ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗರಣದಿಂದ ಹರಿದುಬಂತು ಸಾಕಷ್ಟು ಹಣ: ವಿಚಾರಣೆ ವೇಳೆ ಬಾಯಿಬಿಟ್ಟ ದಿವ್ಯಾ ಹಾಗರಗಿ

Last Updated 1 ಮೇ 2022, 8:33 IST
ಅಕ್ಷರ ಗಾತ್ರ

ಕಲಬುರಗಿ: ‘ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದು ನಿಜ. ಇದಕ್ಕೆ ದೊಡ್ಡ ಮೊತ್ತದ ಹಣ ಹರಿದುಬಂದಿದ್ದೂ ನಿಜ’ ಎಂದು ಹಗರಣದ ಪ್ರಮುಖ ಆರೋಪಿ, ಬಿಜೆಪಿ ನಾಯಕಿ ದಿವ್ಯಾ ಹಾಗರಗಿ ಅಧಿಕಾರಿಗಳ ಮುಂದೆ ಬಾಯಿಬಿಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇಲ್ಲಿನ ಜ್ಞಾನಜ್ಯೋತಿ ಇಂಗ್ಲಿಷ್‌ ಮಾಧ್ಯಮ ಶಾಲೆಯಲ್ಲಿ ತೆರೆದ ಪರೀಕ್ಷಾ ಕೇಂದ್ರದಲ್ಲಿ 2021ರ ಅಕ್ಟೋಬರ್‌ 3ರಂದು ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದೇವೆ ಎಂದು ಶಾಲೆಯ ಮುಖ್ಯಸ್ಥೆ ನೇರವಾಗಿ ಒಪ್ಪಿಕೊಂಡಿದ್ದಾಗಿ ಮೂಲಗಳು ಖಚಿತಪಡಿಸಿವೆ.

ದಿವ್ಯಾ ಅವರನ್ನು ಶನಿವಾರ ಇಡೀ ದಿನ ವಿಚಾರಣೆ ನಡೆಸಿದ ಸಿಐಡಿ ಅಧಿಕಾರಿಗಳು ರಾತ್ರಿ ಮತ್ತೆ ಮಹಿಳಾ ನಿಲಯಕ್ಕೆ ಸೇರಿಸಿ ಬಂದಿದ್ದರು. ಭಾನುವಾರ ಬೆಳಿಗ್ಗೆ ಮತ್ತೆ ವಿಚಾರಣೆ ಮುಂದುವರಿಸಿ ಇಂಚಿಂಚೂ ಮಾಹಿತಿ ಕಲೆ ಹಾಕಿದರು. ಎರಡು ದಿನ ಏನನ್ನೂ ಒಪ್ಪಿಕೊಳ್ಳದೆ ಮೊಂಡತನ ತೋರಿದ ದಿವ್ಯಾ ಅವರು, ಈಗ ಒಂದೊಂದಾಗಿ ವಿಷಯ ಬಯಲು ಮಾಡುತ್ತಿದ್ದಾರೆ.

‘ಪರೀಕ್ಷೆಯ ವೇಳೆ ಎರಡು ತಂಡಗಳಿಂದ ಎರಡು ರೀತಿಯಲ್ಲಿ ವಾಮಮಾರ್ಗ ಅನುಸರಿಸಲಾಗಿದೆ. ರುದ್ರಗೌಡ ಡಿ. ಪಾಟೀಲ ಹಾಗೂ ಸಹಚರರು ಬ್ಲೂಟೂತ್‌ ಉಪಕರಣ ಬಳಸುವ ಉಪಾಯ ಮಾಡಿದರು. ನೀರಾವರಿ ಇಲಾಖೆಯ ಸಹಾಯಕ ಎಂಜಿನಿಯರ್‌ ಮಂಜುನಾಥ ಮೇಳಕುಂದಿ ಅವರ ಗ್ಯಾಂಗ್‌ ಒಎಂಆರ್‌ ಶೀಟಿನಲ್ಲಿ ಸರಿ ಉತ್ತರ ತಿದ್ದುವ ದಾರಿ ಅನುಸರಿಸಿತ್ತು. ಈ ಇಬ್ಬರ ತಂಡಗಳಲ್ಲೂ ದೊಡ್ಡ ಮೊತ್ತದ ಹಣ ಹರಿದಾಡಿದೆ. ಆದರೆ, ಎಷ್ಟು ಎಂದು ಸ್ಪಷ್ಟವಾಗಿ ಗೊತ್ತಿಲ್ಲ...’ ಎಂಬ ವಿಷಯ ಕೂಡ ಹೊರಬಿದ್ದಿದೆ.

‘ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ ಅವರು ಹೀಗೆಲ್ಲ ‘ಪ್ಲ್ಯಾನ್‌’ ಮಾಡಿದ್ದೇವೆ ಎಂದು ಮೊದಲೇ ನನಗೆ ಹೇಳಿದ್ದರು. ರುದ್ರಗೌಡ ಹಾಗೂ ಮಂಜುನಾಥ ಖುದ್ದಾಗಿ ಕಾಶಿನಾಥ ಅವರನ್ನು ಸಂಪರ್ಕಿಸಿದ್ದರು. ನನ್ನ ಮುಂದೆ ಹೇಳಿದ ಮೇಲೆ, ಯಾವುದನ್ನು ಹೇಗೆ ಮಾಡಬೇಕು ಎಂದು ಚರ್ಚಿಸಿ ಮಾಡಿದ್ದಾಗಿ’ ದಿವ್ಯಾ ಬಾಯಿ ಬಿಟ್ಟಿದ್ದಾರೆ ಎನ್ನುತ್ತವೆ ಮೂಲಗಳು.

ಕಾಶಿನಾಥ ಪರಾರಿ ಮಾಡಿಸಿದ್ದೇ ತಂಡ:ಅಕ್ರಮ ಬಯಲಿಗೆ ಬರುತ್ತಿದ್ದಂತೆಯೇ ಕಾಶಿನಾಥ ತಲೆಮರೆಸಿಕೊಂಡಿದ್ದಾರೆ. ಕಾಶಿನಾಥ ಸಿಕ್ಕಿಬಿದ್ದರೆ ಇಬ್ಬರೂ ಪ್ರಮುಖ ಆರೋಪಿಗಳು ಸಿಕ್ಕಿಬೀಳುತ್ತಾರೆ ಎಂಬ ಭಯದಿಂದ ಮೊದಲು ಅವರನ್ನೇ ಪರಾರಿ ಮಾಡಿಸಿರುವ ಸಂದೇಹ ಸಿಐಡಿ ಅಧಿಕಾರಿಗಳಿಗೆ ಬಂದಿದೆ. ಕಳೆದ 21 ದಿನಗಳಿಂದ ಕಣ್ಮರೆಯಾಗಿರುವ ಕಾಶಿನಾಥ ಹಾಗೂ ಮಹಿಳಾ ಅಭ್ಯರ್ಥಿ ಶಾಂತಿಬಾಯಿ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ.

ಎಂಜಿನಿಯರ್ಸ್‌, ಪೊಲೀಸ್‌ ಅಧಿಕಾರಿಗಳು, ಕಾನ್‌ಸ್ಟೆಬಲ್‌ಗಳೂ ಭಾಗಿ?:‌ದಿನದಿಂದ ದಿನಕ್ಕೆ ಬಗೆದಷ್ಟೂ ಆಳಕ್ಕೆ ಹೋಗುತ್ತಿರುವ ಪಿಎಸ್ಐ ನೇಮಕಾತಿ ಪರೀಕ್ಷೆಯ ಅಕ್ರಮಕ್ಕೆ ಈಗ ಮತ್ತೊಂದು ತಿರುವು ಸಿಕ್ಕಿದೆ. ಹಗರಣದಲ್ಲಿ ರುದ್ರಗೌಡ ಡಿ. ಪಾಟೀಲ ಜತೆಗೆ ಕೆಲವು ಪೊಲೀಸ್‌ ಅಧಿಕಾರಿಗಳು, ಕಾನ್‌ಸ್ಟೆಬಲ್‌ಗಳೂ ಕೈಜೋಡಿಸಿದ ಶಂಕೆ ವ್ಯಕ್ತವಾಗಿದೆ. ಅದೇ ರೀತಿ ಮಂಜುನಾಥ ಮೇಳಕುಂದಿ ಜೊತೆಗೆ ಅಫಜಲಪುರದ ನೀರಾವರಿ ಇಲಾಖೆಯ ಕೆಲವು ಎಂಜಿನಿಯರ್‌ಗಳೂ ಭಾಗಿಯಾಗಿರುವ ಸಾಧ್ಯತೆ ಕೂಡ ಇದೆ ಎಂಬುದೂ ಅಧಿಕಾರಿಗಳ ಸಂದೇಹ.

ಈ ಹಿಂದೆ ನಡೆದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌ ಹಾಗೂ ಕಿರಿಯ ಎಂಜಿನಿಯರ್‌ ನೇಮಕಾತಿ ಪರೀಕ್ಷೆಯಲ್ಲೂ ಮಂಜುನಾಥ ಅಕ್ರಮ ಎಸಗಿದ ಬಗ್ಗೆ ಕೆಲವರು ಬಾಯಿ ಬಿಟ್ಟಿದ್ದಾರೆ. ಮಂಜುನಾಥ ಜೊತೆಗೇ, ಕೆಲ ಎಂಜಿನಿಯರ್‌ಗಳ ತಂಡ ಈ ಎರಡೂ (ಪಿಎಸ್‌ಐ, ಎಂಜಿನಿಯರ್ಸ್‌) ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಭಾಗಿಯಾಗಿರಬಹುದು ಎನ್ನುವುದು ಹೊಸದಾಗಿ ಸಿಕ್ಕ ಮಾಹಿತಿ.

ಅದೇ ರೀತಿ, ರುದ್ರಗೌಡ ಪಾಟೀಲ ಸಂಚಿನಲ್ಲಿ ಇಬ್ಬರು ಡಿವೈಎಸ್ಪಿ, ಒಬ್ಬ ಸಿಪಿಐ ಹಾಗೂ ಕೆಲವು ಪೊಲೀಸ್‌ ಕಾನ್‌ಸ್ಟೆಬಲ್‌ಗಳ ಹೆಸರೂ ಕೇಳಿಬಂದಿದೆ. ರುದ್ರಗೌಡ ಹಾಗೂ ಬಂಧಿತ ಅಭ್ಯರ್ಥಿಗಳು ನೀಡಿದ ಹೇಳಿಕೆಗಳನ್ನು ತಾಳೆ ಹಾಕಿದಾಗ ಈ ಸಂದೇಹ ಮೂಡಿತು ಎಂಬುದು ಸಿಐಡಿ ಮೂಲಗಳ ಮಾಹಿತಿ.

ಯಾವ ಅಭ್ಯರ್ಥಿಗಳಿಗೆ ಸಹಾಯ ಮಾಡಬೇಕು ಎಂಬ ಬಗ್ಗೆ ಪೊಲೀಸ್‌ ಅಧಿಕಾರಿಗಳೇ ರುದ್ರಗೌಡ ಬಳಿ ಹೇಳಿದ್ದರು. ಪರೀಕ್ಷೆ ಮುಗಿದ ಬಳಿಕ ಕಾನ್‌ಸ್ಟೆಬಲ್‌ಗಳ ಮೂಲಕ ಅಭ್ಯರ್ಥಿಗಳು ಹಣ ರವಾನಿಸಿದ್ದರು. ಯಾರಿಗೆ ಎಷ್ಟು ಹಂಚಬೇಕು ಎಂಬುದನ್ನು ರುದ್ರಗೌಡ ನಿರ್ಧರಿಸುತ್ತಿದ್ದಾಗಿ ಮೂಲಗಳು ಹೇಳುತ್ತವೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT