ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿಯನ್ನು ರಾಷ್ಟ್ರಪಿತ ಮಾಡುವ ಹುನ್ನಾರ: ಒವೈಸಿ

Last Updated 27 ಸೆಪ್ಟೆಂಬರ್ 2019, 9:23 IST
ಅಕ್ಷರ ಗಾತ್ರ

ಕಲಬುರ್ಗಿ: ‘ಮಹಾತ್ಮ ಗಾಂಧಿ ಅವರನ್ನು ಹಿಂದೆ ತಳ್ಳಿ ನರೇಂದ್ರ ಮೋದಿಯನ್ನೇ ‘ರಾಷ್ಟ್ರಪಿತ’ ಎಂದು ಬಿಂಬಿಸಲು ಹೊರಟ ಸಂಘ ಪರಿವಾರದ ಉದ್ದೇಶವನ್ನು ದೇಶದ ಜನ ಅರ್ಥಮಾಡಿಕೊಳ್ಳಬೇಕು. ಇಲ್ಲದಿದ್ದರೆ ಮುಸ್ಲಿಮರು ಮಾತ್ರವಲ್ಲ; ದಲಿತ, ಹಿಂದುಳಿದವರಿಗೂ ಇಲ್ಲಿ ಜಾಗ ಇರುವುದಿಲ್ಲ’ ಎಂದು ಸಂಸದ ಅಸಾದುದ್ದೀನ್‌ ಒವೈಸಿ ಹೇಳಿದರು.

ಎಐಎಂಐಎಂ ಪಕ್ಷದ ಜಿಲ್ಲಾ ಘಟಕದಿಂದ ನಗರದಲ್ಲಿ ಗುರುವಾರ ರಾತ್ರಿ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಅವರು, ‘ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಮೋದಿಯನ್ನು ‘ಫಾದರ್‌ ಆಫ್‌ ದಿ ನೇಷನ್‌’ ಎಂದು ಕರೆದಾಗ, ಈ ‘ಪುಣ್ಯಾತ್ಮ’ ತಕ್ಷಣ ಅದನ್ನು ತಿದ್ದಿಹೇಳಲಿಲ್ಲ. ವಯಸ್ಸಿಗೆ ಬಂದ ಹೆಣ್ಣಿನಂತೆ ನುಲಿಯುತ್ತ ನಿಂತಿದ್ದ. ಇಂಥ ಬೆಳವಣಿಗೆಗಳನ್ನು ಜನ ಸೂಕ್ಷ್ಮವಾಗಿ ಗಮನಿಸಬೇಕು’ ಎಂದರು.

‘2014ರ ಚುನಾವಣೆಯಲ್ಲಿ ಶೇ 37ರಷ್ಟಿದ್ದ ಹಿಂದೂ ಮತಗಳು 2019ರ ವೇಳೆಗೆ ಶೇ 44ರಷ್ಟು ಆಗಿವೆ. ಉಳಿದ ಮತಗಳೆಲ್ಲ ಕಾಂಗ್ರೆಸ್‌ಗೆ ಬಿದ್ದಿವೆ ಎಂದಾದರೆ ಕಾಂಗ್ರೆಸ್‌ ಕೂಡ ಸಮನಾಗಿ ಗೆಲ್ಲಬೇಕಿತ್ತಲ್ಲ? ಎಲ್ಲವೂ ಹೇಗೆ ತಲೆಕೆಳಗಾಯಿತು ಎಂದು ಅರ್ಥ ಮಾಡಿಕೊಳ್ಳಿ’ ಎಂದೂ ದೂರಿದರು.

‘ಜಾತ್ಯತೀತ ಧ್ಯೇಯದ ಪಕ್ಷ ಎಂದು ಹೇಳುತ್ತಲೇ ಮುಸ್ಲಿಮರನ್ನು ಕಾಂಗ್ರೆಸ್‌ 70 ವರ್ಷಗಳಿಂದ ಶೋಷಣೆ ಮಾಡಿದೆ. ಅರೇ! ಇವರು ಜಾತ್ಯತೀತರಾದರೇನಂತೆ ನೀವು ಇವರ ಗುಲಾಮರಾಗಬೇಕೆ? ನಿಮ್ಮ ತಾಯಿ ನಿಮ್ಮನ್ನು ಇನ್ನೊಬ್ಬರ ಗುಲಾಮರಾಗಿರಲು ಹೆತ್ತಿದ್ದಾಳೆಯೇ? ಹೊಸಯುಗದ ಯುವ ಮುಸ್ಲಿಮರೇ ಅರ್ಥ ಮಾಡಿಕೊಳ್ಳಿ. ಕಾಂಗ್ರೆಸ್‌ನ ಲಾಲಿಪಾಪ್‌ಅನ್ನು ಬಾಯಿಯಿಂದ ಹೊರಗೆ ಉಗಿಯಿರಿ’ ಎಂದೂ ಒವೈಸಿ ವಾಗ್ದಾಳಿ ನಡೆಸಿದರು.

‘ರಾಹುಲ್‌ ಗಾಂಧಿ ತನ್ನ ತವರು ಕ್ಷೇತ್ರ ಅಮೇಠಿಯಲ್ಲೇ ಸೋತ. ದಕ್ಷಿಣದ ಕೇರಳಕ್ಕೆ ಬಂದು, ಅಲ್ಲಿ ಮುಸ್ಲಿಂ ಮತಗಳಿಂದ ಗೆದ್ದ. ಇಂಥವರನ್ನು ನಿಮ್ಮ ನಾಯಕ ಎಂದು ಹೇಗೆ ಸ್ವೀಕರಿಸುತ್ತೀರಿ? ಮುಳುಗುವ ಹಡಗಿನಂತಾದ ಕಾಂಗ್ರೆಸ್‌ನಿಂದ ಏನನ್ನೂ ನಿರೀಕ್ಷಿಸಬೇಡಿ. ಆ ಹಡಗಿನ ಕ್ಯಾಪ್ಟನ್‌ ಮುಂಚಿತವಾಗಿಯೇ ಸಮುದ್ರಕ್ಕೆ ಬಿದ್ದಿದ್ದಾನೆ. ರಾಹುಲ್‌ಗೆ ಈಗ ಹೈದರಾಬಾದ್‌ನಿಂದ ಒಂದು ಸಲ್ವಾರ್‌ ಕಳಿಸಿಸುವುದೊಂದೇ ಬಾಕಿ’ ಎಂದು ಅವರು ಕಟು ಶಬ್ದಗಳಲ್ಲಿ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT