ಸೋಮವಾರ, ನವೆಂಬರ್ 29, 2021
20 °C

ಕೋಲಿ ಸಮಾಜ ಎಸ್ಟಿ ಸೇರ್ಪಡೆ ಶೀಘ್ರ; ಸಚಿವ ಈಶ್ವರಪ್ಪ ಹೇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಹಾಬಾದ್: ‘ರಾಜ್ಯದಲ್ಲಿನ ಕೋಲಿ ಸಮಾಜವನ್ನು ಎಸ್ಟಿಗೆ ಸೇರ್ಪಡೆ ಮಾಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು’ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ತೊನಸನಳ್ಳಿ (ಎಸ್) ಗ್ರಾಮದ ಅಲ್ಲಮಪ್ರಭು ಮಠದಲ್ಲಿ ಪೀಠಾಧಿಪತಿ ಮಲ್ಲಣ್ಣಪ್ಪ ಸ್ವಾಮೀಜಿ 60ನೇ ಜನ್ಮದಿನದ ಅಂಗವಾಗಿ ನಡೆದ ಧರ್ಮಸಭೆ ಉದ್ಘಾಟಿಸಿ ಮಾತನಾಡಿದರು.

‘ಕೋಲಿ ಸಮಾಜ ಎಸ್ಟಿ ಸೇರ್ಪಡೆಯ ರಾಜ್ಯದ ಪ್ರಸ್ತಾವನೆಯನ್ನು ಕೇಂದ್ರವು ನಾಲ್ಕು ಬಾರಿ ತಿರಸ್ಕರಿಸಿದೆ. ಈ ಬಗ್ಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನಕುಮಾರ ಕಟೀಲ್ ಅವರು ಕೇಂದ್ರಕ್ಕೆ ಸಮರ್ಪಕ ಮಾಹಿತಿ ನೀಡಿ, ಸೇರ್ಪಡೆಯ ಬಗ್ಗೆ ಮನವರಿಕೆ ಮಾಡಿದ್ದಾರೆ. ಶೀಘ್ರದಲ್ಲಿ ಅನುಷ್ಠಾನಕ್ಕೆ ಬರಲಿದೆ’ ಎಂದರು.

‘ಮಠಕ್ಕೆ ಭೇಟಿ ನೀಡಿ, ಇಲ್ಲಿನ ಭಕ್ತರನ್ನು ನೋಡಿದ ಬಳಿಕ ಜೀವ ನಪರ್ಯಂತ ಸಮಾಜ ಸೇವೆ ಮಾಡ ಬೇಕೆಂಬ ಸ್ಪೂರ್ತಿ ನನ್ನಲ್ಲಿ ಮೂಡಿದೆ. ಅಧ್ಯಾತ್ಮ ರಾಷ್ಟ್ರವಾದ ಭಾರತಕ್ಕೆ ಹಲವು ದೇಶದ ಜನರು ಶಾಂತಿ ಹರಸಿ ಬರುತ್ತಿದ್ದಾರೆ. ಸಾಧು, ಸಂತರಿಂದಾಗಿ ಇಂತಹ ಶಕ್ತಿ ಬಂದಿದೆ. ಪವಿತ್ರ ಸಂಸ್ಕೃತಿಯನ್ನು ಉಳಿಸುವ ಕೆಲಸವನ್ನು ಒಗ್ಗೂಡಿ ಮಾಡಬೇಕಿದೆ’ ಎಂದರು.

ಶಾಸಕ ಬಸವರಾಜ ಮತ್ತಿಮೂಡ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿಗೆ  ₹3 ಕೋಟಿ ಅನುದಾನ ನೀಡಿ ಬರಬೇಕು ಎಂದಿದ್ದೆ. ಸಚಿ ವರ  ಬಂದಿದ್ದರಿಂದ ನಾನೂ ಬರಬೇಕಾ ಯಿತು. ಶೀಘ್ರದಲ್ಲಿ ಕುಡಿಯುವ ನೀರಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಹೇಳಿದರು.

ಮಲ್ಲಣ್ಣಪ್ಪ ಸ್ವಾಮೀಜಿ ಮಾತನಾಡಿ, ಈ ಹಿಂದೆ ವಿಠ್ಠಲ ಹೇರೂರ ಅವರು ಹಿಂದುಳಿದ ವರ್ಗಗಳಿಗೆ ನಾಯಕರಾಗಿದ್ದರು. ಈಗ ಈಶ್ವರಪ್ಪ ಅವರು ಕೃಷ್ಣನಂತೆ ಮುಂದೆ ಹಿಂದುಳಿದ ವರ್ಗ ಮುನ್ನಡೆಸಬೇಕು ಎಂದರು.

ಈ ವೇಳೆ ‘ಬಯಲು ಬೆಡಗು’ ಮತ್ತು ‘ಅಮೃತ ಧಾರೆ’ ಪುಸ್ತಕ ಬಿಡುಗಡೆ ಮಾಡಲಾಯಿತು. ಅಹಿಂದ ಸಂಸ್ಥಾಪಕ ಅಧ್ಯಕ್ಷ ಕೆ.ಮುಕುಡಪ್ಪ, ರಾಷ್ಟ್ರೀಯ ಕೋಲಿ ಸಮಾಜದ ಅಧ್ಯಕ್ಷ ರಮೇಶ ದಾದಾ ಪಾಟೀಲ ಮಾತನಾಡಿದರು.

ವಿಧಾನಪರಿಷತ್ ಸದಸ್ಯ ಸುನೀಲ್ ವಲ್ಯಾಪುರೆ, ಕೃಷ್ಣಾ ಕಾಡಾ ಅಧ್ಯಕ್ಷ ಶರಣಪ್ಪ ತಳವಾರ, ಜಿ.ಪಂ ಸದಸ್ಯ ಶಿವಾನಂದ ಪಾಟೀಲ, ಮಾಜಿ ಸಂಸದ ಕೆ.ವಿರುಪಾಕ್ಷಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರ, ಮುಖಂಡರಾದ ಧರ್ಮಣ್ಣ ಇಟಗಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ರಾಜಗೋಪಾಲರೆಡ್ಡಿ, ಭೀಮಣ್ಣ ಸಾಲಿ, ಬಸವರಾಜ ಪಾಟೀಲ ನರಬೋಳಿ, ಕನಕಪ್ಪ ದಂಡಗುಲಕರ್, ಶಂಕರ ಚವ್ಹಾಣ್, ಬಿ.ಮೌಲಾಲಿ ಬಳ್ಳಾರಿ, ತಿಪ್ಪಣ್ಣ ರೆಡ್ಡಿ, ಅಣವೀರ ಇಂಗಿ ಶೆಟ್ಟಿ, ಸಂಜಯ ವಾಡೇಕರ್, ನಿಂಗಪ್ಪ ಹುಳಗೋಳ, ಮಲ್ಲಣ್ಣ ಸಣಮೋ, ನಾಗೇಂದ್ರ ಬೊಮ್ಮನಳ್ಳಿ, ಸುಷ್ಮಾ ನಿಂಗಬೊ, ಮಲ್ಲಿಕಾರ್ಜುನ ಇಟಗಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು