ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಕೆಆರ್‌ಟಿಸಿ | 1,804 ಹದ್ದೆಗಳ ಭರ್ತಿಗೆ ಕ್ರಮ: ಸಚಿವ ರಾಮಲಿಂಗಾರೆಡ್ಡಿ

ಚಾಲಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ: ರಾಮಲಿಂಗಾ ರೆಡ್ಡಿ ಭರವಸೆ
Published 5 ಮಾರ್ಚ್ 2024, 15:39 IST
Last Updated 5 ಮಾರ್ಚ್ 2024, 15:39 IST
ಅಕ್ಷರ ಗಾತ್ರ

ಕಲಬುರಗಿ: ‘ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯಲ್ಲಿ (ಕೆಕೆಆರ್‌ಟಿಸಿ) ಖಾಲಿ ಇರುವ 1,300 ನಿರ್ವಾಹಕ ಹಾಗೂ 504 ಇತರೆ ಸಿಬ್ಬಂದಿ ಸೇರಿ ಒಟ್ಟು 1,804 ಹುದ್ದೆಗಳನ್ನು ಮುಂದಿನ ಕೆಲವು ದಿನಗಳಲ್ಲಿ ಭರ್ತಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಭರವಸೆ ನೀಡಿದರು.

ಇಲ್ಲಿನ ಡಾ.ಎಸ್‌.ಎಂ. ಪಂಡಿತ್ ರಂಗಮಂದಿರದಲ್ಲಿ ಕೆಕೆಆರ್‌ಟಿಸಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರಗಳನ್ನು ನೀಡಿ ಅವರು ಮಾತನಾಡಿದರು.

‘ಕಳೆದ ಒಂಬತ್ತು ವರ್ಷಗಳಿಂದ ನೇಮಕಾತಿ ಹಾಗೂ 4 ವರ್ಷಗಳಿಂದ ಬಸ್‌ ಖರೀದಿ ನಡೆಯದ ಕಾರಣ ಸಂಸ್ಥೆಯ ಮೇಲೆ ಸಾಕಷ್ಟು ಹೊರೆ ಬಿದಿತ್ತು. ಅಧಿಕಾರಕ್ಕೆ ಬಂದ ಬಳಿಕ ಪ್ರಯಾಣಿಕರಿಗಾಗಿ 644 ಬಸ್‌ಗಳನ್ನು ನೀಡಿ 1,619 ಸಿಬ್ಬಂದಿಯ ನೇಮಕವೂ ಮಾಡಿಕೊಳ್ಳಲಾಗಿದೆ. ಮುಂದಿನ ಮೂರ್ನಾಲ್ಕು ತಿಂಗಳಿನಲ್ಲಿ ಸಂಸ್ಥೆಗೆ ಹೆಚ್ಚುವರಿಯಾಗಿ 485 ಬಸ್‌ಗಳು ಸೇರ್ಪಡೆಯಾಗಲಿವೆ’ ಎಂದರು.

‘ಶಕ್ತಿ ಯೋಜನೆಗೂ ಮುನ್ನ ರಾಜ್ಯದಲ್ಲಿ ನಿತ್ಯ ಬಸ್ ಸೇವೆ ಪಡೆಯುತ್ತಿದ್ದವರ ಸಂಖ್ಯೆ ಸರಾಸರಿ 84 ಲಕ್ಷ ಇತ್ತು. ಈಗ 1.10 ಕೋಟಿಗೆ ತಲುಪಿದೆ. ಇದೂವರೆಗೆ 165 ಕೋಟಿ ಬಾರಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಸಾರಿಗೆ ಸಂಸ್ಥೆಗಳಿಗೆ ಶಕ್ತಿ ತುಂಬಿದ್ದು, ಹೆಚ್ಚಿನ ಬಸ್ ಕಲ್ಪಿಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದು ಹೇಳಿದರು.

‘5 ಗ್ಯಾರಂಟಿ ಯೋಜನೆಗಳು ಬರಿ ಚುನಾವಣೆ ಪ್ರಚಾರಕ್ಕೆ ಸೀಮಿತ ಎಂದು ಮಾಜಿ ಸಿಎಂ ಒಬ್ಬರು ಟೀಕಿಸಿದ್ದರು. ಇವತ್ತು ಐದು ಗ್ಯಾರಂಟಿಗಳನ್ನು ಯಶಸ್ವಿಯಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ಹಿಂದಿನ ಸರ್ಕಾರದ 4 ವರ್ಷಗಳ ಅವಧಿಯಲ್ಲಿ ಒಂದು ಬಸ್ ಖರೀದಿ ಮಾಡಿಲ್ಲ, ನೇಮಕಾತಿ ಸಹ ಜರುಗಿಸಿಲ್ಲ. ನಮ್ಮ ಸರ್ಕಾರ ಬಂದ ಕೂಡಲೇ ನೇಮಕಾತಿಗೆ ಚಾಲನೆ ಕೊಟ್ಟು, ಬಸ್ ಖರೀದಿಗೂ ಮುಂದಾಗಿದೆ. ಹಿಂದೆಲ್ಲ ಕಾರ್ಮಿಕರಿಗೆ ತಿಂಗಳು ಮುಗಿದು 20–25ನೇ ದಿನಕ್ಕೆ ಸಂಬಳ ಬರುತ್ತಿತ್ತು. ನಾವು ತಿಂಗಳ ಒಂದನೇ ತಾರೀಕಿಗೆ ಸಂಬಳ ಕೊಡುತ್ತಿದ್ದೇವೆ’ ಎಂದರು.

‘ಸಾರಿಗೆ ಸಂಸ್ಥೆಯಿಂದಾಗಿ ನಿಮಗೆ ಕೆಲಸ ಸಿಕ್ಕಿದೆ. ಸಂಸ್ಥೆಯನ್ನು ಬೆಳೆಸಿ ನೀವು ಬೆಳೆಯಿರಿ. ಪ್ರಯಣಿಕರಿಗೆ ಉತ್ತಮ ಸೇವೆಯನ್ನು ಕಲ್ಪಿಸಿ’ ಎಂದು ಹೊಸ ಸಿಬ್ಬಂದಿಗೆ ಸಲಹೆ ನೀಡಿದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಕಲ್ಯಾಣ ಕ್ರಾಂತಿ ಸಮಾವೇಶದಲ್ಲಿ ಕಲ್ಯಾಣ ಕರ್ನಾಟಕ ಭಾಗಕ್ಕೆ ನಾವು ನೀಡಿದ್ದ ಖಾಲಿ ಇರುವ 50,000 ಹುದ್ದೆಗಳ ಭರ್ತಿ ಆಶ್ವಾಸನೆಗೆ ಬದ್ಧರಾಗಿದ್ದೇವೆ. ಮುಂದಿನ ಆರು ತಿಂಗಳಲ್ಲಿ 15,000 ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಶುರುವಾಗಲಿದೆ. ಆ ಬಳಿಕ ಮತ್ತೆ 15 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಶಾಸಕರಾದ ಅಲ್ಲಮಪ್ರಭು ಪಾಟೀಲ, ಎಂ.ವೈ. ಪಾಟೀಲ, ‘ಕಾಡಾ’ ಅಧ್ಯಕ್ಷ ಎಂ.ಎ.ರಶೀದ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್ ಸಿಂಗ್ ಮೀನಾ, ಕೆಕೆಆರ್‌ಟಿಸಿಯ ಮುಖ್ಯ ಸಂಚಾರ ವ್ಯವಸ್ಥಾಪಕ ಸಂತೋಷ ಕುಮಾರ, ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಆನಂದ ಬಂದರಕಳ್ಳಿ, ಸಿಎಂಇ ಸಂತೋಷಕುಮಾರ ಗೊಗೋರೆ, ಉಪ ಸಿಎಂಇ ಮಲ್ಲಿಕಾರ್ಜುನ ದೇಗಲಮಡಿ, ವಿಭಾಗೀಯ ನಿಯಂತ್ರಣಾಧಿಕಾರಿಗಳಾದ ನಾರಾಯಣಪ್ಪ ಕುರುಬರ, ಎಸ್.ಜಿ. ಗಂಗಾಧರ, ಕಲಬುರಗಿ ವಿಭಾಗ–1ರ ಡಿಟಿಒ ಈಶ್ವರ ಹೊಸಮನಿ, ಡಿಎಂಇ ನಾಗರಾಜ ವಾರದ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಮಂಗಳವಾರ ನಡೆದ ಕೆಕೆಆರ್‌ಟಿಸಿಯ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು –ಪ್ರಜಾವಾಣಿ ಚಿತ್ರ
ಕಲಬುರಗಿಯಲ್ಲಿ ಮಂಗಳವಾರ ನಡೆದ ಕೆಕೆಆರ್‌ಟಿಸಿಯ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅಭ್ಯರ್ಥಿಗಳು –ಪ್ರಜಾವಾಣಿ ಚಿತ್ರ

ಜಯದೇವ ಸಂಸ್ಥೆಯೊಂದಿಗೆ ಒಪ್ಪಂದ

ಕೆಕೆಆರ್‌ಟಿಸಿಯ ಎಲ್ಲ ನೌಕರರಿಗೆ ಹೃದ್ರೋಗ ಕಾಯಿಲೆ ಸಂಬಂಧ ನಗದು ರಹಿತ ಚಿಕಿತ್ಸೆಗಾಗಿ ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ. ರಾಚಪ್ಪ ಹಾಗೂ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ವೈದ್ಯಕೀಯ ಅಧೀಕ್ಷಕ ಡಾ.ವೀರೇಶ ಪಾಟೀಲ ಅವರು ಒಪ್ಪಂದಕ್ಕೆ ಸಹಿ ಹಾಕಿದರು. ಸಚಿವರ ಸಮ್ಮುಖದಲ್ಲಿ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡರು. ಕರ್ತವ್ಯದ ವೇಳೆ ಮೃತಪಟ್ಟ ನೌಕರರ ಕುಟುಂಬಸ್ಥರಿಗೆ ಆಂತರಿಕ ಗುಂಪು ವಿಮೆ ಯೋಜನೆಯಡಿ ತಲಾ ₹10 ಲಕ್ಷದಂತೆ 10 ಜನರಿಗೆ ಒಟ್ಟು ₹1 ಕೋಟಿ ವಿಮೆ ಪರಿಹಾರದ ಚೆಕ್ ವಿತರಿಸಲಾಯಿತು. ಆ್ಯಪ್‌ ಬಿಡುಗಡೆ: ನಗರ ಭೂ ಸಾರಿಗೆ ನಿರ್ದೇಶನಾಲಯ ಮತ್ತು ಜಿಜ್ ಇಂಡಿಯಾ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾದ ‘ನಮ್ಮ ಕಲಬುರಗಿ ಸಾರಿಗೆ’ ಆ್ಯಪ್‌ ಬಿಡುಗಡೆ ಮಾಡಲಾಯಿತು. ನಗರ ಸಾರಿಗೆ ಬಸ್‍ಗಳ ಆಗಮನ ಮತ್ತು ನಿರ್ಗಮನ ಲೈವ್ ಟ್ರ್ಯಾಕ್ ರೂಟ್ ಮ್ಯಾಪ್ ಆ್ಯಪ್‌ನಲ್ಲಿ ನೋಡಬಹುದು.

ಉಸ್ತುವಾರಿ ಸಚಿವರಿಲ್ಲದೆ ನಡೆದ ಮೊದಲ ಕಾರ್ಯಕ್ರಮ

ಜಿಲ್ಲೆಯಲ್ಲಿ ನಡೆದ ಬಹುತೇಕ ದೊಡ್ಡ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಪಾಲ್ಗೊಂಡಿದ್ದರು. ಆದರೆ ಕೆಕೆಆರ್‌ಟಿಸಿಯಿಂದ ನಡೆದ ಚಾಲಕ ಮತ್ತು ಚಾಲಕ ಕಂ ನಿರ್ವಾಹಕರಿಗೆ ನೇಮಕಾತಿ ಆದೇಶ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಗೈರಾಗಿದ್ದರು. ಫೆಬ್ರುವರಿ 10ರಂದು ಜಿಮ್ಸ್‌ ಆವರಣದ ಅಪಘಾತ ಚಿಕಿತ್ಸಾ ಕೇಂದ್ರ (ಟ್ರಾಮಾ ಕೇರ್ ಸೆಂಟರ್) ಉದ್ಘಾಟನೆ ಕಾರ್ಯಕ್ರಮದಲ್ಲಿ ಕೊನೆಯ ಬಾರಿ ಭಾಗವಹಿಸಿದ್ದರು.

ಯಾರು ಏನಂದರು?

ನಮ್ಮದು ನಗದಿ ಸರ್ಕಾರ ಉದ್ರಿ ಸರ್ಕಾರ ಅಲ್ಲ. ನಾವು ಏನು ಹೇಳ್ತಿವೋ ಅದನ್ನೇ ಮಾಡತ್ತೀವಿ. ಕೇಂದ್ರ ಸರ್ಕಾರದ ಭರವಸೆಯ ಪ್ರತಿ ವರ್ಷ 2 ಕೋಟಿ ಉದ್ಯೋಗ ಯಾರಿಗಾದ್ರು ಸಿಕ್ತಾ? –ಬಿ.ಆರ್.ಪಾಟೀಲ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ಹೊಸದಾಗಿ ನೇಮಕವಾದವರು ಎಚ್ಚರಿಕೆಯಿಂದ ಬಸ್‌ಗಳನ್ನು ಚಲಾಯಿಸಿ. ಪ್ರಯಾಣಿಕರ ಜೀವ ಮತ್ತು ಜೀವನ ನಿಮ್ಮ ಕೈಯಲ್ಲಿದೆ. ಕುಡಿದು ಬಸ್ ಓಡಿಸಬೇಡಿ. –ತಿಪ್ಪಣ್ಣಪ್ಪ ಕಮಕನೂರ ವಿಧಾನಪರಿಷತ್ ಸದಸ್ಯ ಸಿಬ್ಬಂದಿ ನೇಮಕ ಹೊಸ ಬಸ್‌ಗಳ ಸೇರ್ಪಡೆಯಿಂದಾಗಿ ಶಕ್ತಿ ಯೋಜನೆಗೂ ಮುನ್ನ ಇದ್ದ 4028 ಬಸ್ ಶೆಡ್ಯೂಲ್‌ಗಳ ಸಂಖ್ಯೆ ಈಗ 4443ಕ್ಕೆ ಏರಿಕೆಯಾಗಿದೆ. –ಎಂ. ರಾಚಪ್ಪ ಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಸರ್ಕಾರಿ ನೌಕರಿ ಕನಸಿನ ಹುದ್ದೆಯಾಗಿತ್ತು. ಪಾರದರ್ಶಕದ ನೇಮಕಾತಿ ಮತ್ತು ಅತ್ಯುನ್ನತ ತಂತ್ರಜ್ಞಾನದ ಪರೀಕ್ಷೆಗಳನ್ನು ಎದುರಿಸಿ ನೌಕರಿ ಪಡೆದಿದ್ದೇವೆ. ಕುಟುಂಬವನ್ನು ಚೆನ್ನಾಗಿ ಸಾಕುತ್ತೇವೆ. –ಗುತನಗೌಡ ಕೆಂಬಾವಿ ಹೊಸ ಸಿಬ್ಬಂದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT