ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳವಾಗಿ ನಡೆದ ಮಹಾಲಕ್ಷ್ಮಿ ರಥೋತ್ಸವ

ಕೊರೊನಾ ಸೋಂಕಿನ ಕಾರಣ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದು
Last Updated 5 ನವೆಂಬರ್ 2020, 2:36 IST
ಅಕ್ಷರ ಗಾತ್ರ

ಜೇವರ್ಗಿ: ಕಲ್ಯಾಣ-ಕರ್ನಾಟಕ ಭಾಗದಲ್ಲಿಯೇ ಸಗರನಾಡಿನ ಶಕ್ತಿ ದೇವತೆ ಎಂದು ಪ್ರಸಿದ್ಧಿ ಪಡೆದಿರುವ ಪಟ್ಟಣದ ಆರಾದ್ಯ ದೇವತೆ ಮಹಾಲಕ್ಷ್ಮಿ ಜಾತ್ರಾ ಮಹೋತ್ಸವದ ರಥೋತ್ಸವವನ್ನು ಕೊರೊನಾ ಸೋಂಕು ಹರಡುವ ಭೀತಿಯಿಂದ ಬುಧವಾರ ಸರಳವಾಗಿ ನೆರವೇರಿಸಲಾಯಿತು.

ಪ್ರತಿ ವರ್ಷದಂತೆ ಸೀಗಿ ಹುಣ್ಣಿಮೆ ನಂತರ ನಡೆಯುವ ಮಹಾಲಕ್ಷ್ಮಿ ದೇವಿಯ ಜಾತ್ರೆ ಸತತ ಐದು ದಿನಗಳವರೆಗೆ ಸರ್ಕಾರದ ನಿಯಮದಂತೆ ಸರಳವಾಗಿ ಸಾಂಪ್ರದಾಯಿಕವಾಗಿ ಆಚರಣೆ ಮಾಡಲಾಯಿತು.

ತಾಲ್ಲೂಕು ಆಡಳಿತ ಜಾತ್ರೆಯನ್ನು ರದ್ದು ಮಾಡಿದ್ದರಿಂದ ಯಾವುದೇ ಧಾರ್ಮಿಕ ಆಚರಣೆಗಳಿಗೆ ಅವಕಾಶ ನೀಡಲಿಲ್ಲ. ತಹಶೀಲ್ದಾರ್ ಸಿದರಾಯ ಭೋಸಗಿ ಬುಧವಾರ ಬೆಳಿಗ್ಗೆ 5.30ಕ್ಕೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ದರ್ಶನ ಪಡೆದ ನಂತರ ರಥೋತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ನಂತರ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಹೊರವಲಯದ ಆಯಿತಳ (ಸೀಮೆಯ ದೇವಸ್ಥಾನಕ್ಕೆ) ತೆರಳಿ ಉತ್ಸವ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಟ್ರಸ್ಟ್ ಕಮಿಟಿಯು ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ರದ್ದುಪಡಿಸಿತ್ತು.

ರಥೋತ್ಸವದ ಸಂದರ್ಭಲ್ಲಿ ತಹಶೀಲ್ದಾರ್ ಜತೆಯಲ್ಲಿ ಶಾಸಕ ಡಾ.ಅಜಯಸಿಂಗ್, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಇದ್ದರು.

ಕಳೆದ ಶನಿವಾರ ರಾತ್ರಿ ಬಡಿಗೇರ ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ನಂತರ ಭಾನುವಾರ ಇಡೀ ರಾತ್ರಿ ಭಜನೆ, ಸೋಮವಾರ ಬಡಿಗೇರ ಸಮಾಜದ ವತಿಯಿಂದ ವಿಶೇಷ ಪೂಜೆ ಜರುಗಿತು. ಮಂಗಳವಾರನಡುಗಟ್ಟೆಗೆ ಶ್ರೀದೇವಿಯ ಆಗಮನವಾಯಿತು.

ಬುಧವಾರದ ರಥೋತ್ಸವ ಸಂದರ್ಭದಲ್ಲಿ ಕೆಲವೇ ಕೆಲವು ಕಲಾ ಮೇಳಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಭಾಗವಹಿಸಿ ಸೇವೆ ಸಲ್ಲಿಸಿದರು. ಬೆಳಿಗ್ಗೆ 9ಕ್ಕೆ ರಥೋತ್ಸವ ಸಜ್ಜನ್ ಕಲ್ಯಾಣ ಮಂಟಪ ತಲುಪಿತು. ನಂತರ ರಥೋತ್ಸವ ಕಟ್ಟಿದ ಮಂಟಪವನ್ನು ಬಿಚ್ಚಿಟ್ಟು ಹಿರೇಗೌಡರ ಮನೆಗೆ ತೆಗೆದುಕೊಂಡು ಹೋದ ನಂತರ ಕೋಲಿ ಸಮುದಾಯದವರು ತಲೆಯ ಮೇಲೆ ದೇವಿಯ ಸಮೇತ ರಥವನ್ನು ಹೊತ್ತುಕೊಂಡು 4 ಕಿ.ಮೀ ದೂರದ ಸೀಮೇಯ ಮಂದಿರಕ್ಕೆ ತಂದರು. ಊರಿನ ಪ್ರಮುಖರು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ನಂತರ ಊರಿನ ಪಂಚರ ಸಮ್ಮುಖದಲ್ಲಿ ಕೋಲಿ ಸಮುದಾಯದವರು ದೇವಿಯ ಆಭರಣಗಳನ್ನು ಟ್ರಸ್ಟ್ ಕಮಿಟಿಗೆ ಹಸ್ತಾಂತರಿಸಿದರು.

ನೈವೇದ್ಯ ನಿಷೇಧ: ಕೊರೊನಾ ವೈರಸ್ ಹರಡುವ ಆತಂಕದಿಂದ ದೇವಿಗೆ ನೈವೇದ್ಯ, ಕಾಯಿ ಕರ್ಪೂರ ಅರ್ಪಿಸುವುದು ನಿಷೇಧಿಸಲಾಗಿತ್ತು. ದೇವಸ್ಥಾನಕ್ಕೆ ಬೀಗ ಹಾಕಿದ ಪರಿಣಾಮ ಹೊರಗೆ ನೆರೆದ ಅನೇಕ ಜನ ಭಕ್ತರು ಬಾಗಿಲಿಗೆ ನಮಸ್ಕರಿಸಿ ಹರಕೆ ತೀರಿಸಿದರು.

ರಥೋತ್ಸವದಲ್ಲಿ ಮುಖಂಡರಾದ ಅಶೋಕ ಸಾಹು ಗೋಗಿ, ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ರಮೇಶಬಾಬು ವಕೀಲ, ಶಿವಶರಣಪ್ಪಗೌಡ ಮಾಲಿಪಾಟೀಲ, ಸೋಮಣ್ಣ ಕಲ್ಲಾ, ಷಣ್ಮುಖಪ್ಪ ಸಾಹು ಗೋಗಿ, ದಂಡಪ್ಪಗೌಡ ಪೊಲೀಸ್ ಪಾಟೀಲ, ಮಲ್ಲಶೆಟ್ಟೆಪ್ಪಗೌಡ ಹಿರೇಗೌಡ, ಮಲ್ಲಿಕಾರ್ಜುನ ಅವುಂಟಿ, ನೀಲಕಂಠ ಅವಂಟಿ, ಜಗದೀಶ ವಿಶ್ವಕರ್ಮ, ಗುಂಡು ಬಡಿಗೇರ, ರವಿ ಕೋಳಕೂರ, ಶರಣಗೌಡ ಪೂಜಾರಿ, ಭೀಮು ತಳವಾರ, ರಾಜು ತಳವಾರ, ಹರಿಶ್ಚಂದ್ರ ಕೊಡಚಿ, ಚಂದನ ಮಹೇಂದ್ರಕರ್, ಸಂಗಮೇಶ ಕೊಂಬಿನ್, ವಿಶ್ವ ಮದಕರಿ, ಬಸವರಾಜ ಮಡಿವಾಳಕರ್ ಇದ್ದರು.

ಸಿಪಿಐ ರಮೇಶ ರೊಟ್ಟಿ ಹಾಗೂ ಪಿಎಸ್‍ಐ ಮಂಜುನಾಥ ಹೂಗಾರ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT