ಸೋಮವಾರ, ಅಕ್ಟೋಬರ್ 18, 2021
23 °C

ಕಲಬುರ್ಗಿ: ಅ. 2ರಿಂದ 14ರವರೆಗೆ ಕಾನೂನು ಅರಿವು–ನೆರವು ಕಾರ್ಯಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗುಲಬರ್ಗಾ ಜಿಲ್ಲಾ ನ್ಯಾಯವಾದಿಗಳ ಸಂಘದ ಆಶ್ರಯದಲ್ಲಿ ಅ. 2ರಿಂದ 14ರವರೆಗೆ ಆಜಾದಿ ಕಾ ಅಮೃತ್‌ ಮಹೋತ್ಸವ ಹಾಗೂ ಕಾನೂನು ಅರಿವು–ನೆರವು ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಕೆ.ಸುಬ್ರಮಣ್ಯ ಅವರು ತಿಳಿಸಿದರು.

‘ಶನಿವಾರ ಜಿಲ್ಲಾ ಕೇಂದ್ರದಲ್ಲಿ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಬಳಿಕ ಜಿಲ್ಲೆಯ ಎಲ್ಲ ತಾಲ್ಲೂಕು, ಹೋಬಳಿ ಹಾಗೂ ಗ್ರಾಮೀಣ ಸ್ಥಳಗಳಲ್ಲೂ ಅರಿವು ಮೂಡಿಸಲಾಗುವುದು. ಆಯಾ ತಾಲ್ಲೂಕುಗಳ ಎಲ್ಲ ನ್ಯಾಯಾಧೀಶರು, ವಕೀಲರ ಸಂಘದವರು ಪಾಲ್ಗೊಳ್ಳಲಿದ್ದಾರೆ. ಪ್ರತಿದಿನವೂ ಬೇರೆಬೇರೆ ಸ್ಥಳಗಳಲ್ಲಿ ಕಾರ್ಯಕ್ರಮಗಳು ನಡೆಯಲಿದ್ದು, ಒಂದೊಂದು ವಿಷಯದ ಬಗ್ಗೆ ಕಾನೂನು ತಿಳಿವಳಿಕೆ ನೀಡಲಾಗುವುದು’ ಎಂದು ಅವರು ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸಾಮಾನ್ಯ ಜನರಲ್ಲಿ ಇನ್ನೂ ಸರಿಯಾದ ಕಾನೂನು ತಿಳಿವಳಿಕೆ ಬಂದಿಲ್ಲ. ವ್ಯಾಜ್ಯಗಳ ಸಂಖ್ಯೆ ಕಡಿಮೆ ಮಾಡಬೇಕಾದರೆ, ಅಪರಾಧ ಸಂಖ್ಯೆ ನಿಯಂತ್ರಿಸಬೇಕಾದರೆ ಕಾನೂನು ಅರಿವು ಮೂಡಿಸುವುದು ಅಗತ್ಯವಾಗಿದೆ. ಈ ಕಾರ್ಯಕ್ರಮದಲ್ಲಿ ಪರಿಸರ, ಸ್ವಚ್ಛತೆ, ಅರಣ್ಯ ಸಂರಕ್ಷಣೆ ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಕುರಿತೂ ಮಾಹಿತಿ ರವಾಣಿಸಲಾಗುವುದು. ಗ್ರಾಹಕರ ಹಕ್ಕು, ಮಕ್ಕಳ ಹಕ್ಕು, ಹಿರಿಯ ನಾಗರಿಕರು ಹಾಗೂ ಅಂಗವಿಕಲರಿಗೆ ಇರುವ ಕಾನೂನು ನೆರವುಗಳ ಬಗ್ಗೆ ಅರಿಕೆ ಮೂಡಿಸಲಾಗುವುದು. ವಿನಾಕಾರಣ ವ್ಯಾಜ್ಯಗಳಲ್ಲಿ ಸಿಕ್ಕಿಕೊಳ್ಳದಂತೆ, ಅಪರಾಧ ಕೃತ್ಯಗಳಿಂದ ದೂರ ಉಳಿಯುವಂತೆ ಮಾರ್ಗದರ್ಶನ ಮಾಡಲಾಗುವುದು‌’ ಎಂದೂ ಅವರು ಹೇಳಿದರು.

ಪ್ರಧಾನ ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಬಿ.ಎ.ಜರಗು ಅವರು ಮಾತನಾಡಿ, ‘ಕಾನೂನು ಸೇವಾ ಪ್ರಾಧಿಕಾರ ಜಾರಿಗೆ ಬಂದು ಈಗ 25 ವರ್ಷಗಳು ಉರುಳಿವೆ. ಇನ್ನೂ ಜನರಿಗೆ ದೈನಂದಿನ ಬದುಕಿಗೆ ಕಾನೂನು ಅರಿವು– ನೆರವು ಬೇಕಾಗಿದೆ’ ಎಂದರು.

ಅ. 2ರಂದು ಬೆಳಿಗ್ಗೆ 9ಕ್ಕೆ ಜಿಲ್ಲಾ ನ್ಯಾಯಾಲಯ ಆವರಣದಲ್ಲಿರುವ ಪರ್ಯಾಯ ವ್ಯಾಜ್ಯಗಳ ಕಟ್ಟಡದಲ್ಲಿ ಮೊದಲ ದಿನದ ಕಾರ್ಯಕ್ರಮ ಉದ್ಘಾಟಿಸಲಾಗುವುದು. ನ್ಯಾಯಾಧೀಶರಾದ ಕೆ.ಸುಬ್ರಮಣ್ಯ ಅವರು ಚಾಲನೆ ನೀಡುವರು. ಜಿಲ್ಲಾ ನ್ಯಾಯವಾದಿಗಳ ಸಂಘದ ಅಧ್ಯಕ್ಷ ರಾಜಕುಮಾರ ಎಸ್‌. ಕಡಗಂಚಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಿವಿಲ್‌ ನ್ಯಾಯಾಧೀಶರಾದ ಸುಶಾಂತ ಎಂ. ಚೌಗಲೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸುನೀಲಕುಮಾರ ಜಿ. ಚವ್ಹಾಣ, ವಲಯ ಅರಣ್ಯಾಧಿಕಾರಿ ಜಗನ್ನಾಥ ಬಿ. ಕೊರಳ್ಳಿ, ಉಪ ವಲಯ ಅರಣ್ಯಾಧಿಕಾರಿ ಕಾಶಿನಾಥ ಕಲಶೆಟ್ಟಿ , ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ಪಿ.ಎನ್‌. ಕಪನೂರ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.