ಕಲಬುರಗಿ: ‘371(ಜೆ) ಅಡಿ ನೇಮಕಾತಿಗೆ ಸಂಬಂಧಿಸಿದಂತೆ ಕಾಲಕಾಲಕ್ಕೆ ಬಂದಿರುವ ಸುತ್ತೋಲೆಗಳು ಗೊಂದಲದ ಗೂಡಾಗಿವೆ. ಸೆ.27ರಂದು ನಡೆಯುವ 371(ಜೆ) ಕಲಂ ಸಂಪುಟ ಉಪ ಸಮಿತಿ ಸಭೆಯಲ್ಲಿ ಆ ಸುತ್ತೋಲೆಗಳಲ್ಲಿರುವ ನ್ಯೂನತೆಗಳನ್ನು ಸರಿಪಡಿಸಬೇಕು. ಕಲ್ಯಾಣ ಭಾಗದ ಅಭ್ಯರ್ಥಿಗಳಿಗೆ ಶಾಶ್ವತವಾಗಿ ನ್ಯಾಯ ಒದಗಿಸುವ ನಿಟ್ಟಿನಲ್ಲಿ ದಿಟ್ಟ ಕ್ರಮಕೈಗೊಂಡು, ಏಕರೂಪದ ಹೊಸ ಸುತ್ತೋಲೆ ಹೊರಡಿಸಬೇಕು’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ ಆಗ್ರಹಿಸಿದೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಸ್ಥಾಪಕ ಅಧ್ಯಕ್ಷ ಲಕ್ಷ್ಮಣ ದಸ್ತಿ, ‘545 ಪಿಎಸ್‌ಐ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ 2020ರ ಜೂನ್ 6ರ ಸುತ್ತೋಲೆಯಂತೆ ಕಲ್ಯಾಣ ಭಾಗದ ಅಭ್ಯರ್ಥಿಗಳ ಮೀಸಲಾತಿ ಪರಿಗಣಿಸಲು ಸರ್ಕಾರದ ಹಿರಿಯ ಅಧಿಕಾರಿಗಳು ಸೂಚಿಸಿದ್ದರು. ಇದು ಕಲ್ಯಾಣ ಭಾಗದ ಅಭ್ಯರ್ಥಿಗಳ ಪಾಲು ಕಸಿಯುವ ಹುನ್ನಾರವಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
‘2020ರ ಜೂನ್ 6ರ ಸುತ್ತೋಲೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ 2023ರ ಫೆ.1ರಂದು ಹೊಸದಾಗಿ ಸುತ್ತೋಲೆ ಹೊರಡಿಸಲಾಗಿತ್ತು. ಅದನ್ನೇ ಸಚಿವ ಪ್ರಿಯಾಂಕ್ ಖರ್ಗೆ ನೇತೃತ್ವದ ಸಂಪುಟ ಉಪಸಮಿತಿಯು 2023ರ ಫೆ.1ರ ಸುತ್ತೋಲೆ ಜಾರಿಗೆ ಆದೇಶಿಸಿದ್ದರು. ಆದರೆ, 2023ರ ಫೆ.1ರ ಸುತ್ತೋಲೆಯನ್ನು ಕೆಎಟಿ ರದ್ದುಗೊಳಿಸಿತ್ತು. ಅದನ್ನೆ ಪರಿಗಣಿಸಿ ಹಿರಿಯ ಅಧಿಕಾರಿಗಳು ಇದೀಗ 2020ರ ಸುತ್ತೋಲೆಯಂತೆ ನೇಮಕಾತಿಗೆ ಮುಂದಾಗಿದ್ದರು. ಈ ನಡುವೆ, ಕೆಎಟಿ ಆದೇಶಕ್ಕೆ 2024ರ ಆಗಸ್ಟ್ 8ರಂದು ಹೈಕೋರ್ಟ್ ತಡೆಯಾಜ್ಞೆ ನೀಡಿದ್ದನ್ನು ಅಧಿಕಾರಿಗಳು ಮರೆಮಾಚಿ, ಕಲ್ಯಾಣಕ್ಕೆ ಸಿಗುವ ಹುದ್ದೆಗಳನ್ನು ಕಿತ್ತುಕೊಳ್ಳುವ ಷಡ್ಯಂತ್ರ ನಡೆಸಿದ್ದರು’ ಎಂದು ದಸ್ತಿ ಆರೋಪಿಸಿದರು.
‘ಕೆಎಟಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದ್ದರಿಂದ 2023ರ ಸುತ್ತೋಲೆಯೇ ಇದೀಗ ಊರ್ಜಿತವಾಗುತ್ತದೆ. ಹೀಗಾಗಿ 545 ಪಿಎಸ್‌ಐ ಹುದ್ದೆಗಳ ನೇಮಕಾತಿಗಳನ್ನು 2023ರ ಫೆ.1ರ ಸುತ್ತೋಲೆಯ ಅನ್ವಯವೇ ನಡೆಸಬೇಕು’ ಎಂದು ಒತ್ತಾಯಿಸಿದರು.
ಸಚಿವರ ಪ್ರಯತ್ನ– ತಪ್ಪಿದ ಪ್ರಮಾದ: ‘ಅಧಿಕಾರಿಗಳ ಎಡವಟ್ಟು ಕುರಿತು ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ ಪಾಟೀಲ ಗಮನಕ್ಕೆ ತಂದಾಗ ಅವರು ಕೂಡಲೇ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಆಗುವ ಪ್ರಮಾದ ತಪ್ಪಿಸಿದ್ದಾರೆ. ಅದರಿಂದ ಈ ಭಾಗಕ್ಕೆ ಪಿಎಸ್ಐ ನೇಮಕಾತಿ ವೇಳೆ 25ರಿಂದ 30 ಹುದ್ದೆಗಳು ಹೆಚ್ಚುವರಿಯಾಗಿ ಸಿಗಲಿವೆ’ ಎಂದು ದಸ್ತಿ ಹೇಳಿದರು.
ಮುಖಂಡ, ಬಸವರಾಜ ಕುಮನೂರು ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರೊ.ಬಸವರಾಜ ಗುಲಶೆಟ್ಟಿ, ಪತ್ರಕರ್ತ ಮಾಜಿದ ದಾಗಿ ಉಪಸ್ಥಿತರಿದ್ದರು.
545 ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಭಾಗದ ಅಭ್ಯರ್ಥಿಗಳಿಗೆ 371(ಜೆ) ಪ್ರಕಾರ ಸಿಗಬೇಕಾದ ಹಕ್ಕು ಒದಗಿಸಲು ಸರ್ಕಾರ ಕ್ರಮವಹಿಸಬೇಕುಬಸವರಾಜ ದೇಶಮುಖ ಗೌರವಾಧ್ಯಕ್ಷ ಕಲ್ಯಾಣ ಕರ್ನಾಟಕ ಹೋರಾಟ ಸಮಿತಿ
‘ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳು ಒಂದು ಅರ್ಜಿ ಹಾಕಿದರೆ ಅವರನ್ನು ಮೊದಲಿಗೆ ಮೆರಿಟ್‌ನಲ್ಲಿ ಪರಿಗಣಿಸಿ ಬಳಿಕ ಮೀಸಲಾತಿ ಕೋಟಾದಡಿ ಪರಿಗಣಿಸುತ್ತಾರೆ. ಅದರಂತೆಯೇ 371(ಜೆ) ಕಲಂ ಮೀಸಲಾತಿಯನ್ನೂ ಜಾರಿಗೊಳಿಸಬೇಕು’ ಎಂದು ಲಕ್ಷ್ಮಣ ದಸ್ತಿ ಒತ್ತಾಯಿಸಿದರು. ‘2023ರ ಫೆ.1ರ ಸುತ್ತೋಲೆ ಪ್ರಕಾರವೂ ಕಲ್ಯಾಣ ಭಾಗದ ಅಭ್ಯರ್ಥಿಗಳು ಎರಡು ಅರ್ಜಿ ಹಾಕಬೇಕಿದೆ. ಒಂದು ಮೀಸಲಾತಿಗೆ ಎರಡು ಅರ್ಜಿ ಏಕೆ ಹಾಕಬೇಕು? ಇದನ್ನು ತಪ್ಪಿಸಬೇಕು’ ಎಂದು ಆಗ್ರಹಿಸಿದರು. ಸಚಿವರ ಕೈವಾಡ: ದಸ್ತಿ ಆರೋಪ ‘ಅಧಿಕಾರಿಗಳು 371(ಜೆ) ಮೀಸಲಾತಿ ಜಾರಿಯಲ್ಲಿ ಅಧಿಕಾರಿಗಳು ಈ ಭಾಗದವರನ್ನು ವಂಚಿಸುತ್ತಿದ್ದಾರೆ. ಇದರ ಹಿಂದೆ ಬಹಳಷ್ಟು ಸಚಿವರ ಕೈವಾಡವೂ ಇದೆ. ಎಲ್ಲರೂ ಸೇರಿದ್ದರಿಂದಲೇ ಉನ್ನತ ಮಟ್ಟದ ಅಧಿಕಾರಿಗಳು ದಿಕ್ಕುತಪ್ಪಿಸಲು ಪ್ರಯತ್ನಿಸಿದ್ದಾರೆ’ ಎಂದು ಲಕ್ಷ್ಮಣ ದಸ್ತಿ ಆರೋಪಿಸಿದರು. ‘ನೇಮಕಾತಿ ಮುಂಬಡ್ತಿಯಲ್ಲಿ 371(ಜೆ) ಅಡಿಯ ಸಿಗಬೇಕಾದ ಪಾಲು ನೀಡುವಲ್ಲಿ ದ್ವಂದ್ವ ನಿಲುವು ಅನುಸರಿಸಿದರೆ ಕಲ್ಯಾಣ ಭಾಗದಲ್ಲಿ ರಾಜ್ಯದ ಸರ್ಕಾರದ ವಿರುದ್ಧವೇ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.