ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಆತ್ಮಕಥೆಗಳಲ್ಲಿ ಆತ್ಮರತಿ ಇರಬಾರದು

‘ವಲಸೆ ಹಕ್ಕಿಯ ಹಾಡು’ ಆತ್ಮಕಥೆ ಬಿಡುಗಡೆ: ಮನು ಬಳಿಗಾರ ಹೇಳಿಕೆ
Published 20 ಮೇ 2024, 5:38 IST
Last Updated 20 ಮೇ 2024, 5:38 IST
ಅಕ್ಷರ ಗಾತ್ರ

ಕಲಬುರಗಿ: ‘ಆತ್ಮಕಥೆ ಬರೆಯುವವರಿಗೆ ಆತ್ಮರತಿ ಇರಬಾರದು. ಅದರ ಬದಲಿಗೆ ಸತ್ಯದ ಪ್ರತಿಪಾದನೆ ಮತ್ತು ವಸ್ತುನಿಷ್ಠತೆ ಇರಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ಮನು ಬಳಿಗಾರ ಹೇಳಿದರು.

ಇಲ್ಲಿನ ಕನ್ನಡ ಭವನದಲ್ಲಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಮತ್ತು ವಿಶ್ವ ಪ್ರಕಾಶನ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪ್ರೊ. ಕೃಷ್ಣ ನಾಯಕ ಅವರ ಆತ್ಮಕಥನ ‘ವಲಸೆ ಹಕ್ಕಿಯ ಹಾಡು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ಅರ್ಧ ಶತಮಾನದ ಇತಿಹಾಸವನ್ನು ಹಿಡಿದಿಡುವ ಆತ್ಮಕಥೆಗಳು ಆತ್ಮರತಿಯಾಗದೆ ಸತ್ಯದ ಪ್ರತಿಪಾದನೆಯಾಗಿದ್ದರೆ ಮಾತ್ರ ಜನ ಮನ್ನಣೆ ಗಳಿಸುತ್ತವೆ. ಆತ್ಮಕಥೆಯಲ್ಲಿ ವಸ್ತುನಿಷ್ಠೆಗೆ ಮಹತ್ವ ಕೊಟ್ಟಿದ್ದರಿಂದಲೇ ಮರಾಠಿ ಭಾಷೆಯ ಹೆಚ್ಚಿನ ಆತ್ಮಕಥೆಗಳಿಗೆ ಪ್ರಶಸ್ತಿಗಳು ಬಂದಿವೆ’ ಎಂದರು.

‘ಕೃಷ್ಣ ನಾಯಕ ಅವರ ಆತ್ಮಕಥೆಯು ಶುಷ್ಕವಾದ ಗದ್ಯವಾಗದೆ, ಸರಳ ಮತ್ತು ಸುಲಲಿತ ಕಾವ್ಯಾತ್ಮಕವಾಗಿದೆ. ಗದ್ಯಕ್ಕೆ ಪದ್ಯದ ಸ್ಪರ್ಶವಿದ್ದು, ಸುಲಭವಾಗಿ ಓದಿಸಿಕೊಂಡು ಹೋಗುತ್ತದೆ’ ಎಂದು ಹೇಳಿದರು.

‘ಕಲ್ಯಾಣ ಕರ್ನಾಟಕದ ನೆಲದಲ್ಲಿ ಬಡತನ ಇದ್ದರೂ ದಾಸೋಹದ ಪರಂಪರೆ ಇನ್ನೂ ಜೀವಂತವಾಗಿದೆ. ಶರಣರ ವಚನಗಳು, ದಾಸರ ಪದಗಳು, ಜೈನ ಕಾವ್ಯಗಳಿಂದಾಗಿ ಇಲ್ಲಿನ ಸಾಹಿತ್ಯದ ಬೇರೆ ಗಟ್ಟಿಯಾಗಿವೆ. ನಾವೆಲ್ಲರೂ ಸೇರಿ ಸಾಹಿತ್ಯದ ಮರ ಹಾಗೂ ರೆಂಬೆಗಳನ್ನು ಬೆಳೆಸಬೇಕಿದೆ. ಮೂರು ದಿನ ರಾಜ್ಯ ಮಟ್ಟದ ತತ್ವ ಮತ್ತು ವಚನ ಸಾಹಿತ್ಯ ಸಮ್ಮೇಳನ ನಡೆಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ’ ಎಂದರು.

ಕೃತಿ ಪರಿಚಯ ಮಾಡಿದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿಕ್ರಮ್ ವಿಸಾಜಿ, ‘ಕೃಷ್ಣ ನಾಯಕ ಅವರ ಆತ್ಮಕಥೆಯಲ್ಲಿ ವಲಸೆ ಮತ್ತು ಸಾಹಸ ಮನೋಭಾವದ ಬಂಜಾರ ಸಮುದಾಯದವರ ಜೀವನ ಪ್ರಯಾಣವೇ ಅಡಗಿದೆ. ಸ್ವಪ್ರಶಂಸೆ ಮತ್ತು ಪರನಿಂದನೆಗೆ ಇಲ್ಲಿ ಸ್ಥಾನವಿಲ್ಲ. ನಿರುದ್ವೇಗದ ಮಂಡನೆ ಇದ್ದರೂ ಅಲ್ಲಲ್ಲಿ ನೈತಿಕ ಅಸಮಾಧಾನವನ್ನು ಹೊರಹಾಕಿದ್ದಾರೆ’ ಎಂದು ವಿಶ್ಲೇಷಿಸಿದರು.

‘ತಮ್ಮ ಬದುಕಿನ ಕಹಿ ನೆನಪುಗಳನ್ನು ಬರೆಯುವ ಬದಲು ಕೈ ಹಿಡಿದು ಮುನ್ನಡೆಸಿದವರ ಮತ್ತು ಜೀವನಕ್ಕೆ ಮಾರ್ಗ ತೋರಿದವರ ಬಗ್ಗೆ ಸಾಕಷ್ಟು ವಿಚಾರಗಳನ್ನು ಉಲ್ಲೇಖಿಸಿದ್ದಾರೆ. ಒಬ್ಬ ಶಿಕ್ಷಕರಾಗಿದ್ದು ತಮ್ಮ ಕರ್ತವ್ಯದ ಇತಿಹಾಸವನ್ನು ದಾಖಲಿಸಿದ್ದಾರೆ. ಭೇಟಿ ನೀಡಿದ ಸ್ಥಳಗಳ ಬಗೆಗಿನ ಪ್ರವಾಸಿ ಕಥನವನ್ನು ಕಡಿಮೆ ಮಾಡಬಹುದಿತ್ತು. ತಮ್ಮ ಬಾಳ ಸಂಗಾತಿಯ ಬಗ್ಗೆ ಇನ್ನಷ್ಟು ವಿವರಣೆ ಸೇರಿಸಬಹುದಿತ್ತು’ ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಶರಣಬಸವೇಶ್ವರ ಕಲಾ ಪದವಿ ಮಹಾವಿದ್ಯಾಲಯದ ಶಿವರಾಜ ಶಾಸ್ತ್ರಿ ಹೇರೂರ, ಸಾಹಿತಿ ಪ್ರಮೀಳಾ ಜಾನಪ್ಪಗೌಡ, ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪ್ರಕಾಶಕರಾದ ಉಷಾ ನಾಯಕ ಉಪಸ್ಥಿತರಿದ್ದರು.

ಕೃತಿ ಪರಿಚಯ

ಕೃತಿ: ವಲಸೆ ಹಕ್ಕಿಯ ಹಾಡು (ಆತ್ಮಕಥೆ)

ಲೇಖಕ: ಪ್ರೊ. ಕೃಷ್ಣ ನಾಯಕ

ಪ್ರ.: ವಿಶ್ವ ಪ್ರಕಾಶನ

ಪುಟ: 280, ಬೆಲೆ: ₹300

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT