ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ತಾಪುರ: ಭ್ರಾತೃತ್ವ ಭಾವ ಬೆಳೆಸಿಕೊಳ್ಳಿ

ಪೊಲೀಸ್ ಠಾಣೆಯಲ್ಲಿ ರಾಷ್ಟ್ರೀಯ ಏಕತಾ ಸಪ್ತಾಹ
Last Updated 20 ನವೆಂಬರ್ 2020, 12:49 IST
ಅಕ್ಷರ ಗಾತ್ರ

ಚಿತ್ತಾಪುರ: ‘ಸಹನೆ ಮತ್ತು ಸಹಬಾಳ್ವೆ ಇಸ್ಲಾಂ ಧರ್ಮದ ಮೂಲ ತಳಹದಿ. ಪೈಗಂಬರ್ ಅವರ ಅನುಯಾಯಿಗಳಾಗಿ ಯಾರೂ ಹಿಂಸೆಯಲ್ಲಿ ತೊಡಗಬಾರದು’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮಹ್ಮದ್ ಮೊಯಿನುದ್ದಿನ್ ಅವರು ಹೇಳಿದರು.

ಸ್ಥಳೀಯ ಪೊಲೀಸ್ ಠಾಣೆಯಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಪೊಲೀಸ್ ಠಾಣೆ, ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ‘ರಾಷ್ಟ್ರೀಯ ಏಕತಾ ಸಪ್ತಾಹ’ ಕಾರ್ಯಕ್ರಮದ ನಿಮಿತ್ತ ನಡೆದ ‘ಅಲ್ಪಸಂಖ್ಯಾತರ ಕಲ್ಯಾಣ ದಿನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಜಗತ್ತಿನ ಯಾವ ದೇಶದಲ್ಲಿ ಸಿಗಲಾರದಂತಹ ಧಾರ್ಮಿಕ ಸಹಿಷ್ಣುತೆ ಭಾರತದಲ್ಲಿದೆ. ಹಲವು ಧರ್ಮಗಳು, ಜಾತಿಗಳು, ಜನಾಂಗಗಳು ಕೂಡಿ ಬಾಳುವ ದೇಶ ನಮ್ಮದು. ಇಂತಹ ದೇಶದಲ್ಲಿ ಎಲ್ಲರೂ ಸಹೋದರತ್ವದ ಭಾವನೆಯಿಂದ ಬಾಳಬೇಕು’ ಎಂದು ಅವರು ಹೇಳಿದರು.‌

‘ಧಾರ್ಮಿಕ ಕಲಹ, ಕೋಮ ಗಲಭೆಯು ವ್ಯಕ್ತಿ ಮತ್ತು ಸಮಾಜವನ್ನು ಅಧೋಗತಿಗೆ ತಳ್ಳುತ್ತದೆ. ದೇಶದ ಅಭಿವೃದ್ಧಿಗೆ ಮಾರಕವಾಗುತ್ತದೆ. ವ್ಯಕ್ತಿಯ ಜೀವನ ಹಾಳು ಮಾಡುವ ಜೊತೆಗೆ ಕುಟುಂಬದ, ಸಮಾಜದ, ದೇಶದ ಏಕತೆಗೆ ಧಕ್ಕೆಯುಂಟು ಮಾಡುತ್ತದೆ. ಸರ್ವಧರ್ಮೀಯರ ನಡುವೆ ಭಾತೃತ್ವದ ಭಾವನೆಯೇ ಬದುಕಿನ ಭದ್ರ ಬುನಾದಿಯಾಗಬೇಕು’ ಎಂದು ಸಲಹೆ ನೀಡಿದರು.

’ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು 15 ಅಂಶಗಳ ಕಾರ್ಯಕ್ರಮ ಜಾರಿಗೆ ತಂದಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿ ಜಾರಿಗೆ ತಂದಿವೆ. ಪ್ರತ್ಯೇಕ ಇಲಾಖೆ ನಿರ್ಮಿಸಿ ಅಲ್ಪಸಂಖ್ಯಾತರಿಗೆ ಸೌಲಭ್ಯ ತಲುಪಿಸಲು ಪ್ರಯತ್ನಿಸುತ್ತಿದೆ. ಜನರು ಇಲಾಖೆಯಿಂದ ಸಿಗುವ ಯೋಜನೆಗಳ ಮಾಹಿತಿ ಪಡೆದು ಸದುಪಯೋಗ ಮಾಡಿಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಸಿಪಿಐ ಕೃಷ್ಣಪ್ಪ ಕಲ್ಲದೇವರು, ಮುಖ್ಯ ಅತಿಥಿಗಳಾಗಿದ್ದ ವಕೀಲರ ಸಂಘದ ಅಧ್ಯಕ್ಷ ಗಿರಿಧರ ಆರ್. ವೈಷ್ಣವ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ಮೇಘರಾಜ ರಾಠೋಡ್ ಮಾತನಾಡಿದರು. ವಕೀಲರಾದ ಎಸ್.ಪಿ ಸಾತನೂರಕರ್, ಅಯ್ಯಣ್ಣ ಅವಂಟಿ ಅವರು ಉಪನ್ಯಾಸ ನೀಡಿದರು. ಸಹಾಯಕ ಸರ್ಕಾರಿ ಅಭಿಯೋಜಕಿ ಅಂಜನಾದೇವಿ, ಪಿಎಸ್ಐ ಶ್ರೀಶೈಲ್ ಅಂಬಾಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಮುಖ್ಯ ಅತಿಥಿಗಳಾಗಿದ್ದರು. ವಕೀಲರ ಸಂಘದ ಕಾರ್ಯದರ್ಶಿ ಈಶ್ವರ ಅಳ್ಳೊಳ್ಳಿ ನಿರೂಪಿಸಿದರು. ಉದಯಕುಮಾರ ಸಾಗರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT