ಶನಿವಾರ, ಮಾರ್ಚ್ 25, 2023
29 °C
ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸಭೆ

ಗಡಿಕೇಶ್ವಾರದಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಗ್ರಾಮ ವಾಸ್ತವ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಬುರಗಿ: ‘ಭೂಕಂಪನದಿಂದ ತತ್ತರಿಸಿರುವ ಗಡಿಕೇಶ್ವಾರ ಗ್ರಾಮದಲ್ಲಿ ನವೆಂಬರ್ 11 ರಂದು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಗ್ರಾಮ ವಾಸ್ತವ್ಯ ಮಾಡುತ್ತೇನೆ‘ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ
ತಿಳಿಸಿದರು.

ಸೋಮವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ’ಅಂದು ಗ್ರಾಮದಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಅಲ್ಲಿಯೇ ರಾತ್ರಿ ವಾಸ್ತವ್ಯ ಮಾಡಲಾಗುವುದು. ಎಲ್ಲಾ ರೀತಿಯ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು‘ ಎಂದು ಚಿಂಚೋಳಿ ತಹಶೀಲ್ದಾರ್ ಅಂಜುಂ ತಬಸ್ಸುಮ್ ಅವರಿಗೆ ನಿರ್ದೇಶನ ನೀಡಿದರು.

ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ, ‘ಭೂಕಂಪನದ ತೀವ್ರತೆ ಅಳೆಯಲು ಹೈದರಾಬಾದ್‌ನ ಭೂ ವಿಜ್ಞಾನಿಗಳು ಇಲ್ಲಿ ಸಿಸ್ಮೋಮೀಟರ್ ಸ್ಥಾಪಿಸಿದ್ದಾರೆ. ರಿಕ್ಟರ್ ಮಾಪಕದಲ್ಲಿ 1 ರಿಂದ 4ರಷ್ಟು ತೀವ್ರತೆ ಇಲ್ಲಿ ದಾಖಲಾಗುತ್ತಿದ್ದರೂ ಕೆಲವೊಂದು ಮನೆಗಳು ಬಿರುಕು ಬಿಟ್ಟಿರುವುದು ಬಿಟ್ಟರೆ ಹೆಚ್ಚಿನ ಹಾನಿಯಾಗಿಲ್ಲ. ಇದರಿಂದ 20 ಗ್ರಾಮಗಳು ಬಾಧಿತವಾಗಿದ್ದು, 5 ಗ್ರಾಮದಲ್ಲಿ ಸಾಮೂಹಿಕ ಶೆಡ್ ನಿರ್ಮಿಸಲಾಗಿದೆ. ಕಾಳಜಿ ಕೇಂದ್ರ ತೆರೆದು ಗ್ರಾಮಸ್ಥರಿಗೆ ಊಟ ಪೂರೈಸಲಾಗುತ್ತಿದೆ‘ ಎಂದು ಅವರು
ಹೇಳಿದರು.

ಚಿಂಚೋಳಿ ಶಾಸಕ ಡಾ. ಅವಿನಾಶ್ ಜಾಧವ ಮಾತನಾಡಿ, ಗಡಿಕೇಶ್ವಾರ ಸುತ್ತಮುತ್ತ 60 ಕಿ.ಮೀ. ವ್ಯಾಪ್ತಿಯಲ್ಲಿ ಭೂಕಂಪನದ ಸದ್ದಿನ ಕಾರಣ ಕಳೆದ 2 ತಿಂಗಳಿಂದ ಇಲ್ಲಿನ ಜನ ಸರಿಯಾಗಿ ನಿದ್ದೆ ಮಾಡಿಲ್ಲ. ಮನೆ ಮುಂದೆ ಶೆಡ್ ನಿರ್ಮಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದ್ದು, ಸರ್ಕಾರ ಇದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕಿದೆ ಎಂದು ಹೇಳಿದರು.

ಕೃಷಿಯಲ್ಲಿ ಇಸ್ರೇಲ್ ಪದ್ಧತಿ ಬಳಕೆ ನಿಟ್ಟಿನಲ್ಲಿ ಕೂಡಲೇ 1,000 ಎಕರೆ ತೋಟಗಾರಿಕೆ ಪ್ರದೇಶ ಗುರುತಿಸಿದಲ್ಲಿ ಇಸ್ರೇಲ್ ಕಾನ್ಸುಲೇಟ್ ಜನರಲ್ ಅಧಿಕಾರಿಗಳನ್ನು ಜಿಲ್ಲೆಗೆ ಕರೆತರಲಾಗುವುದು. ತೋಟಗಾರಿಕೆ ಸಚಿವರೊಂದಿಗೆ ಇಲ್ಲಿಯೇ ಒಂದು ದಿನದ ಕಾರ್ಯಾಗಾರ ಆಯೋಜಿಸಿ ಮುಂದಿನ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಮುರುಗೇಶ ನಿರಾಣಿ ಅವರು ತಿಳಿಸಿದರು.

ಶಹಾಬಾದ್‌ ಇಎಸ್‌ಐಸಿ ಆಸ್ಪತ್ರೆ ನವೀಕರಣ ಕಾರ್ಯದ ಉಳಿದ ಕೆಲಸಗಳನ್ನು ಶೀಘ್ರವೇ ಪೂರ್ಣಗೊಳಿಸಿ ಉದ್ಘಾಟನೆಗೆ ಸಜ್ಜುಗೊಳಿಸಬೇಕೆಂದು ಸಚಿವರು ನಿರ್ದೇಶನ
ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು