ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿಯವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲಿ: ಶರಣಪ್ರಕಾಶ್ ಪಾಟೀಲ

Published 17 ಜೂನ್ 2024, 7:20 IST
Last Updated 17 ಜೂನ್ 2024, 7:20 IST
ಅಕ್ಷರ ಗಾತ್ರ

ಕಲಬುರಗಿ: ರಾಜ್ಯ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರದ ನೀತಿಯೇ ಕಾರಣ. ಹೀಗಾಗಿ ಬಿಜೆಪಿಯವರು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ವೈದ್ಯಕೀಯ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ನಿರ್ಮಾಣ ಹಂತದ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯ ಕಟ್ಟಡ ವೀಕ್ಷಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.

'ಅಂತರರಾಷ್ಟ್ರೀಯ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಕಡಿಮೆಯಾದರೂ ಕೇಂದ್ರ ಸರ್ಕಾರ ಅದರ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಿಲ್ಲ. ಬದಲಾಗಿ ಸಾಕಷ್ಟು ಹಣ ಲೂಟಿ ಮಾಡಿದ್ದಾರೆ. ಕಚ್ಚಾ ತೈಲದ ಬೆಲೆ ಹೆಚ್ಚಾದಾಗ ಇಲ್ಲಿಯೂ ತೈಲ ಬೆಲೆ ಹೆಚ್ಚಿಸಿದ್ದಾರೆ. ಹೀಗಾಗಿ ತೈಲ ಬೆಲೆ ಹೆಚ್ಚಾಗಿಯೇ ಇದೆ. ನಾವು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಿಸಿದ ಬಳಿಕವೂ ದಕ್ಷಿಣ ಭಾರತದಲ್ಲೇ ಕರ್ನಾಟಕದಲ್ಲಿ ತೈಲ ಬೆಲೆ ಕಡಿಮೆ ಇದೆ ಎಂದು ಸಮರ್ಥಿಸಿಕೊಂಡರು.

ಜಯದೇವ ಹೃದ್ರೋಗ ಆಸ್ಪತ್ರೆಯ ನೂತನ ಕಟ್ಟಡವು ಆಗಸ್ಟ್ ಕೊನೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ಉದ್ಘಾಟನೆಯಾಗಲಿದೆ. ಇದರ ಜೊತೆಗೆ ಕ್ಯಾನ್ಸರ್ ಆಸ್ಪತ್ರೆ, ತಾಯಿ ಮಗುವಿನ ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ‌ ಕಟ್ಟಡಗಳಿಗೆ ಶೀಘ್ರ ಅಡಿಗಲ್ಲು ಹಾಕಲಾಗುವುದು. ಲೋಕಸಭಾ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದ್ದಕ್ಕೆ ಕೊಡುಗೆಯಾಗಿ ಈ ಆಸ್ಪತ್ರೆಗಳು ನಿರ್ಮಾಣವಾಗಲಿವೆ ಎಂದರು‌.

ರಾಜ್ಯದ ವಿವಿಧೆಡೆ ಸರ್ಕಾರಿ ಐಟಿಐ ಕಟ್ಟಡಗಳು ಹಳೆಯದಾಗಿವೆ. ಹೀಗಾಗಿ ₹ 100 ಕೋಟಿ ವೆಚ್ಚದಲ್ಲಿ ಕಾಲೇಜು ಕಟ್ಟಡಗಳು ನಿರ್ಮಾಣಗೊಳ್ಳಲಿವೆ. ಕಲಬುರಗಿಯ ಐಟಿಐ ಕಾಲೇಜು ಕಟ್ಟಡಕ್ಕೆ ₹ 20 ಕೋಟಿ ವೆಚ್ಚ ಮಾಡಲಾಗುವುದು ‌ಎಂದರು.

ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೇ ಮಹಿಳೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಜಿಮ್ಸ್ ನಿರ್ದೇಶಕ ಹಾಗೂ ಇಬ್ಬರು ವೈದ್ಯರ ವಿರುದ್ಧ ಎಫ್ಐಆರ್ ದಾಖಲಾದ ಕುರಿತು ಪ್ರತಿಕ್ರಿಯಿಸಿದ ಸಚಿವ ಡಾ. ಶರಣಪ್ರಕಾಶ್, ಯಾರ ತಪ್ಪಿದೆ ಎಂದು ಪರಿಶೀಲಿಸುವಂತೆ ಸೂಚನೆ ನೀಡಿದ್ದೇನೆ. ಸಿ.ಸಿ. ಟಿ.ವಿ.ಗಳ ದೃಶ್ಯಾವಳಿಗಳನ್ನೂ ಪಡೆಯಲಾಗುತ್ತಿದೆ ಎಂದು ‌ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT