ಗುರುವಾರ , ಜನವರಿ 27, 2022
21 °C
‘ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಾಗಾರ ಉದ್ಘಾಟಿಸಿದ ಸಚಿವ

ನಿಮ್ಮ ಅಭಿವೃದ್ಧಿಗಾಗಿ ನೀವೇ ಉದ್ಯಮಿಯಾಗಿ: ಮುರುಗೇಶ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಕಲ್ಯಾಣ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಈ ಭಾಗದವರೇ ಉದ್ಯಮಿಯಾಗಿ ಹೊರಹೊಮ್ಮಬೇಕು ಎಂಬುದು ಸರ್ಕಾರದ ಮಹದಾಸೆ. ಈ ಅವಕಾಶ ಬಳಸಿಕೊಳ್ಳಲು ಯುವಜನರು ಮುಂದೆ ಬರಬೇಕು. ಈ ರೀತಿ ನಮಗೆ ಬೇಕಾದ ವಸ್ತುಗಳನ್ನು ನಾವೇ ಉತ್ಪಾದನೆ ಮಾಡಿಕೊಂಡರೆ ‘ಆತ್ಮನಿರ್ಭರ’ ಸಾಕಾರವಾಗುತ್ತದೆ’ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ನಗರದಲ್ಲಿ ಸೋಮವಾರ ಆಯೋಜಿಸಿದ್ದ ‘ಉದ್ಯಮಿಯಾಗು, ಉದ್ಯೋಗ ನೀಡು’ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಇಲ್ಲಿ ನೈಸರ್ಗಿಕ ಸಂಪತ್ತು ಹೇರಳವಾಗಿದೆ. ಬೇರೆ ಕಡೆಯಿಂದ ಬಂದವರು ಇಲ್ಲಿ ಉದ್ಯಮ ಸ್ಥಾಪಿಸಿದ ಮೇಲೆ ಅವರ ಬಳಿ ಕೆಲಸ ಮಾಡುವ ಬದಲು ನೀವೇ ನಿಮ್ಮ ಸಂಪತ್ತನ್ನು ಬಳಸಿಕೊಳ್ಳಿ’ ಎಂದೂ ಅವರು ಕರೆ ನೀಡಿದರು.

‘ಉದ್ಯಮಿ ಆಗಲು ಹೊರಟಾಗ ಕಷ್ಟಗಳು ಬರುವುದು ಸಹಜ. ಅವುಗಳನ್ನು ಎದುರಿಸಿಕೊಂಡು ಮುನ್ನುಗ್ಗಿದವರು ಮಾತ್ರ ಯಶಸ್ಸು ಗಳಿಸುತ್ತಾರೆ. ಈಗಿನ ಆರ್ಥಿಕ ಸನ್ನಿವೇಶಗಳನ್ನು ಗಮನಿಸಿದರೆ ₹ 1 ಕೋಟಿ ಆದಾಯ ಪಡೆಯುವವರೆಗೆ ಮಾತ್ರ ಕಷ್ಟವಾಗುತ್ತದೆ. ನಂತರ ಆ ಹಣವೇ ಹಣವನ್ನು ಗಳಿಸುತ್ತದೆ’ ಎಂದೂ ಹೇಳಿದರು.

‘ಯುವ ಉದ್ಯಮಿಗಳನ್ನು ಹುಟ್ಟುಹಾಕಿ, ಅವರ ಮೂಲಕ ಉದ್ಯೋಗಗಳನ್ನು ಸೃಷ್ಟಿ ಮಾಡಲು ರಾಜ್ಯ ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ. ತರಬೇತಿ, ಉತ್ತೇಜನ, ಮಾರ್ಗದರ್ಶನ, ಆರ್ಥಿಕ ನೆರವು, ಭೂಮಿ, ಕಚ್ಚಾ ಸಾಮಗ್ರಿ ಹಾಗೂ ಮಾರುಕಟ್ಟೆ ಸೇರಿದಂತೆ ಉದ್ಯಮ ಬೆಳೆಯಲು ಬೇಕಾದ ಎಲ್ಲ ನೆರವನ್ನೂ ನೀಡಲಾಗುತ್ತದೆ’ ಎಂದರು.

ಪರಿಶಿಷ್ಟರಿಗೆ ಶೇ 75ರಷ್ಟು ರಿಯಾಯಿತಿ: ‘ಪರಿಶಿಷ್ಟ ಸಮುದಾಯದವರು ಉದ್ಯಮಿ ಆಗಲು ಮುಂದೆಬಂದರೆ ಅವರಿಗೆ ನೀಡುವ ಸಾಲದಲ್ಲಿ ಶೇ 75ರಷ್ಟು ರಿಯಾಯಿತಿ ಇದೆ. 99 ವರ್ಷಗಳವರೆಗೆ ನಿವೇಶನ ಲೀಸ್‌ ಪಡೆಯಲು ಅವಕಾಶವಿದೆ. ಸೋಲಾರ್‌ ಹೈಡ್ರೊ ಪವರ್‌ ಮೂಲಕ ವಿದ್ಯುತ್‌ ಪೂರೈಕೆಯಲ್ಲೂ ರಿಯಾಯಿತಿ ನೀಡಲಿದ್ದೇವೆ’ ಎಂದು ನಿರಾಣಿ ತಿಳಿಸಿದರು.

‘ಮೈಸೂರು ದೊರೆ ನಾಲ್ವಡಿ ಕೃಷ್ಣರಾಜ ಒಡೆಯರ್‌ ಕಾಲದಲ್ಲಿ ಕೈಗಾರಿಕೆ, ಶಿಕ್ಷಣ, ಸಂಸ್ಕೃತಿ, ಸಂಪತ್ತಿಗೆ ಒತ್ತು ನೀಡಿದರು. ಆದರೆ, ಹೈದರಾಬಾದ್‌ ನಿಜಾಮರ ಆಡಳಿತದಲ್ಲಿ ಇಂಥ ಪ್ರಯತ್ನ ನಡೆಯಲಿಲ್ಲ. ಭವಿಷ್ಯ ಉತ್ತಮವಾಗಲು ಯಾವ ಹೆಜ್ಜೆ ಇರಬೇಕು ಎಂದು ಇವರಿಬ್ಬರನ್ನು ಹೋಲಿಕೆ ಮಾಡಿ ನೋಡಿ’ ಎಂದು ಸಲಹೆ ನೀಡಿದರು.

ಶಾಸಕ ಬಸವರಾಜ ಮತ್ತಿಮಡು ಅಧ್ಯಕ್ಷತೆ ವಹಿಸಿದ್ದರು. ಸಂಸದ ಡಾ.ಉಮೇಶ ಜಾಧವ, ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್‌ ನಮೋಶಿ, ಕ್ರೆಡಲ್‌ ಅಧ್ಯಕ್ಷ ಚಂದ್ರಕಾಂತ ಪಾಟೀಲ, ‘ಕಾಡಾ’ ಅಧ್ಯಕ್ಷ ಶರಣಪ್ಪ ತಳವಾರ, ನೀರಾವರಿ ಯೋಜನೆಗಳ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಲಬುರಗಿ ವಲಯ ಅಧ್ಯಕ್ಷ ಹರ್ಷವರ್ಧನ ಗುಗಳೆ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಶಿಕಲಾ ಟೆಂಗಳಿ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತೆ ಗುಂಜನ್‌ ಕೃಷ್ಣ, ಎಂಎಸ್‌ಎಂಇ ನಿರ್ದೇಶಕಿ ಆರ್‌.ವಿನೋತ್‌ ಪ್ರಿಯಾ, ಕೆಐಎಡಿಬಿ ಸಿಇಒ ಡಾ.ಎನ್‌. ಶಿವಶಂಕರ್‌, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕ ಎಚ್‌.ಎಂ. ಶ್ರೀನಿವಾಸ್‌, ಪ್ರಭಾರಿ ಜಿಲ್ಲಾಧಿಕಾರಿ ದಿಲೀಶ್‌ ಶಶಿ, ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕದ ಅಧ್ಯಕ್ಷ ಸಿದ್ದಾಜಿ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.