ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ ಆರೋಪಿ ಬಂಧನಕ್ಕೆ ಹತ್ತಾರು ದಿನ ಬೇಕೇ: ಖರ್ಗೆ ಪ್ರಶ್ನೆ

Last Updated 28 ಏಪ್ರಿಲ್ 2022, 9:10 IST
ಅಕ್ಷರ ಗಾತ್ರ

ಕಲಬುರಗಿ: ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಭಾಗಿಯಾದ ಬೇರೆ ಪಕ್ಷಗಳ ಮುಖಂಡರನ್ನು 24 ಗಂಟೆಗಳಲ್ಲಿ ಬಂಧಿಸುತ್ತೀರಿ. ಆದರೆ, ಬಿಜೆಪಿ ನಾಯಕಿ ಬಂಧನಕ್ಕೆ ಹತ್ತಾರು ದಿನಗಳು ಬೇಕೇ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಕಾಂಗ್ರೆಸ್, ಬಿಜೆಪಿ ಅಷ್ಟೇ ಅಲ್ಲದೇ ನನ್ನ ಮನೆಯಲ್ಲಿಯೂ ತನಿಖೆ ಮಾಡಲಿ. ಸಿಐಡಿಯವರು ನಡೆಸುತ್ತಿರುವ ತನಿಖೆಯ ಮೇಲ್ವಿಚಾರಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರೇ ಮಾಡಬೇಕು. ಅಕ್ರಮ ನಿಲ್ಲಿಸಬೇಕು. ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಈ ರೀತಿಯ ಅಕ್ರಮದಿಂದ ಈ ಭಾಗದ ಮುಂದಿನ ಪೀಳಿಗೆ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಳ್ಳೆಯ ಆಡಳಿತ ನೀಡಿದರೆ, ಅಭಿವೃದ್ಧಿಯಾಗುತ್ತದೆ. ದಕ್ಷ ಅಭ್ಯರ್ಥಿಗಳು ಆಯ್ಕೆಯಾಗುತ್ತಾರೆ. ನಾನು ಗೃಹ ಸಚಿವನಾಗಿ ಕೆಲಸ ಮಾಡಿದ್ದೇನೆ. ಭ್ರಷ್ಟಾಚಾರ ನಿಲ್ಲಿಸಲು ನಾನು ಸಂದರ್ಶನ ಸಮಯದಲ್ಲಿ ಒಂದೇ ಅಂಕ ನೀಡುವ ನಿಯಮವನ್ನು ಜಾರಿಗೆ ತಂದಿದ್ದೆ. ಏಳು ಜನರು ಏಳು ಅಂಕಗಳನ್ನು ನೀಡಲು ಮಾತ್ರ ಹೇಳಲಾಗಿತ್ತು. ನೇಮಕಾತಿಯಲ್ಲಿ ಭ್ರಷ್ಟಾಚಾರ ತಡೆಯಲು ನಿಯಮ ರೂಪಿಸಲಾಗಿತ್ತು. ಆಗ ಅದು ತುಂಬಾ ಯಶಸ್ವಿಯಾಗಿತ್ತು’ ಎಂದರು.

ನಲವತ್ತು, ಐವತ್ತು ಲಕ್ಷ, ಒಂದು ಕೋಟಿ ಕೊಟ್ಟು ಪಿಎಸ್ಐ ಆದವನ ಯೋಚನೆ ಬೇರೆಯಾಗಿರುತ್ತದೆ. ಕೆಲಸ ಸಿಕ್ಕ ತಕ್ಷಣವೇ ಹಣ ಮಾಡಲು ಮುಂದಾಗುತ್ತಾನೆ. ಪೋಸ್ಟಿಂಗ್‌ನಲ್ಲಿ ಕೂಡಾ ಇದೀಗ ಹೆಚ್ಚಿನ ಹಣದ ವ್ಯವಹಾರ ನಡೆದಿದೆ. ರಾಜ್ಯದಲ್ಲಿ ಆಡಳಿತ ಕೆಟ್ಟು ಹೋಗಿದೆ. ಮುಖ್ಯಮಂತ್ರಿ ಗಂಭೀರವಾಗಿ ಪರಿಗಣಿಸದಿದ್ದರೆ ರಾಜ್ಯದ ಆಡಳಿತ ಕೆಟ್ಟು ಹೋಗುತ್ತದೆ. ಮೊದಲು ರಾಜ್ಯಕ್ಕೆ ಬರಲು ಐಎಎಸ್ ಅಧಿಕಾರಿಗಳು ಇಷ್ಟಪಡುತ್ತಿದ್ದರು. ಆದರೆ ಇದೀಗ ಐಎಎಸ್, ಐಪಿಎಸ್ ಅಧಿಕಾರಿಗಳು ಬರಲು ಹಿಂದೇಟು ಹಾಕುವಂತಾಗಿದೆ. ಶಿಪಾರಸಿನ ಮೇಲೆ ಪೋಸ್ಟಿಂಗ್ ಆಗಬಾರದು. ಹಾಗೆ ಆದಾಗ ಅವರು ಬಡವರ ಕೆಲಸ ಮಾಡುವುದಿಲ್ಲ. ಶಿಫಾರಸು ಮಾಡಿದವರ ಕೆಲಸ ಮಾಡ್ತಾರೆ. ಅಭಿವೃದ್ಧಿಗೂ ಗಮನ ನೀಡುವುದಿಲ್ಲ’ ಎಂದು ಖರ್ಗೆ ಹೇಳಿದರು.

‘ಕಾಂಗ್ರೆಸ್ ಕಾಲದಲ್ಲಿ ಏನಾಯ್ತು ಅಂತ ಎಷ್ಟು ವರ್ಷ ಹೇಳುತ್ತಾ ಹೋಗುತ್ತೀರಿ. ಅವರು ಮಾಡಿದ್ದರೆ ಹಿಡಿದು ಜೈಲಿಗೆ ಹಾಕಿ. ನಾವು ಹರಿಶ್ಚಂದ್ರನ ಮಕ್ಕಳಿದ್ದೇವೆ ಅಂತ ತೋರಿಸಿ’ ಎಂದು ಸವಾಲು ಹಾಕಿದರು.

ಪ್ರಶಾಂತ ಕಿಶೋರ್ ಕಾಂಗ್ರೆಸ್ ಸೇರ್ಪಡೆಯಾಗುವ ಕುರಿತು ಪ್ರತಿಕ್ರಿಯೆ ನೀಡಿದ ಖರ್ಗೆ, ‘ಅದು ಅಲ್ಲಿಗೇ ನಿಂತು ಹೋಗಿದೆ, ಮುಂದೆ ಏನಾಗುತ್ತದೋ ನೋಡೋಣ. ಅವರು ಕೆಲವು ಷರತ್ತು ಹಾಕಿದ್ದಾರೆ. ಅದನ್ನು ಬಹಿರಂಗವಾಗಿ ಹೇಳಲು ಆಗುವುದಿಲ್ಲ. ಅವರು ಹೇಳಿದ ಷರತ್ತಿನ ಮೇಲೆಯೇ ಪಕ್ಷ ನಡೆಸುವುದು ಕಷ್ಟವಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT