ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಜನೋತ್ಸವಕ್ಕೆ ತೆರೆ: ಮಂಗಳೂರು ವಿ.ವಿ ಚಾಂಪಿಯನ್

ಗುಲಬರ್ಗಾ ವಿ.ವಿ. ರನ್ನರ್ ಅಪ್
Last Updated 12 ಜನವರಿ 2021, 3:29 IST
ಅಕ್ಷರ ಗಾತ್ರ

ಕಲಬುರ್ಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಕಳೆದ ನಾಲ್ಕು ದಿನದಿಂದ ನಡೆದ ಎನ್‌ಎಸ್‌ಎಸ್‌ ರಾಜ್ಯಮಟ್ಟದ ಯುವಜನೋತ್ಸವದ ಒಟ್ಟಾರೆ ಸ್ಪರ್ಧೆಯಲ್ಲಿ ಮಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಪ್ರಥಮ ಬಹುಮಾನ ಗಳಿಸಿದರೆ, ಗುಲಬರ್ಗಾ ವಿಶ್ವವಿದ್ಯಾಲಯ ಎರಡನೇ ಸ್ಥಾನ (ರನ್ನರ್‌ ಅಪ್) ಗಳಿಸಿತು.ವಿಜಯಪುರದ ಕರ್ನಾಟಕ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಯುವಜನೋತ್ಸವ ಅಂಗವಾಗಿ ಜರುಗಿದ ಸಾಂಸ್ಕೃತಿಕ–ಭಾವೈಕ್ಯ ಮೆರವಣಿಗೆ, ಸುಗಮ ಸಂಗೀತ (ವೈಯಕ್ತಿಕ), ಸಂಗೀತ ಸ್ಪರ್ಧೆ (ಗುಂಪು), ಪ್ರಹಸನ ಸ್ಪರ್ಧೆ, ರಸಪ್ರಶ್ನೆ, ಚರ್ಚಾ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ನೃತ್ಯ ಸ್ಪರ್ಧೆ (ವೈಯಕ್ತಿಕ) ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದು ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನಗಳನ್ನು ನೀಡಲಾಯಿತು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಪಿ.ರಾಜಾ ‘ರಾಷ್ಟ್ರೀಯ ಸೇವಾ ಯೋಜನೆಯಂತಹ ಕಾರ್ಯಕ್ರಮಗಳಲ್ಲಿ ಭಾಗಹಿಸುವಿಕೆಯಿಂದ ಯುವಕರಲ್ಲಿ ಶಕ್ತಿ ಬಲಿಷ್ಠಗೊಳ್ಳುತ್ತದೆ. ಆಗ ನಿಮ್ಮನ್ನು ನೀವು ಅರಿಯುವ ಅವಕಾಶ ಸಿಗುತ್ತದೆ. ಜೀವನದಲ್ಲಿ ಗುರಿ ಇಟ್ಟುಕೊಂಡು ಕಾರ್ಯ ಸಾಧನೆಗೆ ಮುಂದಾಗಿ, ತಾಂತ್ರಿಕತೆಯನ್ನು ಸದುಪಯೋಗ ಪಡಿಸಿಕೊಂಡು ಐಎಎಸ್, ಕೆಎಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ದಗೊಳಿಸಿಕೊಳ್ಳಿ. ಸ್ಪರ್ಧೆ ಮಾಡಲು ಹಿಂಜರಿಕೆ ಬೇಡ, ಸೋಲು ಗೆಲುವು ಮಾಮೂಲಿ’ ಎಂದು ತಿಳಿಸಿದರು.

ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪದನಿಮಿತ್ತ ಜಂಟಿ ಕಾರ್ಯದರ್ಶಿ ಮತ್ತು ರಾಜ್ಯ ಎನ್.ಎಸ್.ಎಸ್ ಅಧಿಕಾರಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಮಾತನಾಡಿ, ‘ಪಠ್ಯ ಚಟುವಟಿಕೆಗಿಂತ ಪಠ್ಯೇತರ ಚಟುವಟಿಕೆಗಳು ಮಕ್ಕಳಿಗೆ ಬಹಳ ಮುಖ್ಯವಾಗುತ್ತದೆ. ಕೇವಲ ಜ್ಞಾನ ನೀಡುವುದು ಶಿಕ್ಷಣದ ಕೆಲಸವಲ್ಲ. ಅದು ವ್ಯಕ್ತಿ ವಿಕಸನಕ್ಕೆ ಅವಶ್ಯವಿರುವ ಹೊರಗಿನ ಶಿಕ್ಷಣ ಅಭ್ಯಾಸ ನೀಡುವ ಕಾರ್ಯವಾಗಬೇಕು’ ಎಂದರು.

ಅಧ್ಯಕ್ಷತೆ ವಹಿಸಿದ್ದ ಹಂಗಾಮಿ ಕುಲಸಚಿವ ಪ್ರೊ. ಸಂಜೀವಕುಮಾರ ಕೆ.ಎಂ., ಯುವಜನೋತ್ಸವದಂತಹ ಕಾರ್ಯಕ್ರಮಗಳು ಮುಂದಿನ ಜೀವನದ ಗುರಿಯತ್ತ ಕೊಂಡೊಯ್ಯುತ್ತದೆ. ಒಂದೇ ರಾತ್ರಿಯಲ್ಲಿ ಯಾರೂ ಸ್ಟಾರ್ ಆಗುವುದಿಲ್ಲ. ಕಷ್ಟಪಟ್ಟು ಮೇಲೆ ಬರಬೇಕು. ಬಹುಮಾನಗಳು ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಿ ಮುಂದೆ ಸಾಗಲು ಸಹಾಯಕವಾಗುತ್ತವೆ ಎಂದರು.

ಎನ್‌ಎಸ್‌ಎಸ್‌ನಲ್ಲಿ ಸಾಧನೆ ಮಾಡಿ ಸರ್ಕಾರಿ ಸೇವೆ ಸಲ್ಲಿಸುತ್ತಿರುವ ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಡಾ. ಮಹೇಶ ಪಾಟೀಲ ಹಾಗೂ ರಾಜ್ಯ ಲೆಕ್ಕ ಮತ್ತು ಪರಿಶೋಧನಾ ಇಲಾಖೆಯ ಲೆಕ್ಕ ಪರಿಶೋಧನಾ ಅಧಿಕಾರಿ ಕವಿತಾ ಬಡಿಗೇರ ಅವರಿಗೆ ವಿಶೇಷ ಸನ್ಮಾನ ಮಾಡಲಾಯಿತು. ವಿವಿಧ ವಿಶ್ವವಿದ್ಯಾಲಯಗಳಿಂದ ಆಗಮಿಸಿದ ಎನ್.ಎಸ್.ಎಸ್. ಅಧಿಕಾರಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಗುಲಬರ್ಗಾ ವಿಶ್ವವಿದ್ಯಾಲಯ ವಿದ್ಯಾವಿಷಯಕ ಪರಿಷತ್ ಪ್ರೊ. ಕೆ. ಶ್ರೀರಾಮುಲು, ವಿತ್ತಾಧಿಕಾರಿ ಪ್ರೊ.ಬಿ. ವಿಜಯ ಹಾಗೂ ವಿವಿಧ ವಿಭಾಗದ ಡೀನ್‌ಗಳು ಇದ್ದರು.

ಗುಲಬರ್ಗಾ ವಿಶ್ವವಿದ್ಯಾಲಯ ಎನ್‌ಎಸ್‌ಎಸ್‌ ಸಂಯೋಜಕ ಪ್ರೊ. ರಮೇಶ ಲಂಡನಕರ್ 4 ದಿನಗಳ ಯುವಜನೋತ್ಸವದ ವರದಿ ವಾಚನ ಮಾಡಿ, ವಂದಿಸಿದರು. ನಿವೃತ್ತ ಉಪನ್ಯಾಸಕಿ ಬಿಡದಿ ಚಂದ್ರಭಾಗ ಸ್ವಾಗತಿಸಿದರು. ವಿಜಯಪುರದ ಅಕ್ಕ ಮಹಾದೇವಿ ವಿಶ್ವವಿದ್ಯಾಲಯದ ಡಾ. ಮಲ್ಲಿಕಾರ್ಜುನ ಕಮತಗಿ ಕಾರ್ಯಕ್ರಮ ನಿರೂಪಿಸಿದರು.

ಯುವಜನೋತ್ಸವ ಸಾಂಸ್ಕೃತಿಕ ಭಾವೈಕ್ಯ ಮೆರವಣಿಗೆಯಲ್ಲಿ ಪಾಲ್ಗೊಂಡ ಕಲಾ ತಂಡಗಳು: ಅಕ್ಕ ಮಹಾದೇವಿ ವಿ.ವಿ. (ಪ್ರಥಮ), ಮಂಗಳೂರು ವಿ.ವಿ.(ದ್ವಿತೀಯ), ಮೈಸೂರು ವಿ.ವಿ. (ತೃತೀಯ).

ಸುಗಮ ಸಂಗೀತ (ವೈಯಕ್ತಿಕ): ಕುವೆಂಪು ವಿ.ವಿ.ಯ ಸುಮಿತ್ (ಪ್ರಥಮ), ರಾಣಿಚನ್ನಮ್ಮ ವಿ.ವಿ.ಯ ಯಶವಂತ ಶಿರೂರ (ದ್ವಿತೀಯ), ಗುಲಬರ್ಗಾ ವಿ.ವಿ.ಯ ಮಲ್ಲಿಕಾರ್ಜುನ (ತೃತೀಯ). ಸಂಗೀತ, ಗುಂಪು: ಗುಲಬರ್ಗಾ ವಿ.ವಿ. (ಪ್ರಥಮ), ಅಕ್ಕಮಹಾದೇವಿ ಮಹಿಳಾ ವಿ.ವಿ. (ದ್ವಿತೀಯ), ದಾವಣಗೆರೆ ವಿ.ವಿ. (ತೃತೀಯ); ಪ್ರಹಸನ ಸ್ಪರ್ಧೆ: ಮಂಗಳೂರು ವಿ.ವಿ. (ಪ್ರಥಮ), ಅಕ್ಕಮಹಾದೇವಿ ಮಹಿಳಾ ವಿ.ವಿ. (ದ್ವಿತೀಯ), ಮೈಸೂರು (ತೃತೀಯ).

ರಸ ಪ್ರಶ್ನೆ: ಗುಲಬರ್ಗಾ ವಿ.ವಿ. (ಪ್ರಥಮ), ಮಂಗಳೂರು ವಿ.ವಿ. (ದ್ವಿತೀಯ), ಮೈಸೂರು (ತೃತೀಯ); ಚರ್ಚಾ ಸ್ಪರ್ಧೆ ಪರ: ಮಂಗಳೂರು ವಿ.ವಿ. (ಪ್ರಥಮ), ಅಕ್ಕಮಹಾದೇವಿ ಮಹಿಳಾ ವಿ.ವಿ. (ದ್ವಿತೀಯ), ರಾಣಿ ಚನ್ನಮ್ಮ ವಿ.ವಿ. (ತೃತೀಯ). ಚರ್ಚಾ ಸ್ಪರ್ಧೆ ವಿರೋಧ: ದಾವಣಗೆರೆ ವಿ.ವಿ. (ಪ್ರಥಮ), ಗುಲಬರ್ಗಾ ವಿ.ವಿ. (ದ್ವಿತೀಯ), ಕರ್ನಾಟಕ ವಿ.ವಿ. (ತೃತೀಯ); ಚಿತ್ರಕಲಾ ಸ್ಪರ್ಧೆ: ರಾಣಿಚನ್ನಮ್ಮ ವಿ.ವಿ. (ಪ್ರಥಮ), ಮಂಗಳೂರು ವಿ.ವಿ. (ದ್ವಿತೀಯ), ಕುವೆಂಪು ವಿ.ವಿ. (ತೃತೀಯ); ಪ್ರಬಂಧ ಸ್ಪರ್ಧೆ: ಕರ್ನಾಟಕ ವಿ.ವಿ. (ಪ್ರಥಮ), ಗುಲಬರ್ಗಾ ವಿ.ವಿ. (ದ್ವಿತೀಯ), ಬೆಂಗಳೂರು ವಿ.ವಿ. (ತೃತೀಯ); ನೃತ್ಯ (ವೈಯಕ್ತಿಕ): ಗುಲಬರ್ಗಾ ವಿ.ವಿ. (ಪ್ರಥಮ), ಅಕ್ಕಮಹಾದೇವಿ ಮಹಿಳಾ ವಿ.ವಿ. (ದ್ವಿತೀಯ), ಮಂಗಳೂರು ವಿ.ವಿ. (ತೃತೀಯ).

ವಸ್ತು ಪ್ರದರ್ಶನ: ಅಕ್ಕಮಹಾದೇವಿ ಮಹಿಳಾ ವಿ.ವಿ. (ಪ್ರಥಮ), ಕುವೆಂಪು ವಿ.ವಿ. (ದ್ವಿತೀಯ), ಮಂಗಳೂರು ವಿ.ವಿ. ತೃತೀಯ ಸ್ಥಾನ ಪಡೆದುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT