ಭಾನುವಾರ, 25 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ | ತುಂಬಿ ತುಳುಕುವ ಬಸ್‌ಗಳು: ಹೆಚ್ಚುವರಿ ಟ್ರಿಪ್‌ಗೆ ಬೇಡಿಕೆ

Published 1 ಜನವರಿ 2024, 6:50 IST
Last Updated 1 ಜನವರಿ 2024, 6:50 IST
ಅಕ್ಷರ ಗಾತ್ರ

ಕಲಬುರಗಿ: ಮಹಿಳಾ ಸಬಲೀಕರಣದ ಹೆಜ್ಜೆಯಾಗಿ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆಯಿಂದಾಗಿ ಬಸ್‌ಗಳಲ್ಲಿ ಪ್ರಯಾಣಿಸುವ ಮಹಿಳೆಯರ ಸಂಖ್ಯೆ ಹೆಚ್ಚಾಗಿದ್ದು, ದೂರದ ಊರುಗಳಿಗೂ ಗಂಟೆಗಟ್ಟಲೇ ನಿಂತುಕೊಂಡೇ ಸಂಚರಿಸಬೇಕಾದ ಅನಿವಾರ್ಯತೆ ಬಂದೊದಗಿದೆ.

ಅದರಲ್ಲೂ ಬೆಳಿಗ್ಗೆ ಶಾಲೆ, ಕಾಲೇಜು, ಕಚೇರಿ, ಮಾರುಕಟ್ಟೆ ಸೇರಿದಂತೆ ಇತರೆ ದೈನಂದಿನ ಕೆಲಸಗಳಿಗೆ ತೆರಳುವವರು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಸಾರಿಗೆಯನ್ನೇ ನೆಚ್ಚಿಕೊಂಡಿದ್ದು, ಕಂಡಕ್ಟರ್ ಕಾಲಿಡಲೂ ಜಾಗ ಇಲ್ಲದಷ್ಟು ಬಸ್‌ಗಳು ಭರ್ತಿಯಾಗುತ್ತಿವೆ. ಎಷ್ಟೋ ಸಲ ಸೀಟು ಹಿಡಿಯಲು ಮಹಿಳೆಯರ ಮಧ್ಯೆಯೇ ಜಗಳಗಳು ನಡೆದ ಉದಾಹರಣೆಗಳೂ ಇವೆ. 

ಕಲಬುರಗಿಯಿಂದ ಯಾದಗಿರಿ, ಬೀದರ್, ಸೇಡಂ, ಜೇವರ್ಗಿ, ಶಹಾಪುರಕ್ಕೆ ಸಂಚರಿಸುವ ಜನ ತುಸು ಜಾಸ್ತಿ. ಬಸ್‌ಗಳ ರಷ್ ನೋಡಿದ ಮಹಿಳೆಯರೇ ಉಚಿತ ಪ್ರಯಾಣವನ್ನು ಬಿಟ್ಟು ಅಂತರರಾಜ್ಯ ಬಸ್‌ಗಳಲ್ಲಿ ಸಂಚರಿಸುವುದೂ ನಡೆದಿದೆ. ಹಣ ನೀಡಿ ಟಿಕೆಟ್ ಪಡೆದರೂ ಅಲ್ಲಿಯೂ ಸೀಟುಗಳು ಸಿಗುವುದು ದುರ್ಲಭವಾಗಿದೆ.

ಅದರಲ್ಲೂ ನಿತ್ಯ ಗ್ರಾಮೀಣ ಭಾಗದಿಂದ ತಾಲ್ಲೂಕು ಹಾಗೂ ಜಿಲ್ಲಾ ಕೇಂದ್ರದ ಶಾಲಾ, ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳ ಗೋಳು ಹೇಳತೀರದಾಗಿದೆ. ಬೆಳಿಗ್ಗೆ ಹಳ್ಳಿಯಿಂದ ನಗರಕ್ಕೆ ಬರುವ ಹಾಗೂ ಸಂಜೆಯ ವೇಳೆಗೆ ನಗರದಿಂದ ಹಳ್ಳಿಗಳಿಗೆ ಹೋಗುವ ಬಸ್‌ಗಳು ಭರ್ತಿಯಾಗಿರುತ್ತವೆ. ಇದರಿಂದಾಗಿ ಹತ್ತಾರು ಕಿಲೋ ಮೀಟರ್ ದೂರವನ್ನು ನಡೆದುಕೊಂಡೇ ಕ್ರಮಿಸಬೇಕಿದೆ ಎಂದು ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.

ಬಸ್‌ ಪ್ರಯಾಣಿಕರ ಸಂಖ್ಯೆ ಬರೀ ಶಕ್ತಿ ಯೋಜನೆಯ ಬಳಿಕವಷ್ಟೇ ಹೆಚ್ಚಾಗಿಲ್ಲ. ಕೊರೊನಾ ಸಂದರ್ಭದಲ್ಲಿ ನಗರ ಪ್ರದೇಶಗಳಲ್ಲಿ ಹೆಚ್ಚು ಉದ್ಯೋಗಾವಕಾಶಗಳು ಇರಲಿಲ್ಲ. ಹೀಗಾಗಿ, ಯಾರೂ ನಗರಗಳತ್ತ ಬರುತ್ತಿರಲಿಲ್ಲ. ಇದೀಗ ವ್ಯಾಪಾರ ವಹಿವಾಟು ಹೆಚ್ಚಾಗಿದ್ದು, ಕಟ್ಟಡ ನಿರ್ಮಾಣ ಚಟುವಟಿಕೆಗಳೂ ಗರಿಗೆದರಿವೆ. ಹೀಗಾಗಿ ಗ್ರಾಮಗಳಿಂದ ಕಟ್ಟಡ ಕೆಲಸಕ್ಕಾಗಿ ಜನರು ಬರುತ್ತಿದ್ದಾರೆ. ಅದಕ್ಕೆ ತಕ್ಕಂತೆ ಸಾರಿಗೆ ಸೌಲಭ್ಯ ಒದಗಿಸಬೇಕಿತ್ತು. ಆದರೆ, ಬಹುತೇಕ ಗ್ರಾಮಗಳಿಂದ ಬಸ್‌ಗಳು ಇನ್ನೂ ಮೊದಲಿದ್ದಷ್ಟು ಟ್ರಿಪ್‌ಗಳೇ ಹೋಗಿ ಬರುತ್ತಿವೆ. ರಾತ್ರಿ ವಸ್ತಿ ಬಸ್‌ಗಳೂ ಸಕಾಲಕ್ಕೆ ಹೋಗುತ್ತಿಲ್ಲ. ಇದರಿಂದಾಗಿ ವಾಪಸ್ ಗ್ರಾಮಗಳಿಗೆ ಹೋಗುವುದೂ ಆಗುತ್ತಿಲ್ಲ ಎಂಬ ಆರೋಪಗಳು ಕಲಬುರಗಿ ತಾಲ್ಲೂಕಿನ ಗ್ರಾಮಸ್ಥರಿಂದ ವ್ಯಕ್ತವಾಗಿವೆ.

ರಜಾ ದಿನಗಳನ್ನು ಹೊರತುಪಡಿಸಿ ಬಸ್‌ ನಿಲ್ದಾಣಗಳು ಜನರಿಂದ ತುಂಬಿ ತುಳುಕುತ್ತಿವೆ. ಅದರಲ್ಲೂ ತೀರ್ಥ ಕ್ಷೇತ್ರಗಳಾದ ಧರ್ಮಸ್ಥಳ, ಗೋಕರ್ಣ, ಸವದತ್ತಿ, ಬಸವಕಲ್ಯಾಣ, ಗಾಣಗಾಪುರ, ಘತ್ತರಗಿ ಕಡೆ ಹೋಗುವ ಹಾಗೂ ರಾಯಚೂರು, ಬೀದರ್, ವಿಜಯಪುರ ಕಡೆ ಹೋಗುವ ಬಸ್‌ಗಳಲ್ಲಿ ಸದಾ ದಟ್ಟಣೆ ಇರುತ್ತದೆ. 

‘ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಇತ್ತೀಚೆಗೆ 621 ಬಸ್‌ಗಳನ್ನು ಖರೀದಿಸಿದ್ದು, ಬಹುತೇಕ ಬಸ್‌ಗಳು ಬೇಡಿಕೆ ಹೆಚ್ಚಾಗಿರುವ ಹಾಗೂ ವರಮಾನ ತರುವ ಮಾರ್ಗಗಳಲ್ಲಿ ಸಂಚರಿಸುತ್ತಿವೆ. ಹೆಚ್ಚು ಪ್ರಯಾಣಿಕರು ಸಂಚರಿಸುವ ಬೆಳಿಗ್ಗೆ ಹಾಗೂ ಸಂಜೆಯ ಸಮಯದಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಬೇಕು’ ಎನ್ನುತ್ತಾರೆ ಕಲಬುರಗಿಯ ಕರುಣೇಶ್ವರ ನಗರದ ನಿವಾಸಿ, ಸಂಗೀತ ಪ್ರಾಧ್ಯಾಪಕಿ ಲಕ್ಷ್ಮಿ ಶಂಕರ ಜೋಶಿ.

ವಿಜಯಪುರ, ಬಳ್ಳಾರಿ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿಯೂ ಗ್ರಾಮೀಣ ಪ್ರದೇಶಗಳಿಗೆ ಬಸ್ ಸೌಲಭ್ಯ ಸಮರ್ಪಕವಾಗಿಲ್ಲ. ಹೀಗಾಗಿ, ಅಗತ್ಯವಿರುವಷ್ಟು ಬಸ್‌ಗಳನ್ನು ಬಿಡಬೇಕು ಎಂದು ಪ್ರಯಾಣಿಕರು ಆಗ್ರಹಿಸುತ್ತಾರೆ.

ವಾಡಿ ಸಮೀಪ ಶಾಲಾ ಮಕ್ಕಳು ಬಸ್ ಹತ್ತಲು ಪರದಾಡುತ್ತಿರುವುದು
ವಾಡಿ ಸಮೀಪ ಶಾಲಾ ಮಕ್ಕಳು ಬಸ್ ಹತ್ತಲು ಪರದಾಡುತ್ತಿರುವುದು
ಒಂದು ತಿಂಗಳಲ್ಲಿ 250 ಬಸ್‌ ಖರೀದಿ
ನಿಗಮಕ್ಕೆ ಒಂದು ತಿಂಗಳಲ್ಲಿ 250 ಬಸ್‌ಗಳನ್ನು ಹೊಸದಾಗಿ ಖರೀದಿಸಲು ಸಚಿವ ಸಂಪುಟವು ಆಡಳಿತಾತ್ಮಕ ಒಪ್ಪಿಗೆ ನೀಡಬೇಕಿದೆ. ಶೀಘ್ರವೇ ಒಪ್ಪಿಗೆ ದೊರೆಯುವ ನಿರೀಕ್ಷೆ ಇದ್ದು ಜನವರಿ ಅಂತ್ಯದ ವೇಳೆಗೆ ಬಸ್ ಖರೀದಿಗೆ ಟೆಂಡರ್ ಕರೆಯಲಾಗುವುದು ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಅವರು ಹೇಳಿದರು. ‘ಶಕ್ತಿ ಯೋಜನೆ ಜಾರಿಯಾದ ಬಳಿಕ ಸಾರಿಗೆ ನಿಗಮದ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಶೇ 30ರಷ್ಟು ಹೆಚ್ಚಾಗಿದೆ. ಹೀಗಾಗಿ ಸಹಜವಾಗಿಯೇ ಬಸ್‌ಗಳಿಗೆ ಬೇಡಿಕೆ ಬಂದಿದೆ. ಈಗಾಗಲೇ 621 ನೂತನ ಬಸ್‌ಗಳನ್ನು ಸೇವೆಗೆ ಒದಗಿಸಲಾಗಿದೆ. ಮತ್ತೆ 250 ಬಸ್‌ಗಳನ್ನು ನಗರ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಹಾಗೂ ಸಾರಿಗೆ ನಿಗಮವು ತಲಾ ಶೇ 50ರಷ್ಟು ಹಣ ಭರಿಸಿ ಖರೀದಿಸಲಿದ್ದೇವೆ’ ಎಂದರು. ‘ನಗರ ಸಾರಿಗೆಯ ಬಸ್‌ಗಳಲ್ಲಿ ದಟ್ಟಣೆ ಹೆಚ್ಚಾಗಿದ್ದು ಇದನ್ನು ಗಮನದಲ್ಲಿಟ್ಟುಕೊಂಡು ಡಲ್ಟ್ ಹಾಗೂ ಕೆಕೆೆೆೆಆರ್‌ಟಿಸಿ ಸಹಯೋಗದಲ್ಲಿ ಕಲಬುರಗಿ ವಿಜಯಪುರ ರಾಯಚೂರು ಹಾಗೂ ಬಳ್ಳಾರಿ ನಗರ ಸಾರಿಗೆಗೆ ಈ ಬಸ್‌ಗಳನ್ನು ಒದಗಿಸಲಾಗುವುದು’ ಎಂದರು. ‘ದಟ್ಟಣೆ ನೀಗಿಸಲು 2000 ಟ್ರಿಪ್‌ಗಳನ್ನು ಹೆಚ್ಚಿಸಲಾಗಿದೆ. ಹೆಚ್ಚು ಬೇಡಿಕೆ ಇರುವ ಕಲಬುರಗಿ–ಬೀದರ್ ಶಹಾಪುರ ಯಾದಗಿರಿ ವಿಜಯಪುರ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ಓಡಿಸಲಾಗುತ್ತಿದೆ’ ಎಂದರು.
ಪ್ರವಾಸಕ್ಕೆ 400 ಬಸ್ ಬಾಡಿಗೆ
ಡಿಸೆಂಬರ್ ತಿಂಗಳಲ್ಲಿ ಶಾಲಾ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸ ಇದ್ದುದರಿಂದ ಕೆಕೆಆರ್‌ಟಿಸಿ ನಿತ್ಯ ಸರಾಸರಿ 400 ಬಸ್‌ಗಳನ್ನು ಬಾಡಿಗೆಗೆ ನೀಡುತ್ತಿದೆ. ಇವು ಬಹುತೇಕ ಗ್ರಾಮೀಣ ಭಾಗಕ್ಕೆ ಹೋಗುವ ಬಸ್‌ಗಳೇ ಆಗಿರುವುದರಿಂದ ಗ್ರಾಮೀಣ ಪ್ರಯಾಣಿಕರಿಗೆ ತೊಂದರೆಯಾಗಿದೆ.  ಶಾಲಾ ಶಿಕ್ಷಣ ಇಲಾಖೆಯೂ ಸರ್ಕಾರಿ ಬಸ್‌ಗಳನ್ನೇ ಬಾಡಿಗೆಗೆ ಪಡೆಯುವಂತೆ ಶಾಲೆಗಳಿಗೆ ಸೂಚನೆ ನೀಡಿರುವುದರಿಂದ ನಿಗಮವೂ ಬಸ್‌ಗಳನ್ನು ನೀಡಬೇಕಿದೆ.
ಪ್ರತಿಕ್ರಿಯೆಗಳು ‘ವಯಸ್ಸಾದವರಿಗೆ ತೊಂದರೆ’
ನಾನು ವಿಜಯಪುರದಿಂದ ಕಲಬುರಗಿಗೆ ಬರುತ್ತಿದ್ದ ಬಸ್‌ ತುಂಬಿ ತುಳುಕುತ್ತಿತ್ತು. ವಯಸ್ಸಾದವರು ಆರೋಗ್ಯ ಸಮಸ್ಯೆ ಇರುವ ಮಹಿಳೆಯರು ನಿಂತುಕೊಂಡೇ ಪ್ರಯಾಣಿಸುತ್ತಿದ್ದರು. ಬಸ್‌ನಲ್ಲಿ ಎಷ್ಟು ಸೀಟು ಸಾಮರ್ಥ್ಯ ಇದೆಯೋ ಅಷ್ಟು ಪ್ರಯಾಣಿಕರನ್ನು ಮಾತ್ರ ಹತ್ತಿಸಿಕೊಳ್ಳಬೇಕು. ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಹೆಚ್ಚುವರಿ ಬಸ್ ಸೌಲಭ್ಯ ಒದಗಿಸಬೇಕು ಲಕ್ಷ್ಮಿ ಶಂಕರ ಜೋಶಿ ಸಂಗೀತ ಪ್ರಾಧ್ಯಾಪಕಿ ವಿದ್ಯಾರ್ಥಿಗಳಿಗೆ ಸಂಕಷ್ಟ ಶಕ್ತಿ ಯೋಜನೆ ಬಳಿಕ ಮಹಿಳೆಯರು ಹೆಚ್ಚಾಗಿ ಪ್ರಯಾಣ ಮಾಡುತ್ತಿರುವುದರಿಂದ ದಿನಾಲೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು ನಿಂತೇ ಹೋಗಬೇಕಿದೆ. ಬಸ್‌ ತುಂಬುವುದರಿಂದ ಮಕ್ಕಳು ಕೈ ಮಾಡಿದರೂ ಚಾಲಕರು ನಿಲ್ಲಿಸದಿರುವ ಸಂದರ್ಭಗಳೂ ಇವೆ. ಮಕ್ಕಳು ನಿಂತು ಹೋಗುವುದನ್ನು ತಾಯಂದಿರೇ ಬೇಸರದಿಂದ ನೋಡಬೇಕಿದೆ. ಹೀಗಾಗಿ ಗ್ರಾಮಗಳಿಗೆ ಹೆಚ್ಚುವರಿ ಬಸ್‌ಗಳನ್ನು ಬಿಡಬೇಕು. ವಿಜಯಲಕ್ಷ್ಮಿ ಗೊಬ್ಬೂರಕರ್ ಕಲಬುರಗಿ ‘ಎಕ್ಸ್‌ಪ್ರೆಸ್ ಬಸ್ ನಿಲ್ಲಿಸಲ್ಲ’ ಹಲಕರ್ಟಿ ಗ್ರಾಮದಿಂದ ಪ್ರತಿದಿನ 150ಕ್ಕೂ ಅಧಿಕ ವಿದ್ಯಾರ್ಥಿಗಳು ವಿವಿಧ ಶಾಲಾ ಕಾಲೇಜುಗಳಿಗೆ ತೆರಳುತ್ತಾರೆ.  ಎಕ್ಸ್‌ಪ್ರೆಸ್ ಬಸ್ಸುಗಳು ಅಂತ ಹೇಳಿ ನಿಲ್ಲಿಸದೆ ಹಾಗೇ ಹೋಗುತ್ತಿವೆ. ಬಸ್ ಸಿಗದೇ ಹಲವು ಸಲ ವಿದ್ಯಾರ್ಥಿಗಳು ಮನೆಗೆ ತೆರಳಿದ ಉದಾಹರಣೆಗಳಿವೆ. ಗದಿಗಣ್ಣ ದೇಸಾಯಿ ಹಲಕರ್ಟಿ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT