ಶನಿವಾರ, ಮೇ 15, 2021
28 °C

PV Web Exclusive: ಕಲಬುರ್ಗಿ ಜನರಿಗೆ ಬುಲೆಟ್‌ ರೈಲಿನ ಕನಸು

ಗಣೇಶ ಚಂದನಶಿವ Updated:

ಅಕ್ಷರ ಗಾತ್ರ : | |

Prajavani

ಕಲಬುರ್ಗಿಯಲ್ಲಿ ರೈಲ್ವೆ ವಿಭಾಗ ಸ್ಥಾ‍ಪನೆ ಸಾಧ್ಯವಿಲ್ಲ ಎಂದು ಹೇಳಿ ಈ ಭಾಗದ ಜನರ ಕೆಂಗಣ್ಣಿಗೆ ಗುರಿಯಾಗಿರುವ ರೈಲ್ವೆ ಇಲಾಖೆ, ಈಗ ಈ ಭಾಗದ ಜನರಲ್ಲಿ ಬುಲೆಟ್‌ ರೈಲಿನ ಕನಸನ್ನು ಬಿತ್ತಿದೆ.

ಮುಂಬೈ–ಪುಣೆ–ಹೈದರಾಬಾದ್‌ ಮಧ್ಯದ ಬುಲೆಟ್‌ ರೈಲು ಕಲಬುರ್ಗಿ ಮಾರ್ಗವಾಗಿ ಓಡಲಿದೆ ಎಂಬುದೇ ಇಲ್ಲಿನ ಜನರ ‘ಖುಷಿ’ಗೆ ಕಾರಣ. 

ಭೂಸ್ವಾಧೀನ ಸಮಸ್ಯೆ ಮತ್ತು ಅನುದಾನದ ಕೊರತೆಯಿಂದ ಗದಗ–ವಾಡಿ ರೈಲು ಮಾರ್ಗ ಆಮೆಗತಿಯಲ್ಲಿ ಸಾಗಿದೆ. ಕಲಬುರ್ಗಿ–ನಾಂದೇಡ ಮಾರ್ಗದ ಬೇಡಿಕೆ ಇನ್ನೂ ಕಾಗದದಲ್ಲೇ ಇದೆ. ಕಲಬುರ್ಗಿ–ಬೀದರ್‌ ರೈಲು ಮಾರ್ಗ ಪೂರ್ಣಗೊಂಡು ವರ್ಷಗಳೇ ಉರುಳಿದರೂ ಈ ಮಾರ್ಗದಲ್ಲಿ ಹೆಚ್ಚಿನ ರೈಲು ಓಡುತ್ತಿಲ್ಲ. ಮಲ್ಲಿಕಾರ್ಜುನ ಖರ್ಗೆ ರೈಲ್ವೆ ಸಚಿವರಾಗಿದ್ದಾಗ ಮಂಜೂರು ಮಾಡಿದ್ದ ರೈಲ್ವೆ ವಿಭಾಗವನ್ನು ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಹೇಳಿಯಾಗಿದೆ. ಈ ಎಲ್ಲ ಇಲ್ಲಗಳ ಮಧ್ಯೆ ಬುಲೆಟ್‌ ರೈಲು ಯೋಜನೆಯ ಪ್ರಾಥಮಿಕ ಸಮೀಕ್ಷೆ ನಡೆದಿದ್ದು, ಈ ಭಾಗದ ಜನರಲ್ಲಿ ಹೊಸ ಆಶಾಭಾವ ಮೂಡಿಸಿದೆ.

ಮುಂಬೈ–ಪುಣೆ– ಹೈದರಾಬಾದ್ ಮಧ್ಯೆ ಹೈಸ್ಪೀಡ್‌ ಬುಲೆಟ್‌ ರೈಲು ಮುಂಬೈ, ಲೊನಾವಾಳಾ, ಪುಣೆ, ಕುರಕುಂಬ/ದೌಂಡ್‌, ಅಕ್ಲೂಜ್‌, ಪಂಢರಪುರ, ಸೊಲ್ಲಾಪುರ, ಕಲಬುರ್ಗಿ, ಜಹೀರಾಬಾದ್‌ ಮಾರ್ಗದಲ್ಲಿ ಹಾದು ಹೋಗಲಿದ್ದು, ಈ ಊರುಗಳಿಗೆ ನಿಲುಗಡೆ ಕಲ್ಪಿಸುವುದು ಉದ್ದೇಶಿತ ಯೋಜನೆಯಲ್ಲಿದೆ.

676 ಕಿ.ಮೀ ಉದ್ದದ ಟ್ರ್ಯಾಕ್‌ ನಿರ್ಮಾಣಕ್ಕೆ ನ್ಯಾಷನಲ್‌ ಹೈಸ್ಪೀಡ್‌ ರೈಲ್ವೇ ನಿಗಮ (NHSRCL) ಪ್ರಾಥಮಿಕ ಸಮೀಕ್ಷೆ ನಡೆಸಿದೆ. ಅಲ್ಲಲ್ಲಿ ಸಿಮೆಂಟ್‌ ಕಟ್ಟೆಗಳನ್ನು ಕಟ್ಟಿ ಮಾರ್ಕಿಂಗ್‌ ಮಾಡಲಾಗಿದೆ. ಚಿಂಚೋಳಿ ತಾಲ್ಲೂಕಿನ ಕೊಳ್ಳೂರು, ಯಂಪಳ್ಳಿ, ಗಾರಂಪಳ್ಳಿ, ಹೂಡದಳ್ಳಿ, ಯಲಕಪಳ್ಳಿ, ಹೊಡೇಬೀರನಹಳ್ಳಿ, ಕೊರವಿ ದೊಡ್ಡ ತಾಂಡಾ, ಕುಡಳ್ಳಿ ಗ್ರಾಮಗಳಲ್ಲಿ ಮಾರ್ಕಿಂಗ್‌ ಮಾಡಲಾಗಿದೆ. ನಂತರ ವಿಸ್ತೃತ ಸಮೀಕ್ಷೆ ನಡೆದು, ಅಗತ್ಯವಿರುವೆಡೆ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಇದರ ಯೋಜನಾ ವೆಚ್ಚ ಇನ್ನಷ್ಟೇ ನಿರ್ಧಾರವಾಗಬೇಕಿದೆ.

ಬುಲೆಟ್‌ ರೈಲು ಪ್ರತಿಗಂಟೆಗೆ 350 ಕಿ.ಮೀ ಚಲಿಸುವ ಸಾಮರ್ಥ್ಯ ಹೊಂದಿದೆ. ಈ ರೈಲಿನಲ್ಲಿ 750 ಮಂದಿ ಪ್ರಯಾಣಿಸಲು ಅವಕಾಶವಿದೆ.

ಗುಜರಾತ್‌ನ ಅಹಮದಾಬಾದ್‌ ಮತ್ತು ಮಹಾರಾಷ್ಟ್ರದ ಮುಂಬೈ ನಡುವಣ ಪ್ರಸ್ತಾವಿತ ಬುಲೆಟ್‌ ರೈಲು ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್‌ ಪ್ರಧಾನಿ ಶಿಂಜೊ ಅಬೆ ಅವರು ಸೆಪ್ಟೆಂಬರ್‌ 2017ರಲ್ಲಿ ಅಹಮದಾಬಾದ್‌ನಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು.

508 ಕಿ.ಮೀ ಉದ್ದದ ಅಹಮದಾಬಾದ್-ಮುಂಬೈ ನಡುವಿನ ಗಂಟೆಗೆ 350 ಕಿ.ಮೀ. ವೇಗದಲ್ಲಿ ಚಲಿಸುವ ಹೈ ಸ್ಪೀಡ್ ರೈಲು ಯೋಜನೆಯನ್ನು 2023ಕ್ಕೆ ಪೂರ್ಣಗೊಳಿಸಲು ನಿರ್ಧರಿಸಲಾಗಿತ್ತು. ಮಹಾರಾಷ್ಟ್ರ ಸರ್ಕಾರ ಸಹ ವೆಚ್ಚಭರಿಸುವ ಹೊಣೆ ಹೊತ್ತುಕೊಂಡಿತ್ತು. ಬಿಜೆಪಿ ಸರ್ಕಾರ ಬದಲಾಗಿ ಶಿವಸೇನೆ ನೇತೃತ್ವದ ಸರ್ಕಾರ ರಚನೆಯಾದ ನಂತರ ವೆಚ್ಚ ಭರಿಸುವ ವಿಷಯದಲ್ಲಿ ಮಹಾರಾಷ್ಟ್ರ ಸರ್ಕಾರ– ಕೇಂದ್ರ ಸರ್ಕಾರದ ಮಧ್ಯೆ ಹಗ್ಗ ಜಗ್ಗಾಟ ನಡೆದಿದೆ.

ಇದೆಲ್ಲದೇ ದೇಶದಲ್ಲಿ ಏಳು ಬುಲೆಟ್‌ ರೈಲು ಯೋಜನೆಗಳನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ದೆಹಲಿ–ನೊಯ್ಡಾ–ಆಗ್ರಾ–ಕಾನ್ಪುರ್‌–ಲಖನೌ–ವಾರಾಣಸಿ

ದೆಹಲಿ–ಜೈಪುರ–ಉದಯಪುರ–ಅಹಮದಾಬಾದ್‌

ಮುಂಬೈ–ನಾಸಿಕ್‌–ನಾಗಪುರ

ಮುಂಬೈ–ಪುಣೆ–ಹೈದರಾಬಾದ್‌

ಚೆನ್ನೈ–ಬೆಂಗಳೂರು–ಮೈಸೂರು

ದೆಹಲಿ–ಚಂಡೀಗಡ–ಲುಧಿಯಾನ ಅಮೃತಸರ

ವಾರಾಣಸಿ–ಪಟ್ನಾ–ಹೌರಾ

ಆದರೆ, ಅಹಮದಾಬಾದ್‌–ಮುಂಬೈ ಯೋಜನೆ ಹೊರತುಪಡಿಸಿದರೆ ಉಳಿದ ಯಾವುದೇ ಯೋಜನೆ ಇನ್ನೂ ಮಂಜೂರು ಮಾಡಿಲ್ಲ ಎಂದು ರೈಲ್ವೆ ಸಚಿವ ಪಿಯೂಷ್‌ ಗೋಯಲ್‌ ಈಚೆಗೆ ಲೋಕಸಭೆಗೆ ತಿಳಿಸಿದ್ದಾರೆ.

ವಿವರವಾದ ಯೋಜನಾ ವರದಿ, ತಾಂತ್ರಿಕ ಮತ್ತು ಆರ್ಥಿಕ ಕಾರ್ಯಸಾಧ್ಯತೆ, ಸಂಪನ್ಮೂಲ ಲಭ್ಯತೆ ಮತ್ತು ಹಣಕಾಸಿನ ಹೊಂದಾಣಿಕೆಯ ಆಧಾರದ ಮೇಲೆ ಈ ಯೋಜನೆಗಳ ಅನುಷ್ಠಾನ ಅವಲಂಬಿಸಿರುತ್ತದೆ ಎಂಬುದು ಅವರು ನೀಡಿರುವ ಉತ್ತರದಲ್ಲಿದೆ.

ಮುಂಬೈ–ಪುಣೆ–ಹೈದರಾಬಾದ್‌ ಮಧ್ಯದ ಉದ್ದೇಶಿತ ಬುಲೆಟ್‌ ರೈಲು ಯೋಜನೆ ಅನುಷ್ಠಾನಗೊಂಡು ಕಲಬುರ್ಗಿ ಮಾರ್ಗದಲ್ಲಿ ಈ ರೈಲು ಸಾಗಲಿದೆಯೇ ಅಥವಾ ‘ಕಾರ್ಯಸಾಧುವಲ್ಲ’ ಎಂಬ ನೆಪವೊಡ್ಡಿ ಈ ಯೋಜನೆಯನ್ನೇ ಕೈಬಿಡಲಾಗುತ್ತದೆಯೇ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು