ಬುಧವಾರ, ಸೆಪ್ಟೆಂಬರ್ 22, 2021
23 °C

ಬನ್ನಿ, ಹಸಿರು ಕಲಬುರ್ಗಿಗೆ ಕೈ ಜೋಡಿಸಿ..

ಸತೀಶ್‌ ಬಿ. Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಬಿಸಿಲ ನಾಡು’ ಕಲಬುರ್ಗಿ ಯಲ್ಲಿ ಬೇಸಿಗೆಯಲ್ಲಿ ಸರಾಸರಿ ಉಷ್ಣಾಂಶ 44 ಡಿಗ್ರಿ ಸೆಲ್ಸಿಯಸ್ ಇರುತ್ತದೆ. ಇದು ಇಲ್ಲಿನ ಜನರ ಆರೋಗ್ಯ, ಉದ್ಯೋಗ ಮತ್ತು ಉತ್ಪಾದಕತೆಯ ಮೇಲೆಯೂ ದುಷ್ಪರಿಣಾಮ ಬೀರುತ್ತಿದೆ.

ಇದನ್ನು ಹೋಗಲಾಡಿಸಬೇಕಾದರೆ ಕಲಬುರ್ಗಿ ಹಸಿರಾಗಬೇಕು. ಹಸರೀಕರಣಕ್ಕೆ ಒತ್ತು ನೀಡುವ ಮೂಲಕ ತಾಪಮಾನ ಕಡಿಮೆಗೊಳಿಸಬೇಕು. ಹಾಗಾಗಬೇಕಾದರೆ ಎಲ್ಲೆಡೆ ಸಸಿ ನೆಟ್ಟು ಬೆಳೆಸಬೇಕು ಎಂಬುದು ಎಲ್ಲರೂ ಹೇಳುವ ಮಾತು. 

ಒಂದು ಪ್ರದೇಶದಲ್ಲಿ ತಂಪು ವಾತಾವರಣ ಇರಬೇಕಾದರೆ ಶೇ 33ರಷ್ಟು ಅರಣ್ಯ ಪ್ರದೇಶ ಇರಬೇಕು. ಇಲ್ಲದಿದ್ದರೆ ಕನಿಷ್ಠ ಶೇ 22ರಷ್ಟಾದರೂ ಇರಬೇಕು. ಆದರೆ, ಜಿಲ್ಲೆಯ ಅರಣ್ಯ ಪ್ರಮಾಣ ಇರುವುದು ಶೇ 1.7 ರಷ್ಟು ಮಾತ್ರ. ಹೀಗಾಗಿ ಗಿಡಗಳನ್ನು ಹೆಚ್ಚು ಬೆಳೆಸಬೇಕು ಎನ್ನುವುದು ಪರಿಣತರ ಸಲಹೆ.

ನಗರದ ಉದ್ಯಾನಗಳು, ರಸ್ತೆಗಳ ಬದಿ, ಖಾಲಿ ಪ್ರದೇಶಗಳು, ಬಂಜರು ಭೂಮಿ ಸೇರಿ ಇತರೆಡೆ ಸಸಿಗಳನ್ನು ನೆಡಲು ಅವಕಾಶ ಇದೆ. ಅಲ್ಲದೆ, ಸಸಿಗಳನ್ನು ನೆಟ್ಟ ನಂತರ ಅವುಗಳನ್ನು ಪೋಷಿಸಿದರೆ ಮಾತ್ರ ಅವು ಉಳಿಯುತ್ತವೆ. ಅರಣ್ಯ ಇಲಾಖೆ ಪ್ರತಿ ವರ್ಷ ಸಸಿಗಳನ್ನು ನೆಡುತ್ತದೆ. ಆದರೆ, ನಿರ್ವಹಣೆ ಕೊರತೆಯಿಂದ ಬಹುತೇಕವು ಉಳಿಯುವುದಿಲ್ಲ. ಹೀಗಾಗಿ ನಗರದ ಹಸಿರೀಕರಣ ಸಾಧ್ಯವಾಗಿಲ್ಲ ಎನ್ನುತ್ತಾರೆ ಪರಿಸರ ಪ್ರೇಮಿಗಳು.

ಅರಣ್ಯ ಇಲಾಖೆ ಜತೆಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಸಹ ಸಸಿ ನೆಡುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕಾಗಿದೆ. ಕನಿಷ್ಠ ಮನೆಗೆ ಒಂದು ಗಿಡವನ್ನು ನೆಟ್ಟರೂ ನಗರವನ್ನು ಹಸಿರಾಗಿಸಬಹುದು.

‘ಹಸಿರು ಕಾಯಕ’

ನಗರದಲ್ಲಿ ಸಸಿಗಳನ್ನು ನೆಟ್ಟು ಬೆಳೆಸುವ ಕೆಲಸವನ್ನು ‘ಹಸಿರು ಕಲಬುರ್ಗಿ’ ಸಂಘಟನೆ ಐದು ವರ್ಷಗಳಿಂದ ಮಾಡುತ್ತಿದೆ.

‘2016ರಿಂದ ಈ ವರೆಗೆ ಸಂಘಟನೆ ವತಿಯಿಂದ 85 ಸಾವಿರಕ್ಕೂ ಹೆಚ್ಚು ಸಸಿಗಳನ್ನು ನೆಡಲಾಗಿದೆ. ಅಲ್ಲದೆ, 50 ಸಾವಿ
ರಕ್ಕೂ ಹೆಚ್ಚು ಸಸಿಗಳನ್ನು ಸಾರ್ವಜನಿಕರಿಗೆ ವಿತರಿಸಿದ್ದೇವೆ’ ಎನ್ನುತ್ತಾರೆ ಸಂಘಟನೆಯ ಸಂಸ್ಥಾಪಕ ಸಿದ್ದು ಪಾಟೀಲ ತೆಗನೂರ.

‘ಈ ವರ್ಷ ಕೋವಿಡ್ ಕಾರಣ ಸಸಿ ನೆಡುವ ಕೆಲಸ ಸಾಧ್ಯವಾಗಿಲ್ಲ. ನಗರದ ಉದ್ಯಾನಗಳು, ವಿವಿಧ ಬಡಾವಣೆಗಳು, ಖಾಲಿ ಜಾಗ, ರಸ್ತೆ ಬದಿ ಸೇರಿದಂತೆ ವಿವಿಧ ಕಡೆ ಕಳೆದ ಐದಾರು ವರ್ಷಗಳಲ್ಲಿ ಹಚ್ಚಿರುವ ಗಿಡಗಳಲ್ಲಿ ಶೇ 85ಕ್ಕೂ ಹೆಚ್ಚು ಬದುಕುಳಿದಿವೆ. ಸಸಿ ನೆಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಘಟನೆ ವತಿಯಿಂದ ಮಾಡಲಾಗುತ್ತಿದೆ. ಶಾಲೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಬೀಜದುಂಡೆಗಳನ್ನು ತಯಾರಿಸುವ ಬಗ್ಗೆ ಮಾಹಿತಿ ನೀಡಲಾಗಿದೆ’ ಎಂಬುದು ಅವರ ವಿವರಣೆ.

‘ಮುಂದಿನ ವರ್ಷ ಬಿದಿರು ವನ ನಿರ್ಮಿಸುವ ಉದ್ದೇಶ ಇದೆ. ಇದರಿಂದ ಹೆಚ್ಚು ಆಮ್ಲಜನಕ ಸಿಗುತ್ತದೆ. ಅಲ್ಲದೆ, ರೈತರಿಗೂ ಇದರಿಂದ ಆದಾಯ ಬರುತ್ತದೆ’ ಎನ್ನುತ್ತಾರೆ ಅವರು.

ನೆರಳು ನೀಡುತ್ತಿರುವ ಸಾವಿರಾರು ಮರಗಳು

ಜಾಲಿ ಗಿಡಗಳಿಂದ ತುಂಬಿದ್ದ ನಗರದ ಜಿಡಿಎ ಲೇಔಟ್‌, ಗಾಬರೆ ಲೇಔಟ್ ಮತ್ತು ಹೌಸಿಂಗ್‌ ಬೋರ್ಡ್ ಕಾಲೊನಿಯಲ್ಲಿ ಈಗ ತಂಪಾದ ಗಾಳಿ, ಹಸಿರು ನಮ್ಮನ್ನು ಸ್ವಾಗತಿಸುತ್ತಿದೆ. ಇದಕ್ಕೆ ಕಾರಣ ಪರಿಸರ ಪ್ರೇಮಿ, ಪತ್ರಕರ್ತ ಕೆ.ಎನ್.ರೆಡ್ಡಿ ಮತ್ತು ಅವರ ಸ್ನೇಹಿತರ ಶ್ರಮ.

ರೆಡ್ಡಿ ಮತ್ತು ಅವರ ಸ್ನೇಹಿತರು ಐದಾರು ವರ್ಷಗಳ ಹಿಂದೆ ಈ ಮೂರು ಬಡಾವಣೆಗಳಲ್ಲಿ ರಸ್ತೆ ಬದಿ ನೆಟ್ಟಿರುವ ಗಿಡಗಳು ಈಗ ಆಳೆತ್ತರ ಬೆಳೆದಿವೆ. ಇದರಿಂದ ಈ ಬಡಾವಣೆಗಳು ಹಸಿರುಮಯವಾಗಿವೆ.

ಬೇವು, ರೇನ್‌ಟ್ರೀ, ಆಲ, ಗುಲ್‌ಮೊಹರ್, ಹೊಂಗೆ ಗಿಡಗಳು ಸೇರಿ ಐದು ಸಾವಿರಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ಅವುಗಳಲ್ಲಿ ಶೇ 90ಕ್ಕೂ ಹೆಚ್ಚು ಗಿಡಗಳು ಬದುಕಿವೆ. ಬಡಾವಣೆ ನಿವಾಸಿಗಳೇ ಸ್ವಂತ ಹಣದಲ್ಲಿ, ಅರಣ್ಯ ಇಲಾಖೆ ಸಹಯೋಗದಲ್ಲಿ ಗಿಡಗಳನ್ನು ಪೋಷಣೆ ಮಾಡಿರುವುದು ವಿಶೇಷ.

‘2013 ರಲ್ಲಿ ನಾವು ಇಲ್ಲಿ ಮನೆ ಕಟ್ಟುವಾಗ ಈ ಬಡಾವಣೆಯಲ್ಲಿ ಯಾವುದೇ ಗಿಡಗಳು ಇರಲಿಲ್ಲ. ಸಂಪೂರ್ಣ ಜಾಲಿ ಗಿಡಗಳಿಂದ ಆವೃತವಾಗಿತ್ತು. ಹೀಗಾಗಿ ಸಸಿ ನೆಡುವ ಯೋಚನೆ ಹೊಳೆಯಿತು. ನಿವೃತ್ತ ಶಿಕ್ಷಕ ಬಾಬುರಾವ್ ಕುಲಕರ್ಣಿ, ಕೆಪಿಟಿಸಿಎಲ್‌ನ ನಿವೃತ್ತ ಸೂಪರಿಟೆಂಡೆಂಟ್‌ ಎಂಜಿನಿಯರ್‌ ಸಿದ್ರಾಮಪ್ಪ ಬಂಡಿಮನಿ, ಗುತ್ತಿಗೆದಾರ ಹುಲಿಕಂಟರಾಯ ಮತ್ತು ಬಡಾವಣೆ ನಿವಾಸಿಗಳ ಸಭೆ ನಡೆಸಿ ಎಲ್ಲರ ಸಹಕಾರದಿಂದ ಸಸಿ ಗಳನ್ನು ನೆಡಲಾಯಿತು’ ಎನ್ನುತ್ತಾರೆ ಕೆ.ಎನ್.ರೆಡ್ಡಿ.

‘ನನ್ನ ತಾಯಿ ₹5 ಲಕ್ಷ ಹಣ ನೀಡಿದ್ದರು. ಅದರಲ್ಲಿ ಟ‌್ರ್ಯಾಕ್ಟರ್, ಟ್ಯಾಂಕರ್ ಖರೀದಿಸಿದೆ. ಪಾಲಿಕೆಯಿಂದ ಕೊಳವೆಬಾವಿ ಕೊರೆಸಿ ಕೊಟ್ಟರು. ಆ ಮೂಲಕ ಗಿಡಗಳನ್ನು ಪೋಷಣೆ ಮಾಡಲಾಯಿತು. ಗಿಡಗಳ ನಿರ್ವಹಣೆಗೆ ಪ್ರತಿ ತಿಂಗಳು ₹35 ಸಾವಿರಕ್ಕೂ ಹೆಚ್ಚು ಖರ್ಚಾಗುತ್ತಿತ್ತು’ ಎಂದರು.

‘ಈಗ ಗಿಡಗಳು ಚೆನ್ನಾಗಿ ಬೆಳೆದಿವೆ. ಇದರಿಂದ ಬೇಸಿಗೆಯಲ್ಲಿ ಫ್ಯಾನ್, ಎ.ಸಿ ಇಲ್ಲದೆ ಆರಾಮವಾಗಿ ನಿದ್ದೆ ಮಾಡಬಹುದು. ತಂಪಾದ ಗಾಳಿ ಬರುತ್ತದೆ ‌’ ಎಂದು ತಿಳಿಸಿದರು.

‘ಸಾರ್ವಜನಿಕರ ಸಹಯೋಗ ಅಗತ್ಯ’

‘ಪರಿಸರ ಸ್ನೇಹಿ ನಗರವನ್ನಾಗಿ ಮಾಡಲು ಮತ್ತು ಹಸಿರೀಕರಣಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಸಾರ್ವಜನಿಕರು ಇದಕ್ಕೆ ಕೈಜೋಡಿಸಬೇಕು’ ಎಂದು ಕಲಬುರ್ಗಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ ಮನವಿ ಮಾಡಿದರು.

‘ನಗರದ ಮುಖ್ಯ ರಸ್ತೆಗಳನ್ನು ಗುರುತಿಸಿ ರಸ್ತೆ ವಿಭಜಕದ ಮಧ್ಯೆ ಸಸಿಗಳನ್ನು ನೆಡುವ ಕಾರ್ಯವನ್ನು ಆರಂಭಿಸಲಾಗಿದೆ. ಜೇವರ್ಗಿ ರಸ್ತೆ, ಹೀರಾಪುರ ಕ್ರಾಸ್ ರಸ್ತೆ, ಜಗತ್ ವೃತ್ತದಿಂದ ಎಸ್‌ವಿಪಿ ವೃತ್ತದವರೆಗೆ ಸಸಿ ನೆಡಲಾಗುವುದು. ಈಗ ರಸ್ತೆ ಬದಿ ಇರುವ ಗಿಡಗಳನ್ನುಸಹ ಸಮರ್ಪಕವಾಗಿ ನಿರ್ವಹಣೆ ಮಾಡಲಾಗುವುದು’ ಎಂದು ಹೇಳಿದರು.

ನಗರಗಳಲ್ಲಿನ ಉದ್ಯಾನಗಳನ್ನು ಅಭಿವೃದ್ಧಿಗೊಳಿಸಿ ಅಲ್ಲಿ ಸಸಿ ನೆಡಲಾಗುವುದು. ಪಾದಚಾರಿ ಮಾರ್ಗ ನಿರ್ಮಾಣ, ನೀರಿನ ಸೌಲಭ್ಯ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಅರಣ್ಯ ಇಲಾಖೆಯ ಸಹಯೋಗದಲ್ಲಿ ನಗರದಲ್ಲಿ ಅರಣ್ಯ ವನ ಬೆಳೆಸಲಾಗುವುದು. ಇದಕ್ಕಾಗಿ ಅರಣ್ಯ ಇಲಾಖೆಗೆ ಮೂರು ವರ್ಷಕ್ಕೆ ಗುತ್ತಿಗೆ ನೀಡಲಾಗುವುದು. ಅವರು ಗಿಡಗಳನ್ನು ನೆಟ್ಟು ಬೆಳೆಸಿ ಕೊಡುತ್ತಾರೆ ಎಂದರು.

ಗ್ರೀನ್ ಕಲಬುರ್ಗಿ ಎಂದರೆ ಬರಿ ಸಸಿ ನೆಡುವುದು ಅಷ್ಟೇ ಅಲ್ಲ. ಅದರ ಜತೆಗೆ ಮಾಲಿನ್ಯವನ್ನು ತಡೆಯುುವುದು, ಇಂಧನ ಉಳಿಸುವುದು ಆಗಿದೆ. ಹೀಗಾಗಿ ನಗರದಲ್ಲಿ ಸೈಕಲ್ ಟ್ರ್ಯಾಕ್ ನಿರ್ಮಿಸಲಾಗುತ್ತಿದೆ. ಅಲ್ಲದೆ, ಹೀರಾಪುರ ಕ್ರಾಸ್‌ನಿಂದ ಖರ್ಗೆ ಪೆಟ್ರೋಲ್ ಬಂಕ್ ವರೆಗೆ ಪ್ರತ್ಯೇಕ ಬಸ್‌ ಮತ್ತು ಸೈಕಲ್ ಟ್ರ್ಯಾಕ್ ಮಾರ್ಗ ನಿರ್ಮಿಸಲಾಗುವುದು. ತ್ಯಾಜ್ಯದಿಂದ ಗೊಬ್ಬರ ತಯಾರಿಸಲಾಗುವುದು ಎಂದು ತಿಳಿಸಿದರು.

‘ಅರಣ್ಯೀಕರಣಕ್ಕೆ ದೂರದೃಷ್ಟಿ ಅಗತ್ಯ’

ನಗರದಲ್ಲಿ ಸಾಕಷ್ಟು ಖಾಲಿ ಭೂಮಿ ಇದೆ. ನಗರಾಭಿವೃದ್ಧಿ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ ಗಿಡಗಳನ್ನು ಬೆಳೆಸಿದರೆ ಬೇಸಿಗೆಯಲ್ಲಿ ತಾಪಮಾನವನ್ನು ಕಡಿಮೆ ಮಾಡಬಹುದು ಎನ್ನುತ್ತಾರೆ ರಾಜ್ಯಮಟ್ಟದ ‘ದಿಶಾ’ ಸಮಿತಿ ಸದಸ್ಯೆ ಸಂಗೀತಾ ಕಟ್ಟಿಮನಿ. ಬಿಸಲು ಮತ್ತು ಅದನ್ನು ಕಡಿಮೆ ಮಾಡುವ ಬಗೆಯ ಕುರಿತು ಅವರು ಹೇಳುವುದು ಹೀಗೆ...

ಜಿಲ್ಲೆಯನ್ನು ಅರಣ್ಯೀಕರಣ ಮಾಡಲು ದೂರದೃಷ್ಟಿಯ ಯೋಜನೆ ಇರಬೇಕು. ಹಸಿರು ರಸ್ತೆಗಳನ್ನು ನಿರ್ಮಿಸಬೇಕು. ನಗರದಲ್ಲಿ ಕನಿಷ್ಠ ಎರಡು ಅರಣ್ಯ ವನ ನಿರ್ಮಿಸಬೇಕು. ಇದರಿಂದ ಗುಣಮಟ್ಟದ ಗಾಳಿ ಸಿಗುತ್ತದೆ. ತಂಪು ವಾತಾವರಣ ನಿರ್ಮಾಣವಾಗುತ್ತದೆ.

ನಗರದಲ್ಲಿ ಮಾರ್ಚ್‌ನಿಂದ ಜೂನ್‌ ವರೆಗೆ ಗರಿಷ್ಠ ತಾಪಮಾನ ಇರುತ್ತದೆ. ತಾಪಮಾನ ಉತ್ಪಾದಕತೆ ಮೇಲೆ ಪರಿಣಾಮ ಬೀರುತ್ತದೆ. ಜಿಲ್ಲಾ ಆದಾಯದಲ್ಲಿ ಕಳೆದ ವರ್ಷ ಕಲಬುರ್ಗಿ ಜಿಲ್ಲೆ ಕೊನೆಯ ಸ್ಥಾನದಲ್ಲಿತ್ತು. 2019ರ ವರದಿ ಪ್ರಕಾರ ಹೆಚ್ಚು ತಾಪಮಾನದಿಂದ ದೇಶದಲ್ಲಿ 118 ಬಿಲಿಯನ್ ಗಂಟೆ ಕಾರ್ಮಿಕರ ಕೆಲಸದ ಅವಧಿ ಕಡಿಮೆ ಆಗಿದೆ. ಬಿಸಿಲು ಕಾರ್ಮಿಕರ ಆರೋಗ್ಯ, ಕೆಲಸದ ಮೇಲೆಯೂ ಪರಿಣಾಮ ಬೀರುತ್ತಿದೆ. ಸದ್ಯ ಶೇ 33ರಷ್ಟು ನಗರೀಕರಣ ಬೆಳೆದಿದೆ. 2050ರ ವೇಳೆಗೆ ಜನಸಂಖ್ಯೆ, ವಾಹನಗಳ ಸಂಖ್ಯೆಯೂ ಹೆಚ್ಚಾಗುತ್ತದೆ. ಅದಕ್ಕೆ ಅನುಗುಣವಾಗಿ ಗುಣಮಟ್ಟದ ಜೀವನ, ಜೀವನ ಆಧಾರ ಕಲ್ಪಿಸಬೇಕು. ಇವೆರಡೂ ಹಸಿರೀಕರಣದಿಂದ ಸಾಧ್ಯ ಎನ್ನುತ್ತಾರೆ ಅವರು.

ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆಯ ವರದಿಯಲ್ಲಿ ಜಿಲ್ಲೆಯ 6ರಿಂದ 59 ಮಕ್ಕಳಲ್ಲಿ ಅನಿಮಿಯಾ ಇದೆ ಎಂದು ದೃಢಪಡಿಸಿದೆ. ಶೇ 56ರಷ್ಟು ಮಹಿಳೆಯರಲ್ಲಿ ರಕ್ತಹೀನತೆ ಇದೆ ಎಂದು ಹೇಳಿದೆ. ಒಂದು ಮರ 10 ಎಸಿಗಳಿಗೆ ಸಮ. ಹೀಗಾಗಿ ಎಲ್ಲ ಶಾಲೆ, ಕಾಲೇಜುಗಳಲ್ಲಿ ವನ ನಿರ್ಮಿಸಬೇಕು. ಇದರಿಂದ ಫಲಿತಾಂಶ ಹೆಚ್ಚಾಗುತ್ತದೆ.

ರಾಜ್ಯ ಸರ್ಕಾರದ ಕೌಶಲ ಅಭಿವೃದ್ಧಿ ಕಾಯ್ದೆಯಲ್ಲಿ ಹಸಿರು ಉದ್ಯೋಗ ಸೃಷ್ಟಿ ಮಾಡುವ ಉದ್ದೇಶ ಇದೆ. ಸೌರ ವಿದ್ಯುತ್ ಉತ್ಪಾದನೆ, ನೀರಿನ ಪುನರ್ಬಳಕೆ, ತ್ಯಾಜ್ಯ ನಿರ್ವಹಣೆಯಲ್ಲಿ ಉದ್ಯೋಗ ಸೃಷ್ಟಿ ಮಾಡಬಹುದು ಎನ್ನುವುದು ಸಂಗೀತಾ ಅವರ ಪ್ರತಿಪಾದನೆ.

‘ಸಸಿ ನೆಡಲು ಅನುದಾನ ಕೊರತೆ’

‘ಕೋವಿಡ್ ಕಾರಣ ಕಳೆದ ವರ್ಷ ಸರ್ಕಾರ ಯಾವುದೇ ಅನುದಾನ ನೀಡಿಲ್ಲ. ಹೀಗಾಗಿ ಈ ವರ್ಷ ಹೊಸದಾಗಿ ಸಸಿಗಳನ್ನು ನೆಡಲು ಸಾಧ್ಯವಾಗಿಲ್ಲ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಂ.ಎಂ.ವಾನತಿ ಹೇಳಿದರು.

‘ಜಿಲ್ಲೆಯ ನರ್ಸರಿಗಳಲ್ಲಿ ಈ ಹಿಂದೆ ಬೆಳೆಸಿದ್ದ ಗಿಡಗಳನ್ನೇ ರೈತರಿಗೆ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ ಸೇರಿದಂತೆ ವಿವಿಧ ಯೋಜನೆಗಳ ಅಡಿ ವಿತರಿಸಲಾಗಿದೆ. ಅಲ್ಲದೆ, ಈಗ ಹಚ್ಚಿರುವ ಗಿಡಗಳನ್ನು ನಿರ್ವಹಣೆ ಮಾಡಲಾಗುತ್ತಿದೆ’ ಎಂದರು.

‘ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ 200 ಹೆಕ್ಟೇರ್‌ ಪ್ರದೇಶದಲ್ಲಿ ಸಸಿ ನೆಡುವ ಗುರಿ ಹೊಂದಲಾಗಿತ್ತು. ಈಗ ಅದರಲ್ಲಿ ಶೇ 75ರಷ್ಟು ಪ್ರದೇಶದಲ್ಲಿ ಸಸಿಗಳನ್ನು ನೆಡಲಾಗಿದೆ’ ಎಂದು ತಿಳಿಸಿದರು.

‘ನಗರದಲ್ಲಿ ಉದ್ಯಾನಗಳು, ರಸ್ತೆ ಬದಿ, ಖಾಲಿ ಸ್ಥಳಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಪ್ರತಿ ವರ್ಷ ಕನಿಷ್ಠ 20,000 ಸಾವಿರ ಸಸಿಗಳನ್ನು ನೆಡಲಾಗಿದೆ. ಅದರಲ್ಲಿ ಶೇ 80ಕ್ಕೂ ಹೆಚ್ಚು ಗಿಡಗಳು ಬೆಳೆದಿವೆ. ಸಸಿ ಹಚ್ಚಿದ ವರ್ಷ ಮತ್ತು ಅದರ ನಂತರದ ವರ್ಷ ಸಸಿಗಳನ್ನು ಇಲಾಖೆಯಿಂದ ನಿರ್ವಹಣೆ ಮಾಡುತ್ತೇವೆ. ಅದರ ನಂತರ ನಿರ್ವಹಣೆ ಮಾಡಲು ಸಾರ್ವಜನಿಕರು ಸಹ ಇಲಾಖೆ ಜತೆ ಕೈಜೋಡಿಸಬೇಕು’ ಎಂದರು.

‘ಜಿಲ್ಲೆಯ ಆಳಂದ ತಾಲ್ಲೂಕಿನ ಕೊರಳ್ಳಿ, ಕಲಬುರ್ಗಿ ಹೊರವಲಯದ ಉಪಳಾಂವ್‌ ಮತ್ತು ಚಿಂಚೋಳಿಯ ಪೋಲಕಪಲ್ಲಿಯಲ್ಲಿ ಅರಣ್ಯ ವನ ಇದೆ. ಉಪಳಾಂವ್‌ನ ವನ ನಗರದಿಂದ ದೂರ ಇದೆ. ನಗರದಲ್ಲಿ ಜಾಗ ಸಿಕ್ಕರೆ ಇಲ್ಲಿಯೂ ವನವನ್ನು ಅಭಿವೃದ್ಧಿಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು