ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೇವರ್ಗಿ: ಮುಂಗಾರು ಬಿತ್ತನೆ ಚುರುಕು

ಮಳೆ ಅಭಾವದ ಮಧ್ಯೆಯೂ ಕೃಷಿ ಚಟುವಟಿಕೆ; 1,22,311 ಹೆಕ್ಟೇರ್ ಬಿತ್ತನೆ ಗುರಿ
Last Updated 28 ಜೂನ್ 2022, 5:34 IST
ಅಕ್ಷರ ಗಾತ್ರ

ಜೇವರ್ಗಿ: ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನಾದ್ಯಂತ ಕೃಷಿ ಚಟುವಟಿಕೆ ಗರಿಗೆದರಿದ್ದು, ರೈತರು ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ಹತ್ತಿ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದಾರೆ. ಮುಂಗಾರು ಹಂಗಾಮಿನ ಬಿತ್ತನೆ ಬೀಜ ಹಾಗೂ ಅಗತ್ಯ ರಸಗೊಬ್ಬರ ದಾಸ್ತಾನು ಸಂಗ್ರಹಿಸಿಡುವ ಮೂಲಕ ಕೃಷಿ ಇಲಾಖೆ ಸಕಲ ಸಿದ್ಧತೆ ಮಾಡಿಕೊಂಡಿದೆ.

ಮಳೆ ಅಭಾವ ಹಾಗೂ ತೇವಾಂಶದ ಕೊರತೆ ಮಧ್ಯೆಯೂ ತಾಲ್ಲೂಕಿನ ರೈತರು ಮುಂಗಾರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಜೇವರ್ಗಿ, ಯಡ್ರಾಮಿ, ಆಂದೋಲಾ, ಇಜೇರಿ, ನೆಲೋಗಿ ಹೋಬಳಿಗಳ ಒಟ್ಟು 1,22,311 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ. ಮುಂಗಾರು ಹಂಗಾಮಿನಲ್ಲಿ 855 ಮೆಟ್ರಿಕ್ ಟನ್ ಉತ್ಪಾದನಾ ಗುರಿ ಕೃಷಿ ಇಲಾಖೆ ಹೊಂದಿದೆ.

ತಾಲ್ಲೂಕಿನ ಪ್ರಮುಖ ಮುಂಗಾರು ಹಂಗಾಮಿನ ಬೆಳೆಗಳಾದ ತೊಗರಿ 66050 ಹೆಕ್ಟೇರ್, ಹತ್ತಿ 47725 ಹೆಕ್ಟೇರ್, ಸಜ್ಜೆ, ಕಬ್ಬು-4721, ಭತ್ತ-1100 ಹೆಕ್ಟೇರ್, ಸೂರ್ಯಕಾಂತಿ ಮತ್ತು ಮೆಕ್ಕೆ ಜೋಳ 1000 ಹೆಕ್ಟೇರ್, ಹೆಸರು 1250 ಹೆಕ್ಟೇರ್, ಎಳ್ಳು 500 ಹೆಕ್ಟೇರ್ ಸೇರಿದಂತೆ ಒಟ್ಟು 1,22,311 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿದೆ.

ಈಗಾಗಲೇ ಬೀಜ ದಾಸ್ತಾನು ಸಂಗ್ರಹದ ಮೂಲಕ ಮುಂಗಾರು ಆರಂಭವಾಗುತ್ತಿದ್ದಂತೆ ಬೀಜ ವಿತರಣೆ ಪ್ರಕ್ರಿಯೆ ಆರಂಭಿಸಲು ಇಲಾಖೆ ಕ್ರಮ ಕೈಗೊಂಡಿದೆ. ಪ್ರಸ್ತಕ ಮುಂಗಾರು ಹಂಗಾಮಿನಲ್ಲಿ ರೈತರಿಗೆ ರಿಯಾಯತಿ ದರದಲ್ಲಿ ಬಿತ್ತನೆ ಬೀಜ ಒದಗಿಸಲು ಬಿತ್ತನೆ ಬೀಜಗಳಾದ ತೊಗರಿ, ಹೆಸರು, ಸಜ್ಜೆ ಸೂರ್ಯಕಾಂತಿ, ಮೆಕ್ಕೆ ಜೋಳ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ದಾಸ್ತಾನು ಮಾಡಲಾಗಿದೆ.

ಮುಂಗಾರು ಹಂಗಾಮಿಗೆ ಬೇಕಾಗುವ ರಸಗೊಬ್ಬರವನ್ನು ಎಲ್ಲಾ ಹೋಬಳಿಗಳ ವ್ಯವಸಾಯ ಸೇವಾ ಸಹಕಾರ ಸಂಘಗಳ ಮೂಲಕ ಹಾಗೂ ಅಧಿಕೃತ ಮಾರಾಟಗಾರರ ಮೂಲಕ ವಿತರಣೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೇವರ್ಗಿ ಮತ್ತು ಯಡ್ರಾಮಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ರೈತರು ಮುಂದಿನ ಮಳೆ ಬೀಳುವ ಆಶಾವಾದದಿಂದ ಮುಂಗಾರು ಬಿತ್ತನೆ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

ರೈತರು ಬಿತ್ತನೆಗೆ ಭೂಮಿಯ ಹದ ಅರಿತು (ಬಿತ್ತನೆಗೆ ಯೋಗ್ಯವಾದ) ಬಿತ್ತನೆ ಕಾರ್ಯ ಕೈಗೊಳ್ಳಬಹುದಾಗಿದೆ. ಬಿತ್ತನೆಗೆ ಮುನ್ನ ರೋಗ ಮತ್ತು ಕೀಟಗಳ ಹತೋಟಿಗಾಗಿ ಬೀಜಗಳ ಬೀಜೋಪಚಾರ ಕೈಗೊಳ್ಳಲು ತಾಂತ್ರಿಕ ಸಲಹೆ ಅನುಸರಿಸಲು ಕೋರಲಾಗಿದೆ.
ರೈತರಿಗೆ ಬಿತ್ತನೆ ಸಮಯದಲ್ಲಿ ರಸಗೊಬ್ಬರ ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ಪೂರ್ವಭಾವಿ ಕ್ರಮ ಕೈಗೊಳ್ಳಲಾಗಿದೆ.

ನಿಗದಿತ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುವಂತೆ ರಸಗೊಬ್ಬರ ವಿತರಕರಿಗೆ ಆದೇಶ ನೀಡಲಾಗಿದೆ. ರೈತರು ಬಿತ್ತನೆ ಸಮಯದಲ್ಲಿ ಅನಗತ್ಯ ಗಡಿಬಿಡಿ ಮಾಡುವ ಬದಲಾಗಿ ಭೂಮಿಯ ತೇವಾಂಶ ನೋಡಿಕೊಂಡು ಬಿತ್ತನೆ ಮಾಡಬೇಕು. ತೇವಾಂಶ ಕೊರತೆಯಿಂದ ಬಿತ್ತಿದ ಬೀಜ ನಾಟದೇ ಹೋಗಬಹುದು. ಪರಿಸ್ಥಿತಿಗೆ ಅನುಗುಣ ವಾಗಿ ಬಿತ್ತನೆ ಮಾಡಬೇಕು ಎಂದು ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ತಾಂತ್ರಿಕ ಕೃಷಿ ಅಧಿಕಾರಿ ಪವನಕುಮಾರ ಕಟ್ಟಿಮನಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT