ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೀಡಿತರಿಗಾಗಿ ಗಾಯಕನಾದ ಉಪನ್ಯಾಸಕ

ಕನ್ನಡ, ಹಿಂದಿ ಚಿತ್ರಗೀತೆ, ಗಜಲ್ ಹಾಡುವ ಶಾಹೀದ್ ಪಾಶಾ
Last Updated 20 ಮೇ 2021, 19:30 IST
ಅಕ್ಷರ ಗಾತ್ರ

ಕಲಬುರ್ಗಿ: ಕೋವಿಡ್‌ ಪೀಡಿತರಿಗೆ ಮನ ರಂಜಿಸುವುದರ ಜೊತೆಗೆ ಅವರಲ್ಲಿ ಜೀವನೋತ್ಸಾಹ ವೃದ್ಧಿಸಲು ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯ ದೃಶ್ಯಕಲಾ ವಿಭಾಗದ ಅತಿಥಿ ಉಪನ್ಯಾಸಕ ಶಾಹೀದ್ ಪಾಶಾ ಗಾಯನದ ಕಾಯಕ ಆರಂಭಿಸಿದ್ದಾರೆ.

ನಗರದ ಇಎಸ್‌ಐಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೋವಿಡ್‌ ಪೀಡಿತರ ವಾರ್ಡ್‌ನಲ್ಲಿ ಪ್ರತಿ ದಿನ ಒಂದು ಗಂಟೆ ಕನ್ನಡ, ಹಿಂದಿ ಚಿತ್ರಗೀತೆ ಮತ್ತು ಗಜಲ್‌ಗಳನ್ನು ಹಾಡುವ ಅವರು ರೋಗಿಗಳ ಸಂಬಂಧಿಕರು, ವೈದ್ಯರು ಸೇರಿ ಹಲವರ ಮನ ಗೆದ್ದಿದ್ದಾರೆ.

ಖಿನ್ನತೆ, ನಿರಾಸೆಭಾವ, ಬೇಸರ ಎಲ್ಲವನ್ನೂ ಹೋಗಲಾಡಿಸುವ ಸ್ಫೂರ್ತಿದಾಯಕ ಗೀತೆಗಳನ್ನು ಹಾಡುವ ಶಾಹೀದ್ ಪಾಶಾ ಜೊತೆಗೆ ಕೋವಿಡ್‌ ಪೀಡತರು ಸಹ ದನಿಗೂಡಿಸುತ್ತಾರೆ. ಉತ್ಸಾಹದಿಂದ ಚಪ್ಪಾಳೆ ತಟ್ಟಿ, ಸಂತಸಪಡುತ್ತಾರೆ.

ಸಂಬಂಧಿಕರು, ಆಪ್ತರಿಂದ ದೂರವುಳಿದು ನಾಲ್ಕು ಗೋಡೆಗಳಲ್ಲಿ ಸಮಾನ ನೋವುಣ್ಣುತ್ತಿರುವವರ ಮಧ್ಯೆಯಿದ್ದು, ಚೇತರಿಕೆ ನಿರೀಕ್ಷೆಯಲ್ಲಿ ದಿನಗಳನ್ನು ಕಳೆಯುತ್ತಿರುವ ರೋಗಿಗಳಿಗೆ ಪ್ರತಿ ದಿನದ ಗಾಯನವು ನಿರಾಳಭಾವ ಮೂಡಿಸುತ್ತದೆ.

‘ಕೋವಿಡ್‌ ಪೀಡಿತ ಸಂಬಂಧಿಕರನ್ನು ನೋಡಲು ಎರಡು ವಾರದ ಹಿಂದೆ ಇಎಸ್‌ಐಸಿ ಆಸ್ಪತ್ರೆಗೆ ಹೋದಾಗ, ಅಲ್ಲಿನ ಪರಿಸ್ಥಿತಿ ಕಂಡು ಬೇಸರವಾಯಿತು. ಕೋವಿಡ್‌ ಪೀಡಿತರಿಗೆ ಧೈರ್ಯ ತುಂಬಲು ಮತ್ತು ಆತ್ಮವಿಶ್ವಾಸ ಮೂಡಿಸಲು ಗಾಯನ ಸೂಕ್ತವೆಂದು ಭಾವಿಸಿದೆ. ವೈದ್ಯರ ಅನುಮತಿ ಪಡೆದು ಪ್ರತಿ ದಿನ ಕೋವಿಡ್‌ ಪೀಡಿತರ ಎದುರು ಗೀತೆಗಳನ್ನು ಹಾಡಲು ಶುರುಮಾಡಿದೆ’ ಎಂದು ಶಾಹೀದ್ ಪಾಶಾ ತಿಳಿಸಿದರು.

‘ವೈದ್ಯರ ಮಾರ್ಗದರ್ಶನದಂತೆ ಪಿಪಿಇ ಕಿಟ್‌ ಧರಿಸಿ, ಎಲ್ಲಾ ಸುರಕ್ಷತಾ ಕ್ರಮಗಳನ್ನು ಅನುಸರಿಸುತ್ತೇನೆ. ಮೊಬೈಲ್‌ನಲ್ಲಿ ಗೀತೆಗಳ ಸಾಲುಗಳನ್ನು ಡೌನ್‌ಲೋಡ್‌ ಮಾಡಿಕೊಂಡು ಕರೋಕೆ ಸಂಗೀತ ಅನುಸಾರ ಹಾಡುತ್ತೇನೆ. ಇದಕ್ಕೆ ಸ್ಪಂದಿಸಿ ಕೋವಿಡ್‌ ಪೀಡಿತರೂ ಸಹ ಗೀತೆಗಳನ್ನು ಗುನಗುನಿಸುತ್ತಾರೆ. ಭಾವಪರವಶಗೊಳ್ಳುತ್ತಾರೆ’ ಎಂದು ಅವರು ತಿಳಿಸಿದರು.

ಸದ್ಯಕ್ಕೆ ಇಎಸ್‌ಐಸಿ ಆಸ್ಪತ್ರೆಯಲ್ಲಿ ಗೀತೆಗಳನ್ನು ಹಾಡುವ ಪಾಶಾ ಅವರು ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿನ ಕೋವಿಡ್‌ ಪೀಡಿತರ ಸಮ್ಮುಖದಲ್ಲಿ ಹಾಡಲು ಬಯಸಿದ್ದಾರೆ. ಇದಕ್ಕೆ ಅವಕಾಶ ಮಾಡಿಕೊಡುವಂತೆ ಅವರು ಜಿಲ್ಲಾಡಳಿತ ಮತ್ತು ಆಯಾ ಆಸ್ಪತ್ರೆಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿದ್ದಾರೆ.

ಚಿತ್ರಕಲಾವಿದರೂ ಆಗಿರುವ ಅವರು ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕಲಾಕೃತಿಗಳನ್ನು ಪ್ರದರ್ಶಿಸಿದ್ದಾರೆ. ಕಲಾಕೃತಿಗಳ ಮೂಲಕವು ಕಾಯಿಲೆಪೀಡಿತರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬಹುದು ಎಂದು ಅವರು ಹೇಳುತ್ತಾರೆ.

ಖಿನ್ನತೆ ಮತ್ತು ಆತಂಕದಿಂದ ಬಳಲುತ್ತಿರುವವರಿಗೆ ಸಂಗೀತ, ಗಾಯನವು ಸಮಾಧಾನ ಉಂಟು ಮಾಡುತ್ತದೆ. ನಿರಾಸೆ ಕಳಚಿ ಹಾಕಿ, ಆಶಾಭಾವ ಮೂಡಿಸುತ್ತದೆ ಎಂದು ಇಎಸ್‌ಐಸಿ ವೈದ್ಯಾಧಿಕಾರಿ ಡಾ. ಅಬ್ದುಲ್ ಖಾದಿರ್ ಖಾನ್ ಹೇಳಿದರು.

ಶಾಹೀದ್ ಪಾಶಾ ಅವರ ಗೀತೆ ಆಲಿಸಿ ಖುಷಿ ಪಡುತ್ತಿದ್ದ ತಾಯಿ ಲಕ್ಷ್ಮಿದೇವಿಯವರು ಈಗ ಆಸ್ಪತ್ರೆಯಿಂದ ಮನೆಗೆ ಬಂದ ಬಳಿಕವೂ ಅವರನ್ನು ನೆನಪಿಸಿಕೊಳ್ಳುತ್ತಾರೆ ಎಂದು ಯಾದಗಿರಿಯ ನಿವಾಸಿ ರಮಾಕಾಂತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT