ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳಗಿ: ಸುತ್ತಮುತ್ತಲ ಗ್ರಾಮಗಳ ಮಾರ್ಗದರ್ಶಿ ಕೃಷಿಕ

ಪ್ರಗತಿಪರ ರೈತ ಕುಡಳ್ಳಿ ಗ್ರಾಮದ ಅಣ್ಣಾರಾವ ಶಿವಧೆ
Last Updated 14 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕಾಳಗಿ: ತೋಟಗಾರಿಕೆಯಲ್ಲಿ ತೊಡಗಿಸಿಕೊಳ್ಳುವ ರೈತರಿಗೆ ತಾಲ್ಲೂಕಿನ ಕುಡಳ್ಳಿ ಗ್ರಾಮದ ಪ್ರಗತಿಪರ ರೈತ ಅಣ್ಣಾರಾವ ಶಿವಧೆ ಮಾರ್ಗದರ್ಶಿ ಕೃಷಿಕರಾಗಿದ್ದಾರೆ. 20 ವರ್ಷಗಳ ಹಿಂದೆ ಪುಣೆ ನಗರದ ಕಂಪೆನಿಯ ಕೆಲಸ ತೊರೆದು ಗ್ರಾಮಕ್ಕೆ ಮರಳಿದ ಅಣ್ಣಾರಾವ ಅವರು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಪ್ರಾರಂಭದಲ್ಲಿ ಎತ್ತುಗಳು ಮತ್ತು ಆಳುಮಕ್ಕಳ ನೆರವಿನಿಂದ ಕೃಷಿ ಮಾಡಲು ಹೊರಟಿದ್ದ ಅಣ್ಣಾರಾವಗೆ ಕಾಲ ಉರುಳಿದಂತೆ ಆಳುಮಕ್ಕಳು ಕೈ ಕೊಡಲಾರಂಭಿಸಿದಾಗ, ಉತ್ಸಾಹ ಕಳೆದುಕೊಳ್ಳದೆ ದುಡಿಮೆಗೆ ಸ್ವತಃ ಟೊಂಕಕಟ್ಟಿ ನಿಂತರು.

ಮುಂದಿನ ದಿನಗಳಲ್ಲಿ ಎತ್ತುಗಳೂ ಇಲ್ಲದೆ ಕೃಷಿ ಮಾಡಲು ಹೊರಟ ಅಣ್ಣಾರಾವ ಅವರು12 ವರ್ಷಗಳಿಂದ ಎರಡು ಚಿಕ್ಕ ಟ್ರ್ಯಾಕ್ಟರ್ ಮತ್ತು 3 ಹಸುಗಳ ಮೂತ್ರ, ಸಗಣಿ, ಜೀವಾಮೃತ, ಎರೆಹುಳುವಿನ ಗೊಬ್ಬರ ಸಹಾಯದಿಂದಲೇ ವ್ಯವಸಾಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಸ್ವಂತದ 18 ಎಕರೆ ಮತ್ತು ಪಾಲಿನ 22 ಎಕರೆ ಜಮೀನನ್ನು ತುಂಬಾ ಆಸಕ್ತಿಯಿಂದ ನಿಭಾಯಿಸುವ ಅವರು, ಅರ್ಧ ಸಾವಯವ ಮತ್ತು ಇನ್ನೂ ಅರ್ಧ ರಸಾಯನಿಕ ಪದ್ಧತಿ ಅಳವಡಿಸಿಕೊಂಡು ಪ್ರಸ್ತುತ 150 ಕ್ವಿಂಟಲ್ ತೊಗರಿ ಬೆಳೆದು 2 ಎಕರೆಯಲ್ಲಿ ಕಲ್ಲಂಗಡಿ ತೆಗೆದಿದ್ದಾರೆ.

15 ವರ್ಷದ ಹಿಂದೆ ಕೊರೆಸಿದ ತೆರೆದ ಬಾವಿಯ ನೀರು ಬಳಸಿ ಎರಡುಬಾರಿ ಮೆಲೋಡಿ ತಳಿಯ ಕಲ್ಲಂಗಡಿ ಬೆಳೆದು ನಂತರದಲ್ಲಿ ಬೇಬಿ-4 ಕಲ್ಲಂಗಡಿ ಹಚ್ಚಿ ಎರಡು ತಿಂಗಳಲ್ಲೇ ₹ 3.15ಲಕ್ಷ ಆದಾಯ ಗಳಿಸಿದ್ದಾರೆ. ಈ ಬೇಬಿ-4 ತಳಿ ಕಲ್ಲಂಗಡಿಗೆ ತೂಕ ಜಾಸ್ತಿ ಬಂದು ಒಳ್ಳೆಯ ದರ ಸಿಕ್ಕಿದೆ ಎನ್ನುತ್ತಾರೆ ಅವರು. ಅಷ್ಟೇ ಅಲ್ಲ, ಈ ಭಾಗದಲ್ಲಿ ಬೇಬಿ-4 ತಳಿ ಕಲ್ಲಂಗಡಿ ಬೆಳೆದ ಮೊದಲಿಗರು ಇವರೇ.

‘ಬೇರೊಂದು ತೋಟದಲ್ಲಿ ಸದ್ಯ 200 ಮಾವಿನ ಗಿಡಗಳಿವೆ. ಮುಂದೆ ಅಲ್ಲಿಯೂ ಜಾಪಳದೊಂದಿಗೆ ಬೇಬಿ-4 ಕಲ್ಲಂಗಡಿ, 300 ಚಿಕ್ಕು ಬೆಳೆಯಬೇಕೆಂದಿದ್ದೇನೆ. ತೋಟಗಾರಿಕೆ ಇಲಾಖೆ ಸಹಾಯದಡಿ ಈರುಳ್ಳಿ ಶೇಖರಣಾ ಘಟಕ ನಿರ್ಮಿಸಿದ್ದೇನೆ. ನಾನು ಈ ಕೃಷಿಯಿಂದ ಖುಷಿಯಾಗಿದ್ದೇನೆ. ಬಂದ ಲಾಭದಿಂದ ಈವರೆಗೆ ಒಟ್ಟು 10 ಎಕರೆ ಜಮೀನು ಖರೀದಿಸಿದ್ದೇನೆ’ ಎಂದು ಅಣ್ಣಾರಾವ ತಿಳಿಸಿದರು.

‘ನನ್ನ ಮಗನಿಗೂ ಕೃಷಿ ಬಗ್ಗೆ ತರಬೇತಿ ನೀಡುತ್ತಿದ್ದೇನೆ. ಪ್ರತಿ ದಿನ ಮೂರು–ನಾಲ್ಕು ಮಂದಿ ರೈತರು ನಮ್ಮಲ್ಲಿಗೆ ಬಂದು ಮಾರ್ಗದರ್ಶನ ಪಡೆಯುತ್ತಾರೆ. ನನ್ನ ಕೃಷಿ ಆಸಕ್ತಿಯನ್ನು ಮೆಚ್ಚಿ ರೈತರು ನನ್ನನ್ನು ಸಾವಯವ ಕೃಷಿಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT