ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭೀಮಾ’ಬಲ ಶಾಪವಲ್ಲ, ವರದಾನವಾಗಲಿ

ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿದ ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಸಲಹೆ
Last Updated 16 ನವೆಂಬರ್ 2020, 5:03 IST
ಅಕ್ಷರ ಗಾತ್ರ

ಕಲಬುರ್ಗಿ: ‘ನದಿ ತೀರದ ಗ್ರಾಮಗಳು ಸ್ವಚ್ಛಂದ, ಸಮೃದ್ಧವಾಗಿರಬೇಕೆ ಹೊರತು; ಪದೇಪದೇ ಸಂಕಷ್ಟಕ್ಕೆ ಸಿಲುಕಬಾರದು. ಅ‍ಪಾರವಾದ ಜಲಸಂಪತ್ತು, ವಿಜ್ಞಾನ– ತಂತ್ರಜ್ಞಾನ ಹಾಗೂ ಬೌದ್ಧಿಕ ಸಾಮರ್ಥ್ಯ ಇದ್ದಾಗಿಯೂ ನಾವು ಇಷ್ಟೊಂದು ಕಷ್ಟ ಎದುರಿಸುತ್ತಿರುವುದು ಅಚ್ಚರಿ ಮೂಡಿಸುತ್ತದೆ’ ಎಂದು ಸಾಹಿತಿ, ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಇಟಗಾ ಗ್ರಾಮದಲ್ಲಿ ಭಾನುವಾರ, ಭೀಮಾ ನದಿ ಪ್ರವಾಹದಿಂದ ಸಂಕಷ್ಟಕ್ಕೆ ಒಳಗಾದ ಸಂತ್ರಸ್ತರೊಂದಿಗೆ ದೀಪಾವಳಿ ಆಚರಿಸಿ ಅವರು ಮಾತನಾಡಿದರು.

‘ಎಷ್ಟೋ ಗ್ರಾಮಗಲ್ಲಿ ಇನ್ನೂ ಕುಡಿಯಲು ನೀರು ಸಿಗುವುದಿಲ್ಲ. ಆದರೆ, ಹಳ್ಳಿ ಮಗ್ಗುಲಲ್ಲೇ ಇರುವ ಗ್ರಾಮಗಳಲ್ಲಿ ಯಥೇಚ್ಚ ನೀರಿದ್ದರೂ ಬಳಕೆಯಾಗುತ್ತಿಲ್ಲ. ಗ್ರಾಮಸ್ಥರ ಸಂಘಟನಾತ್ಮಕ ಪ್ರಯತ್ನ ಇಲ್ಲದಿರುವುದೂ ಇದಕ್ಕೆ ಕಾರಣ. ಅದರಾಚೆಗೆ ಸರ್ಕಾರ ಇಂಥ ಗ್ರಾಮಗಳ ಸುತ್ತಲಿನ ಸಂಪತ್ತು ಬಳಸಿಕೊಂಡು ಪ್ರಗತಿಗೆ ಮುಂದಾಗಬೇಕು. ‘ಭೀಮಾಬಲ’ವನ್ನು ಹೇಗೆ ಪಳಗಿಸಬೇಕು, ನದಿ ನೀರನ್ನು ಹೇಗೆ ವರದಾನ ಮಾಡಿಕೊಳ್ಳಬೇಕು ಎಂಬ ತಂತ್ರಗಾರಿಕೆಯನ್ನು ಅರಿತುಕೊಂಡು, ಪ್ರವಾಹದಂಥ ಜಟಿಲ ಸಮಸ್ಯೆಗಳಿಂದ ಸಂಕಷ್ಟ ಬರದಂತೆ ಕಾಯಬೇಕು’ ಎಂದೂ ಅವರು ಸಲಹೆ ನೀಡಿದರು.

‘ಹಳ್ಳಿಯ ಹೆಂಗಸರ ಬಳಿ ಇರುವ ನೂರು ರೂಪಾಯಿ, ಗಂಡಸರ ಬಳಿ ಇರುವ ಸಾವಿರ ರೂಪಾಯಿಗೆ ಸಮ. ಸಾವಿರ ರೂಪಾಯಿಯನ್ನೂ ಗಂಡಸರು ವ್ಯರ್ಥವಾಗಿ ಖರ್ಚು ಮಾಡುತ್ತಾರೆ. ಆದರೆ, ನೂರು ರೂಪಾಯಿಯಲ್ಲಿ ಒಂದು ಬಿಡಿಗಾಸೂ ವ್ಯರ್ಥವಾಗದಂತೆ ಬಳಸುವುದು ಹೆಣ್ಣುಮಕ್ಕಳಿಗೆ ಮಾತ್ರ ಗೊತ್ತು. ಹಾಗಾಗಿ, ತಾಯಂದಿರ ಬಳಿ ಹಣ ಇಡಬೇಕು. ಅವರು ಸ್ವಾವಲಂಬಿಗಳಾದರೆ ಇಡೀ ಕುಟುಂಬ ಆರ್ಥಿಕ ಸ್ವಾವಲಂಬಿ ಆಗುತ್ತದೆ’ ಎಂದು ಹೇಳಿದರು.

ನಿಮ್ಮ ಮನೆಯ ಮಗನಾಗೇ ಬಂದಿದ್ದೇನೆ: ‘ಇಟಗಾ ಗ್ರಾಮಕ್ಕೂ ನಾಗತಿಹಳ್ಳಿಗೂ ಏನು ಸಂಬಂಧ? ಇಲ್ಲೇಕೆ ಬಂದಿದ್ದಾರೆ ಎಂಬ ಪ್ರಶ್ನೆ ಮೂಡಬಹುದು. ಬೆಂಗಳೂರು ಹಾಗೂ ಕಲಬುರ್ಗಿ ಭೌತಿಕವಾಗಿ ಮಾತ್ರ ದೂರ ಇವೆ. ಮಾನಸಿಕವಾಗಿ ನಾವೆಲ್ಲ ಹತ್ತಿರದವರೇ. ನೀವೇ ಬೆಳೆದ ತೊಗರಿಯನ್ನು ನಾನು ಬೆಂಗಳೂರಿನಲ್ಲಿ ಕುಳಿತು ತಿನ್ನುತ್ತೇನೆ. ದೂರ ಇನ್ನೆಲ್ಲಿ ಬಂತು? ನಾನು ನಿಮ್ಮ ಮನೆಯ ಮಗನಾಗಿ ಮಾತ್ರ ಬಂದಿದ್ದೇನೆ. ಬೇರೆ ಉದ್ದೇಶ ಏನೂ ಇಲ್ಲ. ನನ್ನೂರು ನಾಗತಿಹಳ್ಳಿಯಲ್ಲಿ ಒಂದಷ್ಟು ಸುಧಾರಣಾ ಕೆಲಸ ಮಾಡಿದ್ದೇನೆ. ಅದೇ ರೀತಿಯ ಕೆಲಸ ಇನ್ನೊಬ್ಬರಿಗೆ ಮಾದರಿ ಅಥವಾ ಮರ್ಗದರ್ಶನವಾಗಲಿ ಎಂಬುದಷ್ಟೇ ನನ್ನ ಉದ್ದೇಶ’ ಎಂದು ಹೇಳಿದರು.

ಸಾಹಿತಿ ಮಹಿಪಾಲರೆಡ್ಡಿ ಮುನ್ನೂರ, ಜೇವರ್ಗಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸಂಗಣ್ಣ ಹಣಮಂತಗೋಳ ಮಾತನಾಡಿದರು. ಸಾಹಿತಿ ಪ್ರಕಾಶ ಹರಕೂಡೆ, ನೆಲೋಗಿ ಉಪತಹಶೀಲ್ದಾರ್‌ ಪ್ರಸನ್ನಕುಮಾರ, ತಾಲ್ಲೂಕು ಆರೋಗ್ಯಾಧಿಕಾರಿ ಸಿದ್ದು ಪಾಟೀಲ, ಆರೋಗ್ಯ ಸಹಾಯಕ ಸಿದ್ಧಣ್ಣ ಡಿ. ವಡಗೇರಿ, ಗ್ರಾಮ ಲೆಕ್ಕಾಧಿಕಾರಿ ಸುಧಾ ಅಭಿಶಾಳ ಹಾಗೂ ಮುಖಂಡರು ಇದ್ದರು.

ಸಂತ್ರಸ್ತರ ಮನದಾಳ

ಸಣ್ಣ ಹೋಟೆಲ್‌ ಇಟ್ಟುಕೊಂಡು ವ್ಯಾಪಾರ ಮಾಡಿಕೊಂಡು ಉಪಜೀವನ ಸಾಗಿಸುತ್ತಿದ್ದೆ. ಭೀಮೆಗೆ ಅತಿಯಾದ ಪ್ರವಾಹ ಬಂದು ಹೋಟೆಲ್‌ ಪೂರ್ಣವಾಗಿ ಕೊಚ್ಚಿಕೊಂಡು ಹೋಗಿದೆ. ಈಗ ಉಪಜೀವನಕ್ಕೇ ಏನೂ ಉಳಿದಿಲ್ಲ. ಸರ್ಕಾರದಿಂದ ಬಿಡಿಗಾರಿನ ಪರಿಹಾರ ಇನ್ನೂ ಬಂದಿಲ್ಲ.

–ಯಲ್ಲಪ್ಪ ಬಂಕಲಗಿ, ಹೋಟೆಲ್‌ ವ್ಯಾಪಾರಿ

ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇವೆ. ಈ ಬಾರಿ ಅತಿ ಹೆಚ್ಚು ಮಳೆಯಾಗಿ ಬೆಳೆ ಹಾಳಾಯಿತು. ನಂತರ ಪ್ರವಾಹ ಬಂದು ಎಲ್ಲವೂ ಕೊಚ್ಚಿಕೊಂಡು ಹೋಯಿತು. ಹೊಲಗಳಲ್ಲಿ ಯಾವ ಬೆಳೆಯೂ ಇಲ್ಲದ ಕಾರಣ ಕೂಲಿ ಕೆಲಸ ಕೂಡ ಸಿಗುತ್ತಿಲ್ಲ.‌ ‍ಪುಣ್ಯವಂತರು ಕೊಡುವ ಧಾನ್ಯಗಳೇ ಆಸರೆ.

–ಯಲ್ಲಮ್ಮ ಬಂಕಲಗಿ, ರೈತ ಮಹಿಳೆ

ನಾಗತಿಹಳ್ಳಿ ಚಂದ್ರಶೇಖರ ಅವರು ಬಂದು ಆಹಾರ ಧಾನ್ಯ ವಿತರಿಸಿದ್ದು ಸಮಾಧಾನ ತಂದಿದೆ. ದೂರದ ಬೆಂಗಳೂರಿನ ಜನರಿಗೂ ನಮ್ಮ ಸಮಸ್ಯೆಗಳು ಕಾಣಿಸುತ್ತಿವೆ ಎಂಬ ಭರವಸೆ ಮೂಡಿತು. ಹಳ್ಳಿಗಳ ಸಂಕಷ್ಟ ಮರೆಯಾಗಬೇಕಾದರೆ ಸರ್ಕಾರ ಗಟ್ಟಿ ಮನಸ್ಸು ಮಾಡಬೇಕು.

–ಮದೀನಾ ಮಕ್ತುಂಸಾಬ್‌ ನದಾಫ

10 ಎಕರೆಯಲ್ಲಿ ಬೆಳೆದ ತೊಗರಿ, ಹತ್ತಿ, ಕಬ್ಬು ಸಂಪೂರ್ಣ ನಾಶವಾಗಿದೆ. ಪ್ರತಿ ವರ್ಷ ₹ 4 ಲಕ್ಷದಷ್ಟು ಆದಾಯ ಪಡೆಯುತ್ತಿದ್ದೆ. ಈಗ ಎಲ್ಲವೂ ಖಾಲಿಯಾಗಿದೆ. ಸರ್ಕಾರದಿಂದ ಇನ್ನೂ ಒಂದು ರೂಪಾಯಿ ಸಹಾಯ ಕೂಡ ಬಂದಿಲ್ಲ. ಬದುಕುವುದು ದುಸ್ತರವಾಗಿದೆ.

–ಶಿವು ಕಲ್ಯಾಣಿ ಕೋಳೇಕರ, ರೈತ

ಇಟಗಾ ಗ್ರಾಮದಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದ ಕಾರಣ 52 ಮನೆ ಕುಸಿದಿವೆ. ಸುಮಾರು 79 ಮನೆಗಳಿಗೆ ನೀರು ನುಗ್ಗಿ ಆದ ಹಾನಿಯ ಬಗ್ಗೆ ಪಂಚಾಯಿತಿಯಿಂದ ಪಟ್ಟಿ ಕಳಿಸಲಾಗಿದೆ. ಸರ್ಕಾರದಿಂದ ಪರಿಹಾರದ ಮೊತ್ತವು ನೇರವಾಗಿ ಫಲಾನುಭವಿಗಳಿಗೇ ಸಿಗಲಿದೆ.

–ಸುಧಾ ಅಭಿಶಾಳ, ಗ್ರಾಮ ಲೆಕ್ಕಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT