ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರ್ಗಿ: ಕಾರ್ಗಿಲ್‌ ವಿಜಯೋತ್ಸವ; ಗಮನ ಬೈಕ್‌ ರ್‍ಯಾಲಿ

ಹುತಾತ್ಮ ಯೋಧರಿಗೆ ಮೊಳಗಿದ ಜೈಕಾರ, ತೆರೆದ ವಾಹನದಲ್ಲಿ ಮಾಜಿ ಸೈನಿಕರ ಮೆರವಣಿಗೆ
Last Updated 27 ಜುಲೈ 2021, 4:41 IST
ಅಕ್ಷರ ಗಾತ್ರ

ಕಲಬುರ್ಗಿ: ಕಾರ್ಗಿಲ್‌ ವಿಜಯೋತ್ಸವ ಅಂಗವಾಗಿ ಇಲ್ಲಿನ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಬೈಕ್‌ ಹಾಗೂ ಕಾರ್‌ ರ್‍ಯಾಲಿ ನಡೆಸಲಾಯಿತು. 15 ಮಾಜಿ ಸೈನಿಕರನ್ನು ತೆರೆದ ವಾಹನದಲ್ಲಿ ನಿಲ್ಲಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮಾರ್ಗದುದ್ದಕ್ಕೂ ಯುವಕರು ದೇಶಪ್ರೇಮದ ಘೋಷಣೆ ಮೊಳಗಿಸಿದರು.

ಆರ್‌ಎಸ್‌ಎಸ್‌ ಪ್ರಮುಖರಾದ ಮಾರ್ತಾಂಡ ಶಾಸ್ತ್ರಿ ಹಾಗೂ ವಿಶ್ವಹಿಂದೂ ಪರಿಷತ್‌ನ ನಗರದ ಘಟಕದ ಅಧ್ಯಕ್ಷ ರಾಜು ನವಲ್ದಿ ಅವರು ಈ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಇಲ್ಲಿನ ನಗರೇಶ್ವರ ಶಾಲೆ ಆವರಣದಲ್ಲಿ ರಾಷ್ಟ್ರಗೀತೆ ಹಾಡಿ, ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಅದಕ್ಕೂ ಮುನ್ನ ಹುಮನಾಬಾದ್‌ ಬೇಸ್‌ನಲ್ಲಿರುವ ನೇತಾಜಿ ಸುಭಾಷಚಂದ್ರ ಬೋಸ್‌ ಅವರ ಪ್ರತಿಮೆಗೂ ಮಾಲಾರ್ಪಣೆ ಮಾಡಿ, ಜೈಕಾರ ಹಾಕಿದರು.

ನಂತರ ಮಾರುಕಟ್ಟೆ ಮಾರ್ಗದ ಮೂಲಕ ಮೆರವಣಿಗೆ ಆರಂಭವಾಯಿತು. ಮುಂಭಾಗದಲ್ಲಿ 80 ಬೈಕ್‌ ಸವಾರರು ಸಾಗಿದರು. ಭಾರತ ಮಾತೆಯ ಭಾವಚಿತ್ರ ಅಳವಡಿಸಿದ್ದ ವಾಹನ ಇವುಗಳ ಹಿಂದೆ ಸಾಗಿತು. ಅದರಲ್ಲಿ ನಿವೃತ್ತ ಯೋಧರು ನಿಂತುಕೊಂಡು ಮಾರ್ಗಮಧ್ಯೆ ಬಂದ ಜನರಿಗೆ ಕೈ ಬೀಸಿದರು. ಅದರ ಹಿಂದೆ 10 ಕಾರ್‌ಗಳು ಕೂಡ ಸಾಲಾಗಿ ಸಾಗಿದವು.

ಪ್ರತಿಯೊಂದು ಬೈಕ್‌, ಕಾರ್‌ಗಳಿಗೂ ತ್ರಿವರ್ಣಧ್ವಜವನ್ನು ಅಳವಡಿಸಿದ್ದು ಗಮನ ಸೆಳೆಯಿತು. ಮಾರ್ಗದುದ್ದಕ್ಕೂ ಧ್ವನಿವರ್ಧಕದಲ್ಲಿ ಒಂದೇ ಮಾತರಂ, ಮಾ ತುಜೇ ಸಲಾಂ, ಮೇರಾ ಭಾರತ್‌ ಮಹಾನ್‌... ಮುಂತಾದ ದೇಶಭಕ್ತಿ ಗೀತೆಗಳು ಮೊಳಗಿದವು.

ಜಿಲ್ಲಾಧಿಕಾರಿಗೆ ಮನವಿ: ಮೆರವಣಿಗೆಯು ಜಿಲ್ಲಾಧಿಕಾರಿ ಕಚೇರಿ ಮೂಲಕ ಸಾಗಿ ಸರ್ದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತಕ್ಕೆ ಬಂದಾಗ ಜೈಕಾರಗಳು ಮೊಳಗಿದವು. ವೃತ್ತದಲ್ಲಿರುವ ಪಟೇಲ್‌ ಅವರ ಮೂರ್ತಿಗೆ ಗಣ್ಯರು ಮಾಲಾರ್ಪಣೆ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಸುತ್ತ ಸೇರಿದ ಜನರಿಗೆ ಸಿಹಿ ಹಂಚಿದರು. ಯುವಕರ ತಂಡಗಳು ಮೆರವಣಿಗೆ ಮುಂದೆ ಹಾಡಿಗೆ ತಕ್ಕಂತ ಹೆಜ್ಜೆ ಹಾಕಿದವು.

ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ಮರಳಿ ಮೆರವಣಿಗೆ ಮುಗಿಸಲಾಯಿತು. ನಗರದಲ್ಲಿ ಯುದ್ಧ ಸ್ಮಾರಕ ಹಾಗೂ ಸೇನಾ ಭರ್ತಿ ಕಾರ್ಯಾಲಯ ಆರಂಬಿಸಬೇಕು ಎಂಬುದೂ ಸೇರಿದಂತೆ ಮಾಜಿ ಸೈನಿಕರ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಮುಖಂಡರಾದ ಸಿದ್ದರಾಜ ಬಿರಾದಾರ, ಪ್ರಶಾಂತ ಗುಡ್ಡಾ, ಸಾಗರ್‌ ಹಿಂದೂ ರಾಠೋಡ, ವೀರೇಶಗೌಡ ಪಾಟೀಲ, ಚಿದಾನಂದ ಹಿರೇಮಠ, ಶಶಿಕಾಂತ ಆರ್‌. ದೀಕ್ಷಿತ್‌, ಲಕ್ಷ್ಮಿಕಾಂತ ಸ್ವಾದಿ, ರವೀಂದ್ರ ಮುತ್ತಿನ, ಮನೀಷ ಪಾಂಡೆ ಹಾಗೂ ಸದಸ್ಯರು ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT