ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30ರಂದು ಎಲ್ಲ ನ್ಯಾಯಾಲಯಗಳಲ್ಲಿ ಲೋಕ್ ಅದಾಲತ್

Last Updated 15 ಸೆಪ್ಟೆಂಬರ್ 2021, 4:58 IST
ಅಕ್ಷರ ಗಾತ್ರ

ಕಲಬುರ್ಗಿ: ‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಆದೇಶದ ಮೇರೆಗೆ ಸೆಪ್ಟೆಂಬರ್ 30ರಂದು ‘ಲೋಕ್ ಅದಾಲತ್’ ಏರ್ಪಡಿಸಲಾಗಿದೆ’ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಕೆ.ಸುಬ್ರಮಣ್ಯ ಹಾಗೂ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಶಾಂತ ಎಂ. ಚೌಗಲೆ ತಿಳಿಸಿದ್ದಾರೆ.

ಕಲಬುರ್ಗಿ ನಗರ ಮತ್ತು ಜಿಲ್ಲೆಗೆ ಒಳಪಟ್ಟ ಎಲ್ಲ ತಾಲ್ಲೂಕು ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬಾಕಿ ಇರುವ ಪ್ರಕರಣಗಳು, ರಾಜಿ ಸಂಧಾನದ ಮೂಲಕ ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಲೋಕ್ ಅದಾಲತ್/ ಜನತಾ ನ್ಯಾಯಾಲಯಗಳಲ್ಲಿ ರಾಜಿ ಸಂಧಾನದ ಮೂಲಕ ಇತ್ಯರ್ಥ ಪಡಿಸಿಕೊಳ್ಳಬಹುದು. ಎಲ್ಲ ಕಕ್ಷಿದಾರರಿಗೆ, ಸಾರ್ವಜನಿಕರು ಹಾಗೂ ಸಂಬಂಧಪಟ್ಟವವರು ಈ ಲೋಕ್ ಅದಾಲತ್‍ದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆಯಬಹುದು.

‘ಜಿಲ್ಲೆಯ ನ್ಯಾಯಾಲಯಗಳಲ್ಲಿ ಹೆಚ್ಚಿನ ಪ್ರಕರಣಗಳು ಬಾಕಿಯಿದ್ದು, ಗರಿಷ್ಠ ಪ್ರಮಾಣದ ಪ್ರಕರಣಗಳನ್ನು ರಾಜಿ ಸಂಧಾನ ಮಾಡುವುದರ ಮೂಲಕ ಇತ್ಯರ್ಥಪಡಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಜನತಾ ನ್ಯಾಯಾಲಯದಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವ ಉಭಯ ಪಕ್ಷಗಾರರಿಗೆ ಹಲವು ಲಾಭಗಳು ದೊರೆಯಲಿವೆ’ ಎಂದು ನ್ಯಾಯಾದೀಶರು ತಿಳಿಸಿದ್ದಾರೆ.

‘ಉಭಯ ಪಕ್ಷಗಾರರಿಗೆ ರಾಜಿ ಮಾಡಿಕೊಳ್ಳಲು ಮಾರ್ಗದರ್ಶನ ನೀಡಲಾಗುವುದು. ಈ ನ್ಯಾಯಾಲಯದಲ್ಲಿ ನೀಡುವ ತೀರ್ಪು ನ್ಯಾಯಾಲಯದಲ್ಲಿ ಕೊಡುವ ತೀರ್ಪಿನಷ್ಟೇ ಪರಿಣಾಮಕಾರಿಯಾಗಿರುತ್ತದೆ. ಯಾವುದೇ ಮೇಲ್ಮನವಿ ಅಥವಾ ಖರ್ಚು ವೆಚ್ಚ ಇರುವುದಿಲ್ಲ. ತಮ್ಮ ವ್ಯಾಜ್ಯವನ್ನು ಜನತಾ ನ್ಯಾಯಾಲಯದ ಮೂಲಕ ಕಡಿಮೆ ಖರ್ಚಿನಲ್ಲಿ ಮತ್ತು ಶೀಘ್ರವಾಗಿ ಇತ್ಯರ್ಥ ಮಾಡಿಕೊಳ್ಳಬಹುದು. ಜನತಾ ನ್ಯಾಯಾಲಯದಲ್ಲಿ ತಾವು ವಕೀಲರ ಮುಖಾಂತರ ಅಥವಾ ತಾವೇ ನೇರವಾಗಿ ಭಾಗವಹಿಸಬಹುದು’‌ ಎಂದು ಅವರು ತಿಳಿಸಿದ್ದಾರೆ.

‘ಸೌಹಾರ್ದಯುತವಾಗಿ ಪ್ರಕರಣಗಳು ಇತ್ಯರ್ಥಗೊಳ್ಳುವುದರಿಂದ ಉತ್ತಮ ಬಾಂಧವ್ಯ ಉಳಿಯುವ ಜೊತೆಗೆ ನೆಮ್ಮದಿ ಸಿಗುತ್ತದೆ. ಜನತಾ ನ್ಯಾಯಾಲಯದಲ್ಲಿ ಎಲ್ಲ ರೀತಿಯ ವ್ಯಾಜ್ಯಪೂರ್ವ ಪ್ರಕರಣಗಳನ್ನು ಪ್ರತಿ ನಿತ್ಯ ನಡೆಯುತ್ತಿರುವ ಸಂಧಾನದ ಮುಖೇನ ಇತ್ಯರ್ಥಪಡಿಸಿಕೊಳ್ಳಲು ಉತ್ತಮ ಅವಕಾಶವಿದೆ. ರಾಜಿ ಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಪಡಿಸಿಕೊಂಡಲ್ಲಿ ನ್ಯಾಯಾಲಯಕ್ಕೆ ಪಾವತಿಸಲಾದ ನ್ಯಾಯಾಲಯದ ಶುಲ್ಕವನ್ನು ಪೂರ್ಣವಾಗಿ ಹಿಂದಿರುಗಿಸಲಾಗುವುದು. ಪ್ರಕರಣಗಳಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇದು ಎರಡೂ ಪಕ್ಷಗಾರರಿಗೆ ಹೆಚ್ಚು ಅನುಕೂಲಕರ’ ಎಂದೂ ಅವರು ಮಾಹಿತಿ ನೀಡಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಥವಾ ಜಿಲ್ಲೆಯಲ್ಲಿರುವ ಯಾವುದೇ ತಾಲ್ಲೂಕು ಕಾನೂನು ಸೇವಾ ಸಮಿತಿಯನ್ನು ಸಂಪರ್ಕಿಸಬೇಕು. ಕಕ್ಷಿದಾರರು ಮತ್ತು ಸಾರ್ವಜನಿಕರು ಈ ಲೋಕ ಅದಾಲತ್‍ನ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT