ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯರ ಬೇಜವಾಬ್ದಾರಿ; ಶಾಸಕ ಆಕ್ರೋಶ

Last Updated 20 ಮಾರ್ಚ್ 2022, 5:32 IST
ಅಕ್ಷರ ಗಾತ್ರ

ಅಫಜಲಪುರ: ಪಟ್ಟಣದಲ್ಲಿ 100 ಹಾಸಿಗೆಯ ಆಸ್ಪತ್ರೆಯಿದ್ದು, ವಿವಿಧ ರೋಗಗಳ 11 ತಜ್ಞ ವೈದ್ಯರಿರಬೇಕು ಆದರೆ ನೇತ್ರ ತಜ್ಞರು ಮಾತ್ರ ಇದ್ದಾರೆ. ಡಯಾಲಿಸಿಸ್ ಯಂತ್ರ ಕೆಟ್ಟು 2 ತಿಂಗಳು ಕಳೆದರೂ ನೋಡುವವರಿಲ್ಲ. ಆಸ್ಪತ್ರೆಯ ವಾತಾವರಣ ತ್ಯಾಜ್ಯದಿಂದ ಕೂಡಿದೆ’ ಎಂದು ಶಾಸಕ ಎಂ.ವೈ.ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದರು.

ತಾಲ್ಲೂಕಾ ಸಾರ್ವಜನಿಕ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ ಕೆಟ್ಟು ನಿಂತಿರುವ ಡಯಾಲಿಸಿಸ್ ಯಂತ್ರಗಳನ್ನು ಶನಿವಾರ ಪರಿಶೀಲಿಸಿ ಅವರು ಮಾತನಾಡಿದರು.

‘ಡಯಾಲಿಸಿಸ್ ಯಂತ್ರ ಕೆಟ್ಟಿರುವ ಬಗ್ಗೆ ವೈದ್ಯರು ಯಾರಿಗೂ ಮಾಹಿತಿ ನೀಡಿಲ್ಲ. ಇವರ ಬೇಜವಾಬ್ದಾರಿಯಿಂದ ಮೂವರು ಕಿಡ್ನಿ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇಂತಹ ವೈದ್ಯರ ಅವಶ್ಯಕತೆ ನಮಗಿಲ್ಲ. ನಿಮಗೆ ಸೇವೆ ಮಾಡುವ ಮನಸ್ಸಿಲ್ಲದಿದ್ದರೆ ಬಿಟ್ಟು ಹೋಗಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಶಂಕ್ರಯ್ಯ ಹಿರೇಮಠ, ಸುನೀತಾ ಮಶಾಳ, ‘ತಾಲ್ಲೂಕಿನಲ್ಲಿ ಕಿಡ್ನಿ ವೈಫಲ್ಯದ 16 ಜನರಿದ್ದೇವೆ, ಆದರೆ ವೈದ್ಯಾಧಿಕಾರಿಗಳ ಬೇಜವಾಬ್ದಾರಿಯಿಂದ 3 ಜನ ಮೃತಪಟ್ಟಿದ್ದಾರೆ. ಡಯಾಲಿಸಿಸ್ ಮಾಡಿ ಎಂದರೆ ಕಲಬುರಗಿಗೆ ಹೋಗಿ ಎಂದು ಹೇಳುತ್ತಾರೆ. 2 ತಿಂಗಳಿಂದ ನಾವು ಜಿಲ್ಲಾ ಕೇಂದ್ರಕ್ಕೆ ಹೋಗಿ ಡಯಾಲಿಸಸ್ ಮಾಡಿಸಿಕೊಳ್ಳುತ್ತಿದ್ದೇವೆ’ ಅಳಲು ತೋಡಿಕೊಂಡರು.

ಕಡಿಮೆ ಓಲ್ಟೇಜ್ ವಿದ್ಯುತ್‌ನಿಂದ ಯಂತ್ರ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಈ ಕುರಿತು ಶಾಸಕರು ಜೆಸ್ಕಾಂದವರಿಗೆ ವಿಚಾರಿಸಿದಾಗ ‘ನಾವು ಆಸ್ಪತ್ರೆಗೆ ಹೆಚ್ಚಿನ ಓಲ್ಟೇಜ್ ನೀಡಿದರೆ ಗ್ರಾಮಾಂತರ ಭಾಗಕ್ಕೆ ವಿದ್ಯುತ್ ಪೂರೈಕೆಗೆ ತೊಂದರೆಯಾಗುದ್ದೆ‘ ಎಂದು ತಿಳಿಸಿದರು.

ನಂತರ ಶಾಸಕರು ಜಿಲ್ಲಾ ಆರೋಗ್ಯಾಧಿಕಾರಿ ಶರಣಬಸಪ್ಪ ಗಣಜಲಖೇಡ ಅವರೊಂದಿಗೆ ದೂರವಾಣಿ ಮುಖಾಂತರ ಮಾತನಾಡಿ ‘ಭಾನುವಾರ ಡಯಾಲಿಸಿಸ್ ಯಂತ್ರ ಸರೊಯಾಗಬೇಕು. ನಿತ್ಯ ಆಸ್ಪತ್ರೆಯಲ್ಲಿ ಎಲ್ಲ ವೈದ್ಯರು ಕೆಲಸ ಮಾಡುವಂತೆ ನೋಡಿಕೊಳ್ಳಬೇಕು, ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುತ್ತೇನೆ’ ಎಂದು ಸೂಚಿಸಿದರು.

ಆಸ್ಪತ್ರೆಯಲ್ಲಿ ಹಿರಿಯ ವೈದ್ಯಾಧಿಕಾರಿ ರಜೆಯಲ್ಲಿದ್ದಾರೆ, ಪ್ರಭಾರಿಯಾಗಿ ಡಾ.ಸಂಗಮೇಶ ಟಕ್ಕಳಿಯವರಿಗೆ ಕಾರ್ಯಭಾರ ವಹಿಸಿಕೊಟ್ಟಿದ್ದಾರೆ. ಎಲ್ಲ ವೈದ್ಯರು ಖಾಸಗಿ ಕಾರ್ಯಗಳಿಗೆ ಹೋದರೆ ರೋಗಿಗಳ ಗತಿ ಏನು. ತಾಲ್ಲೂಕು ಆಸ್ಪತ್ರೆಯಲ್ಲಿ ಈ ಸ್ಥಿತಿಯಾದರೆ ಗ್ರಾಮಾಂತರ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಗತಿಯೇನು ಎಂದು ಶಾಸಕರು ಬೇಸರ ವ್ಯಕ್ತಪಡಿಸಿದರು. ಜಿ.ಪಂ ಮಾಜಿ ಸದಸ್ಯ ಪ್ರಕಾಶ ಜಮಾದಾರ, ಪ್ರಮುಖರಾದ ಪಪ್ಪು ಪಟೇಲ್, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಅನೀಲ ಕಾಚಾಪೂರ ಮತ್ತಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT