ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸ್‌ಕ್ರಿಮ್ ಮಾರುವವನ ಮಗನಿಗೆ 7 ಚಿನ್ನ

ಮಹಾದೇವಪ್ಪಾ ರಾಂಪುರೆ ವೈದ್ಯಕೀಯ ಕಾಲೇಜು ಘಟಿಕೋತ್ಸವ
Last Updated 30 ಮೇ 2022, 8:31 IST
ಅಕ್ಷರ ಗಾತ್ರ

ಕಲಬುರಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಮಹಾದೇವಪ್ಪಾ ರಾಂಪುರೆ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಭಾನುವಾರ ನಡೆದ 2016ರ ಬ್ಯಾಚ್‌ನ ಪದವೀಧರರ ಘಟಿಕೋತ್ಸವದಲ್ಲಿ ಐಸ್‌ಕ್ರಿಮ್ ಮಾರುವವರೊಬ್ಬರ ಪುತ್ರ 7 ಚಿನ್ನದ ಪದಕ ಪಡೆದರು.

ನಗರದ ನಿವಾಸಿ ಶಿವಸಾಗರ ಜಾಟ್ ಅವರೇ ಈ ಸಾಧಕರು. ಅವರ ತಂದೆ ನಂದಲಾಲ್ ಜಾಟ್ ಸೂಪರ್ ಮಾರ್ಕೆಟ್‌ನಲ್ಲಿ 40 ವರ್ಷಗಳಿಂದ ಐಸ್‌ ಕ್ರಿಮ್ ಮಾರಿ, ಕುಟುಂಬ ನಿರ್ವಹಣೆ ಜೊತೆಗೆ ಮಗನಿಗೂ ಉತ್ತಮ ವೈದ್ಯಕೀಯ ಶಿಕ್ಷಣ ಕೊಡಿಸಿದ್ದಾರೆ.

ಸೂಕ್ಷ್ಮಜೀವ ವಿಜ್ಞಾನ, ಶರೀರವಿಜ್ಞಾನ,ಔಷಧ ವಿಜ್ಞಾನ ವಿಷಯ ಸೇರಿ 7 ವಿಷಯಗಳಲ್ಲಿ ಚಿನ್ನದ ಪದಕ ಗಳಿಸಿರುವ ಶಿವಸಾಗರ ಮುಂದೆ ಎಂ.ಎಸ್‌ ಮಾಡಿ, ಸರ್ಜನ್‌ ಆಗಲು ಬಯಸಿದ್ದಾರೆ.

ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ: ‘ಬಸವೇಶ್ವರ ಆಸ್ಪತ್ರೆಯ ಕೋವಿಡ್ ಆರೈಕೆ ಕೇಂದ್ರದಲ್ಲಿ ಸೋಂಕಿತರಿಗೆ ಶಿಫ್ಟ್‌ ಪ್ರಕಾರ ಚಿಕಿತ್ಸೆ ನೀಡಲು ಹಿರಿಯ ವೈದ್ಯರಿಗೆ ನೆರವಾಗಿದ್ದೆವು. ಅದು ನಮಗೆ ವೈದ್ಯಕೀಯ ಪ್ರಾಯೋಗಿಕ ಕಲಿಕೆ ಅನುಭವ ನೀಡಿತು’ ಎಂದು ಶಿವಸಾಗರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಒಂದು ತಿಂಗಳು ಕೋವಿಡ್ ಸೋಂಕಿತರಿಗೆ ಚಿಕಿತ್ಸೆ ನೀಡಿ ಮನೆ, ಸ್ನೇಹಿತರಿಂದ ದೂರ ಉಳಿದಿದ್ದೆ. ಅದರ ಪ್ರತಿಫಲವಾಗಿ ಇಂದು ನಾನು ಏಳು ಚಿನ್ನದ ಪದಕ ಪಡೆದಿರುವೆ. ಭೌತಿಕ ತರಗತಿಗಳು ಸ್ಥಗಿತವಾಗಿ ಆನ್‌ಲೈನ್‌ ತರಗತಿಗೆ ಹೊಂದಿಕೊಳ್ಳಲು ಆರಂಭದಲ್ಲಿ ಕಷ್ಟ ಆಯಿತು. ಉಪನ್ಯಾಸಕರು ಚಾರ್ಟ್‌, ಡಯಗ್ರಾಮ್, ಯುಟ್ಯೂಬ್‌ನಲ್ಲಿ ಲಿಂಕ್‌ಗಳನ್ನು ಹಂಚಿ ಓದಿಗೆ ಸಾಕಷ್ಟು ನೆರವಾದರು’ ಎಂದರು.

ಮೇಘಾ ಪಾಟೀಲ ಮತ್ತು ಸಿಂಧೂಜಾ ದೇವಪಾಲ್ ತಲಾ ಮೂರು ಹಾಗೂಮಾರಿಯಾ ಸುಲ್ತಾನ್ ಎರಡು ಚಿನ್ನದ ಪದಕ ಪಡೆದರು. 150 ವಿದ್ಯಾರ್ಥಿಗಳು ಪದವೀಧರರಾಗಿ ವೈದ್ಯಕೀಯ ಪ್ರತಿಜ್ಞೆ ಸ್ವೀಕರಿಸಿದರು.ಎಂಆರ್‌ಎಂಸಿ ಡೀನ್‌ ಡಾ.ಎಸ್‌.ಎಂ ಪಾಟೀಲ ಪ್ರಮಾಣ ವಚನ ಬೋಧಿಸಿದರು.

ಎಚ್‌ಕೆಇ ಸಂಸ್ಥೆ ಅಧ್ಯಕ್ಷ ಡಾ.ಭೀಮಾಶಂಕರ ಸಿ. ಬಿಲಗುಂದಿ, ಎಚ್‌ಕೆಇ ಸಂಸ್ಥೆಯ ಉಪಾಧ್ಯಕ್ಷ ಡಾ.ಶರಬಸಪ್ಪಾ ಆರ್‌. ಹರವಾಳ, ಕಾರ್ಯದರ್ಶಿ ಡಾ.ಜಗನಾಥ ಬಿ.ಬಿಜಾಪುರ, ಜಂಟಿ ಕಾರ್ಯದರ್ಶಿ ಡಾ.ಮಹಾದೇವಪ್ಪ ವಿ.ರಾಂಪುರೆ, ಪ್ರಾಂಶುಪಾಲ ಡಾ.ಶರಣಗೌಡ ಎಸ್‌.ಪಾಟೀಲ, ಡಾ.ಮಲ್ಲಿಕಾರ್ಜುನ ಎಸ್‌.ತೆಗನೂರ, ಡಾ.ಮಹಾನಂದಾ ಎಸ್‌.ಮೇಲಕುಂದಿ ಇದ್ದರು.

ಕಲಿಕೆ ನಿರಂತರವಿರಲಿ: ವೇದಪ್ರಕಾಶ ಮಿಶ್ರಾ

‘ಇದೊಂದು ದೀಕ್ಷಾಂತ ಕಲಿಕಾ ಸಮಾರಂಭ. ಕಲಿಕಾರ್ಥಿಯು ಜೀವನ ಪರ್ಯಾಂತ ಕಲಿಕೆಯನ್ನೇ ಬಯಸುತ್ತಾನೆ. ಹೀಗಾಗಿ, ಕಾಲೇಜಿನಿಂದ ಹೊರ ಹೋದ ಬಳಿಕವು ನಿಮ್ಮ ಕಲಿಕೆ ನಿರಂತರವಿರಲಿ’ ಎಂದು ನಾಗಪುರದ ದತ್ತಾ ಮೇಘೆ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯದ ಕುಲಪತಿ ಡಾ.ವೇದಪ್ರಕಾಶ ಮಿಶ್ರಾ ಮುಖ್ಯ ಭಾಷಣದಲ್ಲಿ ಹೇಳಿದರು.

‘ನಾಡಿನ ಅಭುದ್ಯಯಕ್ಕೆ ಮಾತೃ ದೇವೋಬವ, ಪಿತೃ ದೇವೋಬವ, ಆಚಾರ್ಯ ದೇವೋಬವದ ಜತೆಗೆ ರಾಷ್ಟ್ರ ದೇವೋಬವ ಎಲ್ಲರೂ ಪಾಲಿಸಬೇಕು. ಕಲಿತ ಶಿಕ್ಷಣ ಸ್ವಂತ ಜೀವನಕ್ಕೆ ಉಪಯೋಗವಾಗದೆ ಇಡೀ ಸಮಾಜದ ಒಳಿತಿಗೆ ವಿನಿಯೋಗ ಆಗಬೇಕು. 21ನೇ ಶತಮಾನ ಭಾರತಕ್ಕೆ ಸೇರಿದ್ದು, ನಮ್ಮ ವೈದ್ಯ
ಕೀಯ ಶಿಕ್ಷಣ ಅಂತರರಾಷ್ಟ್ರೀಯ ಮಟ್ಟಕ್ಕೆ ಬೆಳೆಯುವಂತೆ ಆಗಬೇಕಾದರೇ ನಿಮ್ಮಲ್ಲಿ ಆವಷ್ಕರಣೆಯ ಮನೋಭಾವ ಬೆಳೆಸಿಕೊಳ್ಳಿ. ಇದರ ಜೊತೆಗೆ ವೈದ್ಯಕೀಯ ವೃತ್ತಿಯಲ್ಲಿ ಸಾಮಾಜಿಕ ಹೊಣೆಗಾರಿಕೆ ಇರಿಸಿಕೊಳ್ಳಿ’ ಎಂದರು.

ಮುಖದಲ್ಲಿ ಮಂದಹಾಸ ‌‌

ಕೋವಿಡ್ ಸಂಕಷ್ಟವನ್ನು ದಾಟಿ ವೈದ್ಯಕೀಯ ಪದವಿ ‍ಪ್ರಮಾಣಪತ್ರ ಕೈಯಲ್ಲಿ ಹಿಡಿದು, ಗೌನ್ ತೊಟ್ಟ ವಿದ್ಯಾರ್ಥಿಗಳ ಮುಖದಲ್ಲಿ ಮಂದಹಾಸ ಮೂಡಿತ್ತು. ವೈದ್ಯಕೀಯ ಸೇವೆ ಮಾಡುವ ಅದಮ್ಯ ಆಸೆ, ಕನಸು ಹೊತ್ತ ವಿದ್ಯಾರ್ಥಿಗಳಿಗೆ ಹಾಗೂ ಅವರ ‍ಪೋಷಕರಿಗೆ ಅದು ಸಂಭ್ರಮದ ಗಳಿಗೆಯಾಗಿತ್ತು. ಸಹಪಾಠಿಗಳು, ಬಂಧುಗಳು, ತಾಯಿ–ತಂದೆ, ಉಪನ್ಯಾಸಕರೊಂದಿಗೆ ಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದದ ದೃಶ್ಯಗಳು ಕಾಲೇಜು ಕ್ಯಾಂಪಸ್‌ನಲ್ಲಿ ಕಂಡುಬಂತು.

ಕೋವಿಡ್ ಅವಧಿಯಲ್ಲೂ ನನ್ನ ಕಲಿಕೆಗೆ ಕುಟುಂಬಸ್ಥರು ಬೆಂಬಲವಾಗಿ ನಿಂತು ಪ್ರೋತ್ಸಾಹಿಸಿದರು. ಅವರ ಆಸೆಯಂತೆ ವೈದ್ಯೆಯಾಗಿದ್ದು, ಮುಂದೆ ಒಬಿಜಿ ಮಾಡುವ ಇಚ್ಛೆ ಇದೆ.
ಮಾರಿಯಾ ಸುಲ್ತಾನ್, ಪದವೀಧರ ವಿದ್ಯಾರ್ಥಿನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT