ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೆವಳುತ್ತ ಸಾಗಿದ ಅಪೌಷ್ಟಿಕತೆ ನಿವಾರಣೆ

Last Updated 19 ಸೆಪ್ಟೆಂಬರ್ 2022, 4:11 IST
ಅಕ್ಷರ ಗಾತ್ರ

ಕಲಬುರಗಿ: ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಳ್ಳುವಲ್ಲಿ ಪಾಲಕರ ನಿರುತ್ಸಾಹ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಿಬ್ಬಂದಿ ನಿರ್ಲಕ್ಷ್ಯದಿಂದ ಅಪೌಷ್ಟಿಕ ಮಕ್ಕಳ ಆರೋಗ್ಯ ವೃದ್ಧಿ ತೆವಳುತ್ತ ಸಾಗುತ್ತಿದೆ.

ಮಕ್ಕಳಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿದ್ದರೂ ಮಕ್ಕಳ ದೈಹಿಕ ಬೆಳವಣಿಗೆ ಮಾತ್ರ ನಿರೀಕ್ಷಿತ ಮಟ್ಟದ ಸುಧಾರಣೆ ಕಾಣುತ್ತಿಲ್ಲ. ಕಳೆದ ವರ್ಷದ ಅಂಕಿಅಂಶಗಳಿಗೆ ಹೋಲಿಕೆ ಮಾಡಿದರೆ ಮಕ್ಕಳ ಸಂಖ್ಯೆಯಲ್ಲಿ ಗಮನಾರ್ಹ ಬದಲಾವಣೆ ಆಗಿಲ್ಲ.

‘ಜಿಲ್ಲೆಯಲ್ಲಿ 3,140 ಅಗನವಾಡಿ ಕೇಂದ್ರ ಗಳಲ್ಲಿ ಅಷ್ಟೇ ಪ್ರಮಾಣದ ಅಂಗನವಾಡಿ ಕಾರ್ಯಕರ್ತೆ ಯರು ಕೆಲಸ ಮಾಡುತ್ತಿದ್ದಾರೆ. ಅಪೌಷ್ಟಿಕ ನಿವಾರಣೆಯ ಆರೋಗ್ಯ ಸಂಬಂಧ ಪ್ರತಿ ವರ್ಷ 3–4 ಬಾರಿ ಅಂಗನವಾಡಿ ಕಾರ್ಯಕರ್ತರಿಗೆ ತರಬೇತಿ ಕಾರ್ಯಾಗಾರ ನೀಡಿದರೆ, ಪೋಷಕರ ಮನವೊಲಿಕೆ ಸುಲಭವಾಗುತ್ತದೆ’ ಎಂದುಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪನಿರ್ದೇಶಕ ನವಿನ್ ಕುಮಾರ ಯು ತಿಳಿಸಿದರು.

‘ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಮಕ್ಕಳ ಆರೋಗ್ಯ ತಪಾಸಣೆ ಮಾಡಬೇಕು. ಅಪೌಷ್ಟಿಕ ಮಕ್ಕಳನ್ನು ಗುರುತಿಸಿ ಹೆಚ್ಚಿನ ಚಿಕಿತ್ಸೆಗೆ ಶಿಫಾರಸು ಮಾಡಬೇಕು. ಆದರೆ, ಜಿಲ್ಲೆಯಲ್ಲಿ ಇದು ಸಮರ್ಪಕವಾಗಿ ನಡೆಯುತ್ತಿಲ್ಲ’ ಎಂಬುದು ಸಂಸ್ಕಾರ ಪ್ರತಿಷ್ಠಾನದ ನಿರ್ದೇಶಕ ವಿಠಲ್ ಚಿಕಣಿ ದೂರು.

‘ಮೇಲಧಿಕಾರಿಗಳು ಕೇಳಿದ ಬಳಿಕ ಕಚೇರಿಯಲ್ಲಿ ಕುಳಿತು ಸುಳ್ಳು ಅಂಕಿಅಂಶಗಳನ್ನು ನೀಡಲಾಗುತ್ತಿದೆ. ಅಪೌಷ್ಟಿಕತಿಯಿಂದ ಬಳಲುತ್ತಿರುವ ಮಕ್ಕಳಿಗೆ ಸರ್ಕಾರದ ಸೌಕರ್ಯ, ಚಿಕಿತ್ಸೆಗಳು ಸಿಗುತ್ತಿಲ್ಲ. ಬಹುತೇಕ ಅಂಗನವಾಡಿ ಕೇಂದ್ರಗಳು ಗ್ರಾಮದ ಹೊರಗೆ, ಸ್ಮಶಾನ ಸಮೀಪದಲ್ಲಿ ಇವೆ. ಪೋಷಕರು ಸಹ ಮಕ್ಕಳನ್ನು ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಪೌಡರ್‌ ನೀಡುವ ಬದಲು ಸ್ಥಳೀಯವಾಗಿ ಸಿಗುವ ಹಾಲು ವಿತರಿಸಬೇಕು’
ಎಂದರು.

‘ಅಂಗನವಾಡಿ ಕೇಂದ್ರದಲ್ಲಿ ದಾಖಲಾದ ಮಕ್ಕಳ ತೂಕವನ್ನು ನಿಯಮಿತವಾಗಿ ಪರೀಕ್ಷಿಸುತ್ತೇವೆ. ಒಂದು ವರ್ಷದ ಮಗು ಒಂದೂವರೆ ಕೆ.ಜಿ.ಗಿಂತ ಕಡಿಮೆ ಮತ್ತು ಎರಡೂವರೆ ವರ್ಷದ ಮಗು 7 ಕೆ.ಜಿ ಒಳಗೆ ಇದ್ದರೆ ಅಪೌಷ್ಟಿಕ ಮಗುವೆಂದು ಪರಿಗಣಿಸಲಾಗುವುದು. ನಿತ್ಯ ಅವರಿಗೆ ಪೌಷ್ಟಿಕ ಆಹಾರ ಮತ್ತು ಮೊಟ್ಟೆಗಳನ್ನು ನೀಡುತ್ತೇವೆ. ತಿಂಗಳಿಗೊಮ್ಮೆ ಮಕ್ಕಳಿಗೆ ತೂಕ ಮಾಡಲಾಗುವುದು’
ಎನ್ನುತ್ತಾರೆ ಅಫಜಲಪುರ ಪಟ್ಟಣದ ಅಂಗನವಾಡಿ ಕಾರ್ಯಕರ್ತೆ ಶಾಂತಾ ಶ್ರೀಮಂತ ಬಿರಾದಾರ.

‘ಜಿಲ್ಲಾ ಕೇಂದ್ರದಲ್ಲಿ 10 ಬೆಡ್‌ ಸಾಮರ್ಥ್ಯದ ಮಕ್ಕಳ ಪುನಶ್ಚೇತನ ಕೇಂದ್ರ ಇದೆ. ತಿಂಗಳಿಗೆ 5–6 ಅಪೌಷ್ಟಿಕ ಮಕ್ಕಳು ದಾಖಲಾಗುತ್ತಾರೆ. ಅಪೌಷ್ಟಿಕತೆಯಿಂದ ಚೇತರಿಸಿಕೊಳ್ಳಲು ಕನಿಷ್ಠ ಒಂದು ವಾರ ಆದರೂ ಚಿಕಿತ್ಸೆ ಪಡೆಯಬೇಕು. ಕೆಲವು ಪೋಷಕರು ಬಂದ 2–3 ದಿನಕ್ಕೆ ವಾಪಸ್‌ ಹೋಗುತ್ತೇವೆ, ಡಿಸ್ಚಾರ್ಜ್‌ ಮಾಡುವಂತೆ ಒತ್ತಾಯಿಸುತ್ತಾರೆ. ನಿತ್ಯ ₹280 ಭತ್ಯ, ಊಟದ ಬಗ್ಗೆ ತಿಳಿಹೇಳಿ ಇರಿಸಿಕೊಳ್ಳುತ್ತೇವೆ’ ಎನ್ನುತ್ತಾರೆ ಶುಶ್ರೂಷಕಿ ಹನುಮವ್ವ ಮಹಾದೇವ.

ಕಲಬರಗಿ ನಗರ, ಚಿತ್ತಾಪುರದಲ್ಲಿ ಅಧಿಕ ಮಕ್ಕಳು

2022ರ ಆಗಸ್ಟ್‌ ಅಂತ್ಯದವರೆಗೆ ಜಿಲ್ಲೆಯ ಒಟ್ಟು 2,18,673 ಮಕ್ಕಳ ಪೈಕಿ 413 ಮಕ್ಕಳು ತೀವ್ರ ಅಪೌಷ್ಟಿಕ ಹಾಗೂ 20,490 ಮಕ್ಕಳಲ್ಲಿ ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ.

ಕಳೆದ ವರ್ಷ ಇದೇ ತಿಂಗಳಲ್ಲಿ 741 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಹಾಗೂ 24,248 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದರು. ಅಪೌಷ್ಟಿಕ ಮಕ್ಕಳ ಪೈಕಿ ಕಲಬುರಗಿ ನಗರದಲ್ಲಿ ಅತ್ಯಧಿಕ 83 ಮಕ್ಕಳಿದ್ದಾರೆ. ಅವರೆಲ್ಲಾ ಸ್ಲಂ ಮತ್ತು ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ನಂತರದ ಸ್ಥಾನದಲ್ಲಿ 74 ಮಕ್ಕಳಿಂದ ಚಿತ್ತಾಪುರ ಇದೆ.

‘ಎನ್‌ಆರ್‌ಸಿ ದಾಖಲು ಸಂಖ್ಯೆ ಕ್ಷೀಣ’

ಜಿಲ್ಲಾ ಕೇಂದ್ರದಲ್ಲಿನ ಮಕ್ಕಳ ಆರೋಗ್ಯ ಪುನಶ್ಚೇತನ ಕೇಂದ್ರಕ್ಕೆ(ಎನ್ಆರ್‌ಸಿ) ದಾಖಲಾಗುವ ಅಪೌಷ್ಟಿಕ ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕುಸಿದಿದೆ. ತಾಲ್ಲೂಕು ಕೇಂದ್ರಗಳಲ್ಲಿ ಎಂಎನ್ಆರ್‌ಸಿ ಇರುವುದರಿಂದ ಅಲ್ಲಿಯೇ ಅವರಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದು ಜಿಮ್ಸ್ ಮಕ್ಕಳ ವಿಭಾಗದ ಮುಖ್ಯಸ್ಥರೂ ಆಗಿರ ಎನ್ಆರ್‌ಸಿ ಡಾ. ಸಂದೀಪ ಹರಸಂಗಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಸೇಡಂ, ಚಿಂಚೋಳಿ, ಚಿತ್ತಾಪುರ ಮತ್ತು ಜೇವರ್ಗಿಯಲ್ಲಿ ಎಂಎನ್‌ಆರ್‌ಸಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಅಪೌಷ್ಟಿಕ ಮಕ್ಕಳಿಗೆ ಅಲ್ಲಿಯೇ ಚಿಕಿತ್ಸೆ ಲಭಿಸುತ್ತಿದೆ. ಕೋವಿಡ್‌ಗೂ ಮುನ್ನ ಎನ್‌ಆರ್‌ಸಿಯಲ್ಲಿ ಸುಮಾರು 25 ಮಕ್ಕಳು ದಾಖಲಾಗುತ್ತಿದ್ದರು. ಈಗ ಅದು 5–6ಕ್ಕೆ ತಲುಪಿದೆ’ ಎಂದರು.

ಅಫಜಲ‍ಪುರ; ಮಕ್ಕಳ ತಪಾಸಣೆ ನಿರಂತರ

ಅಫಜಲಪುರ: ತಾಲ್ಲೂಕಿನಾದ್ಯಂತ ಅಪೌಷ್ಟಿಕ ಮಕ್ಕಳ ಸಂಖ್ಯೆ ನಿಧಾನವಾಗಿ ಇಳಿಕೆಯತ್ತ ಸಾಗಿದ್ದು, ಸೆಪ್ಟೆಂಬರ್‌ ತಿಂಗಳಿನ ಇಲ್ಲಿಯವರಿಗೆ 25 ಮಕ್ಕಳು ಪತ್ತೆಯಾಗಿದ್ದಾರೆ.

ಒಂದು ವರ್ಷದ ಹಿಂದೆ ಆಗಸ್ಟ್‌ ತಿಂಗಳಲ್ಲಿ 74 ಮಕ್ಕಳು ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಪತ್ತೆ ಹಚ್ಚಲಾಗಿತ್ತು. ಈ ವರ್ಷ ಅದು 25ಕ್ಕೆ ತಲುಪಿದೆ. ಮಕ್ಕಳ ನಿರಂತರ ಆರೋಗ್ಯ ತಪಾಸಣೆ ಜೊತೆಗೆ ಚಿಕಿತ್ಸೆ ಮತ್ತು ಪೌಷ್ಟಿಕ ಆಹಾರ ನೀಡಲಾಗುತ್ತಿದೆ. ಇದರಿಂದ ಇಳಿಕೆಯತ್ತ ಬಂದಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೀನಾಕ್ಷಮ್ಮ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಶಹಾಬಾದ್: 45 ಮಕ್ಕಳಲ್ಲಿ ಅಪೌಷ್ಟಿಕತೆ

ಶಹಾಬಾದ್: ತಾಲ್ಲೂಕಿನಾದ್ಯಂತ ಬೆಳವಣಿಗೆ ಕುಂಠಿತ, ಕಡಿಮೆ ತೂಕ, ರಕ್ತಹೀನತೆಯಂತಹ 45 ಮಕ್ಕಳಲ್ಲಿ ಅಪೌಷ್ಟಿಕತೆ ಇದೆ. ಗ್ರಾಮೀಣ ಭಾಗದಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಗರ್ಭಿಣಿಯರು, ಬಾಣಂತಿಯರು ಹಾಗೂ ಮಕ್ಕಳ ಆರೈಕೆಗೆ ಸಂಬಂಧ ಜಾಗೃತಿ ಮೂಡಿಸಲಾಗುತ್ತಿದೆ. ಸೆಪ್ಟೆಂಬರ್ ತಿಂಗಳಲ್ಲಿ ಪೋಷಣ ಮಾಸಾಚರಣೆ ನಡೆಯಲಿದೆ’ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಿ.ಎಸ್.ಹೊಸಮನಿ ತಿಳಿಸಿದರು.

‘ಉತ್ತಮ ವಿಟಮಿನ್‍ಗಳಿರುವ ಆಹಾರ ಪದಾರ್ಥಗಳನ್ನು ಮನೆಯಲ್ಲಿಯೇ ತಯಾರಿಸಿ ಉಪಯೋಗಿಸುವಂತೆ ಗರ್ಭಿಣಿಯರಿಗೆ ಹಾಗೂ ಬಾಣಂತಿಯರಿಗೆ ಮನವರಿಕೆ ಮಾಡಿಕೊಡುತ್ತಿದ್ದೇವೆ’ ಎನ್ನುತ್ತಾರೆ ಅಂಗನವಾಡಿ ಮೇಲ್ವಿಚಾರಕಿ ಮೀನಾಕ್ಷಿ.

ಚಿಂಚೋಳಿ: 5 ಮಕ್ಕಳ ದಾಖಲು

ಚಿಂಚೋಳಿ: ಇಲ್ಲಿನ ತಾಲ್ಲೂಕು ಆಸ್ಪತ್ರೆಯ ಅಪೌಷ್ಟಿಕ‌ ಮಕ್ಕಳ ಆರೈಕೆ ಕೇಂದ್ರದಲ್ಲಿ ಅಪೌಷ್ಟಿಕ ಮಕ್ಕಳಿಗೆ ಚಿಕಿತ್ಸೆ ಕೊಡಲಾಗುತ್ತಿದೆ.

ಅಪೌಷ್ಟಿಕತೆ ನಿವಾರಣೆಗೆ ಮಕ್ಕಳ‌ ಲಾಲನೆ ಪಾಲನೆ ಹಾಗೂ ಪೌಷ್ಟಿಕ ಆಹಾರ ಮಹತ್ವ ತಾಯಂದಿರರಿಗೆ ತಿಳಿಸುವುದರ ಜತೆಗೆ ಮಕ್ಕಳಿಗೆ ಆರೈಕೆ ಸಹ ಮಾಡಲಾಗುತ್ತಿದೆ.

ಕೇಂದ್ರದಲ್ಲಿ‌ ಪ್ರತಿ ತಿಂಗಳು 4–5 ಮಕ್ಕಳ ದಾಖಲಾಗುತ್ತಿದ್ದಾರೆ. ಅವರಿಗೆ ಅಗತ್ಯವಾದ ಪೋಷ್ಟಿಕ ಆಹಾರ ನೀಡಿ, ಪೋಷಕರಿಗೆ ಮಕ್ಕಳ ಆರೋಗ್ಯ ಕಾಪಾಡುವ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ ಎಂದು ಆಸ್ಪತ್ರೆಯ ಮುಖ್ಯ ಆಡಳಿತ ವೈದ್ಯಾಧಿಕಾರಿ‌ ಡಾ. ಸಂತೋಷ ಪಾಟೀಲ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರಕ ಮಾಹಿತಿ: ಶಿವಾನಂದ ಹಸರಗುಂಡಗಿ, ಜಗನ್ನಾಥ ಶೇರಿಕಾರ, ರಘುವೀರ್ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT