ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊನಚಿನ ಪ್ರಶ್ನೆಗಳಿಗೆ ಅನುಭಾವದ ಉತ್ತರ

ಮತ್ತೆ ಕಲ್ಯಾಣ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳೊಂದಿಗೆ ಸಂವಾದ
Last Updated 29 ಆಗಸ್ಟ್ 2019, 13:40 IST
ಅಕ್ಷರ ಗಾತ್ರ

ಕಲಬುರ್ಗಿ: ಸ್ವಾಮೀಜಿ ನೀವು ಎಂದಾದರೂ ದಲಿತರ ಮನೆಗಳಲ್ಲಿ ಊಟ ಮಾಡಿದ್ದೀರಾ? ಲಿಂಗಾಯತ ಎಂಬುದು ಜಾತಿಯೋ, ಧರ್ಮವೋ, ಹಾಲು ಮತ್ತು ಮೊಟ್ಟೆ ಎರಡೂ ಪ್ರಾಣಿಗಳಿಂದ ದೊರೆಯುವ ಉತ್ಪನ್ನಗಳು. ಹಾಲು ಕುಡಿದರೆ ಸುಮ್ಮನಾಗುತ್ತಾರೆ. ಮೊಟ್ಟೆ ತಿಂದರೆ ಸ್ನಾನ ಮಾಡು ಎನ್ನುವ ಮೂಲಕ ಆಹಾರದಲ್ಲಿ ತಾರತಮ್ಯ ಮಾಡುತ್ತಾರಲ್ಲ?

–ನಗರದ ವಿವಿಧ ಕಾಲೇಜುಗಳಿಂದ ಬಂದಿದ್ದ ವಿದ್ಯಾರ್ಥಿಗಳು ಹೀಗೆ ಮೊನಚಿನ ಪ್ರಶ್ನೆಗಳನ್ನು ಕೇಳುತ್ತಿದ್ದರೆ ವೇದಿಕೆಯಲ್ಲಿದ್ದ ಸಾಣೆಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪ್ರೊ.ಆರ್‌.ಕೆ.ಹುಡಗಿ, ವಿಶ್ವರಾಧ್ಯ ಸತ್ಯಂಪೇಟೆ ಹಾಗೂ ವೆಂಕಟರೆಡ್ಡಿ ಅವರು ವಚನಗಳಲ್ಲಿನ ಅನುಭಾವಗಳನ್ನು ಉಲ್ಲೇಖಿಸಿ ಉತ್ತರಿಸಿದರು.

ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ‘ಮತ್ತೆ ಕಲ್ಯಾಣ’ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ, ಲಿಂಗಾಯತ ಧರ್ಮ, ಲಿಂಗವನ್ನು ಏಕೆ ಕಟ್ಟಿಕೊಳ್ಳಬೇಕು? ಭಕ್ತಿ ಎಂದರೇನು? ಮಡಿ ಮೈಲಿಗೆ ಮಾಡುವುದು ಏಕೆ? ದೇವರು–ದೆವ್ವಗಳ ಪರಿಕಲ್ಪನೆ ಹೇಗೆ ಬಂತು ಇಂತಹ ಹಲವಾರು ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಕೇಳಿದರು.

ಶರಣರ ದೃಷ್ಟಿಯಲ್ಲಿ ದೇವರು ಎಂದರೆ ಯಾರು ಎಂಬ ವಿಶಾಲ ಸ್ವತಂತ್ರ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿನಿ ಭವಾನಿ ಪ್ರಶ್ನೆಗೆ ಉತ್ತರಿಸಿದ ಡಾ.ಪಂಡಿತಾರಾಧ್ಯ ಶಿವಾಚಾರ್ಯರು, ‘ಸತ್‌ ಚಿತ್‌ ಆನಂದ ಪರಿಪೂರ್ಣ, ಸರ್ವಜ್ಞ, ಸರ್ವಶಕ್ತ, ಸರ್ವಾಂತರ್ಯಾಮಿಯಾದವರನ್ನು ದೇವರು ಎನ್ನಬಹುದು’ ಎಂದರು.

ಶಿಲ್ಪಾ ಪರಮೇಶ್ವರ್‌ ಎಂಬ ವಿದ್ಯಾರ್ಥಿನಿಯ ‘ಭಕ್ತಿ ಎಂದರೇನು’ ಎಂಬ ಪ್ರಶ್ನೆಗೆ ‘ಪರಮ ಪ್ರೇಮವೇ ಭಕ್ತಿ’ ಎಂದು ಹೇಳಿದರು.

ವಿದ್ಯಾರ್ಥಿನಿ ಅನುಷಾ ಅವರ, ದೆವ್ವಕ್ಕೆ ಜನರು ಏಕೆ ಅಂಜುತ್ತಾರೆ ಎಂಬ ಪ್ರಶ್ನೆಗೆ ದೆವ್ವ ಅನ್ನುವುದು ಇಲ್ಲವೇ ಇಲ್ಲ. ದುರ್ಬುದ್ಧಿಯವರು ದೆವ್ವವಾಗುತ್ತಾರೆ. ಸದ್ಬುದ್ದಿ ಇದ್ದವರು ದೇವರಾಗುತ್ತಾರೆ. ದೆವ್ವ ಅಸ್ತಿತ್ವದಲ್ಲೇ ಇಲ್ಲ ಎಂದ ಮೇಲೆ ಅದಕ್ಕೆ ಹೆದರುವ ಅವಶ್ಯಕತೆ ಇಲ್ಲ ಎಂದು ಧೈರ್ಯ ತುಂಬಿದರು.

ಜಾತಿ ವಿನಾಶದ ಅಂಗವಾಗಿ ನೀವು ಎಂದಾದರೂ ದಲಿತರ ಮನೆಗಳಿಗೆ ಹೋಗಿ ಊಟ ಮಾಡಿದ್ದೀರಾ ಎಂಬ ಇಬ್ಬರು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ಸ್ವಾಮೀಜಿ, ‘ಮತ್ತೆ ಕಲ್ಯಾಣ ಅಭಿಯಾನದ ಅಂಗವಾಗಿ ಹಾವೇರಿ ಹಾಗೂ ಬಾಗಲಕೋಟೆಗೆ ತೆರಳಿದಾಗ ದಲಿತರ ಮನೆಗೆ ತೆರಳಿ ಊಟ ಮಾಡಿದೆ. ಮನೆ ಶುಚಿಯಾಗಿ, ಊಟ ರುಚಿಯಾಗಿದ್ದರೆ ಯಾರ ಮನೆಗೆ ಕರೆದರೂ ಹೋಗುತ್ತೇವೆ. ಹಾವೇರಿಯಲ್ಲಿ ದಲಿತ ಭಕ್ತರ ಮನೆಯಲ್ಲಿಯೇ ನಮ್ಮ ಪೂಜೆ, ಪ್ರಸಾದ, ವಾಸ್ತವ್ಯದ ವ್ಯವಸ್ಥೆಯಾಗಿತ್ತು. ಕೊನೆಗಳಿಗೆಯಲ್ಲಿ ಬೇರೊಬ್ಬರು ಭಕ್ತರು ಆ ಜವಾಬ್ದಾರಿಯನ್ನು ವಹಿಸಿಕೊಂಡರು. ಆ ಬಳಿಕ ಮಾಹಿತಿ ಸಿಕ್ಕಿತು. ಮರುದಿನ ಬೆಳಿಗ್ಗೆ ದಲಿತರ ಮನೆಗೆ ಭೇಟಿ ನೀಡಿ ಬಂದೆ’ ಎಂದರು.

ನಗರದ ಸರ್ಕಾರಿ ಕನ್ಯಾ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ಮಾತನಾಡಿ, ‘ಸರ್ಕಾರವೇ ಮಕ್ಕಳಿಗೆ ತಾರತಮ್ಯ ಮಾಡುತ್ತಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೇರಿದಂತೆ ಹಲವು ಸೌಲಭ್ಯ ಕೊಡುತ್ತದೆ. ಮೇಲ್ಜಾತಿಯ ಬಡ ವಿದ್ಯಾರ್ಥಿಗಳಿಗೆ ಈ ಸೌಲಭ್ಯವಿಲ್ಲ ಏಕೆ’ ಎಂದರು.

ಈ ಪ್ರಶ್ನೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಸ್ವಾಮೀಜಿ, ‘ಇಂತಹ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಅದಕ್ಕೆ ಕೊನೆ ಎಂಬುದೇ ಇರುವುದಿಲ್ಲ. ಈ ಪ್ರಶ್ನೆಗಳಿಗೆ ಉತ್ತರಿಸಲು ಇದು ಸೂಕ್ತ ವೇದಿಕೆಯೂ ಅಲ್ಲ’ ಎಂದು ಹೇಳಿದರು.

ಗಂಡು ಹೆಣ್ಣುಗಳಲ್ಲಿ ಯಾರು ಶ್ರೇಷ್ಠ ಎಂಬ ಪ್ರಶ್ನೆಗೆ, ‘ಇವರಿಬ್ಬರೂ ಸಮಾನರು. ಯಾರೂ ಕನಿಷ್ಠರಲ್ಲ’ ಎಂದು ವಿಶ್ವಾರಾಧ್ಯ ಸತ್ಯಂಪೇಟೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT