ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮೀಣ ಪ್ರದೇಶದ ಆರ್ಥಿಕತೆ ಬಲಪಡಿಸಿ: ಬಾಲಸುಬ್ರಮಣಿಯನ್

ಕಲಬುರ್ಗಿ ವಿಜನ್–2050 ಸಭೆ
Last Updated 15 ಜೂನ್ 2021, 11:10 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮುಂದಿನ 30 ವರ್ಷಗಳಲ್ಲಿ ಕಲಬುರ್ಗಿ ಜಿಲ್ಲೆ ಅಭಿವೃದ್ಧಿಯಾಗಬೇಕು ಎಂದರೆ ಗ್ರಾಮೀಣ ಪ್ರದೇಶದ ಆರ್ಥಿಕತೆಯನ್ನು ಬಲಪಡಿಸಬೇಕು. ವಾಣಿಜ್ಯ ಬೆಳೆಗಳನ್ನು ಹೆಚ್ಚಾಗಿ ಬೆಳೆಯಲು ಉತ್ತೇಜನ ನೀಡಬೇಕು. ಜಿಲ್ಲೆಯಲ್ಲಿ ಬಂಡವಾಳ ಹೂಡಿಕೆಗೆ ಉದ್ಯಮಿಗಳನ್ನು ಆಕರ್ಷಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು’ ಎಂದು ಸರ್ಕಾರದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿ. ಬಾಲಸುಬ್ರಮಣಿಯನ್ ಹೇಳಿದರು.

ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅವರ ಮನವಿ ಮೇರೆಗೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ಆನ್‌ಲೈನ್‌ ಮೂಲಕ ನಡೆದ ‘ಕಲಬುರ್ಗಿ ವಿಜನ್‌–2050’ ಸಭೆಯಲ್ಲಿ ಮಾತನಾಡಿದರು.

ರೇಷ್ಮೆ ಕೃಷಿಗೆ ಕೇಂದ್ರೀಯ ರೇಷ್ಮೆ ಮಂಡಳಿಯಿಂದ ಸಬ್ಸಿಡಿ ದೊರೆಯುವುದರಿಂದ ಹಾಗೂ ಜಿಲ್ಲೆಯ ಮಣ್ಣಿಗೆ ರೇಷ್ಮೆ ಬೆಳೆ ಸೂಕ್ತವಾಗಿರುವುದರಿಂದ ಆ ಬಗ್ಗೆ ಗಮನ ಹರಿಸಬೇಕು. ಇದಕ್ಕಾಗಿ ರೇಷ್ಮೆ ಮಂಡಳಿಯ ಅಧಿಕಾರಿಗಳನ್ನು ಜಿಲ್ಲೆಗೆ ಕಳುಹಿಸಿ ರೇಷ್ಮೆ ಹುಳು ಸಾಕಣೆ, ಹಿಪ್ಪೆ ನೇರಳೆ ಬೆಳೆಗೆ ಪೂರಕವಾದ ವಾತಾವರಣ ಇರುವ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಬೇಕು.

ಕೃಷಿ, ಶಿಕ್ಷಣ ಹಾಗೂ ಆರೋಗ್ಯ ಮೂಲಸೌಕರ್ಯಗಳ ಸುಧಾರಣೆಗೆ ಹೆಚ್ಚಿನ ಗಮನ ಹರಿಸಬೇಕು. ಇದರಿಂದಲೇ ಜಿಲ್ಲೆಯ ಅಭಿವೃದ್ಧಿ ಸಾಧ್ಯವಾಗುತ್ತದೆ. ಜಿಲ್ಲೆ ಇಬ್ಭಾಗವಾದ ಬಳಿಕ ಕಲಬುರ್ಗಿಯಲ್ಲಿ ಶೇ 11ರಷ್ಟು ನೀರಾವರಿ ಮಾತ್ರ ಉಳಿದುಕೊಂಡಿದೆ. ಇಷ್ಟೊಂದು ಕಡಿಮೆ ನೀರಾವರಿ ಅಭಿವೃದ್ಧಿಗೆ ಪೂರಕವಲ್ಲ. ಅಂತರ್ಹಲ ಹೆಚ್ಚಿಸುವುದು, ಮಕ್ಕಳಲ್ಲಿ ಅಪೌಷ್ಠಿಕತೆಯನ್ನು ಹೋಗಲಾಡಿಸಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.

30 ವರ್ಷಗಳ ಅಭಿವೃದ್ಧಿ ದಿಕ್ಸೂಚಿಯೊಂದಿಗೆ ನಡೆಯಲಿರುವ ಯೋಜನೆಗಳ ಮೇಲ್ವಿಚಾರಣೆ ನಡೆಸಲು ಒಂದು ಪೂರ್ಣಪ್ರಮಾಣದ ಕಚೇರಿಯನ್ನು ಆರಂಭಿಸಬೇಕು. ವಿದ್ಯಾರ್ಥಿಗಳಲ್ಲಿ ಕೌಶಲ ಆಧಾರಿತ ಶಿಕ್ಷಣದ ಬಗ್ಗೆ ಆಸಕ್ತಿ ಬೆಳೆಸಬೇಕು ಎಂದರು.

‘ಜಿಲ್ಲೆಯು ಶ್ರೇಯಾಂಕದಲ್ಲಿ 45 ವರ್ಷಗಳ ಹಿಂದೆ ಯಾವ ಸ್ಥಾನದಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿರುವುದು ಅತ್ಯಂತ ‌ನೋವಿನ‌ ಸಂಗತಿ. ಇದಕ್ಕೆ ‌ಆಡಳಿತ ನಡೆಸಿದ ಸರ್ಕಾರಗಳು ಜಿಲ್ಲೆಯ ಅಭಿವೃದ್ಧಿಗೆ ‌ಅಗತ್ಯವಾದ ಯೋಜನೆಗಳನ್ನು ಜಾರಿಮಾಡದೆ ಕೇವಲ ಗುತ್ತಿಗೆದಾರರ ಹಿತಕಾಪಾಡುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೇ ಈ ಪ್ರದೇಶ ಹಿಂದುಳಿಯಲು ಪ್ರಮುಖ ಕಾರಣ’ ಎಂದು ಅಸಮಾಧಾನ ಹೊರಹಾಕಿದರು.

ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ ಮಾತನಾಡಿ, 'ವಿಜನ್–2050’ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆಗಳನ್ನು ಈಗಾಗಲೇ ನಡೆಸಲಾಗಿದೆ. ಈಗಾಗಲೇ ವಲಯವಾರು ಸಮಿತಿ ಮತ್ತು ಉಪಸಮಿತಿಗಳನ್ನು ರಚಿಸಲಾಗಿದೆ. ಅಲ್ಪಾವಧಿ, ಮಧ್ಯಮ ಅವಧಿ ಮತ್ತು ದೀರ್ಘಕಾಲೀನ ಗುರಿಗಳತ್ತ ಕೆಲಸ ಮಾಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ’ ಎಂದು ತಿಳಿಸಿದರು.

ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಗಾಗಿ ಇದೇ ರೀತಿಯ ವಿಜನ್–2050 ಕಾರ್ಯಕ್ರಮವನ್ನು ಇಡೀ ಕಲ್ಯಾಣ ಕರ್ನಾಟಕ ಪ್ರದೇಶಕ್ಕೂ ವಿಸ್ತರಿಸಲಾಗುವುದು ಎಂದು ಸಚಿವ ಮುರುಗೇಶ್ ನಿರಾಣಿ ಭರವಸೆ ಕೊಟ್ಟರು.

*
ಇತರ ಇಲಾಖೆಗಳಿಗೆ 30 ವರ್ಷಗಳ ಸಮಯವನ್ನು ನೀಡಲಾಗಿದ್ದರೆ, ಇಲಾಖೆಗೆ ದೀರ್ಘಾವಧಿಯ ಅಭಿವೃದ್ಧಿ ಯೋಜನೆ ಅಗತ್ಯವಿಲ್ಲದ ಕಾರಣ ಅಭಿವೃದ್ಧಿಗೆ ಕೇವಲ 10 ವರ್ಷಗಳ ಸಮಯವನ್ನು ನೀಡಲಾಗುವುದು‌
-ಮುರುಗೇಶ ನಿರಾಣಿ, ಜಿಲ್ಲಾ ಉಸ್ತುವಾರಿ ಸಚಿವ

*
‘ಕೇಂದ್ರ ಸರ್ಕಾರದ ನೆರವಿನೊಂದಿಗೆ ಎಲ್ಲಾ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಕೌಶಲ ಅಭಿವೃದ್ಧಿಗೆ ವಿದ್ಯಾರ್ಥಿಗಳು ಒಡ್ಡಿಕೊಳ್ಳಬೇಕು, ಇದರಿಂದ ನಾವು ಕಾರ್ಯಪಡೆಗಳನ್ನು ಸಿದ್ಧಪಡಿಸಬಹುದು
-ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಯೋಜನೆ ಮತ್ತು ಸಾಂಖ್ಯಿಕ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT