ಸೋಮವಾರ, 24 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ: ಉತ್ಸಾಹದಿಂದ ಹಕ್ಕು ಚಲಾಯಿಸಿದ ಮತದಾರರು

ಮಳೆ ಕಾರಣಕ್ಕೆ ಬೆಳಿಗ್ಗೆ ಮಂದಗತಿ, ಮಧ್ಯಾಹ್ನದ ಬಳಿಕ ಚುರುಕು; ಶೇ 69.51 ಮತದಾನ
Published 3 ಜೂನ್ 2024, 15:55 IST
Last Updated 3 ಜೂನ್ 2024, 15:55 IST
ಅಕ್ಷರ ಗಾತ್ರ

ಕಲಬುರಗಿ: ಜಿಲ್ಲೆಯ ಹಲವೆಡೆ ಸೋಮವಾರ ನಸುಕಿನಿಂದಲೇ ಮಳೆ ಸುರಿದಿದ್ದರಿಂದ ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣೆಯ ಮತದಾನ ಪ್ರಕ್ರಿಯೆ ಬೆಳಿಗ್ಗೆ ಮಂದಗತಿಯಿಂದ ಸಾಗಿತಾದರೂ ಮಧ್ಯಾಹ್ನದ ಬಳಿಕ ಚುರುಕು ಪಡೆದುಕೊಂಡಿತು. ಒಟ್ಟಾರೆ ಕ್ಷೇತ್ರದಾದ್ಯಂತ ಅಂದಾಜು 69.51ರಷ್ಟು ಮತದಾನವಾಗಿದೆ.

ಕೊಪ್ಪಳದಲ್ಲಿ ಅತಿ ಹೆಚ್ಚು ಶೇ 81.61ರಷ್ಟು ಮತದಾನ ದಾಖಲಾಗಿದ್ದರೆ, ಕನಿಷ್ಠ ಮತದಾನ ಯಾದಗಿರಿ (61.38)ಯಲ್ಲಿ ದಾಖಲಾಗಿದೆ.

ನಗರದ ತಹಶೀಲ್ದಾರ್ ಕಚೇರಿ, ನಗರೇಶ್ವರ ಶಾಲೆಯಲ್ಲಿ ತೆರೆದಿದ್ದ ಐದು ಮತಗಟ್ಟೆಗಳಲ್ಲಿ ಬೆಳಿಗ್ಗೆ ಮತಚಲಾಯಿಸಲು ಅಂತಹ ದಟ್ಟಣೆ ಕಂಡು ಬರಲಿಲ್ಲ. ಆದರೆ, ಮಹಾಗಾಂವ್ ಕ್ರಾಸ್ ಹಾಗೂ ಕಮಲಾಪುರದ ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಉದ್ದನೆಯ ಸರತಿ ಸಾಲು ಕಂಡು ಬಂತು.

ಸರ್ಕಾರಿ ನೌಕರರೇ ಹೆಚ್ಚಿನ ಸಂಖ್ಯೆಯಲ್ಲಿ ಮತದಾರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಮತದಾನಕ್ಕಾಗಿ ಸರ್ಕಾರಿ ರಜೆ ಘೋಷಿಸಿದ್ದರಿಂದ ಮತದಾನ ಮಾಡಲು ಮತಗಟ್ಟೆಯತ್ತ ಬಂದಿದ್ದರು.

ಮೊದಲ ಬಾರಿಗೆ ಮತ ಚಲಾಯಿಸುವ ಹಕ್ಕು ಪಡೆದವರೂ ಉತ್ಸಾಹದಿಂದ ಮತಗಟ್ಟೆಯತ್ತ ಬಂದಿದ್ದರು. 

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಅವರು ತಹಶೀಲ್ದಾರ್ ಕಚೇರಿಯ ಹೊರಭಾಗದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಕುಳಿತು ಮತದಾರರನ್ನು ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು. ವಿಧಾನಪರಿಷತ್‌ನ ಹಾಲಿ ಸದಸ್ಯ ಚಂದ್ರಶೇಖರ ಪಾಟೀಲ ಹುಮನಾಬಾದ್ ಅವರು ನಗರೇಶ್ವರ ಶಾಲೆ ಸೇರಿದಂತೆ ನಗರದ ವಿವಿಧ ಮತಗಟ್ಟೆಗಳಿಗೆ ತೆರಳಿ ಚುನಾವಣಾ ಪ್ರಕ್ರಿಯೆಯನ್ನು ವೀಕ್ಷಿಸಿದರು.

ಶಾಸಕರಾದ ಅಲ್ಲಮಪ್ರಭು ‍ಪಾಟೀಲ, ಶಶೀಲ್ ಜಿ. ನಮೋಶಿ, ಪಕ್ಷೇತರ ಅಭ್ಯರ್ಥಿ ಶರಣ ಐ.ಟಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ, ರಾಷ್ಟ್ರೀಯ ಯುವ ಕಾಂಗ್ರೆಸ್ ವಕ್ತಾರ ಚೇತನ್ ಗೋನಾಯಕ, ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಮುಖಂಡರಾದ ಯಶವಂತರಾಯ ಅಷ್ಠಗಿ, ಶಿವ ಅಷ್ಠಗಿ, ಡಾ. ಇಂದಿರಾ ಶಕ್ತಿ, ಸಂಪತ್ ಕುಮಾರ್ ಲೋಯಾ ಸೇರಿದಂತೆ ಇತರರು ಮತದಾನ ಮಾಡಿದರು.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿಯೂ ಆದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಅವರು ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿನ ಮತಗಟ್ಟೆಯಲ್ಲಿ ತಮ್ಮ ಮತ ಚಲಾಯಿಸಿದರು. ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್, ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಅವರು ಒಟ್ಟಿಗೇ ಮತಗಟ್ಟೆಗೆ ತೆರಳಿ ತಮ್ಮ ಹಕ್ಕು ಚಲಾಯಿಸಿದರು.

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಬಸವರಾಜ ಮತ್ತಿಮಡು, ಕನೀಜ್ ಫಾತಿಮಾ ಅವರು ಪದವಿ ಪೂರ್ಣಗೊಳಿಸದೇ ಇದ್ದುದರಿಂದ ಮತ ಚಲಾಯಿಸಲಿಲ್ಲ.

ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಕಲಬುರಗಿಯಲ್ಲಿ ಮತ ಚಲಾಯಿಸಿದರು
ಈಶಾನ್ಯ ಕರ್ನಾಟಕ ಪದವೀಧರ ಕ್ಷೇತ್ರದ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಕಲಬುರಗಿಯಲ್ಲಿ ಮತ ಚಲಾಯಿಸಿದರು
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಮತ ಚಲಾಯಿಸಿದರು
ಕಲಬುರಗಿ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಹಾನಗರ ಪಾಲಿಕೆ ಆಯುಕ್ತ ಭುವನೇಶ್ ಪಾಟೀಲ ಮತ ಚಲಾಯಿಸಿದರು
ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಗೆಲುವಿನ ಚಿಹ್ನೆ ತೋರಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಡಾ. ಕಿರಣ ದೇಶಮುಖ ಸೋಮಶೇಖರ ಹಿರೇಮಠ ಇತರರು ಭಾಗವಹಿಸಿದ್ದರು
ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ ಅವರು ಕಲಬುರಗಿಯಲ್ಲಿ ಕಾಂಗ್ರೆಸ್ ಮುಖಂಡರೊಂದಿಗೆ ಗೆಲುವಿನ ಚಿಹ್ನೆ ತೋರಿಸಿದರು. ಶಾಸಕ ಅಲ್ಲಮಪ್ರಭು ಪಾಟೀಲ ಡಾ. ಕಿರಣ ದೇಶಮುಖ ಸೋಮಶೇಖರ ಹಿರೇಮಠ ಇತರರು ಭಾಗವಹಿಸಿದ್ದರು
ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೋಮವಾರ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು
ಕಮಲಾಪುರ ತಾಲ್ಲೂಕಿನ ಮಹಾಗಾಂವ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಸೋಮವಾರ ಮತ ಚಲಾಯಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಮತದಾರರು
ಕಮಲಾಪುರದ ಪುಂಡಲೀಕಪ್ಪ ಅವರಿಂದ ಮತದಾನ
ಕಮಲಾಪುರದ ಪುಂಡಲೀಕಪ್ಪ ಅವರಿಂದ ಮತದಾನ

ಮತ ಚಲಾಯಿಸಿದ 86 ವರ್ಷದ ವೃದ್ಧ

ಜಿಲ್ಲೆಯಲ್ಲಿ ಹೆಚ್ಚು ಶಿಕ್ಷಕರನ್ನು ಹೊಂದಿರುವ ಕಮಲಾಪುರ ತಾಲ್ಲೂಕಿನಲ್ಲಿ ನಿವೃತ್ತ ಶಿಕ್ಷಕ 86 ವರ್ಷದ ಪುಂಡಲೀಕಪ್ಪ ಚಿರಡೆ ಅವರು ಉತ್ಸಾಹದಿಂದ ಮತ ಚಲಾಯಿಸಿದರು. ಪ್ರತಿ ಆರು ವರ್ಷಕ್ಕೊಮ್ಮೆ ನಡೆಯುವ ಪದವೀಧರ ಕ್ಷೇತ್ರದ ಚುನಾವಣೆಗೆ ಆಯೋಗವು ಹೊಸದಾಗಿ ಮತದಾರ ಪಟ್ಟಿಯನ್ನು ಸಿದ್ಧಪಡಿಸುತ್ತದೆ. ಕಳೆದ ಚುನಾವಣೆಯಲ್ಲಿ ಮತದಾನದ ಹಕ್ಕು ಹೊಂದಿದವರೂ ಮತ್ತೆ ತಮ್ಮ ಪದವಿ ದಾಖಲೆಗಳನ್ನು ನೀಡಿ ಮತ ಚಲಾಯಿಸಬೇಕಾಗುತ್ತದೆ. ಈ ಪ್ರಕ್ರಿಯೆಗೆ ಬೇಸರಿಸಿಕೊಳ್ಳದೇ ಪುಂಡಲೀಕಪ್ಪ ಅವರು ಮತದಾರ ಪಟ್ಟಿಯಲ್ಲಿ ಹೆಸರು ಸೇರಿಸಿ ತಮ್ಮ ಹಕ್ಕನ್ನು ಚಲಾಯಿಸಿದರು. ನಂತರ ಮಾತನಾಡಿದ ಅವರು ‘ದೇಶವು ನನಗೆ ಎಲ್ಲವನ್ನೂ ಕೊಟ್ಟಿದೆ. ನಾನು ದೇಶದ ಒಳಿತಿಗಾಗಿ ಉತ್ತಮ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಮತ ಚಲಾಯಿಸಿದ್ದೇನೆ’ ಎಂದರು. ಯಾರ ಸಹಾಯವನ್ನೂ ಪಡೆಯದೇ ಮೊಪೆಡ್‌ ವಾಹನದಲ್ಲಿ ಬಂದಿದ್ದ ಪುಂಡಲೀಕಪ್ಪ ಮದಾನದ ಬಳಿಕ ವಾಹನ ಚಲಾಯಿಸಿಕೊಂಡು ಮನೆಗೆ ತೆರಳಿದರು.

ಮತದಾರರು ಏನಂತಾರೆ?:

ಇದೇ ಮೊದಲ ಬಾರಿಗೆ ಮತ ಚಲಾಯಿಸಿದ ಕೆಲ ಮತದಾರರು ‘ಪ್ರಜಾವಾಣಿ’ಯೊಂದಿಗೆ ಮಾತಿಗಿಳಿದರು. ಅವರ ಅಭಿಪ್ರಾಯದ ಸಂಕ್ಷಿಪ್ತ ರೂಪ ಇಲ್ಲಿದೆ. ಕಲ್ಯಾಣ ಕರ್ನಾಟಕವು ಶೈಕ್ಷಣಿಕ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಪದವೀಧರ ಕ್ಷೇತ್ರದಿಂದ ಆಯ್ಕೆಯಾಗುವ ಪ್ರತಿನಿಧಿ ಶಿಕ್ಷಣದಲ್ಲಿ ರಾಜ್ಯದ ಇತರ ಭಾಗಗಳಲ್ಲಿರುವಂತೆ ಉತ್ತಮ ಶಾಲೆ ಕಾಲೇಜುಗಳನ್ನು ರೂಪಿಸಬೇಕು. ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಗೀತಾ ಸುತಾರ ಶಿಕ್ಷಕಿ ಕಲಬುರಗಿ ಪದವೀಧರ ಕ್ಷೇತ್ರದಿಂದ ಆಯ್ಕೆಯಾಗುವವರು ಪ್ರಾದೇಶಿಕ ಅಸಮಾನತೆಯನ್ನು ಹೋಗಲಾಡಿಸಲು ಶ್ರಮಿಸಬೇಕು. ಸದಾ ಪದವೀಧರರ ಹಿತಕ್ಕಾಗಿ ಶ್ರಮಿಸಬೇಕು. ಕಲ್ಯಾಣ ಕರ್ನಾಟಕದಲ್ಲಿ ಖಾಲಿ ಇರುವ ಎಲ್ಲ ಹುದ್ದೆಗಳ ಭರ್ತಿಗೆ ಸರ್ಕಾರದ ಮೇಲೆ ಒತ್ತಡ ತರಬೇಕು. ಪವಿತ್ರಾ ಸಂಗಾಣಿ ಮಹಾಗಾಂವ್ ಕ್ರಾಸ್ ಕಲಬುರಗಿ ಜಿಲ್ಲೆ

ಜಿಲ್ಲಾವಾರು ಮತದಾನ ಪ್ರಮಾಣ (ಶೇ)

ಕಲಬುರಗಿ; 66.90

ಬೀದರ್; 69.74

ರಾಯಚೂರು; 71.28

ಬಳ್ಳಾರಿ; 66.86

ಯಾದಗಿರಿ; 61.38

ಕೊಪ್ಪಳ; 81.61

ವಿಜಯನಗರ; 72.76

ಒಟ್ಟು; 69.51

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT