ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಬುರಗಿ: ‘ಲೋಕ’ ಕಣದಲ್ಲಿ ವೈದ್ಯ, ಕೂಲಿ ಕಾರ್ಮಿಕ

ಸ್ಪರ್ಧೆಯಲ್ಲಿದ್ದಾರೆ 7ನೇ ತರಗತಿಯಿಂದ ಎಂಎಸ್‌ ಜನರಲ್ ಸರ್ಜರಿವರೆಗೂ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು
Published 29 ಏಪ್ರಿಲ್ 2024, 6:39 IST
Last Updated 29 ಏಪ್ರಿಲ್ 2024, 6:39 IST
ಅಕ್ಷರ ಗಾತ್ರ

ಕಲಬುರಗಿ: ಈ ಬಾರಿಯ ಲೋಕಸಭಾ ಚುನಾವಣೆಯ ಕಲಬುರಗಿ ಮೀಸಲು ಕ್ಷೇತ್ರದ ಸ್ಪರ್ಧಾ ಕಣದಲ್ಲಿ 7ನೇ ತರಗತಿಯಿಂದ ಹಿಡಿದು ಎಂಎಸ್‌ ಜನರಲ್ ಸರ್ಜರಿವರೆಗೂ ವಿದ್ಯಾರ್ಹತೆ ಪಡೆದ ಅಭ್ಯರ್ಥಿಗಳು ಕಾಣಸಿಗುತ್ತಾರೆ.

ಉನ್ನತ ಶಿಕ್ಷಣ ಪಡೆದವರು ರಾಜಕೀಯಕ್ಕೆ ಬಂದು ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಆದರೆ, ಮತದಾರರು ಅಭ್ಯರ್ಥಿಯ ವೈಯಕ್ತಿಕ ವರ್ಚಸ್ಸು, ಅನುಕಂಪ, ಜಾತಿ ಹಾಗೂ ರಾಜಕೀಯ ಪಕ್ಷವನ್ನು ಪರಿಗಣಿಸಿ ತಮ್ಮ ವೋಟಿನ ಮುದ್ರೆಯನ್ನು ಯಾರಿಗೆ ನೀಡಬೇಕು ಎಂಬುದನ್ನು ನಿರ್ಧರಿಸುತ್ತಾರೆ.

ಅಭ್ಯರ್ಥಿಗಳು ನಾಮಪತ್ರದೊಂದಿಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಹಂಚಿಕೊಂಡಿದ್ದಾರೆ. ವಯಸ್ಸು, ವಿದ್ಯಾರ್ಹತೆ, ಆದಾಯದ ಮೂಲ, ವೃತ್ತಿ ಮೊದಲಾದ ವಿವರಗಳನ್ನು ತಿಳಿಸಿದ್ದಾರೆ.

ಅದರಂತೆ ಪ್ರಸ್ತುತ, ಕಲಬುರಗಿ ಎಸ್ಸಿ ಮೀಸಲು ಕ್ಷೇತ್ರದಲ್ಲಿ ಅದೃಷ್ಟ ಪಣಕಿಟ್ಟಿರುವ ಪ್ರಮುಖ ರಾಜಕೀಯ ಪಕ್ಷಗಳ ಪ್ರಬಲ ಅಭ್ಯರ್ಥಿಗಳು, ಪಕ್ಷೇತರರು ಸೇರಿದಂತೆ 14 ಅಭ್ಯರ್ಥಿಗಳ ವಿದ್ಯಾರ್ಹತೆಯು ಪ್ರಾಥಮಿಕ ಶಾಲಾ ಶಿಕ್ಷಣದಿಂದ ಹಿಡಿದು ವೈದ್ಯಕೀಯ ಎಂಎಸ್‌ ಜನರಲ್‌ ಸರ್ಜರಿಯ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಬಿಜೆಪಿ ಅಭ್ಯರ್ಥಿಯೂ ಆಗಿರುವ ಸಂಸದ ಡಾ.ಉಮೇಶ ಜಾಧವ ಅವರು ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ 1993ರಲ್ಲಿ ಎಂಎಸ್‌ ಜನರಲ್ ಸರ್ಜರಿ ಪೂರ್ಣಗೊಳಿಸಿದ್ದಾರೆ. ಸ್ಪರ್ಧಿಸಿರುವ ಅಭ್ಯರ್ಥಿಗಳ ಪೈಕಿ ಜಾಧವ ಅವರು ಗರಿಷ್ಠ ಶಿಕ್ಷಣ ಪಡೆದವರು.

ಭಾರತೀಯ ಬಹುಜನ ಕ್ರಾಂತಿ ದಳ ಪಕ್ಷದ ಅಭ್ಯರ್ಥಿ ರಾಜಕುಮಾರ ಗೋಪಿನಾಥ 7ನೇ ತರಗತಿ ಓದಿದ್ದು ಕಡಿಮೆ ವಿದ್ಯಾರ್ಹತೆ ಪಡೆದವರಾಗಿ ದ್ದಾರೆ. ಸಿಮೆಂಟ್ ವ್ಯಾಪಾರದ ಜತೆಗೆ ಕೃಷಿ ಮಾಡುತ್ತಿರುವುದಾಗಿ ಘೋಷಿಸಿಕೊಂಡಿದ್ದಾರೆ.

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌ಪಿ) ವಿಜಯ ಗೋವಿಂದ ಜಾಧವ ಅವರು 8ನೇ ತರಗತಿ ಪೂರ್ಣಗೊಳಿಸಿದ್ದು, ಸಮಾಜ ಸೇವೆ ಮಾಡುತ್ತಿರುವುದಾಗಿ ಹೇಳಿಕೊಂಡಿ ದ್ದಾರೆ. ಆ ವೃತ್ತಿಯೇ ತಮ್ಮ ಆದಾಯದ ಮೂಲ ಎಂದು ಪ್ರಮಾಣಪತ್ರ ನೀಡಿದ್ದಾರೆ.

ನಾಲ್ವರು ಎಂಎ, ಮೂವರು ಬಿಎ: ಬಹುಜನ ಸಮಾಜ ಪಕ್ಷದ ಹುಚ್ಚಪ್ಪ ಬಸಪ್ಪ, ಎಸ್‌ಯುಸಿಐ ಪಕ್ಷದ ಎಸ್‌.ಎಂ. ಶರ್ಮಾ, ಪಕ್ಷೇತರರಾದ ಆನಂದ ಸಿದ್ದಣ್ಣ ಮತ್ತು ತಾರಾಬಾಯಿ ವಿಶ್ವೇಶ್ವರಯ್ಯ ಭೋವಿ ಅವರು ಬಿಎ ಪೂರ್ಣಗೊಳಿಸಿದ್ದಾರೆ. ಮೂವರು ಪಕ್ಷೇತರರಾದ ರಮೇಶ ಭೀಮಸಿಂಗ್ ಚವ್ಹಾಣ, ಅವರ ಪತ್ನಿ ಜ್ಯೋತಿ ಚವ್ಹಾಣ, ಸುಂದರ ಮೇಘು ಅವರು ಎಂಎ ಸ್ನಾತಕೋತ್ತರ ಪದವಿ ಗಳಿಸಿದ್ದಾರೆ.

ತಮ್ಮ ಶೈಕ್ಷಣಿಕ ಹಿನ್ನಲೆ ಏನೇ ಇದ್ದರೂ ಕೂಲಿ ಮಾಡುವವರು, ಸಾಮಾಜಿಕ ಕಾರ್ಯಕರ್ತರು, ಕಾರ್ಮಿಕರು, ಗೌಂಡಿ ಕಾರ್ಮಿಕರು, ವೈದ್ಯರು, ವ್ಯಾಪಾರಿಗಳು ಜನತಂತ್ರದ ಹಬ್ಬದಲ್ಲಿ ಸ್ಪರ್ಧಿಸಬಹುದು ಎಂಬುದನ್ನು ನಿರೂಪಿಸಿದ್ದಾರೆ. ಮತದಾರ ಪ್ರಭು ಮಾತ್ರ ಯಾರಿಗೆ ಒಲಿಯುತ್ತಾನೆ ಎಂಬುದು ಜೂನ್ 4ರಂದು ತಿಳಿಯಲಿದೆ.

ಮೂವರು ಎಸ್ಸೆಸ್ಸೆಲ್ಸಿ ಪಾಸ್‌

ಕಾಂಗ್ರೆಸ್ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಸೇರಿದಂತೆ ಮೂವರು ಅಭ್ಯರ್ಥಿಗಳು ಎಸ್ಸೆಸ್ಸೆಲ್ಸಿ ಮುಗಿಸಿದ್ದು, ಒಬ್ಬರು ಪಿಯುಸಿ ತೇರ್ಗಡೆಯಾಗಿದ್ದಾರೆ.

ರಾಧಾಕೃಷ್ಣ ಅವರು ಬೆಂಗಳೂರಿನ ಸೇಂಟ್ ಅಲೋಶಿಯಸ್ ಹೈಸ್ಕೂಲ್‌ನಲ್ಲಿ ಎಸ್ಸೆಸ್ಸೆಲ್ಸಿ ಪೂರ್ಣಗೊಳಿಸಿದ್ದಾರೆ. ವ್ಯಾಪಾರ, ಆಸ್ತಿ, ನಿಶ್ಚಿತ ಠೇವಣಿ ಮೇಲಿನ ಬಡ್ಡಿಯೇ ತಮ್ಮ ಆದಾಯದ ಮೂಲವಾಗಿದೆ. ಪತ್ನಿ ವೃತ್ತಿಯಲ್ಲಿ ವೈದ್ಯರಾಗಿದ್ದಾರೆ ಎಂದು ಘೋಷಿಸಿಕೊಂಡಿದ್ದಾರೆ.

ಪಕ್ಷೇತರ ಅಭ್ಯರ್ಥಿಯಾದ ಶರಣಪ್ಪ ಮರಲಿಂಗಪ್ಪ ಅವರು ಎಸ್ಸೆಸ್ಸೆಲ್ಸಿ ಮುಗಿಸಿದ್ದು, ಜೀವನೋಪಾಯಕ್ಕಾಗಿ ಗೌಂಡಿ ಕಾರ್ಮಿಕರಾಗಿ (ನೆಲಹಾಸು)ಕೆಲಸ ಮಾಡುತ್ತಿದ್ದಾರೆ. ವಿಜಯಕುಮಾರ ಭೀಮಶಾ ಅವರು ಎಸ್ಸೆಸ್ಸೆಲ್ಸಿ ಹಾಗೂ ಐಟಿಐ ಮುಗಿಸಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದ ಎಚ್‌. ನಾಗೇಂದ್ರ ಪಿಯುಸಿ ಮುಗಿಸಿ ಕಾರ್ಮಿಕರಾಗಿದ್ದಾರೆ.

ಡಾ.ಜಾಧವ ಹಿರಿಯ: ಶರಣಪ್ಪ, ನಾಗೇಂದ್ರ ಕಿರಿಯರು

ಚುನಾವಣೆಗೆ ಸ್ಪರ್ಧಿಸಿದವರ ಪೈಕಿ 65 ವರ್ಷದ ಬಿಜೆಪಿಯ ಡಾ.ಉಮೇಶ ಜಾಧವ ಅವರು ಹಿರಿಯ ಅಭ್ಯರ್ಥಿಯಾಗಿದ್ದರೆ, 30 ವರ್ಷದ ಉತ್ತಮ ಪ್ರಜಾಕೀಯ ಪಕ್ಷದ ಎಚ್.ನಾಗೇಂದ್ರ ಹಾಗೂ ಪಕ್ಷೇತರ ಶರಣಪ್ಪ ಮರಲಿಂಗಪ್ಪ ಕಿರಿಯ ಅಭ್ಯರ್ಥಿಗಳು.

ಕಾಂಗ್ರೆಸ್‌ನ ರಾಧಾಕೃಷ್ಣ ದೊಡ್ಡಮನಿ (63), ಬಿಎಸ್‌ಪಿಯ ಹುಚ್ಚಪ್ಪ ಬಸಪ್ಪ (53), ಭಾರತೀಯ ಬಹುಜನ ಕ್ರಾಂತಿ ದಳ ಪಕ್ಷ ರಾಜಕುಮಾರ ಗೋಪಿನಾಥ (44), ಕೆಆರ್‌ಎಸ್‌ ಪಕ್ಷದ ವಿಜಯ ಗೋವಿಂದ ಜಾಧವ (36), ಎಸ್‌ಯುಸಿಐನ ಎಸ್‌.ಎಂ. ಶರ್ಮಾ (39), ಪಕ್ಷೇತರರಾದ ವಿಜಯಕುಮಾರ ಭೀಮಶಾ (40), ಆನಂದ ಸಿದ್ದಣ್ಣ (34), ಜ್ಯೋತಿ ರಮೇಶ (33), ತಾರಾಬಾಯಿ ವಿಶ್ವೇಶ್ವರಯ್ಯ ಭೋವಿ (45), ರಮೇಶ ಭೀಮಸಿಂಗ್ (39) ಹಾಗೂ ಸುಂದರ ಮೇಘು (40) ಅವರು ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT