ಶನಿವಾರ, ಜುಲೈ 2, 2022
22 °C

₹156 ಕೋಟಿ ‘ನೋಂದಣಿ’ ಆದಾಯ

ಮಲ್ಲಿಕಾರ್ಜುನ ನಾಲವಾರ Updated:

ಅಕ್ಷರ ಗಾತ್ರ : | |

Prajavani

ಕಲಬುರಗಿ: ಸ್ಥಿರಾಸ್ತಿಗಳ ನೋಂದಣಿಯ ಮುದ್ರಾಂಕ ಶುಲ್ಕ ನಿಗದಿಯ ಮಾರ್ಗಸೂಚಿ ದರದ ರಿಯಾಯಿತಿ, ಸಿಬ್ಬಂದಿಯ ಹೆಚ್ಚುವರಿ ಕೆಲಸದ ಅವಧಿಯಿಂದಾಗಿ 2021–22ರ ವಿತ್ತೀಯ ವರ್ಷದಲ್ಲಿ ಜಿಲ್ಲಾ ಉಪನೋಂದಣಿ ಕಚೇರಿಯ ಆದಾಯವು ಶೇ 15.55ರಷ್ಟು ಏರಿಕೆಯಾಗಿದೆ.

ಕೃಷಿ ಜಮೀನು, ಕೃಷಿಯೇತರ ಜಮೀನು, ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಮತ್ತು ಇತರೆ ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರದ ಶೇ 10ರಷ್ಟು ರಿಯಾಯಿತಿಯನ್ನು ಕಂದಾಯ ಇಲಾಖೆಯು ಜನವರಿ ತಿಂಗಳಲ್ಲಿ ಅನುಷ್ಠಾನಕ್ಕೆ ತಂದಿತ್ತು. ಜತೆಗೆ ಸಿಬ್ಬಂದಿಯ ಕೆಲಸದ ಸಮಯವನ್ನು ಬೆಳಿಗ್ಗೆ 8ರಿಂದ ರಾತ್ರಿ 8ರ ವರೆಗೆ ನಿಗದಿಪಡಿಸಿತ್ತು. ಕೋವಿಡ್ ಲಾಕ್‌ಡೌನ್‌ ಕಾರಣ ಆರ್ಥಿಕ ವರ್ಷದ ಮೊದಲಾರ್ಧ ತಿಂಗಳುಗಳಲ್ಲಿ ಕಡಿತವಾಗಿದ್ದ ಆದಾಯವನ್ನು ಈ ಮೂಲಕ ಸರಿದೂಗಿಸಿಕೊಂಡಿದೆ.

2020–21ರ ಆರ್ಥಿಕ ವರ್ಷದಲ್ಲಿ ಜಿಲ್ಲಾ ವ್ಯಾಪ್ತಿಯ 8 ನೋಂದಣಿ ಕಚೇರಿಗಳು ₹125.61 ಕೋಟಿ ಆದಾಯ ಸಂಗ್ರಹಿಸಿದ್ದವು. ಆದರೆ, 2021–22ರ ಹಣಕಾಸು ವರ್ಷದಲ್ಲಿ ₹135 ಕೋಟಿ ಗುರಿಯನ್ನು ಮೀರಿ ₹156.93 ಕೋಟಿ ಆದಾಯ ಜಮಾಗೊಂಡಿದೆ. ಈ ಮೂಲಕ ಶೇ 15.15ರಷ್ಟು ಬೆಳವಣಿಗೆ ದಾಖಲಿಸಿದೆ.

ಕೋವಿಡ್ ಪೂರ್ವದ 2019–20ರ ಹಣಕಾಸು ವರ್ಷದಲ್ಲಿ ನಿಗದಿತ ಗುರಿಯ ₹125 ಕೋಟಿಯಲ್ಲಿ ಕೇವಲ ₹113 ಕೋಟಿಯಷ್ಟೇ ಸಂಗ್ರಹವಾಗಿತ್ತು. ಮರು ವರ್ಷದ ₹127 ಕೋಟಿ ಗುರಿ ಪೈಕಿ ₹125.61 ಕೋಟಿ ಮಾತ್ರ ಹರಿದು ಬಂದಿತ್ತು. ಎರಡೂ ವರ್ಷಗಳ ಹಿನ್ನಡೆಯ ಬಳಿಕ (2021–22) ಈಗ ಶೇ 15.15ರಷ್ಟು (₹156.93 ಕೋಟಿ) ಪ್ರಗತಿ ದಾಖಲಿಸಿದೆ.

ರಾಜಸ್ವದ ₹156.93 ಕೋಟಿಯು 5,873 ನೋಂದಣಿಗಳಿಂದ ಬಂದಿದೆ. ಈ ಪೈಕಿ ₹125.98 ಕೋಟಿ ಮುದ್ರಾಂಕ ಶುಲ್ಕದಿಂದ ಹರಿದು ಬಂದರೇ ₹27.57 ಕೋಟಿ ನೋಂದಣಿ ಶುಲ್ಕ ಹಾಗೂ ₹3.37 ಕೋಟಿ ಸ್ಕ್ಯಾನಿಂಗ್ ಶುಲ್ಕದಿಂದ ಸಂಗ್ರಹವಾಗಿದೆ. ಯಡ್ರಾಮಿ ಹೊರತುಪಡಿಸಿ ತಾಲ್ಲೂಕು ಕೇಂದ್ರಗಳಲ್ಲಿ ಉಪನೋಂದಣಿ ಕಚೇರಿಗಳ ಪೈಕಿ ಅತ್ಯಧಿಕ ವರಮಾನ ಸೇಡಂನಿಂದ ₹13.52 ಕೋಟಿ ಆಗಿದೆ. ಬಳಿಕ ಚಿತ್ತಾಪುರ ₹12.98 ಕೋಟಿ, ₹9.3 ಕೋಟಿ, ಅಫಜಲಪುರ ₹9 ಕೋಟಿಯಷ್ಟು ಆದಾಯ ತಂದುಕೊಟ್ಟಿವೆ.

ಸ್ಥಿರಾಸ್ತಿಗಳ ನೋಂದಣಿಯ ಮಾರ್ಗಸೂಚಿ ದರದ ರಿಯಾಯಿತಿಯ ಫಲವಾಗಿ ಹೆಚ್ಚಿನ ಜನರು ತಮ್ಮ ಆಸ್ತಿ ನೋಂದಣಿ, ಮಾರಾಟಕ್ಕೆ ಒಲವು ತೋರಿಸಿದ್ದರು. ಜತೆಗೆ ಕೆಲಸದ ಅವಧಿ ಹೆಚ್ಚಿಸಿದ್ದರಿಂದ ಸಂಜೆ ವೇಳೆಗೂ ದಾಖಲಾತಿಗಳನ್ನು ಹಿಡಿದು ಕಚೇರಿ ಬಂದಿದ್ದರು ಎನ್ನುತ್ತಾರೆ ಜಿಲ್ಲಾ ಉಪನೋಂದಣಾಧಿಕಾರಿ ಕಚೇರಿಯ ಪ್ರಥಮದರ್ಜೆ ಸಹಾಯಕ ಕಚೇರಿ ಸತೀಶ ಕುಮಾರ.

ಮಾರ್ಗಸೂಚಿ ದರ ರಿಯಾಯಿತಿ ವಿಸ್ತರಣೆ

ಮುದ್ರಾಂಕ ಶುಲ್ಕ ನಿಗದಿಯ ಮಾರ್ಗಸೂಚಿ ದರ ರಿಯಾಯಿತಿಯನ್ನು ಶೇ 10ರಷ್ಟು ಇರುವುದನ್ನು ಯಥಾವತ್ತಾಗಿ ಇರಿಸುವಂತೆ ನಿವೇಶನ, ಕಟ್ಟಡ, ಅಪಾರ್ಟ್‌ಮೆಂಟ್‌, ಫ್ಲ್ಯಾಟ್‌ ಮಾಲೀಕರು ಹಾಗೂ ರಿಯಲ್‌ ಎಸ್ಟೇಟ್ ಉದ್ಯಮಿಗಳು ಮನವಿ ಮಾಡುತ್ತಿದ್ದಾರೆ. ಕಂದಾಯ ಸಚಿವರು ಕೂಡ ಮುಂದಿನ ಮೂರು ತಿಂಗಳ ವರೆಗೂ ಮುಂದುವರಿಸುವುದಾಗಿ ಹೇಳಿದ್ದರು.

ಏ.25ರಿಂದ ಜುಲೈ 25ರ ವರೆಗೆ ಮಾರ್ಗಸೂಚಿ ದರದ ರಿಯಾಯಿತಿ ವಿಸ್ತರಣೆಯ ಅಧಿಸೂಚನೆಯನ್ನು ಕಂದಾಯ ಇಲಾಖೆ ಹೊರಡಿಸಿದೆ.

ಮಾರ್ಗಸೂಚಿ ದರ ರಿಯಾಯಿತಿ ಬಳಿಕ ಕಳೆದ ಮೂರು ತಿಂಗಳಲ್ಲಿ ನೋಂದಣಿಯ ಪ್ರಮಾಣ ಹೆಚ್ಚಳವಾಗಿದೆ. 2022ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ ಕ್ರಮವಾಗಿ 1,856, 2,103 ಹಾಗೂ 2,421 ದಸ್ತಾವೇಜುಗಳು ದಾಖಲಾದವು. ಇದೇ ಅವಧಿಯ 2021ರ ಜನವರಿ, ಫೆಬ್ರುವರಿ ಹಾಗೂ ಮಾರ್ಚ್ ತಿಂಗಳಲ್ಲಿ 1,674, 2,050 ಹಾಗೂ 2,227 ದಸ್ತಾವೇಜುಗಳು ಆಗಿದ್ದವು ಎಂಬುದು ಕಲಬುರಗಿ ಉಪನೋಂದಣಾಧಿಕಾರಿ ಕಚೇರಿಯ ಅಂಕಿಅಂಶಗಳು ಹೇಳುತ್ತವೆ.

ಮುದ್ರಾಂಕ ಶುಲ್ಕ ನಿಗದಿಯ ಮಾರ್ಗಸೂಚಿ ದರದ ಇಳಿಕೆಯ ಲಾಭವನ್ನು ಕಳೆದ ಮೂರು ತಿಂಗಳುಗಳಿಂದ ಜನರು ಪಡೆದಿದ್ದಾರೆ. ದರ ಇಳಿಕೆ ಮುಂದುವರೆಸುವಂತೆ ಸಹ ಮನವಿ ಮಾಡಿದ್ದರು.

-ಮಹಮ್ಮದ್ ಅಬ್ದುಲ್ ಆಸಿಫ್, ಉಪ ಆಯುಕ್ತ, ಜಿಲ್ಲಾ ನೋಂದಣಿ ಹಾಗೂ ಮುದ್ರಾಂಕ ಕಚೇರಿ

2022–23ರ ಆರ್ಥಿಕ ವರ್ಷದ ವಾರ್ಷಿಕ ಗುರಿ ಇನ್ನು ನಿಗದಿಯಾಗಿಲ್ಲ. ಶೀಘ್ರ ಸಭೆ ನಡೆದು ತೀರ್ಮಾನ ಆಗಲಿದೆ. ಬೆಳವಣಿಗೆ ಆಧಾರದ ಮೇಲೆ ಶೇ 10ರಷ್ಟು ಹೆಚ್ಚುವರಿ ಗುರಿ ನಿಗದಿಪಡಿಸಬಹುದು.

-ಬಿ.ಶ್ರೀಕಾಂತ, ಹೆಚ್ಚುವರಿ ನೋಂದಣಾಧಿಕಾರಿ, ಕಲಬುರಗಿ ಉಪನೋಂದಣಾಧಿಕಾರಿ ಕಚೇರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು