ಶನಿವಾರ, ಆಗಸ್ಟ್ 20, 2022
21 °C
ಹದಗೆಟ್ಟ ರಸ್ತೆಯ ಮೇಲೆ ಗಣಿ ನೀರು ಸಂಗ್ರಹ

ಕೆಸರು ಗದ್ದೆಯಾದ ಕಮರವಾಡಿ ರಸ್ತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಾಡಿ: ಪಟ್ಟಣದ ಬಲರಾಮ ಚೌಕ್‌ನಿಂದ ಕಮರವಾಡಿ, ಆಲೂರು, ಸೂಲಹಳ್ಳಿ, ಕರದಳ್ಳಿ ಹಾಗೂ ಬೊಮ್ಮನಹಳ್ಳಿ ಗ್ರಾಮಗಳಿಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಡಾಂಬರ್ ರಸ್ತೆಯುದ್ದಕ್ಕೂ ಬೃಹತ್ ಗುಂಡಿಗಳು ಬಿದ್ದಿದ್ದು, ವಾಹನ ಸವಾರರಿಗೆ ನಿತ್ಯ ನರಕದ ಅನುಭವ ನೀಡುತ್ತಿವೆ.

ಪ್ರಿಯಾಂಕ್ ಖರ್ಗೆ ಅವರು ಸಚಿವರಾಗಿದ್ದಾಗ ಬಲರಾಮ ಚೌಕ್‌ನಿಂದ ಕಮರವಾಡಿ ರಸ್ತೆ ದುರಸ್ತಿಗೆ ಅನುದಾನ ಬಿಡುಗಡೆಯಾಗಿತ್ತು. ರಸ್ತೆ ನಿರ್ಮಾಣ ಸಮಯದಲ್ಲಿ ಗುತ್ತಿಗೆದಾರರು ಹಾಗೂ ಅಧಿಕಾರಿಗಳ ಬೇಜವಾಬ್ದಾರಿ ತೋರಿದ್ದರಿಂದ ಗುಣಮಟ್ಟದ ಕಾಮಗಾರಿ ನಡೆದಿಲ್ಲ. ಕಳಪೆ ಕಾಮಗಾರಿಯಿಂದ ರಸ್ತೆ ಮತ್ತೆ ಹದಗೆಟ್ಟಿದೆ ಎಂದು ದೂರುತ್ತಾರೆ ಸ್ಥಳೀಯರು. 

ಡಾಂಬರೀಕರಣಗೊಂಡ ರಸ್ತೆಗಳು ಈಗ ತಗ್ಗುಗುಂಡಿಗಳಿಂದ ತುಂಬಿ ಹೋಗಿದ್ದು, ಕಳಪೆ ಗುಣಮಟ್ಟಕ್ಕೆ ಸಾಕ್ಷಿಯಾಗಿ ನಿಂತಿವೆ. ಗುಣಮಟ್ಟ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಾದ ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್‌, ಕೆಕೆಆರ್‌ಡಿಬಿ ಹಾಗೂ ಭೂಸೇನಾ ನಿಗಮದ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎನ್ನುತ್ತಾರೆ ಅವರು.

ಈಚೆಗೆ ಸುರಿದ ಮಳೆಯಿಂದ ರಸ್ತೆ ಮತ್ತಷ್ಟು ಹಾಳಾಗಿದ್ದು, ಇದನ್ನೇ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಳಪೆ ಕಾಮಗಾರಿ ಆರೋಪ ಮರೆಮಾಚಲು ಕುಂಟು ನೆ‍ಪ ಹೇಳುತ್ತಿದ್ದಾರೆ.

ಬಸವನಖಣಿ, ಕಮರವಾಡಿ, ಸೂಲಹಳ್ಳಿ ಸಮೀಪ ರಸ್ತೆಗೆ ಹೊಂದಿಕೊಂಡು ನೂರಾರು ಕಲ್ಲು ಗಣಿಗಳಿವೆ. ಸತತ ಮಳೆಗೆ ಕಲ್ಲುಗಣಿಗಳು ನೀರಿನಿಂದ ಜಲಾವೃತಗೊಂಡಿದ್ದು, ಸಂಗ್ರಹಗೊಂಡ ನೀರನ್ನು ಪೈಪುಗಳ ಮೂಲಕ ರಸ್ತೆಗೆ ಹರಿಬಿಡಲಾಗುತ್ತಿದೆ. ಈ ನೀರು ರಸ್ತೆಯ ಮೇಲಿನ ತಗ್ಗುಗಳಲ್ಲಿ ಸಂಗ್ರಹಗೊಳ್ಳುತ್ತಿವೆ. ಇದು ಸಹ ರಸ್ತೆ ಹಾಳಾಗಲು ಕಾರಣವಾಗಿದೆ.

ರಸ್ತೆಯ ತಗ್ಗುಗಳಲ್ಲಿ ನಿಂತ ನೀರು ಹಲವು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಾರೆ. ರಸ್ತೆ ನಿರ್ಮಾಣ ಹಾಗೂ ದುರಸ್ತಿ ಹೆಸರಿನಲ್ಲಿ ಕಳಪೆ ಕಾಮಗಾರಿ ನಡೆಸಿದ ತಪ್ಪಿತಸ್ತರ ವಿರುದ್ದ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಮನವಿಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.