ಸೋಮವಾರ, ಮೇ 16, 2022
27 °C
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಭಾಷೆ ಮತ್ತು ಶಿಕ್ಷಣ ಕುರಿತು ವಿಚಾರ ಸಂಕಿರಣ

‘ಹೈ–ಕ ವಿದ್ಯಾರ್ಥಿಗಳು ಹೊರ ಜಗತ್ತು ಕಾಣಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಹೈದರಾಬಾದ್‌ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಶಿಕ್ಷಣ ಮುಗಿದ ಬಳಿಕ ಉದ್ಯೋಗಾಕಾಶ ಇಲ್ಲವೆಂದು ಇಲ್ಲಿಯೇ ಉಳಿದು ಕೊರಗುವ ಬದಲು ಅವಕಾಶ ಇದ್ದಲ್ಲಿ ಹೋಗಲು ತಯಾರಾಗಬೇಕು. ಅಂದಾಗಲೇ ಹೊರಜಗತ್ತು ತಿಳಿಯಲಿದೆ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ಆರ್‌. ನಿರಂಜನ ಅಭಿಪ್ರಾಯಪಟ್ಟರು.

ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ಕಟ್ಟಡದಲ್ಲಿ ಗುಲಬರ್ಗಾ ವಿ.ವಿ. ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಹಾಗೂ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಗುರುವಾರದಿಂದ ಆರಂಭವಾದ ಎರಡು ದಿನಗಳ ಭಾಷೆ ಮತ್ತು ಶಿಕ್ಷಣ ಕುರಿತ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ವಿದ್ಯೆ ಗಳಿಸಿದ ಬಳಿಕ ತಕ್ಕುದಾದ ಉದ್ಯೋಗವನ್ನೂ ನಾವು ಹುಡುಕಬೇಕು. ಇಲ್ಲಿ ಅಂತಹ ಉದ್ಯೋಗ ಇಲ್ಲ ಎಂದಾದಾಗ ಬೇರೆಡೆ ತೆರಳುವ ಮೂಲಕ ಬದಲಾವಣೆಗೆ ನಮ್ಮನ್ನು ತೆರೆದುಕೊಳ್ಳಬೇಕು’ ಎಂದರು.

‘ಪ್ರಾಧ್ಯಾಪಕರು ಮಾಡುವ ಪಾಠ ಬರೀ ರ‍್ಯಾಂಕ್‌ ವಿದ್ಯಾರ್ಥಿಗಷ್ಟೇ ಅರ್ಥವಾಗುವಂತಿರಬಾರದು. ಕನಿಷ್ಠ ಅಂಕ ಪಡೆಯುವ ವಿದ್ಯಾರ್ಥಿಗೂ ಅರ್ಥವಾಗಬೇಕು. ಸಹಾಯಕ ಪ್ರಾಧ್ಯಾಪಕ, ಸಹ ಪ್ರಾಧ್ಯಾಪಕ ಹಾಗೂ ಪ್ರಾಧ್ಯಾಪಕರು ಮಾಡುವ ಪಾಠ ಒಂದೇಯಾದರೂ ಸಹಾಯಕ ಪ್ರಾಧ್ಯಾಪಕರು ಮಾಡುವ ಪಾಠಕ್ಕೂ, ಪ್ರಾಧ್ಯಾಪಕರು ಮಾಡುವ ಪಾಠಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಏಕೆಂದರೆ, ಅಷ್ಟು ವರ್ಷಗಳ ಅನುಭವ ಹಾಗೂ ಸೇವಾ ಹಿರಿತನ ಪ್ರಾಧ್ಯಾಪಕರ ಪಾಠ ಮಾಡುವ ಶೈಲಿಯನ್ನು ಇನ್ನಷ್ಟು ವಿದ್ಯಾರ್ಥಿ ಸ್ನೇಹಿಯಾಗಿಸುತ್ತದೆ’ ಎಂದು ಹೇಳಿದರು.

‘ಜಾಗತಿಕ ಶಿಕ್ಷಣ ಪದ್ಧತಿಗೂ, ದೇಶದ ಶೈಕ್ಷಣಿಕ ಪದ್ಧತಿಗೂ ಸಾಕಷ್ಟು ವ್ಯತ್ಯಾಸವಿದೆ. ಇತ್ತೀಚೆಗೆ ನಡೆದ ಸಮೀಕ್ಷೆಯೊಂದರಲ್ಲಿ ವಿಶ್ವದ 100 ಅತ್ಯುತ್ತಮ ವಿದ್ಯಾಸಂಸ್ಥೆಗಳ ಪೈಕಿ ದೇಶದ ಯಾವೊಂದು ಸಂಸ್ಥೆಯೂ ಸ್ಥಾನ ಪಡೆದಿಲ್ಲ. ಹೀಗಾಗಿಯೇ, ಪ್ರತಿ ವರ್ಷ ಸುಮಾರು 50ರಿಂದ 60 ಸಾವಿರ ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕೆ ವಿದೇಶಕ್ಕೆ ತೆರಳುತ್ತಾರೆ’ ಎಂದು ನಿರಂಜನ ತಿಳಿಸಿದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಸಚಿವ ಮುಷ್ತಾಕ್‌ ಅಹ್ಮದ್‌ ಪಟೇಲ್‌ ಮಾತನಾಡಿ, ‘ತಂತ್ರಜ್ಞಾನವು ಎಲ್ಲ ಬಗೆಯ ಜ್ಞಾನಶಾಖೆಗಳನ್ನೂ ಹತ್ತಿರಕ್ಕೆ ತಂದಿದೆ. ಕೊರಿಯನ್‌, ಫ್ರೆಂಚ್‌ ಭಾಷೆಗಳನ್ನೂ ಕ್ಷಣಾರ್ಧದಲ್ಲಿ ಭಾಷಾಂತರ ಮಾಡುವ ವ್ಯವಸ್ಥೆ ಮಾಹಿತಿ ತಂತ್ರಜ್ಞಾನದ ಕ್ರಾಂತಿಯಿಂದಾಗಿ ನಮಗೆ ಲಭ್ಯವಾಗಿದೆ. ಆದಾಗ್ಯೂ, ಪ್ರಾಥಮಿಕ ಹಂತದ ಶಿಕ್ಷಣ ಮಾತೃಭಾಷೆಯಲ್ಲಿಯೇ ಆಗುವುದು ಉತ್ತಮ. ಇದರಿಂದಾಗಿ ಮುಂದೆ ಬೇರೆ ಭಾಷೆಯ ಮೇಲೆ ಹಿಡಿತ ಸಾಧಿಸಲು ಅನುಕೂಲವಾಗುತ್ತದೆ’ ಎಂದರು.

ಗುಲಬರ್ಗಾ ವಿ.ವಿ. ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕಿ ಡಾ.ಜಯಶ್ರೀ ದಂಡೆ, ‘ಮೊದಲೆಲ್ಲ ಪ್ರಾಥಮಿಕ ಹಂತದಲ್ಲೇ ಭದ್ರ ಬುನಾದಿ ಸಿಗುತ್ತಿತ್ತು. ಇದರಿಂದಾಗಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪಾಠ ಮಾಡುವ ನಮಗೆ ಅವರಿಗೆ ಇನ್ನಷ್ಟು ಅಧ್ಯಯನ ಮಾಡಿಸಲು ನೆರವಾಗುತ್ತಿತ್ತು. ಆದರೆ, ಇಂದು ಪ್ರಾಥಮಿಕ ಹಂತದಲ್ಲೇ ಸರಿಯಾದ ಪಾಠಗಳು ನಡೆಯುತ್ತಿಲ್ಲ. ವಾಕ್ಯದಲ್ಲಿ ವಿಭಕ್ತಿ ಪ್ರತ್ಯಯಗಳ ಬಳಕೆಯೂ ವಿದ್ಯಾರ್ಥಿಗಳಿಗೆ ಗೊತ್ತಾಗುತ್ತಿಲ್ಲ’ ಎಂದು ವಿಷಾದಿಸಿದರು.

ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಕನ್ನಡ ಉಪಕ್ರಮಗಳು ವಿಭಾಗದ ಸಹ ನಿರ್ದೇಶಕ ಪ್ರೊ.ಎಸ್‌.ವಿ. ಮಂಜುನಾಥ್‌ ವಿಚಾರ ಸಂಕಿರಣ ನಡೆಸಿಕೊಟ್ಟರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು