ಮಂಗಳವಾರ, ಮೇ 24, 2022
26 °C
ಮಾರುತಿ ಮಾನ್ಪಡೆ– ಒಂದು ನೆನಪು ಕಾರ್ಯಕ್ರಮದಲ್ಲಿ ಸಿಯುಕೆ ಪ‍್ರಾಧ್ಯಾಪಕಿ ಶಿವಗಂಗಾ ರುಮ್ಮಾ ಅಭಿಪ್ರಾಯ

ಹೋರಾಟಗಾರನಿಗೆ ಬೇಕು ಲೋಕದ ತಾಯ್ತನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿ: ‘ಪ್ರತಿಯೊಬ್ಬ ಹೋರಾಟಗಾರನಲ್ಲಿಯೂ ಲೋಕದ ತಾಯ್ತನ ಇರಬೇಕಾಗುತ್ತದೆ. ಆಗ ಮಾತ್ರ ಎಲ್ಲರನ್ನೂ ಒಳಗೊಳ್ಳುವ, ಎಲ್ಲರನ್ನೂ ಸಹಿಸಿಕೊಂಡು ಹೋಗುವ ಮನಸ್ಥಿತಿ ಬರುತ್ತದೆ. ಅಂಥ ಲೋಕದ ತಾಯ್ತನದ ವ್ಯಕ್ತಿತ್ವ ಮಾರುತಿ ಮಾನ್ಪಡೆ ಅವರಲ್ಲಿತ್ತು’ ಎಂದು ಸಿಯುಕೆ ಪ‍್ರಾಧ್ಯಾಪಕಿ ಶಿವಗಂಗಾ ರುಮ್ಮಾ ಅಭಿಪ್ರಾಯಪಟ್ಟರು.

ಸಮಾನ ಮನಸ್ಕರ ವೇದಿಕೆಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ ‘ಕಾಮ್ರೆಡ್‌ ಮಾರುತಿ ಮಾನ್ಪಡೆ– ಒಂದು ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಿದ್ಧಾಂತಗಳ ಬೆನ್ನು ಹತ್ತಿ ಹೋರಾಟಗಳು ರೂಪುಗೊಳ್ಳುತ್ತವೆ. ಸಿದ್ಧಾಂತಗಳು ನಮ್ಮನ್ನು ಒಂದುಗೂಡಿಸಬೇಕೆ ಹೊರತು; ಮಧ್ಯದಲ್ಲಿ ಅಡ್ಡಗೋಡೆ ಕಟ್ಟಬಾರದು. ಹೋರಾಟಗಾರನಾದವನು ಎಲ್ಲರನ್ನು ಒಳಗೊಂಡಾಗ ಮಾತ್ರ ಚಳವಳಿ ಯಶಸ್ವಿಯಾಗುತ್ತದೆ’ ಎಂದು ಅಭಿಪ್ರಾಯ ಪಟ್ಟರು.

‘ಮಾನ್ಪಡೆ ಅವರು ಹೋದ ಮೇಲೆ ಹೋರಾಟದಲ್ಲಿ ಶೂನ್ಯ ಆವರಿಸಿದೆ. ರೈತರು, ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು, ಪರಿಶಿಷ್ಟರು, ಪೌರಕಾರ್ಮಿಕರು, ಬಿಸಿಯೂಟ ನೌಕರರು, ಎಂಎಸ್‌ಕೆ ಮಿಲ್‌, ದಾಲ್‌ಮಿಲ್‌ ಕೆಲಸದವರು, ಆದಿವಾಸಿಗಳು ಹೀಗೆ ಅವರು ಒಳಗೊಳ್ಳದ ಹೋರಾಟಗಳೇ ಇಲ್ಲ. ಗಂಡೋರಿ ನಾಲಾ, ಕೃಷ್ಣಾ ಭಾಗ್ಯಜಲ ನಿಗಮ, ಏತನೀರಾವರಿ, ಕಾರ್ಖಾನೆಗಳ ಶೋಷಣೆಗೆ ಕಡಿವಾಣ, ರೈತರಿಗೆ ಬೆಂಬಲ ಬೆಲೆ ಕೊಡಿಸುವುದೂ ಸೇರಿದಂತೆ ಅವರು ಕಂಡ ಯಶಸ್ಸುಗಳು ಹಲವಾರು’ ಎಂದರು.

‘ಹೋರಾಟಗಾರರಾಗಿ ಬೆಳೆದುಬಂದ ಬಹಳಷ್ಟು ಮಂದಿಯ ಆಸ್ತಿಗಳು ಕೆಲವೇ ವರ್ಷಗಳಲ್ಲಿ ದಿಢೀರ್‌ ಬೆಳೆಯುತ್ತವೆ. ಆದರೆ, ಮಾರುತಿ ಮಾನ್ಪಡೆ ಅವರು ನಾಲ್ಕು ದಶಕ ಹೋರಾಟ ಮಾಡಿದರೂ ಅವರ ಗಳಿಕೆಯಲ್ಲಿ ಬಿಡಿಗಾಸಿನ ವ್ಯತ್ಯಾಸವೂ ಬರಲಿಲ್ಲ. ಅವರದು ಶುದ್ಧ ಹಸ್ತದ ಹೋರಾಟ. ಸ್ವಂತ ಮನೆಯನ್ನೇ ಇದೂವರೆಗೂ ಸಾಲದಲ್ಲಿ ಇಟ್ಟುಕೊಂಡಿದ್ದಾರೆ’ ಎಂದು ‌ಪ್ರೊ.ಶಿವಗಂಗಾ ರುಮ್ಮಾ ಹೇಳಿದರು.

ಮಾರುತಿ ಮಾನ್ಪಡೆ ಅವರ ಪುತ್ರ ಸುನೀಲ ಮಾತನಾಡಿ, ‘ಜನರೇ ನಮ್ಮ ತಂದೆ ನಮಗೆ ಗಳಿಸಿಕೊಟ್ಟ ಆಸ್ತಿ. ಇದಕ್ಕಿಂತ ಏನನ್ನೂ ಅವರು ಗಳಿಸಲಿಲ್ಲ. ಹಲವರ ಬಾಯಲ್ಲಿ ಏನೇನೋ ಮಾತುಗಳು ಕೇಳಿಬಂದವು. ಅದಾವುದಕ್ಕೂ ನಾವು ಗಮನ ಕೊಡುವುದಿಲ್ಲ. ತಂದೆ ಇಲ್ಲದ ಮನೆ ಬಹಳ ಕಷ್ಟವೆಣಿಸುತ್ತಿದೆ. ಹೋರಾಟದಲ್ಲಿ ಅವರ ಜತೆಗಿದ್ದವರ ನೋವು ಎಂಥದ್ದು ಎಂಬುದನ್ನು ನಾವು ಊಹಿಸಬಲ್ಲೆವು’ ಎಂದು ಭಾವುಕರಾದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ರಾಜ್ಯ ಉಪಾಧ್ಯಕ್ಷ ರಜಾಕ್ ಉಸ್ತಾದ್‌ ಮಾತನಾಡಿ, ಮಾನ್ಪಡೆ ಅವರು ಕೇವಲ ರೈತರು, ಕಾರ್ಮಿಕರು, ಪಂಚಾಯಿತಿ ನೌಕರರಿಗೆ ಮಾತ್ರವಲ್ಲ; ಇಡೀ ಮಾನವಕುಲದ ಅಭಿವೃದ್ಧಿಯ ಪ್ರಖರ ವಿಚಾರವಾದಿ. ತುಳಿತಕ್ಕೆ ಒಳಗಾದವರು ಮತ್ತು ಶೋಷಿತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು. ಮಾನವ ಅಭಿವೃದ್ಧಿಯಿಂದಲೇ ಪ್ರಾದೇಶಿಕ ಅಭಿವೃದ್ಧಿ’ ಎಂಬುದನ್ನು ಮಾನ್ಪಡೆ ಅವರಷ್ಟು ಗಟ್ಟಿಯಾಗಿ ಪ್ರತಿಪಾದಿಸಿದವರು ಇಲ್ಲ’ ಎಂದರು.

ಹಿರಿಯ ಚಿತ್ರಕಲಾವಿದ ವಿ.ಜಿ. ಅಂದಾನಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಹಾರಾಷ್ಟ್ರದ ಹಿರಿಯ ಕವಿ, ವಿಧಾನ ಪರಿಷತ್‌ ಮಾಜಿ ಸದಸ್ಯ ಲಕ್ಷ್ಮಣ ಮಾನೆ, ಡಿಡಿಪಿಯು ಶಿವಶರಣಪ್ಪ ಮೂಳೇಗಾಂವ, ಹಿರಿಯ ವಕೀಲ ಆರ್‌.ಚನ್ನಬಸು, ಮಾನಪಡೆ ಅವರ ಪುತ್ರ ಸುನೀಲ ಮಾನ್ಪಡೆ, ಸಹವರ್ತಿಗಳಾದ ಶೌಕತ್‌ಅಲಿ ಆಲೂರ, ಸಂಗನಗೌಡ ಹಿರೇಗೌಡ, ಸೈಯದ್‌ ಇಬ್ರಾಹಿಂ, ಕೆ.ಡಿ. ಭಂಟನೂರ, ಬಸವರಾಜ ಪಾಟೀಲ ಮೈಲಾಪುರ, ನಾಗಮೂರ್ತಿ, ಈಶ್ವರಚಂದ್ರ, ರಾಯಣ್ಣ ಹೊನ್ನರೆಡ್ಡಿ, ನಿಂಗಣ್ಣ ಸಗರ, ಹಳ್ಳೆಪ್ಪ ಹವಾಲ್ದಾರ, ಈರಣ್ಣಗೌಡ ಹೊಸಮನಿ ಹಲವರು ಮಾತನಾಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು