಇಟ್ಟು ಅಲ್ಲಿಂದಲೇ ಭಕ್ತರು ದರ್ಶನ ಪಡೆಯಲು ಅನುಕೂಲ ಮಾಡಲಾಗಿದೆ.

‘ಆವರಣದೊಳಕ್ಕೆ ಬರುವ ಮುನ್ನ ಸ್ಯಾನಿಟೈಸ್‌ನಿಂದ ಕೈ ತೊಳೆಸಲಾಗುವುದು. ನಂತರ ಥರ್ಮಲ್‌ ಸ್ಕ್ರೀನಿಂಗ್ ಮಾಡಲಾಗುವುದು. ಅಂತರ ಕಾಯ್ದುಕೊಳ್ಳಲು ಮಾರ್ಕಿಂಗ್‌ ಮಾಡಲಾಗಿದೆ. ಆವರಣದಲ್ಲಿ ಪೂಜಾ ಸಾಮಗ್ರಿಗಳ ಮಳಿಗೆಗಳೂ ತೆರೆಯಲಿವೆ. ಅಲ್ಲಿಯೂ ಜನಸಂದಣಿ ಆಗದಂತೆ ನೋಡಿಕೊಳ್ಳಲು ಆಡಳಿತ ಮಂಡಳಿ ವ್ಯವಸ್ಥೆ ಮಾಡಿದೆ’ ಎಂದು ದೇವಸ್ಥಾನದ ಅರ್ಚಕರಾದ ಉದಯಕುಮಾರ ಕೆ. ಪೂಜಾರಿ ತಿಳಿಸಿದರು.

‘ದತ್ತಾತ್ರೇಯ ದರ್ಶನಕ್ಕೆ ಮಹಾರಾಷ್ಟ್ರದ ಭಕ್ತರೇ ಹೆಚ್ಚು ಬರುತ್ತಾರೆ. ಆದರೆ, ಅಂತರರಾಜ್ಯ ಸಂಚಾರ ಇನ್ನೂ ಆರಂಭವಾಗದ ಕಾರಣ ಹೆಚ್ಚಿನ ಭಕ್ತರು ಸೇರುವ ನಿರೀಕ್ಷೆ ಇಲ್ಲ. ಅನ್ನಸಂತರ್ಪಣೆ, ಮಹಾಪ್ರಸಾದ, ಮದುಕರಿ, ಗಂಧ, ತೀರ್ಥಪ್ರಸಾದ ನೀಡುವುದಿಲ್ಲ. ಪ್ರತಿ ದಿನ ನಸುಕಿನ 3.30ಕ್ಕೆ ದೇವಸ್ಥಾನ ತೆರೆಯುತ್ತದೆ. ರಾತ್ರಿ 10ಕ್ಕೆ ಬಂದ್ ಮಾಡುತ್ತೇವೆ. ಬೆಳಿಗ್ಗೆ 6ರಿಂದ ಜನಕಲ್ಯಾಣ ಪೂಜೆ ಮಾಡುವುದು ವಾಡಿಕೆ. ಆದರೆ, ಇನ್ನಷ್ಟು ದಿನ ಈ ಪೂಜೆ ಕೈಬಿಡಲು ನಿರ್ಧರಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT