ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕನಿಕರದ ಬದಲು ಹೆಣ್ಣಿಗೆ ಸಬಲೀಕರಣ ಅಗತ್ಯ’

ಕನ್ನಡ ಸಾಹಿತ್ಯ ಮತ್ತು ಮಹಿಳೆ ಕುರಿತ ಉಪನ್ಯಾಸದಲ್ಲಿ ಮಲ್ಲಿಕಾ ಘಂಟಿ
Last Updated 21 ಏಪ್ರಿಲ್ 2021, 5:25 IST
ಅಕ್ಷರ ಗಾತ್ರ

ಕಲಬುರ್ಗಿ: ಹೆಣ್ಣಿಗೆ ಕನಿಕರಕ್ಕಿಂತಲೂ ಸಬಲೀಕರಣ, ಸ್ವಾತಂತ್ರ್ಯ, ಹಕ್ಕು ಹಾಗೂ ಅವಕಾಶಗಳನ್ನು ನೀಡಬೇಕು ಎಂದು ವಿಶ್ರಾಂತ ಕುಲಪತಿ ಪ್ರೊ. ಮಲ್ಲಿಕಾ ಘಂಟಿ ಅಭಿಪ್ರಾಯಪಟ್ಟರು.

ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ವತಿಯಿಂದ ಹರಿಹರ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕನ್ನಡ ಸಾಹಿತ್ಯ ಮತ್ತು ಮಹಿಳೆ ಕುರಿತು ಅವರು ಉಪನ್ಯಾಸ ನೀಡಿದರು.

‘ಸಂಚಿ ಹೊನ್ನಮ್ಮ ಹೇಳಿದಂತೆ ಊಳಿಗಮಾನ್ಯ ವ್ಯವಸ್ಥೆಯನ್ನು ವಿರೋಧಿಸಿದ್ದು ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಕಾಣಬಹುದು. 12ನೇ ಶತಮಾನದ ಜೇಡರ ದಾಸಿಮಯ್ಯ, ಗೊಗ್ಗವ್ವೆಯರ ವಚನಗಳು ಅತ್ಯಂತ ಪ್ರಮುಖವಾಗಿವೆ. ಜ್ಞಾನ ಮಹಿಳೆಯರಿಗೂ ಸಿಗಬೇಕು. ಜ್ಞಾನ ದೊರಕಿದಾಗ ಮೋಕ್ಷ ಸಾಧ್ಯ. ಜ್ಞಾನ ಮೂಲದಿಂದ ಹೊರಗಿಡುವಂಥದ್ದು ದುರಂತದ ಸಂಗತಿ’ ಎಂದರು.

‘ಹೆಣ್ಣಿಗೆ ಬೇಕಾದ ಜ್ಞಾನ ಸಂಪತ್ತು ವಂಚಿಸಿದ ಕಾರಣಕ್ಕೆ ಮಹಿಳೆಯರು ಅಕ್ಷರ ಜ್ಞಾನದಿಂದ ವಂಚಿತರಾದರು. ಸಾಹಿತ್ಯವನ್ನು ಹೋರಾಟದ ಹಿನ್ನಲೆಯಲ್ಲಿ ಸಾಮಾಜಿಕ ಹಿನ್ನಲೆಯಲ್ಲಿ ನಾನು ಸಾಹಿತ್ಯಕವಾಗಿ ತೊಡಗಿಸಿಕೊಂಡೆ. ಮಹಿಳೆಯರು ಸಾಮಾಜಿಕವಾಗಿ ತಮ್ಮ ನೋವು ಕಷ್ಟ ಕಾರ್ಪಣ್ಯ, ಸಮಾಜದ ಪ್ರತಿಬಿಂಬ ಎನ್ನುವಂತೆ ಹೆಣ್ಣಿನ ಸಾಮರ್ಥ್ಯವನ್ನು ವಿಶ್ಲೇಷಿಸುವಂತಹ ಕೆಲಸ ಆಧುನಿಕ ಸಂದರ್ಭದಲ್ಲಿ ನಡೆಯಿತು. ಕಾರ್ಮಿಕ ಹೋರಾಟದಲ್ಲಿ ಕೂಡ ಮಹಿಳೆಯರು ತೊಡಗಿಸಿಕೊಂಡರು. ಸಂಪ್ರದಾಯವಾದಿಗಳು ಬುದ್ಧಿ ಜೀವಿಗಳಿಂದಲೇ ಸ್ತ್ರೀಯರ ಸ್ವಾತಂತ್ರ್ಯಕ್ಕೆ ಧಕ್ಕೆ ಎನ್ನುವ ರೀತಿಯಲ್ಲಿ ನಿರಾಕರಿಸಿದೆ. ಮಹಿಳೆಯರು ಸಹ ಪುರುಷರ ಗ್ರಹಿಕೆಯಂತೆ ಬರೆದದ್ದು ಕನ್ನಡ ಸಾಹಿತ್ಯದಲ್ಲಿ ಕಾಣಬಹುದು’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕ, ಕಲಾನಿಕಾಯದ ಡೀನ್ ಪ್ರೊ. ಎಚ್.ಟಿ. ಪೋತೆ ಮಾತನಾಡಿ, ‘ರೈತ ಕುಟುಂಬದಿಂದ ಬಂದ ಮಹಿಳೆ ವಿದ್ಯಾರ್ಥಿಗಳಿಗೆ ತನು, ಮನ, ಧನದಿಂದ ಸಹಕಾರ ನೀಡಿ ಪ್ರೋತ್ಸಾಹಿಸಿದಂತಹವರು ಪ್ರೊ. ಮಲ್ಲಿಕಾ ಘಂಟಿ ಅವರು. ಅವರ ಹಲವಾರು ವಿಚಾರ, ಚಿಂತನೆಗಳು ಸಂಘರ್ಷಾತ್ಮಕ, ಸಂಘಟನಾತ್ಮಕ ವಿಚಾರಗಳನ್ನು ವಿದ್ಯಾರ್ಥಿಗಳಲ್ಲಿ ಬಿತ್ತಿದ್ದರು’ ಎಂದರು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಡಾ. ವಿಕ್ರಮ ವಿಸಾಜಿ ವೇದಿಕೆಯಲ್ಲಿದ್ದರು.

ಡಾ. ಸೂರ್ಯಕಾಂತ ಸುಜ್ಯಾತ್, ಡಾ. ಶ್ರೀಶೈಲ ನಾಗರಾಳ, ಡಾ. ಎಚ್.ಎಸ್. ಹೊಸಮನಿ, ಡಾ. ಶಾಂತಪ್ಪ ಡಂಬಳ ಮತ್ತು ಕನ್ನಡ ಅಧ್ಯಯನ ಸಂಸ್ಥೆ ಅತಿಥಿ ಉಪನ್ಯಾಸಕರು, ಸಂಶೋಧನ, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಡಾ. ಎಂ.ಬಿ. ಕಟ್ಟಿ ಸ್ವಾಗತಿಸಿದರು, ಡಾ. ಸಂತೋಷಕುಮಾರ ಕಂಬಾರ ನಿರೂಪಿಸಿದರು, ಡಾ. ಹಣಮಂತ ಮೇಲಕೇರಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT