ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ಪೊಲೀಸ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನ

Last Updated 21 ಮಾರ್ಚ್ 2023, 7:19 IST
ಅಕ್ಷರ ಗಾತ್ರ

ಕಲಬುರಗಿ: ನಗರದ ಹೊರವಲಯದ ನಾಗನಹಳ್ಳಿಯಲ್ಲಿ ಇರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಮುಗಿಸಿದ ಪಿಎಸ್‌ಐ(ಸಿವಿಲ್), ವೈರ್‌ಲೆಸ್‌ ವಿಭಾಗ, ಕೆಎಸ್‌ಐಎಸ್‌ಎಫ್, ಆರ್‌ಎಸ್‌ಐ ಸೇರಿದಂತೆ ಒಟ್ಟು 126 ಪ್ರಶಿಕ್ಷಣಾರ್ಥಿಗಳ ಆಕರ್ಷಕ ನಿರ್ಗಮನ ಪಥ ಸಂಚಲನ ಮಂಗಳವಾರ ನಡೆಯಿತು.

ಸಿಐಡಿಯ ಡಿಜಿಪಿ ಪಿ.ಎಸ್‌.ಸಂಧು ಅವರು ಕವಾಯತು ಪರಿವೀಕ್ಷಣೆ ನಡೆಸಿ, ಗೌರವ ವಂದನೆ ಸ್ವೀಕರಿಸಿದರು. ತರಬೇತಿ ಮಹಾವಿದ್ಯಾಲಯದ ಪೊಲೀಸ್ ಅಧೀಕ್ಷಕ ಮತ್ತು ಪ್ರಾಂಶುಪಾಲ ಡಾ.ಅರುಣ್ ಕೆ ಅವರು ಪ್ರಶಿಕ್ಷಣಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ, ವರದಿ ಮಂಡಿಸಿದರು.

ತರಬೇತಿ ಪಡೆದ 45-ಪಿಎಸ್‌ಐ(ಸಿವಿಲ್), 24- ವೈರ್‌ಲೆಸ್‌ ವಿಭಾಗದ ಸಿಬ್ಬಂದಿ, 49- ಕೆಎಸ್‌ಐಎಸ್‌ಎಫ್, 1-ಡಿಎಸ್‌ಇ (ಅಬಕಾರಿ) ಹಾಗೂ 7-ಆರ್‌ಎಸ್‌ಐ ಸೇರಿದಂತೆ ಒಟ್ಟು 126 ಪ್ರಶಿಕ್ಷಣಾರ್ಥಿಗಳು ಪಥಸಂಚಲನ ಆರಂಭಿಸುತ್ತಿದ್ದಂತೆ ದೂರದ ಊರುಗಳಿಂದ ಆಗಮಿಸಿದ್ದ ಅವರ ಪೋಷಕರು, ಸಂಬಂಧಿಗಳು, ಸ್ನೇಹಿತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ಪಥಸಂಚಲನದ ದೃಶ್ಯವನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.

ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಸಿಐಡಿಯ ಡಿಜಿಪಿ ಪಿ.ಎಸ್‌.ಸಂಧು, ‘ಮಾನವೀಯತೆ ಮತ್ತು ಸಮಾಜದ ಸೇವೆಗಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗುವ ಅವಕಾಶ ಪಡೆದ ನೀವೇ ಧನ್ಯರು. ರಾಷ್ಟ್ರ ಧ್ವಜ ಮತ್ತು ರಾಷ್ಟ್ರಗೀತೆಯ ಸಮ್ಮುಖದಲ್ಲಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದು, ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಇದು ಅಂದುಕೊಂಡಷ್ಟು ಸುಲಭದ ಕೆಲಸವಲ್ಲ. ಇದಕ್ಕಾಗಿ ನೀವು ಸಾಕಷ್ಟು ಕಠಿಣ ಶ್ರಮ ಪಡಬೇಕಾಗುತ್ತದೆ’ ಎಂದರು.

‘ನೀವು ಆಯ್ದುಕೊಂಡ ವೃತ್ತಿ ಮತ್ತು ತೊಟ್ಟಿರುವ ಬಟ್ಟೆ ಗೌರವ ಮತ್ತು ಜವಾಬ್ದಾರಿಯಿಂದ ಬಂದಿರುವಂತಹದ್ದು. ಇದು ಕೇವಲ ಖಾಕಿಯಲ್ಲ. ನಿಮ್ಮ ಬದುಕಿನ ಮಾರ್ಗ. ತರಬೇತಿಯ ಅವಧಿಯಲ್ಲಿ ಕಲಿತ ಮೌಲ್ಯ ಮತ್ತು ಸಂಸ್ಕಾರಗಳು ವೃತ್ತಿ ಬದುಕಿನಲ್ಲಿ ಎದುರಾಗುವ ಸವಾಲುಗಳಿಗೆ ನೆರವಾಗುತ್ತವೆ. ಹೀಗಾಗಿ, ಅವುಗಳನ್ನು ಯಾವತ್ತಿಗೂ ಮರೆಯಬಾರದು’ ಎಂದು ಹೇಳಿದರು.

‘ನಿಮ್ಮ ಮುಂದಿನ ವೃತ್ತಿ ಬದುಕು ಸವಾಲು ಮತ್ತು ಆಸಕ್ತಿಯಿಂದ ಕೂಡಿರಲಿದೆ. ಕೆಲವೇ ವರ್ಷಗಳಲ್ಲಿ ಊಹೆಗೂ ನಿಲುಕದಷ್ಟು ಬದಲಾವಣೆ ಆಗಿದೆ. ತಂತ್ರಜ್ಞಾನದ ಪ್ರಗತಿಯು ಹೊಸ ಸವಾಲುಗಳನ್ನು ನಮ್ಮ ಮುಂದೆ ಇರಿಸಿದೆ. ನಾವು ವೃತ್ತಿ ಆರಂಭಿಸಿದ್ದಾಗ ಮೊಬೈಲ್, ಸಾಮಾಜಿಕ ಜಾಲತಾಣಗಳು ಇರಲಿಲ್ಲ. ಪತ್ರಿಕೆಗಳು ಇದ್ದವು. ಆ ಬಳಿಕ ಎಲೆಕ್ಟ್ರಾನಿಕ್ ಮಾಧ್ಯಮ ಬಂತು. ತಂತ್ರಜ್ಞಾನದ ಪ್ರಯಾಣ ವೇಗವಾಗಿ ಸಾಗುತ್ತಿದ್ದು. ಎಚ್ಚರಿಕೆಯಿಂದ ಇರಬೇಕು. ಏನು ಮಾಡಬೇಕು? ಹೇಗೆ ಕರ್ತವ್ಯ ನಿರ್ವಹಿಸಬೇಕು ಎಂಬುದರ ಬಗ್ಗೆಯೂ ಚಿಂತಿಸಬೇಕು. ಮೊಬೈಲ್‌ ಫೋನ್, ತಂತ್ರಜ್ಞಾನ ನಿತ್ಯ ಜೀವನ ಭಾಗವಾಗಿದೆ. ನಿಮ್ಮ ಸುತ್ತಲೂ ಇಲಾಖೆಯ ಹಿರಿಯ ಅಧಿಕಾರಿಗಳು, ಸಮಾಜ ಕಣ್ಣಿಟ್ಟಿರುತ್ತದೆ. ಇದು ನಿಮ್ಮ ಗಮನದಲ್ಲಿ ಇರಲಿ. ಹೊಸತನ್ನು ಸ್ವೀಕರಿಸಿ ಅದನ್ನು ಕಲಿಯುವ ಮನೋಭಾವ ಬೆಳಸಿಕೊಳ್ಳಿ’ ಎಂದು ಸಲಹೆ ನೀಡಿದರು.

‘ನೀವು ಇಲ್ಲಿ ಇರುವುದು ಸಮಾಜದ ದುರ್ಬಲರ ಸೇವೆಗಾಗಿ. ಅದರಲ್ಲಿ ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಹೆಚ್ಚಿನ ಗಮನಕೊಡಬೇಕು. ದುರ್ಬಲರ ಬಗ್ಗೆ ಸೂಕ್ಷ್ಮವಾಗಿದ್ದು, ಹೆಚ್ಚಿನ ಮುತುವರ್ಜಿ ವಹಿಸಿ. ಅವರನ್ನು ಗೌರವದಿಂದ ಕಾಣುವುದು ನಿಮ್ಮ ಕರ್ತವ್ಯ ಹಾಗೂ ಗೌರವ ಪಡೆಯುವುದು ಅವರ ಹಕ್ಕು’ ಎಂದರು.

ಪೊಲೀಸ್ ಅಧೀಕ್ಷಕ ಮತ್ತು ಪ್ರಾಂಶುಪಾಲ ಡಾ.ಅರುಣ್ ಕೆ ಅವರು ಮಾತನಾಡಿ, ‘2003ರಲ್ಲಿ ಆರಂಭವಾದ ಪೊಲೀಸ್‌ ತರಬೇತಿ ಮಹಾವಿದ್ಯಾಲಯದಲ್ಲಿ ಇಲ್ಲಿಯವರೆಗೂ ವಿವಿಧ ವಿಭಾಗಗಳ 4,296 ಪ್ರಶಿಕ್ಷಣಾರ್ಥಿಗಳು ಬುನಾದಿ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ’ ಎಂದರು.

ರಾಜ್ಯ ಪೊಲೀಸ್ ತರಬೇತಿ ವಿಭಾಗದ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಡಾ.ಪಿ.ರವೀಂದ್ರನಾಥ್, ಈಶಾನ್ಯ ವಲಯದ ಉಪಮಹಾನಿರೀಕ್ಷಕ ಅನುಪಮ್ ಅಗರವಾಲ್, ನಗರ ಪೊಲೀಸ್ ಕಮಿಷನರ್ ಚೇತನ್. ಆರ್, ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್, ರಾಜ್ಯ ಗುಪ್ತವಾರ್ತೆ ಉಪನಿರ್ದೇಶಕ ಕಿಶೋರ್ ಬಾಬು, ಡಿಸಿಪಿಗಳಾದ ಅಡ್ಡೂರು ಶ್ರೀನಿವಾಸಲು, ದೀಪನ್, 6ನೇ ಕೆಎಸ್‌ಆರ್‌ಪಿ ಪಡೆಯ ಕಮಾಂಡೆಂಟ್ ಬಸವರಾಜ ಜಿಳ್ಳೆ, ಅಬಕಾರಿ ಉಪ ಆಯುಕ್ತರಾದ ಆಫ್ರಿನ್, ಲೋಕಾಯುಕ್ತ ಎಸ್‌ಪಿ ಎ.ಆರ್‌.ಕರ್ನೂಲ್ ಸೇರಿ ಉನ್ನತ ಅಧಿಕಾರಿಗಳು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT