ಸೋಮವಾರ, ಆಗಸ್ಟ್ 2, 2021
20 °C
ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಆಮ್ಲಜನಕ ರೀಫಿಲ್ಲಿಂಗ್‌ ಸೆಂಟರ್‌ ಸ್ಥಾಪನೆ, ವೈದ್ಯಕೀಯ ಸಲಕರಣೆಗಳ ಹೆಚ್ಚಳ

ಮೂರನೇ ಅಲೆ; ಗ್ರಾಮ ಮಟ್ಟದಲ್ಲೂ ಚಿಕಿತ್ಸೆ: ನಿರಾಣಿ

ಪ್ರಜಾವಾಣಿ ವಾರ್ತೆ‌ Updated:

ಅಕ್ಷರ ಗಾತ್ರ : | |

ಕಲಬುರ್ಗಿ: ‘ಮಕ್ಕಳ ಮೇಲೆ ಪರಿಣಾಮ ಬೀರಬಹುದಾದ ಕೋವಿಡ್‌ ಮೂರನೇ ಅಲೆ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ನಡೆದಿವೆ. 27 ಮಕ್ಕಳ ತಜ್ಞರು ಈಗಾಗಲೇ ಕಲಬುರ್ಗಿ ಜಿಲ್ಲೆಗೆ ನೇಮಕವಾಗಿ ಬಂದಿದ್ದಾರೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದರು.

‘ಇಂಡಿಯನ್ ಪಿಡಿಯಾಟ್ರಿಕ್ ಅಸೋಸಿಯೇಷನ್ ಅಧ್ಯಕ್ಷೆ ಡಾ.ವಾಣಿಶ್ರೀ ಪಾಟೀಲ ಅವರ ಸಲಹೆ ಮೇರೆಗೆ, ಜಿಲ್ಲೆಯಾದ್ಯಂತ 90 ಪಿಡಿಯಾಟ್ರಿಷಿಯನ್‍ಗಳನ್ನು ಗುರುತಿಸಲಾಗಿದೆ. ಮಕ್ಕಳಿಗೆ ಯಾವ ರೀತಿ ಚಿಕಿತ್ಸೆ ನೀಡಬೇಕು ಎಂಬುದರ ಬಗ್ಗೆ ಇವರೆಲ್ಲರಿಗೂ ವೆಬಿನಾರ್ ಮೂಲಕ ಸಲಹೆ ನೀಡಲಾಗಿದೆ. ನಗರದಲ್ಲಿ ಕೂಡ 15 ಮಕ್ಕಳ ಆಸ್ಪತ್ರೆಗಳಿದ್ದು, ಏಳು ಆಸ್ಪತ್ರೆಗಳು ಮೂರನೇ ಅಲೆಯ ಚಿಕಿತ್ಸೆ ನೀಡಲು ಸನ್ನದ್ಧವಾಗಿವೆ’ ಎಂದು ಅವರು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಮೂರನೆ ಅಲೆ ಬರುವ ಸಾಧ್ಯತೆ ಶೇ 50ರಷ್ಟು ಮಾತ್ರ ಇದೆ ಎಂದು ತಜ್ಞರ ಸಮಿತಿ ತಿಳಿಸಿದೆ. ಅಲ್ಲದೇ, ಮಕ್ಕಳ ಮೇಲೆ ಗಂಭೀರ ಪರಿಣಾಮವೇನೂ ಆಗುವುದಿಲ್ಲ’ ಎಂದೂ ಹೇಳಿದರು.

‘ಜಿಲ್ಲೆಯ ಸರ್ಕಾರ ಆಸ್ಪತ್ರೆಗಳಲ್ಲಿ ಪ್ರತ್ಯೇಕ ಮಕ್ಕಳ ವಿಭಾಗ ಸ್ಥಾಪನೆ, ಮೂಲ ಸೌಕರ್ಯಗಳ ಹೆಚ್ಚಳ, ಪ್ರತಿ ತಾಲ್ಲೂಕು ಆಸ್ಪತ್ರೆಗಳಲ್ಲಿ ಆಮ್ಲಜನಕ ರೀಫಿಲ್ಲಿಂಗ್‌ ಸೌಲಭ್ಯ, 50 ಎಲ್‍ಪಿಎಂ ಲಿಕ್ವಿಡ್ ಆಮ್ಲಜನಕ ಜನರೇಟರ್ ಘಟಕಗಳ ನಿರ್ಮಾಣ, 50 ಆಮ್ಲಜನಕ ಕಾನ್ಸಂಟ್ರೇಟರ್‌, 50 ಜಂಬೂ ಸಿಲಿಂಡರ್‌ ಇಟ್ಟುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದ್ದಾಗಿ’ ನಿರಾಣಿ ಹೇಳಿದರು.

‘ಜಿಮ್ಸ್‌ ಆಸ್ಪತ್ರೆಯಲ್ಲಿ ಎಸ್‍ಎನ್‍ಸಿಯು ಘಟಕವನ್ನು ಸಂಪೂರ್ಣವಾಗಿ ಮಕ್ಕಳಿಗೆ ಮೀಸಲಿಡಬೇಕು, ಜಿಲ್ಲಾ ಮತ್ತು ತಾಲ್ಲೂಕು ಆಸ್ಪತ್ರೆಗಳಲ್ಲಿ ಮುಂದಿನ ಎರಡು ವಾರದೊಳಗೆ ಪೋಷಣಾ ಪುನರ್ವಸತಿ ಕೇಂದ್ರ ಸ್ಥಾಪಿಸಬೇಕು, ಟೆಲಿಕನ್ಸಲ್ಟೇಷನ್ ಸೇವೆ, ತಾಲ್ಲೂಕು ಆಸ್ಪತ್ರೆಗಳಿಗೆ ಜಿಲ್ಲಾಸ್ಪತ್ರೆ ಮತ್ತು ಇಎಸ್‍ಐ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರನ್ನು ನೇಮಿಸುವ ಪ್ರಕ್ರಿಯೆಗಳು ನಡೆದಿವೆ’ ಎಂದರು.

ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಎನ್‌ಇಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರ, ಬೀದರ್ ಸಂಸದ ಭಗವಂತ ಖೂಬಾ, ಶಾಸಕರಾದ ಬಸವರಾಜ ಮತ್ತಿಮೂಡ, ಡಾ.ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ಸುನೀಲ ವಲ್ಯಾಪುರೆ ಇದ್ದರು.

ಆಸ್ಪತ್ರೆ ಉದ್ಘಾಟನೆಗೆ ಯಡಿಯೂರಪ್ಪ

‘ಶಹಾಬಾದ್‌ನಲ್ಲಿ ನವೀಕರಣ ಕೈಗೊಂಡ ಇಎಸ್‌ಐ ಆಸ್ಪತ್ರೆ ಜುಲೈ ಮೊದಲ ವಾರದಲ್ಲಿ ಸಂಪೂರ್ಣ ಸಿದ್ಧಗೊಳ್ಳಲಿದೆ. ₹ 12 ಕೋಟಿ ವೆಚ್ಚದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆಯಾಗಿ ಇದು ರೂಪುಗೊಂಡಿದೆ. ಇದರ ಉದ್ಘಾಟನೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಹ್ವಾನಿಸಲಾಗುವುದು’ ಎಂದು ಮುರುಗೇಶ ನಿರಾಣಿ ತಿಳಿಸಿದರು.

‘ಆಸ್ಪತ್ರೆಗೆ ತಗಲಿದ ವೆಚ್ಚವನ್ನು ಮರುಪಾವತಿ ಮಾಡುವುದಾಗಿ ಇಎಸ್‌ಐ ತಿಳಿಸಿದೆ. ಸಿದ್ಧಗೊಂಡ ಮೇಲೆ ಅವರಿಗೆ ಹಸ್ತಾಂತರಿಸಲಾಗುವುದು. ಇಲ್ಲದಿದ್ದರೆ ಜಿಮ್ಸ್‌ ಆಸ್ಪತ್ರೆಗಳ ಜತೆ ಸೇರಿಸಿಕೊಂಡು ರಾಜ್ಯ ಸರ್ಕಾರವೇ ಇದನ್ನು ಮುಂದುವರಿಸುವುದು’ ಎಂದೂ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

144499 ಸಹಾಯವಾಣಿ‌

ಮಕ್ಕಳಲ್ಲಿನ ಮಾನಸಿಕ ಒತ್ತಡ ನಿವಾರಣೆಗಾಗಿ ಜಿಲ್ಲಾಡಳಿತ 144499 ಟೋಲ್ ಫ್ರೀ ಸಹಾಯವಾಣಿ ಪ್ರಾರಂಭಿಸಿದೆ.

ಮಕ್ಕಳಲ್ಲಿ ವಾಂತಿ, ಭೇದಿ, ಜ್ವರ, ಶೀತ, ಕೆಮ್ಮು ಸೇರಿದಂತೆ ಯಾವುದೇ ಲಕ್ಷಣ ಕಂಡುಬಂದರೆ ತಕ್ಷಣವೇ ಪೋಷಕರು ಈ ಸಂಖ್ಯೆಗೆ ಕರೆ ಮಾಡಿದರೆ ನುರಿತ ವೈದ್ಯರು ಅಗತ್ಯವಾದ ಸಲಹೆ– ಸೂಚನೆಗಳನ್ನು ನೀಡಲಿದ್ದಾರೆ ಎಂದು ಸಚಿವ ನಿರಾಣಿ ಹೇಳಿದರು.

‘ಅವಿಭಕ್ತ ಕುಟುಂಬದಲ್ಲಿ ಅಸಮಾಧಾನ ಸಹಜ’

‘ಬಿಜೆಪಿ ದೊಡ್ಡ ಅವಿಭಕ್ತ ಕುಟುಂಬ ಇದ್ದ ಹಾಗೆ. ಕುಟುಂಬ ಎಂದಮೇಲೆ ಅಸಮಾಧಾನ ಇದ್ದೇ ಇರುತ್ತವೆ. ಕೆಲವು ಶಾಸಕರಿಗೆ ಅಸಮಾಧಾನ ಇರುವುದು ಸಾಮಾನ್ಯ. ಅದನ್ನು ಮುಖಂಡರೇ ಬಗೆಹರಿಸುತ್ತಾರೆ’ ಎಂದು ಸಚಿವ ಮುರುಗೇಶ ನಿರಾಣಿ ಪ್ರತಿಕ್ರಿಯಿಸಿದರು.

‘ಮತ್ತೆ ಸಚಿವ ಸ್ಥಾನ ಕೋರಿ ರಮೇಶ ಜಾರಕಿಹೊಳಿ ಅವರು ಮುಂಬೈಗೆ ಹೋದ ಬಗ್ಗೆ ನನಗೆ ಗೊತ್ತಿಲ್ಲ. ಯಾವುದೇ ಸಮಸ್ಯೆ ಇದ್ದರೂ ಪರಿಹರಿಸುವ ಕೆಲಸ ಹೈಕಮಾಂಡ್‌ಗೆ ಬಿಟ್ಟಿದ್ದು’ ಎಂದರು.

ಇದೇ ವೇಳಾ ಮಾತನಾಡಿದ ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ,‌ ‘ಕಲ್ಯಾಣ ಕರ್ನಾಟಕ ಭಾಗಕ್ಕೆ ಸಚಿವ ಸಂಪುಟದಲ್ಲಿ ಹೆಚ್ಚಿನ ಪ್ರಾತಿನಿಧ್ಯ ಕಲ್ಪಿಸುವ ಬಗ್ಗೆ ಅರುಣ್‌ಸಿಂಗ್ ಅವರೊಂದಿಗೆ ಚರ್ಚೆ ಮಾಡಿದ್ದೇವೆ. ಜತೆಗೆ ಈ ಭಾಗದ ಅಭಿವೃದ್ಧಿ ಬಗ್ಗೆಯೂ ಅವರೊಂದಿಗೆ ಸಮಾಲೋಚನೆ ಮಾಡಿದ್ದೇವೆ. ಎರಡೂ ವಿಷಯಗಳ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು