ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬರಕ್ಕೆ ಬಡವಾದ ತೊಗರಿ ಕಣಜ: ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಆವರಿಸುವ ಬರದ ಛಾಯೆ

Published 5 ಡಿಸೆಂಬರ್ 2023, 6:43 IST
Last Updated 5 ಡಿಸೆಂಬರ್ 2023, 6:43 IST
ಅಕ್ಷರ ಗಾತ್ರ

ಕಲಬುರಗಿ: ತೊಗರಿಯ ಕಣಜ ಕಲಬುರಗಿ ಜಿಲ್ಲೆಗೆ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರದ ಛಾಯೆ ಆವರಿಸಿಕೊಳ್ಳುವುದು ಸಾಮಾನ್ಯ ವಾಡಿಕೆ. ಬರಪೀಡಿತ ಹಣೆಪಟ್ಟಿ ಅಂಟಿಸಿಕೊಂಡ ಜಿಲ್ಲೆಯ ರೈತರ ಬದುಕು ಸಂಕಷ್ಟದ ಸುಳಿಯಲ್ಲಿ ಸಿಲುಕಿದೆ.

ಜಿಲ್ಲೆಯಲ್ಲಿ ವಾರ್ಷಿಕ ಸುಮಾರು 842 ಮಿ.ಮೀ ಮಳೆಯಾಗುತ್ತದೆ. 3.95 ಲಕ್ಷ (ಶೇ 89.85ರಷ್ಟು) ರೈತರು ಮಳೆಯನ್ನೇ ನಂಬಿಕೊಂಡು 9.46 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುತ್ತಾರೆ. ಆದರೆ, ಮಾನ್ಸೂನ್ ಮಾರುತಗಳ ಸತತ ವೈಫಲ್ಯವು ರೈತರನ್ನು ಕಂಗಾಲಾಗಿಸಿದೆ.

ಭಾರತೀಯ ಹವಾಮಾನ ಇಲಾಖೆಯ ಮೌಸಂ ಜರ್ನಲ್‌ನ 2011ರ ಜುಲೈ ಸಂಚಿಕೆಯ ವರದಿಯಲ್ಲಿ 1961ರಿಂದ 2008ರ ನಡುವೆ ಬಿದ್ದ ಮಳೆಯನ್ನು ಪರಿಶೀಲಿಸಿತ್ತು. ಪ್ರತಿ ಐದು ವರ್ಷಗಳಲ್ಲಿ ಮಳೆಯ ಏರಿಳಿತ ಆಗಿರುವುದಾಗಿ ಹೇಳಿತ್ತು.

1966ರಿಂದ 1976ರ ನಡುವೆ ಮಳೆಯ ಪ್ರಮಾಣ ಇಳಿಕೆಯಾಗಿತ್ತು. 1972ರಲ್ಲಿ ಅತ್ಯಂತ ಕನಿಷ್ಠ 220 ಮಿ.ಮೀ ಮಳೆಯಾಗಿ ಬೀಕರ ಬರಗಾಲ ಸಂಭವಿಸಿತ್ತು. 1977ರಿಂದ 1993ರವರೆಗೆ ಮಳೆ ಹೆಚ್ಚಳ ಕಂಡಿದ್ದರೆ 1994ರಿಂದ 1998ರವರೆಗೆ ಇಳಿಕೆಯಾಗಿತ್ತು. 1999ರಲ್ಲಿ ಸ್ವಲ್ಪ ಮಳೆ ಹೆಚ್ಚಾಗಿದ್ದರೂ 2002ರಿಂದ 2008ರವರೆಗೆ ಮಳೆಯ ಕುಸಿತ ಮುಂದುವರಿದಿತ್ತು.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ, 2013ರಲ್ಲಿ ಹೆಚ್ಚಳವಾದ ಮಳೆಯು 2015ರಲ್ಲಿ ಕುಸಿತವಾಗಿತ್ತು. 2018 ಮತ್ತು 2019ರಲ್ಲಿ ಕ್ರಮವಾಗಿ ಶೇ 39 ಹಾಗೂ 20ರಷ್ಟು ಕುಸಿತ ಕಂಡಿತ್ತು. 2020ರಲ್ಲಿ ಶೇ 39ರಷ್ಟು ಏರಿಕೆಯಾಗಿ 2022ರವರೆಗೆ ಉತ್ತಮ ಮಳೆಯಾಗಿತ್ತು. ಆದರೆ, 2023ಕ್ಕೆ ಮಳೆಯ ಪ್ರಮಾಣ ಕುಸಿದು ಬರ ಆವರಿಸಿದೆ.

ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆಯಲ್ಲಿಯೂ ಪ್ರತಿ ಮೂರು ವರ್ಷಗಳಿಗೆ ಒಮ್ಮೆ ಬರಗಾಲ ಸಂಭವಿಸುವುದು ಸಾಮಾನ್ಯ. ಹೀಗಾಗಿ, ಕಲಬುರಗಿಯಂತಹ ಜಿಲ್ಲೆಗೆ ಬರ ನಿರ್ವಹಣೆ ಬಹಳ ಮುಖ್ಯ ಎಂದು ಸೂಚಿಸಿದೆ.

ಜಿಲ್ಲೆಯ ಜಾನುವಾರು, ಕೃಷಿಕರು, ಕೃಷಿ ಕೂಲಿಕಾರ್ಮಿಕರು ಪದೇ ಪದೇ ಬರಗಾಲಕ್ಕೆ ತುತ್ತಾಗುತ್ತಿದ್ದರು. ಸಂಕಷ್ಟಗಳನ್ನು ತಗ್ಗಿಸುವಂತಹ ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಇದುವರೆಗೂ ಸಾಧ್ಯವಾಗಿಲ್ಲ.

ಕೌನ್ಸಿಲ್ ಆನ್ ಎನರ್ಜಿ, ಎನ್ವಿರಾನ್ಮೆಂಟ್ ಆಂಡ್ ವಾಟರ್‌ನ (ಸಿಇಇಡಬ್ಲ್ಯು) ‘ಭಾರತದ ಹವಾಮಾನ ದುರ್ಬಲತೆ ನಕ್ಷೆ’ ಅಧ್ಯಯನದ ಅನ್ವಯ, ದೇಶದ ಅಗ್ರ 20 ಬರಪೀಡಿತ ಜಿಲ್ಲೆಗಳ ಪೈಕಿ ಕಲಬುರಗಿ ಜಿಲ್ಲೆಯು 0.7 ಸೂಚ್ಯಂಕದೊಂದಿಗೆ 18ನೇ ಸ್ಥಾನ ಪಡೆದಿದೆ. ಭಾರತದ 272 ಬರಗಾಲದ ಹಾಟ್‌ಸ್ಪಾಟ್‌ ಜಿಲ್ಲೆಗಳಲ್ಲಿ ಕಲಬುರಗಿ 38ನೇ ಸ್ಥಾನ ಪಡೆದಿದ್ದು, ರಾಜ್ಯದಲ್ಲಿ ಅಗ್ರ ಸ್ಥಾನ ಲಭಿಸಿದೆ. ಇದು ಜಿಲ್ಲೆಯಲ್ಲಿನ ಹವಾಮಾನ ವೈಪರೀತ್ಯವನ್ನು ಸೂಚಿಸುತ್ತದೆ.

‘ಕಲಬುರಗಿ ಸೇರಿದಂತೆ ಸುತ್ತಲಿನ ಜಿಲ್ಲೆಗಳ ಮೇಲೆ ಹವಾಮಾನದ ವೈಪರೀತ್ಯದ ದುಷ್ಟಪರಿಣಾಮ ಹೆಚ್ಚಾಗುತ್ತಿದೆ. ಕಲ್ಯಾಣ ಕರ್ನಾಟಕ ಭಾಗದ ಹಸಿರೀಕರಣವನ್ನು ಹೆಚ್ಚಿಸುವ ದಿರ್ಘಾವಧಿಯ ಕ್ರಮಗಳನ್ನು ತಕ್ಷಣಕ್ಕೆ ಜಾರಿಗೆ ತರದೆ ಇದ್ದರೇ ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಜಿಲ್ಲಾಡಳಿತವು ಪದೇ ಪದೇ ಸಂಭವಿಸುವ ಬರಗಾಲ ನಿರ್ವಹಣೆಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು’ ಎನ್ನುತ್ತಾರೆ ನಿವೃತ್ತ ಪ್ರಾಧ್ಯಾಪಕಿ ಸಂಗೀತಾ ಕಟ್ಟಿಮನಿ.

2 ವರ್ಷ ಸತತ ಬರಗಾಲ ಬಿದ್ದರೆ ಮುಂದಿನ ನಾಲ್ಕೈದು ವರ್ಷಗಳು ವಿಪರೀತವಾಗಿ ಮಳೆಯಾಗುವುದು ಜಿಲ್ಲೆಯಲ್ಲಿ ಸಾಮಾನ್ಯ. ಜಿಲ್ಲೆಯಲ್ಲಿ 100 ಟಿಎಂಸಿ ಅಡಿ ನೀರು ನಿಲ್ಲಿಸುವಂತಹ ದೊಡ್ಡ ನದಿಗಳು ಇಲ್ಲ. ಕಡಿಮೆ ನೀರು ಬೇಡುವ ತೊಗರಿಯಂತಹ ಬೆಳೆಗಳೇ ಸೂಕ್ತ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಮಳೆ ಬರಕ್ಕೆ ನಲುಗಿದ ಬೆಳೆಗಳು
ಪ್ರಸಕ್ತ ವರ್ಷದ ಮುಂಗಾರು ಹಂಗಾಮಿನಲ್ಲಿ ಬಿತ್ತನೆಯಾದ 8.72 ಲಕ್ಷ ಹೆಕ್ಟೇರ್ ಪೈಕಿ 2.76 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಳೆದ ವರ್ಷ ವಿಪರೀತ ಮಳೆ ಹಾಗೂ ನೆಟೆ ರೋಗದಿಂದಾಗಿ 1.50 ಲಕ್ಷ ಹೆಕ್ಟೇರ್‌ ಪ್ರದೇಶದ ತೊಗರಿಗೆ ಬೆಳೆ ಹಾನಿಯಾಗಿತ್ತು. ಪ್ರತಿ ವರ್ಷ ಒಂದಲ್ಲಾ ಒಂದು ಪ್ರಕೃತಿ ವಿಕೋಪದಿಂದ ಬೆಳೆ ಕಳೆದುಕೊಳ್ಳುವ ರೈತರು ತಲೆಯ ಮೇಲೆ ಕೈಹೊತ್ತು ಕುಳಿತಿದ್ದಾರೆ. ಬರದ ಪರಿಸ್ಥಿತಿಯಲ್ಲಿ ನೆರವಿಗೆ ಬರಬೇಕಾದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರೋಪ–ಪ್ರತ್ಯಾರೋಪಗಳಲ್ಲಿ ಮುಳುಗಿವೆ. ಬರ ಪರಿಹಾರದ ಹಣ ಕೊಡಲು ಮುಂದೆ ಬಾರದೆ ಒಬ್ಬರತ್ತ ಇನ್ನೊಬ್ಬರು ಬೊಟ್ಟು ಮಾಡುತ್ತಿದ್ದಾರೆ. ಮಳೆಯ ಜೂಜಾಟದಲ್ಲಿ ಸಿಲುಕಿದೆ ರೈತರು ಬಿತ್ತನೆಗೆ ಮಾಡಿದ ಖರ್ಚು ವಾಪಸ್ ಬಾರದೆ ಆಕಾಶ ನೋಡುವಂತಾಗಿದೆ ಎನ್ನುತ್ತಾರೆ ರೈತ ಮುಖಂಡರು.
‘ಜಾನುವಾರು ಮೇಲೆ ನೇರ ಪರಿಣಾಮ’
‘ಬರಗಾಲ ಸಂಭವಿಸಿದರೆ ಅದರ ಮೊದಲ ಪರಿಣಾಮ ಜಾನುವಾರು ಮತ್ತು ತೋಟಗಾರಿಕೆ ಬೆಳೆಗಳ ಮೇಲಾಗುತ್ತದೆ’ ಎಂದು ಕೃಷಿ ಜಂಟಿ ನಿರ್ದೇಶಕ ಸಮದ್ ಪಟೇಲ್ ‘ಪ್ರಜಾವಾಣಿ’ಗೆ ತಿಳಿಸಿದರು. ‘ನೀರು ಮೇವು ಸಿಗದೆ ಇದ್ದಾಗ ರೈತರು ಜಾನುವಾರುಗಳನ್ನು ಅನಿವಾರ್ಯವಾಗಿ ಮಾರಬೇಕಾಗುತ್ತದೆ. ಅಂತರ್ಜಲದ ಮಟ್ಟ ಕುಸಿದು ತೋಟಗಾರಿಕೆ ಬೆಳೆಗಳು ಒಣಗಿದರೆ ಒಣ ಬೇಸಾಯದಂತೆ ಬೆಳೆಗಳನ್ನು ಅರಗಿ ಬೇರೆ ಬೆಳೆಗಳನ್ನು ಬಿತ್ತನೆ ಮಾಡಲು ಬರುವುದಿಲ್ಲ. ಬರದ ನಷ್ಟ ತಡೆಯಲು ಸಮಗ್ರ ಕೃಷಿ ಹಾಗೂ ಅಲ್ಪಾವಧಿಯ ಬೆಳೆಗಳ ಮೊರೆ ಹೋಗಬೇಕು’ ಎಂದರು.
‘1972ರಲ್ಲಿ ಅನ್ನದ ಬರಗಾಲ’
‘1972ರಲ್ಲಿ ಭಾರಿ ಬರಗಾಲ ಬಿದಿತ್ತು. ತಿನ್ನಲು ಅನ್ನ ಸಹ ಸಿಗುತ್ತಿರಲಿಲ್ಲ. ಆ ಬಳಿಕ ಹಲವು ಬರಗಾಲ ಬಿದ್ದರೂ ಕುಡಿಯುವ ನೀರಿನ ಸಮಸ್ಯೆಯಾಗಿತ್ತು’ ಎನ್ನುತ್ತಾರೆ ಚಿತ್ತಾಪುರದ ಹಿರಿಯ ರೈತ ಸಾಯಬಣ್ಣ.  ‘72ರ ಬರಗಾಲದಲ್ಲಿ ಅನ್ನ ಸಿಗದೆ ಮುಟ್ಟಿ ಸೊಪ್ಪುತಂದು ಉಪ್ಪು ಹಾಕಿ ಕುದಿಸಿ ಮುಟ್ಟಿಗಿ ಮಾಡಿಕೊಂಡು ತಿನ್ನುತ್ತಿದ್ದೆವು. ಮಳಮಂಡಿ ಸೊಪ್ಪು ಹರಿದು ತಂದು ಅದರಲ್ಲಿನ ತೌಡು ತೆಗೆದು ಮತ್ತು ಇಗಳಿಯ ಗಂಜಿ ಮಾಡಿಕೊಂಡು ಕುಡಿಯುತ್ತಿದ್ದೆವು’ ಎಂದು ಸ್ಮರಿಸಿದರು.
‘ಬರ ಸಂಕಟ’
ಸರಣಿ ಶುರು ಮುಂಗಾರು–ಹಿಂಗಾರು ಮಳೆಯ ಕುಸಿತದಿಂದ ಕಲಬುರಗಿ ತೀವ್ರ ಬರಪೀಡಿತ ಜಿಲ್ಲೆಯೆಂದು ಘೋಷಣೆಯಾಗಿದೆ. ಬರದಿಂದಾಗಿ ಕುಡಿಯುವ ನೀರಿಲ್ಲದೆ ಪರಿತಪಿಸುತ್ತಿರುವ ಜಾನುವಾರು ನೀರಿಲ್ಲದೆ ಒಳಗುತ್ತಿರುವ ಬೆಳೆಗಳು ಕುಡಿಯುವ ನೀರಿಗಾಗಿ ಕಿ.ಮೀ. ದೂರ ನಡೆಯುವ ಜನರ ಮೇಲೆ ಬೆಳಕು ಚೆಲ್ಲುವ ‘ಬರ ಸಂಕಟ’ ಸರಣಿ ಇಂದಿನಿಂದ ಶುರುವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT