ಭಾನುವಾರ, 14 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಮಲಾಪುರ: ಹೊಳೆಯಂತೆ ಹಣ ಹರಿದರೂ ಹನಿ ನೀರಿಲ್ಲ!

₹ 4 ಕೋಟಿ ವೆಚ್ಚದ ಬ್ರಿಡ್ಜ್‌–ಕಂ–ಬ್ಯಾರೇಜ್: ಕಾಮಗಾರಿ ಕಳಪೆ ಆರೋಪ
ತೀರ್ಥಕುಮಾರ ಬೆಳಕೋಟಾ
Published 2 ಏಪ್ರಿಲ್ 2024, 4:52 IST
Last Updated 2 ಏಪ್ರಿಲ್ 2024, 4:52 IST
ಅಕ್ಷರ ಗಾತ್ರ

ಕಮಲಾಪುರ: ‘ಸುಗಮ ಸಂಪರ್ಕ ವ್ಯವಸ್ಥೆ, ಜಮೀನು, ಜಾನುವಾರು, ಜನರಿಗೆ ನೀರು ಒದಗಿಸಲು ನಿರ್ಮಿಸಿರುವ ಬ್ರಿಡ್ಜ್‌–ಕಂ–ಬ್ಯಾರೇಜ್‌ಗಳಲ್ಲಿ ಹನಿ ನೀರು ಸಂಗ್ರಹವಾಗುತ್ತಿಲ್ಲ’ ಎಂದು ರೈತರು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕಮಲಾಪುರ ತಾಲ್ಲೂಕಿನ ನವನಿಹಾಳ ಹಳ್ಳಕ್ಕೆ ಸುಮಾರು ₹ 4 ಕೋಟಿ ವೆಚ್ಚದಲ್ಲಿ ಬ್ರಿಡ್ಜ್‌–ಕಂ–ಬ್ಯಾರೇಜ್‌ ನಿರ್ಮಿಸಲಾಗಿದೆ. 31.27 ಚ.ಕಿ.ಮೀ ಜಲಾನಯನ ಪ್ರದೇಶ ಹೊಂದಿದ್ದು, 2 ಮೀಟರ್‌ ಎತ್ತರ, 34.20 ಮೀಟರ್ ಉದ್ದ, 14 ಕಿಂಡಿಗಳಿವೆ. ಇದರಲ್ಲಿ 0.56 ಎಂಎಂ ಕ್ಯೂಬ್‌ ನೀರಿನ ಸಂಗ್ರಹಣೆಯಾಗಬೇಕು.

ಕಮಲಾಪುರದಿಂದ ನವನಿಹಾಳ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವುದು, ಸುಮಾರು 105 ಹೆಕ್ಟೇರ್‌ ಜಮೀನಿಗೆ ನೀರಾವರಿ, ಅಂತರ್ಜಲ ಹೆಚ್ಚಳ, ಜಾನುವಾರುಗಳಿಗೆ ಕುಡಿಯಲು ನೀರು, ಗ್ರಾಮಸ್ಥರಿಗೆ ಬಟ್ಟೆ ತೊಳೆಯಲು ಸೇರಿದಂತೆ ವಿವಿಧೋದ್ದೇಶಗಳಿಗೆ ಈ ಬ್ರಿಡ್ಜ್‌–ಕಂ–ಬ್ಯಾರೇಜ್‌ ನಿರ್ಮಿಸಲಾಗಿತ್ತು. ಆದರೆ ಬ್ರಿಡ್ಜ್‌ ಮಾತ್ರ ಉಪಯುಕ್ತವಾಗಿದೆ, ಬ್ಯಾರೇಜ್‌ ವಿಫಲವಾಗಿದೆ.

ಕೆಲ ದಿನಗಳ ಹಿಂದೆ ನವನಿಹಾಳ ಕೆರೆಯಿಂದ ನೀರು ಹರಿಬಿಡಲಾಗಿತ್ತು. ಬ್ಯಾರೇಜ್‌ನಲ್ಲಿ ಒಂದು ದಿನ ಮಾತ್ರ ನೀರು ಸಂಗ್ರಹವಿತ್ತು. ನೀರು ನಿಲ್ಲಿಸಿದ ಮಾರನೆ ದಿನವೆ ಸಂಪೂರ್ಣ ಸೋರಿಕೆಯಾಗಿದೆ. ಸದ್ಯ ಹನಿ ನೀರಿಲ್ಲ. ಬರಗಾಲದ ಸುಡು ಬಿಸಿಲಿಗೆ ಹಳ್ಳ, ಕೊಳ್ಳ ಸಂಪೂರ್ಣ ಬತ್ತಿವೆ. ಅಡವಿಯಲ್ಲಿ ಜಾನುವಾರುಗಳಿಗೆ ಕುಡಿಯಲು ನೀರಿಲ್ಲ. ಬಾವಿ ಕೊಳವೆಬಾವಿಗಳು ಬಹುತೇಕ ಬುಡಮೇಲಾಗಿವೆ. ಬ್ಯಾರೇಜ್‌ನಲ್ಲಿ ನೀರು ಸಂಗ್ರಹಗೊಂಡರೆ ಪಕ್ಕದ ಜಮೀನುಗಳಲ್ಲಿನ ಬಾವಿ, ಕೊಳವೆಬಾವಿಗಳಲ್ಲಿ ನೀರು ಮರುಪೂರಣವಾಗುತ್ತಿತ್ತು. ಇದ್ಯಾವುದು ಆಗುತ್ತಿಲ್ಲ. ‘ಕೋಟಿಗಟ್ಟಲೆ ಖರ್ಚು ಮಾಡಿದ ಯೋಜನೆಗಳು ಈ ರೀತಿ ನಿರುಪಯುಕ್ತವಾಗುತ್ತಿದ್ದು ಇದಕ್ಕೆ ಯಾರು ಹೊಣೆ’ ಎಂದು ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

‘ಕಾಮಗಾರಿ ಸೇರಿದಂತೆ ನೀರು ನಿಲ್ಲಿಸಲು ಅಳವಡಿಸಿದ ಕಿಂಡಿಗಳು ಅವೈಜ್ಞಾನಿಕವಾಗಿವೆ. ಸಂಬಂಧಪಟ್ಟ ಎಂಜಿನಿಯರ್‌ಗಳು ಗುತ್ತಿಗೆದಾರರಿಗೆ ಸೂಕ್ತ ನಿರ್ದೇಶನ ನೀಡಬೇಕಿತ್ತು. ಕಾಮಗಾರಿ ನಡೆಯುತ್ತಿದ್ದಾಗ ಸಂಬಂಧಪಟ್ಟ ಎಂಜಿನಿಯರ್‌ಗಳಾಗಲಿ, ಅಧಿಕಾರಿಗಳಾಗಲಿ ಸ್ಥಳಕ್ಕೆ ಭೇಟಿ ನೀಡಲಿಲ್ಲ. ಗುತ್ತಿಗೆದಾರ ಮನಸ್ಸಿಗೆ ಬಂದಂತೆ ಕಾಮಗಾರಿ ಕೈಗೊಂಡು ಪಲಾಯನ ಮಾಡಿದ್ದಾರೆ’ ಎಂದು ದಿವಾಕರ ಜಗದಾಳೆ ಮತ್ತಿತರರು ಕಿಡಿಕಾರಿದರು. 

ಕಾಮಗಾರಿ ದುರಸ್ತಿಗೊಳಿಸಿವವರೆಗೆ ಗುತ್ತಿಗೆದಾರರ ಬಿಲ್‌ ತಡೆಹಿಡಿಯಬೇಕು. ಪರವಾನಗಿ ಕಪ್ಪು ಪಟ್ಟಿಗೆ ಸೇರಿಸಬೇಕು. ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು

-ರಾಮಲಿಂಗ ಗುತ್ತೇದಾರ ರೈತ

ಈಗಾಗಲೇ ಬ್ಯಾರೇಜ್‌ ಅನ್ನು ಕೆಲಮಟ್ಟಿಗೆ ದುರಸ್ತಿಗೊಳಿಸಲಾಗಿದೆ. ಶೀಘ್ರವೇ ಭೇಟಿ ನೀಡಿ ಪರಿಶೀಲಿಸುತ್ತೇನೆ. ಕೂಡಲೆ ಸರಿಪಡಿಸಲಾಗುವುದು

-ರಾಜಶೇಖರ ಸಜ್ಜನಶೆಟ್ಟಿ ಎಇಇ ಸಣ್ಣ ನೀರಾವರಿ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT