ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಫಜಲಪುರ: ‘ಕುಡಿಯುವ ನೀರಿನ ಸಮಸ್ಯೆ ನಿವಾರಿಸಿ’

ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆ
Last Updated 28 ಡಿಸೆಂಬರ್ 2021, 3:17 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದ ತಾಲ್ಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಶಾಸಕ ಎಂ.ವೈ.ಪಾಟೀಲ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ತ್ರೈಮಾಸಿಕ ಸಭೆ ಜರುಗಿತು.

ಜಿಲ್ಲಾ ಪಂಚಾಯಿತಿ ಎಂಜಿನಿಯರಿಂಗ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ನಬಿಲಾಲ್ ಗಬಸಾವಳಗಿ ಮಾತನಾಡಿ, ಶಾಸಕರ ಪ್ರದೇಶಾಭಿವೃದ್ಧಿ ಅನುದಾನದಲ್ಲಿ 58 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅದರಲ್ಲಿ 13 ಮಾತ್ರ ಮುಗಿದಿವೆ. ಒಟ್ಟು ₹1.57 ಕೋಟಿ ಅನುದಾನದಲ್ಲಿ ₹64 ಲಕ್ಷ ಖರ್ಚಾಗಿದೆ ಎಂದು ಮಾಹಿತಿ ನೀಡಿದರು.

ನರೇಗಾ ಕುರಿತು ಶಾಸಕರು ಮಾಹಿತಿ ಕೇಳಿದಾಗ ಗಬಸಾವಳಗಿ ಮೌನ ವಹಿಸಿದರು. ಮತ್ತೆ ಕೇಳಿದಾಗ ನನ್ನಲ್ಲಿ ಮಾಹಿತಿಯಿಲ್ಲ, ತಂದು ಕೊಡುತ್ತೇನೆ ಎಂದು ಹೇಳಿ ಜಾರಿಕೊಂಡರು.

‘ಏನು ಕೇಳಿದರೂ ಮಾಹಿತಿ ಇಲ್ಲ ಎಂದು ಹೇಳುತ್ತೀರಿ. ಹೀಗಾದರೆ ಸರ್ಕಾರದ ಅನುದಾನ ಹೇಗೆ ಸರಿಯಾಗಿ ಬಳಕೆಯಾಗಬೇಕು. ಸಣ್ಣ ಕಾಮಗಾರಿಗಳಿಗೂ ಪ್ರಗತಿಯಲ್ಲಿದೆ ಎಂದು ಹೇಳುತ್ತೀರಿ. ಅರ್ಥವಾಗುತ್ತಿಲ್ಲ’ ಎಂದು ಶಾಸಕ ಎಂ.ವೈ.ಪಾಟೀಲ
ಬೇಸರ ವ್ಯಕ್ತ ಪಡಿಸಿದರು.

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಸರ್ವಜ್ಞ ಪೂಜಾರಿ ಮಾಹಿತಿ ನೀಡಿ, ಅಫಜಲಪುರ ಮತಕ್ಷೇತ್ರದಲ್ಲಿ 135 ಗ್ರಾಮಗಳಿಗೆ ನಲ್ಲಿ ಮೂಲಕ ಮನೆ ಮನೆಗೆ ಕುಡಿಯುವ ನೀರು ಪೂರೈಕೆ ಮಾಡಲು ಯೋಜನೆ ಆರಂಭವಾಗಿದ್ದು ಸದ್ಯಕ್ಕೆ ಮೊದಲನೇ ಹಂತದಲ್ಲಿ 37 ಗ್ರಾಮಗಳಿಗೆ ನೀರು ಪೂರೈಕೆ ಮಾಡುವ ಕೆಲಸ ಮಾಡಲಾಗುತ್ತಿದೆ ಎಂದರು.

ತಾಲೂಕಿನಲ್ಲಿ ಒಟ್ಟು 65 ಗ್ರಾಮಗಳಲ್ಲಿ ಶುದ್ಧ ಕುಡಿಯು ನೀರಿನ ಘಟಕಗಳನ್ನು ನಿರ್ಮಾಣ ಮಾಡಲಾಗಿದ್ದು, ಅವುಗಳಲ್ಲಿ 24 ಘಟಕಗಳು ಸುವ್ಯವಸ್ಥಿತವಾಗಿವೆ. ಉಳಿದವು ಹಾಳಾಗಿದ್ದು, ಶೀಘ್ರ ದುರಸ್ತಿ ಮಾಡಲಾಗುವುದು ಎಂದಾಗ ಶಾಸಕರು ಮಧ್ಯಪ್ರವೇಶಿಸಿ ಯಾವುದೇ ಪರಿಸ್ಥಿತಿಯಲ್ಲಿ ಬರುವ ಬೇಸಿಗೆಯಲ್ಲಿ ಎಲ್ಲಾ 65 ಶುದ್ಧ ನೀರಿನ ಘಟಕಗಳನ್ನು ದುರಸ್ತಿ ಮಾಡಬೇಕು ಹಾಗೂ ಅವುಗಳ ಪರಿಸ್ಥಿತಿ ಕುರಿತು ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.

ತಾಲ್ಲೂಕಿನ ಬಳೂರಗಿ ಗ್ರಾಮದ 2 ತಾಂಡಾಗಳ ಮಧ್ಯೆ ರಸ್ತೆ ಸಮಸ್ಯೆ ಇದೆ. ಸಂಬಂಧಪಟ್ಟ ಇಲಾಖೆಯವರು ಅಲ್ಲಿಗೆ ಭೇಟಿ ನೀಡಿ ಸಮಸ್ಯೆ ಬಗೆಹರಿಸಬೇಕು ಎಂದು ಶಾಸಕರು ತಿಳಿಸಿದರು.

ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ ಅಜಗೊಂಡ ಮಾತನಾಡಿ, ಕೆಳಗಿನ ತಾಂಡಾದ ಜನರು ಮೇಲಿನ ತಾಂಡಾಕ್ಕೆ ಸಂಚರಿಸಲು ಈಗಾಗಲೇ ರಸ್ತೆ ನಿರ್ಮಿಸಲಾಗಿದೆ ಎಂದರು.

ಗ್ರಾಮ ಪಂಚಾಯತಿಗಳ ನೋಡಲ್ ಅಧಿಕಾರಿ ಕಿಶೋರಕುಮಾರ್ ದುಬೆ ಮಾತನಾಡಿ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಕೊರೊನಾಜಾಗೃತಿಯನ್ನು ಮೂಡಿಸಬೇಕು. ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.

ತುಂತುರು ನೀರಾವರಿ ಯೋಜನೆಗೆ ₹10 ಕೋಟಿ ಅನುದಾನ ಬೇಕಾಗಿದೆ. ಮತಕ್ಷೇತ್ರದ ವಿವಿಧ ಕಾಲೇಜುಗಳಲ್ಲಿ 60 ಅತಿಥಿ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಳ್ಳಲಾಗಿದೆ ಹಾಗೂ ‘ಸೌಭಾಗ್ಯ’ ಯೋಜನೆ ಅಡಿ 929 ಮನೆಗಳಿಗೆ ವಿದ್ಯುತ್ ದೀಪ ಅಳವಡಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದರು.

ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಮೇಶ ಸುಲ್ಪಿ, ಕಲಬುರಗಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಾನಪ್ಪ ಕಟ್ಟಿಮನಿ, ತಾಲ್ಲೂಕು ಯೋಜನಾಧಿಕಾರಿ ರೇಣುಕಾ ರಾಠೋಡ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT