ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಿಯಾಂಕ್ ಖರ್ಗೆ ಕುಮ್ಮಕ್ಕಿನಿಂದ ಪೊಲೀಸರ ಕಿರುಕುಳ: ಮಣಿಕಂಠ ರಾಠೋಡ ಆರೋಪ

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಆರೋಪ:
Published 9 ಡಿಸೆಂಬರ್ 2023, 13:17 IST
Last Updated 9 ಡಿಸೆಂಬರ್ 2023, 13:17 IST
ಅಕ್ಷರ ಗಾತ್ರ

ಕಲಬುರಗಿ: ‘ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುಮ್ಮಕ್ಕಿನಿಂದ ಪೊಲೀಸರು ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ. ನನ್ನನ್ನು ಫರಹತಾಬಾದ್ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದರೂ, ಆ ಸಮಯದಲ್ಲಿ ಚಿತ್ತಾಪುರ ತಹಶೀಲ್ದಾರ್ ಎದುರು ಹಾಜರುಪಡಿಸಲಾಗಿದೆ ಎಂದು ವಾಡಿ ಪೊಲೀಸರು ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ‘ ಎಂದು ಬಿಜೆಪಿ ಮುಖಂಡ ಮಣಿಕಂಠ ರಾಠೋಡ ಗಂಭೀರ ಆರೋಪ ಮಾಡಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಣಿಕಂಠ, ‘ಡಿ 7ರಂದು ಗುರುವಾರ ಬೆಳಿಗ್ಗೆ 8.30ರ ಸುಮಾರಿಗೆ ಮನೆಗೆ ಬಂದ ಚೌಕ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ರಾಘವೇಂದ್ರ ಹಾಗೂ ಸಿಬ್ಬಂದಿ, ಹೊರಗಡೆ ಹೋದರೆ ನಿಮ್ಮ ಮೇಲೆ ಹಲ್ಲೆ ನಡೆಯುತ್ತದೆ ಎಂದು ಗುಪ್ತಚರ ಮಾಹಿತಿ ಬಂದಿದ್ದರಿಂದ ಮನೆಯಲ್ಲೇ ಇರಬೇಕು. ಇಲ್ಲಿಯೇ ನಿಮಗೆ ರಕ್ಷಣೆ ನೀಡುತ್ತೇವೆ ಎಂದರು. ಏಕಾಏಕಿ 11 ಗಂಟೆ ಸುಮಾರಿಗೆ ನನ್ನನ್ನು ಜಬರದಸ್ತಿಯಿಂದ ಕರೆದುಕೊಂಡು ಹೋಗಿ ಜೀಪಿನಲ್ಲಿ ಊರೆಲ್ಲ ಸುತ್ತಿಸಿ ಕೊನೆಗೆ ಫರಹತಾಬಾದ್ ಠಾಣೆಯಲ್ಲಿ ಕೂಡ್ರಿಸಿದರು. ಶೌಚಾಲಯಕ್ಕೆ ಹೋದಾಗಲೂ ನನ್ನ ಹಿಂದೆಯೇ ನಿಂತಿದ್ದರು. ಬೆಳಿಗ್ಗೆಯಿಂದ ರಾತ್ರಿಯವರೆಗೆ ಫರಹತಾಬಾದ್ ಠಾಣೆಯಲ್ಲೇ ಕೂರಿಸಿದ್ದಾರೆ. ಬಂಧಿಸುವ ಮುನ್ನ ವಾರೆಂಟ್ ತೋರಿಸಿ ಎಂದು ಕೇಳಿದರೂ ಯಾವುದೇ ವಾರೆಂಟ್ ತೋರಿಸಿಲ್ಲ. ವ್ಯಕ್ತಿಯೊಬ್ಬರನ್ನು ಬಂಧಿಸುವ ಮುನ್ನ ಅನುಸರಿಸಬೇಕಾದ ಯಾವುದೇ ನಿಯಮಗಳನ್ನು ಪೊಲೀಸರು ಅನುಸರಿಸಿಲ್ಲ‘ ಎಂದು ಆರೋಪಿಸಿದರು.

‘ನನ್ನ ಪತ್ನಿ, ಮಕ್ಕಳ ಎದುರಿಗೇ ಒತ್ತಾಯಪೂರ್ವವಾಗಿ ಪೊಲೀಸರು ಎಳೆದುಕೊಂಡು ಹೋದರು. ಚಪ್ಪಲಿ ಹಾಕಿಕೊಳ್ಳಲೂ ಅವಕಾಶ ನೀಡಲಿಲ್ಲ. ಫರಹತಾಬಾದ್ ಠಾಣೆಯಿಂದ ರಾತ್ರಿ 11 ಗಂಟೆ ಸುಮಾರಿಗೆ ಚಿತ್ತಾಪುರಕ್ಕೆ ಕರೆದೊಯ್ದು ಅಲ್ಲಿ ತಹಶೀಲ್ದಾರ್ ಎದುರು ಹಾಜರುಪಡಿಸಿ ನಂತರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು‘ ಎಂದರು.

‘ಪ್ರಿಯಾಂಕ್ ಖರ್ಗೆ ಹಾಗೂ ಅವರ ಹಿಂಬಾಲಕರು ಮರಳು ದಂಧೆಯಲ್ಲಿ ನಿರತರಾಗಿದ್ದಾರೆ ಎಂದು ನಾನು ನೀಡಿದ ದೂರನ್ನು ಸ್ವೀಕರಿಸಲು ಪೊಲೀಸರು ಒಪ್ಪುತ್ತಿಲ್ಲ. ಅವರ ಅಕ್ರಮಗಳನ್ನು ಪ್ರಶ್ನೆ ಮಾಡುತ್ತಿರುವುದಕ್ಕೆ ನನ್ನನ್ನು ಗುರಿಯಾಗಿಸಿ ಕಿರುಕುಳ ನೀಡುತ್ತಿದ್ದಾರೆ. ಎಷ್ಟೇ ಪ್ರಕರಣಗಳನ್ನು ದಾಖಲಿಸಿದರೂ ನಾನು ಹಿಂದೆ ಸರಿಯುವುದಿಲ್ಲ‘‍ ಎಂದು ಮಣಿಕಂಠ ತಿಳಿಸಿದರು.

‘ಗುರುಮಠಕಲ್‌ನ ಚಪೆಟ್ಲಾ ಬಳಿ ಕಾರಿನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ನಿಂತಿತು. ಆ ನಂತರ ಶಂಕರವಾಡಿಯ ಫಾರ್ಮ್‌ಹೌಸ್‌ನಿಂದ ಮತ್ತೊಂದು ಕಾರು ತರಿಸಿಕೊಂಡು ಅದರಲ್ಲಿ ಬರುವಾಗ ನನ್ನ ಮೇಲೆ ಹಲ್ಲೆ ನಡೆದಿದೆ. ಈ ಬಗ್ಗೆ ಕಾರಿನ ಚಾಲಕ ಪೊಲೀಸರ ಎದುರು ಹೇಳಿಕೆ ನೀಡಿದ್ದಾನೆ. ಕಾರು ಅಪಘಾತದಿಂದ ನನಗೆ ಗಾಯವಾಗಿಲ್ಲ‘ ಎಂದು ಸ್ಪಷ್ಟಪಡಿಸಿದರು.

ಚಿತ್ತಾಪುರ ಬಿಜೆಪಿ ಮಂಡಲ ಅಧ್ಯಕ್ಷ ನೀಲಕಂಠರಾವ ಪಾಟೀಲ, ವಿಜಯಕುಮಾರ ಗುಂಡಗುರ್ತಿ, ಶ್ರೀಕಾಂತ ಸುಲೇಗಾಂವ, ಮಹೇಶ ಗೌಳಿ, ಸಿದ್ದು ಗೋಷ್ಠಿಯಲ್ಲಿದ್ದರು.

ನನ್ನ ವಿರುದ್ಧ ದಾಖಲಿಸಲಾದ ಪ್ರಕರಣಗಳಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರೇ ತನಿಖಾಧಿಕಾರಿಯಾಗಿದ್ದಾರೆ. ನನ್ನ ವಿರುದ್ಧ ಕ್ರಮ ಕೈಗೊಳ್ಳುವಂತೆ ಪೊಲೀಸರ ಮೇಲೆ ಒತ್ತಡ ಹಾಕುತ್ತಿದ್ದಾರೆ -ಮಣಿಕಂಠ ರಾಠೋಡ ಬಿಜೆಪಿ ಮುಖಂಡ

ಮಣಿಕಂಠ ಕಾರು ಅಡ್ಡಗಟ್ಟಿದ ಕಾಂಗ್ರೆಸ್ ಕಾರ್ಯಕರ್ತರು

ಮಣಿಕಂಠ ರಾಠೋಡ ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪತ್ರಿಕಾಗೋಷ್ಠಿ ಮುಗಿಸಿ ತೆರಳುತ್ತಿದ್ದ ಮಣಿಕಂಠ ಕಾರು ಅಡ್ಡಗಟ್ಟಿ ಘೋಷಣೆ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬೀಡುಬಿಟ್ಟಿದ್ದ ಪೊಲೀಸರು ಕಾರ್ಯಕರ್ತರನ್ನು ತಡೆದು ಮಣಿಕಂಠ ಕಾರು ಮುಂದೆ ಹೋಗಲು ಅವಕಾಶ ಮಾಡಿಕೊಟ್ಟರು. ಡಿಸಿಪಿ ಚಂದ್ರಪ್ಪ ನೇತೃತ್ವದಲ್ಲಿ ಬಂದೋಬಸ್ತ್ ಮಾಡಲಾಗಿತ್ತು.

‘ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಮಿಷ’

‘ಖರ್ಗೆ ಕುಟುಂಬದ ವಿರುದ್ಧ ಮಾತನಾಡುವುದನ್ನು ನಿಲ್ಲಿಸಿ ಕಾಂಗ್ರೆಸ್‌ಗೆ ಸೇರ್ಪಡೆಯಾದರೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ನೀಡುವುದಾಗಿ ಕಾಂಗ್ರೆಸ್ ಮುಖಂಡ ಬಾಬುರಾವ್ ಚಿಂಚನಸೂರ್ ಅವರ ಮೂಲಕ ನಮ್ಮ ತಂದೆಗೆ ಫೋನ್‌ ಕರೆ ಮಾಡೆ ನನಗೆ ಆಮಿಷ ಒಡ್ಡಲಾಗಿತ್ತು’ ಎಂದು ಮಣಿಕಂಠ ರಾಠೋಡ ಆರೋಪಿಸಿದ್ದಾರೆ. ‘ಮಲ್ಲಿಕಾರ್ಜುನ ಖರ್ಗೆ ಹಾಗೂ ಪ್ರಿಯಾಂಕ್ ಖರ್ಗೆ ಅವರು ಬಾಬುರಾವ ಚಿಂಚನಸೂರ ಮುಖಾಂತರ ಪಕ್ಷಕ್ಕೆ ಬರುವಂತೆ ಆಮಂತ್ರಿಸಿದ್ದಾರೆ’ ಎಂದಿದ್ದಾರೆ. ತಮ್ಮ ತಂದೆ ಜತೆಗೆ ಚಿಂಚನಸೂರ ಅವರು ಮಾತನಾಡಿದ್ದರು ಎನ್ನಲಾದ 20 ಸೆಕೆಂಡ್‌ಗಳ ಫೋನ್‌ ಕಾಲ್ ಸಂಭಾಷಣೆಯನ್ನು ಹಂಚಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT